ಒಂದನೆಯ ಟಿಸಿಲು

ಯಕ್ಕುಂಡಿ ಮಂಗಳವೇಢೆ ಜನ ಎಂದೊ ಅಥವಾ ಮೊನ್ನೆ ಮೊನ್ನೆ ಆಗಿಹೋದ ಹುಬ್ಬಳ್ಳಿಯಲ್ಲಿ ಬಹುಕಾಲ ವಾಸವಾಗಿದ್ದ ಬಾಳಾಚಾರ್ಯ ಮಂಗಳವೇಢೆಯವರ ಹೆಸರಿನಿಂದ ನಾನು ಗುರುತಿಸುತ್ತಿರುವ ಟಿಸಿಲು

ಯಾವುದೋ ಒಂದು ವಿವಾದಕ್ಕೆ ಸಂಬಂಧಿಸಿದಂತೆ ಮುಂಬಯಿ ಹಾಯಕೋರ್ಟಿಗೆ ೧೯೦೫ ರಲ್ಲಿ ಸಲ್ಲಿಸಲಾದ ನಮ್ಮ ಮನೆತನದ ವಂಶಾವಳಿ ಚಾರ್ಟಿನಲ್ಲಿ, ಮಾಣಿಕ ಭಟ್ಟ ಎಂಬುವರನ್ನು ಮುರಗೋಡಿಗೆ ಬಂದು ವಾಸಿಸಹತ್ತಿದ ಮಂಗಳವೇಢೆ- ಜೋಶಿ ಮನೆತನದ ಮೂಲಪುರುಷನೆಂದು ತೋರಿಸಲಾಗಿದೆ. ಆ ಚಾರ್ಟಿನಲ್ಲಿ ಒಂದನೆ ಟಿಸಿಲಿನ ಏಳು ತಲೆಮಾರುಗಳ ವ್ಯಕ್ತಿಗಳ ಹೆಸರುಗಳು ದಾಖಲಾಗಿವೆ.

ಈ ಚಾರ್ಟನ್ನು ತಯಾರಿಸಿಯಾದ (ಬಹುಶ:) ಒಂದು ಅಲ್ಪ ಕಾಲಾವಧಿಯ ನಂತರ, ಬೇರೊಂದು ಕೈಯಲ್ಲಿನ ಬರೆಹ, ಏಳನೆ ತಲೆಮಾರಿನ ಮೊದಲ ಹೆಸರಾದ ಶ್ರೀನಿವಾಸ ಇವರ ನಾಮಧೇಯದ ಕೆಳಗೆ ಕೆಂಪು ಮಸಿಯಲ್ಲಿ ಸೇರಿಸಲಾದ ಏನೋ ಒಂದು ಶಬ್ದ ಅಸ್ಪಷ್ಟವಾಗಿ ಗೋಚರವಾಗುತ್ತದೆ. ಪರಗೋತ್ರಕ್ಕೆ ದತ್ತಕ ಎಂದಿದ್ದಿರ ಬಹುದೆ? ಏಕೆಂದರೆ ಶ್ರೀನಿವಾಸ ಅವರ ಸಂತಾನದ ಹೆಸರು ಇಲ್ಲಿಯ ವರೆಗೆ ಗೊತ್ತಿಲ್ಲವಾಗಿದೆ. ಆದರೆ ನಂತರದ ರಾಮಾಚಾರಿ ಎಂಬ ಹೆಸರಿನ ಕೆಳಗೆ ಪೆನ್ಸಿಲ್ಲಿನಿಂದ ಬರೆದ ಭೀಮಾಚಾರಿ, ನಾರಾಯಣ ಎಂಬ ಎರಡು ಹೆಸರುಗಳು ಸೇರಿಸಲ್ಪಟ್ಟಿದ್ದು ಅಸ್ಪಷ್ಟವಾಗಿ ಕಾಣುತ್ತವೆ.

ಮುರಗೋಡದಲ್ಲಿ ಸಿಕ್ಕ ವಂಶಾವಳಿಯಲ್ಲಿನ ಮೂಲಪುರುಷ ಮಾಣಿಕ ಭಟ್ಟ ಇವರ ಹಿರಿಯ ಮಗ ಬಾಳಂಭಟ್ಟ. ಈ ಹಿರಿಯ ಮಗನ ಸಂತಾನವೆ ಮೊದಲನೆ ಟಿಸಿಲು. ಇದರ ಏಳನೆ ತಲೆಮಾರಿನಲ್ಲಿನ ಬಾಳಾಚಾರ್ಯರೂ ಅದೇ ಹೆಸರಿನವರೆ. ಶಾಲೆಯ ದಾಖಲಾತಿಯಂತೆ, ಕಳೆದ ೨೦ನೆ ಶತಮಾನದ ಪ್ರಾರಂಭದಲ್ಲಿ ಅಂದರೆ ೧೯೦೩ ರಲ್ಲಿ ಹುಟ್ಟಿದವರು. ಆದರೆ ತಮ್ಮ ಮಗ ಗೋವರ್ಧನ ಅವರ ಮುಂದೆ ತಾವು ಹುಟ್ಟಿದ್ದು ೧೯ ನೆ ಶತಮಾನದ ತೀರ ಕೊನೆಯ ಭಾಗದ ೧೮೯೮ ನೆ ಇಸವಿಯಲ್ಲಿ ಎಂದು ಹೇಳಿದ್ದರಂತೆ. ಈ ಟಿಸಿಲನ್ನು ನಾನು ಮೊದಲು ಈ ಬಾಳಾಚಾರ್ಯರ ಹೆಸರಿನಿಂದ ಗುರುತಿಸಿರುವೆಯಾದರೂ, ಬಾಳಂ ಭಟ್ಟರೆಂಬುವರು ಈ ಟಿಸಿಲಿನ ಮೊದಲಿಗರಲ್ಲವೆ. ಹೇಗೆ ನೋಡಿದರೂ ಈ ಟಿಸಿಲು ಅವರ ಹೆಸರಿನಿಂದಲೆ ಗುರುತಿಸುವಂತಿರುವದು ಒಂದು ವಿಶೇಷ.

ನಾವೆಲ್ಲ ಮುರಗೋಡ ಮೂಲದವರು ಎಂದು ಗುರುತಿಸಲ್ಪಡುತ್ತಿದ್ದ ಹಾಗೇ ಬೆಳಗಾವಿಯಲ್ಲೆ ಇದ್ದರೂ, ನಮ್ಮ ಅಡ್ದಹೆಸರಿನವರೆ ಆಗಿದ್ದರೂ ಪರಿಚಿತರಾಗದೆ ಉಳಿದಿದ್ದ ಆ ಬೇರೆ ಕೆಲವು ಜನರನ್ನು, ನಾನು ಚಿಕ್ಕವನಿರುವಾಗ ಅವರಲ್ಲೊಬ್ಬರು ತಾವು ಯಕ್ಕುಂಡಿಯವರು ಎಂದು ಹೇಳಿಕೊಂಡಿದ್ದರಾಗಿ, ನಾನು ಅವರನ್ನು ಯಕ್ಕುಂಡಿ ಮಂಗಳವೇಢೆ ಜನರು ಎಂದು ಕರೆಯುತ್ತಿದ್ದೆ. ಹೀಗೊಂದು ಹೆಸರಲ್ಲಿ ಗುರುತಿಸಿದ್ದೂ ಸರಿಯೆ! ಏಕೆಂದರೆ ಈ ಟಿಸಿಲಿನ ನಾಕನೆ ತಲೆಮಾರಿನ ವ್ಯಕ್ತಿಯೊಬ್ಬರು – ವಿಶೇಷವೆಂದರೆ ಅವರೂ ಬಾಳಾಚಾರ್ಯರೆಂಬ ಹೆಸರಿನವರೆ – ಯಕ್ಕುಂಡಿಯಲ್ಲಿದ್ದುದಾಗಿ ಅವರ ಹೆಸರ ಕೆಳಗೆ ಆ ಹಳೆಯ ಕಾಗದದಲ್ಲಿ ಲಿಖಿತವಾಗಿದೆ. ಏಳನೆ ತಲೆಮಾರಿನ ಅದೇ ನಾಮಧೇಯದ ವ್ಯಕ್ತಿಯೂ ಯಕ್ಕುಂಡಿಯವರೆ.

ಈ ಟಿಸಿಲಿನ ಕೆಲವು ವಿಶೇಷಗಳು

೧) ಮೂಲ ಪುರುಷ ಮಾಣಿಕ ಭಟ್ಟರ ಮೂವರು ಮಕ್ಕಳಲ್ಲಿ ಹಿರಿಯವರಾದ ಬಾಳಂ ಭಟ್ಟರಿಗೆ ಇಬ್ಬರು ಮಕ್ಕಳು – ೧) ಪಾಂಡುರಂಗಾಚಾರ್ಯ ಮತ್ತು ೨) ಮಧ್ವಾಚಾರ್ಯ (ಮದ್ದಂ ಭಟ್ಟ). ಹೀಗೆ ಮೂಲ ಪುರುಷನಿಂದ ಮೂರನೆ ತಲೆಮಾರಿನಲ್ಲಿ- ಅಂದರೆ ಬಾಳಂ ಭಟ್ಟರಿಗೆ ಇಬ್ಬರು ಮಕ್ಕಳು ಹುಟ್ಟಿದಾಗಲೆ ಮೊದಲ ಸಲ ವಿಸ್ತಾರಗೊಂಡು ಎರಡು ಕವಲುಗಳು ಕಾಣಿಸಿಕೊಂಡವು.

೨) ನಂತರದ ಅಂದರೆ ನಾಕನೆಯ ತಲೆಮಾರು ಸಂಖ್ಯಾಮಾನದಿಂದ ಮತ್ತೆ ದ್ವಿಗುಣಗೊಂಡು, ನಾಕು ಗಂಡುಮಕ್ಕಳು ಹುಟ್ಟಿ ವಿಸ್ತಾರವಾಯಿತು. ಆದರೆ ತಂದೆಯಾದ ಇಬ್ಬರು ವ್ಯಕ್ತಿಗಳ ಸಂತಾನ ಸಮಾನ ಸಂಖ್ಯೆಯಲ್ಲಿ ವಿಸ್ತರಗೊಳ್ಳಲಿಲ್ಲ. ಪಾಂಡುರಂಗಾಚಾರ್ಯರಿಗೆ- ೧) ಕೃಷ್ಟಾಚಾರ್ಯ ೨) ರಾಮಾಚಾರ್ಯ ೩) ಕಾಂತಾಚಾರ್ಯ – ಹೀಗೆ ಮೂರು ಮಕ್ಕಳೂ, ಮಧ್ವಾಚಾರ್ಯರಿಗೆ ಬಾಳಾಚಾರ್ಯನೆಂಬ ಒಬ್ಬನೆ ಮಗನೂ ಹುಟ್ಟಿದರು.

೩) ಮುಂದೆ ಐದನೆ ತಲೆಮಾರು ಹುಟ್ಟುವ ಕಾಲ ಒದಗಿ ಬಂದಾಗ – ಬೆಳೆಯುತ್ತಿದ್ದ ಈ ಮನೆತನ ಮೊದಲ ಸಲ ಮೊಟಕುಗೊಂದ ಪರಿಸ್ಥಿತಿ ನಿರ್ಮಾಣವಾಯಿತು. ಹಾಗೆ ನೋಡಿದರೆ ತಂದೆಯಾದ ಪ್ರತಿಯೊಬ್ಬನಿಗೆ ಒಬ್ಬನಗಿಂತ ಹೆಚ್ಚುಮಕ್ಕಳಾಗಿ – ನಾಕು ಜನರಿಗೆ ನಾಕಕ್ಕಿಂತ ಹೆಚ್ಚು ಹುಡುಗರು ಹುಟ್ಟಿ – ಆ ತಲೆಮಾರು ತನ್ನ ಹರಹು ಹೆಚ್ಚಿಸಿಕೊಳ್ಳಬೇಕಿತ್ತು. ಆದರೆ ಹಾಗಾಗದೆ, ಐದನೆ ಪೀಳಿಗೆಯಲ್ಲಿಯೂ ನಾಕೇ ಹುಡುಗರು ಹುಟ್ಟಿ, ಸಂಖ್ಯಾ ವಿಸ್ತಾರ ಆಗಲೇ ಇಲ್ಲ. ತೊರಗಲ್ಲದಲ್ಲಿರಹತ್ತಿದ್ದ ಪಾಂಡುರಂಗಾಚಾರ್ಯರ ಹಿರಿಯ ಮಗ ಕೃಷ್ಟಾಚಾರ್ಯರಿಗೆ ಒಬ್ಬನೆ ಮಗ – ರಾಘವಾಚಾರ್ಯ ಹುಟ್ಟಿದ. ಅವರ ಎರಡನೆ ಮಗ ರಾಮಾಚಾರ್ಯರಿಗೂ ಒಬ್ಬನೆ ಮಗ – ಗೋವಿಂದಾಚಾರ್ಯ ಹುಟ್ಟಿದ. ಮೂರನೆ ಮಗ ಕಾಂತಾಚಾರ್ಯರಿಗೆ ಇಬ್ಬರು ಮಕ್ಕಳು – ಸುಬ್ಬಣ್ಣಾಚಾರ್ಯ ಮತ್ತು ಬಾಳಾಚಾರ್ಯ ಹುಟ್ಟಿದರು.

ಇವರೆಲ್ಲ ಪಾಂಡುರಂಗಾಚಾರ್ಯರ ಮೊಮ್ಮಕ್ಕಳು ಆದರೆ ಅವರ ತಮ್ಮ ಬಾಳಾಚಾರ್ಯರಿಗೆ ಮಾತ್ರ ಮಕ್ಕಳಾಗದೆ ಹೋಗಿ, ಅಲ್ಲಿಗೇ ಆ ಕವಲು ಮೊಟಕಾಗುವಂತೆ ಆಯಿತು. ಆದರೆ ಪುಣ್ಯವಶಾತ್ – ದತ್ತಕ ವಿಧಾನದ ಒಂದು ವ್ಯವಸ್ಥೆಯ ಕೃಪೆಯಿಂದ ಮಧ್ವಾಚಾರ್ಯರ ಸಂತಾನ ಮುಂದುವರೆ ಯುವಂತೆ ಆಯಿತು. ಮತ್ತೂ ವಿಶೇಷವೆಂದರೆ, ಮಧ್ವಾಚಾರ್ಯರಿಂದ ಹುಟ್ಟಿದ ಪುತ್ರ ಬಾಳಾಚಾರರಿಗೆ ಸಂತಾನವಾಗದಿದ್ದರೂ, ಅದೇ ಹೆಸರಿನ ಅವರ ಮೊಮ್ಮಗನನ್ನು (ಕಾಂತಾಚಾರ್ಯರ ಎರಡನೆ ಮಗ) ದತ್ತಕ ತೆಗೆದುಕೊಂಡು ತಮ್ಮ ಸಂತಾನ ಮುಂದುವರೆಯುವಂತೆ ಮಾಡಿಕೊಂಡರು.

೪) ಆಮೇಲಿನ ಆರನೆಯ ತಲೆಮಾರಿನಲ್ಲಿ ಸಂಖ್ಯಾವಿಸ್ತಾರ ದ್ವಿಗುಣವಾಗದಿದ್ದರೂ, ಆರು ಮಕ್ಕಳು ಜನ್ಮಗೊಂಡು, ಆ ಪೀಳಿಗೆಯ ವಿಸ್ತಾರ – ನಾಕರಿಂದ ಒಂದೂವರೆ ಪಟ್ಟು ಹೆಚ್ಚಾಗಿ- ಆರು ಆಯಿತು. ಆದರೆ ಈ ಸಂತೋಷದ ಜೊತೆಗೆ, ದುರ್ದೈವಿ ಮತ್ತು ನಿರಾಶಾಜನಕ ಬೆಳವಣಿಗೆಗಳೂ ಆದವು.

  • ತೊರಗಲ್ಲಿನಲ್ಲಿದ್ದ ಕೃಷ್ಟಾಚಾರ್ಯರ ಏಕಮಾತ್ರ ಪುತ್ರ ರಾಘವಾಚಾರ್ಯರಿಗೆ ಮಕ್ಕಳು ಹುಟ್ಟದೆ ನಿಪುತ್ರಕರಾದರು. ಹೀಗಾಗಿ ಮೂರನೆ ತಲೆಮಾರಿನ ಪಾಂಡುರಂಗಾಚಾರ್ಯರು ಮೊಮ್ಮಗನನ್ನು ಕಂಡರೂ, ಮರಿಮಗನನ್ನು ಕಾಣದೆ ಅವರ ಹಿರಿಯ ಮಗ -ಕೃಷ್ಟಾಚಾರ್ಯರ ಕವಲು ರಾಘವಾಚಾರ್ಯರ ನಂತರ ಬೆಳೆಯದೆ ನಿಂತುಹೋಯಿತು.
  • ಇದೇ ತರಹದ- ಸಂತಾನ ಮೊಟಕುಗೊಳ್ಳುವ ಪ್ರಕ್ರಿಯೆ ಪಾಂಡುರಂಗಾಚಾರ್ಯರ ಮೂರನೆ ಪುತ್ರ ಸುಬ್ಬಣ್ಣಾಚಾರ್ಯರ ವಿಷಯದಲ್ಲಿಯೂ ನಡೆದು ಅವರೂ ನಿಪುತ್ರಕನಾಗಿ, ಪಾಂಡುರಂಗಾಚಾರ್ಯರಿಗೆ ಸುಬ್ಬಣ್ಣಾಚಾರ್ಯರ ಹೊಟ್ಟೆಯಿಂದ ಮರಿಮಗನು ಹುಟ್ಟದೆ ಕಾಂತಾಚಾರ್ಯರ ಕವಲು ಕಮರಿಹೋಯಿತು.

ಈಗ ಮೂರನೆಯ ತಲೆಮಾರಿನ ಇಬ್ಬರಲ್ಲಿ ಹಿರಿಯವರಾದ ಪಾಂಡುರಂಗಾಚಾರ್ಯ ಸಂತಾನ ಮುಂದುವರೆಯಬೇಕಿದ್ದರೆ ಅದು ಅವರ ದ್ವಿತೀಯ ಪುತ್ರ ರಾಮಾಚಾರ್ಯರಿಂದ ಮತ್ತು ಅವರ ಏಕಮಾತ್ರ ಪುತ್ರ ಗೋವಿಂದಾಚಾರ್ಯರಿಂದ ಮಾತ್ರ ಸಾಧ್ಯವಿದ್ದಿತು. ಸುದೈವದಿಂದ ಹಾಗೆಯೆ ಆಯಿತು. ಗೋವಿಂದಾಚಾರ್ಯರಿಗೆ ಇಬ್ಬರು ಮಕ್ಕಳು – ಕೃಷ್ಟಾಚಾರ್ಯ ಮತ್ತು ವೆಂಕಣ್ಣಾಚಾರ್ಯ (ವೇಣಾಚಾರ್ಯ?) ಹುಟ್ಟಿ – ಪಾಂಡುರಂಗಾಚಾರ್ಯರ ಕವಲು ಬೇರೆಡೆ ಒಣಗಿಯಿತಾದರೂ, ಒಂದೆಡೆ ಚಿಗಿತುಕೊಂಡಿತ್ತು.

  • ಅದೇ ರೀತಿ, ಪಾಂಡುರಂಗಾಚಾರ್ಯರ ತಮ್ಮ ಮಧ್ವಾಚಾರ್ಯರರ ಕವಲು ಮುಂದೆ ಒಂದೆಡೆ ಚಿಗುರದೆಯೆ ಒಣಗಿದಾಗಲೂ, ಬೇರೊಂದು ರೀತಿಯಲ್ಲಿ ಅದು ಬೆಳೆಯುವಂತೆ ಮಾಡಲಾಯಿತೆಂಬುದನ್ನು ಈ ಮೊದಲು ಒಂದೆಡೆ ಹೇಳಿದ್ದರೂ, ಈ ಸ್ಥಳದಲ್ಲಿ ಅದನ್ನು ಮರಳಿ ಹೇಳಿದರೆ ತಪ್ಪೇನೂ ಆಗದು. ಮಧ್ವಾಚಾರ್ಯರು (ಮದ್ದಂ ಭಟ್ಟ?) ಮಗನಿಗೆ ಜನ್ಮವಿತ್ತರೂ ಅವನಿಂದ ಮೊಮ್ಮಗನನ್ನು ಕಾಣಲಿಲ್ಲ. ಆಗ ಆ ಕವಲು ನಿಂತು ಹೋಯಿತೇನೋ ಎನಿಸಿದಾಗ, ಮಧ್ವಾಚಾರ್ಯರು ತಮ್ಮ ಅಣ್ಣ ಪಾಂಡುರಂಗಾಚಾರ್ಯರ ಮೊಮ್ಮಗ ಬಾಳಾಚಾರ್ಯರನ್ನು (ಕಾಂತಾಚಾರ್ಯರ ಎರಡನೆ ಮಗ) ದತ್ತಕ ತೆಗೆದುಕೊಂಡಿದ್ದರಿಂದ ಮತ್ತು ಈ ಬಾಳಾಚಾರ್ಯರಿಗೆ ನಾಕು ಮಕ್ಕಳು ಹುಟ್ಟಿ- ಅಂತೂ ಅವರ ಕವಲು ಮೊಟಕುಗೊಳ್ಳದೆ ಮುಂದುವರೆಯುವಂತಾಯಿತು.
  • ಇನ್ನು ಆರನೆ ತಲೆಮಾರಿನ ಕುರಿತು : ಈ ಮೊದಲು ತಿಳಿಸಿದಂತೆ ಈ ತಲೆಮಾರು ತನ್ನ ಹಿಂದಿನದಕ್ಕಿಂತ ಸಂಖ್ಯಾಬಲದ ವಿಸ್ತಾರದಲ್ಲಿ ಒಂದೂವರೆ ಪಟ್ಟು ಬೆಳೆದು ಆರು ವ್ಯಕ್ತಿಗಳು ಹುಟ್ಟಿದ್ದರು. ಅವರು ಯಾರು ಯಾರು ನೋಡೋಣ.

ಗೋವಿಂದಾಚಾರ್ಯರ ಇಬ್ಬರು ಮಕ್ಕಳು – (ಕೃಷ್ಟಾಚಾರ್ಯ ಮತ್ತು ವೆಂಕಣ್ಣಾಚಾರ್ಯ ಅಥವಾ ವೇಣಾಚಾರ್ಯ) ಬಾಳಾಚಾರ್ಯರ ನಾಕು ಮಕ್ಕಳು – (ಸ್ವಾಮಿರಾಯಾಚಾರ್ಯ ಅಥವಾ ಸ್ವಾಮಿರಾಚಾರ್ಯ, ಗುರಾಚಾರ್ಯ, ಬಂಡಾಚಾರ್ಯ ಮತ್ತು ಶ್ಯಾಮಾಚಾರ್ಯ)

  • ೧ನಂತರದ ಏಳನೆ ತಲೆಮಾರಿನ ಬಗ್ಗೆ : ವಂಶಾವಳಿಯಲ್ಲಿ ಯಕ್ಕುಂಡಿ ಮಂಗಳವೇಢೆ ಜನರ ಮನೆತನದ ೧೯೦೫ ರ ವರೆಗೆ ಆದ ಏಳು ತಲೆಮಾರುಗಳು ದಾಖಲಿಸಲ್ಪಟ್ಟಿವೆ. ಅರ್ಥಾತ್ ಆ ಕಾಗದದಲ್ಲಿ ಏಳನೆಯ ತಲೆಮಾರೇ ಕಡೆಯದು. ಹಿಂದಿನ ಪೀಳಿಗೆ ಕಂಡ ಆರು ಜನರ ಸಂಖ್ಯಾಬಲಕ್ಕೆ ಹೋಲಿಸಿದರೆ ಈ ಪೀಳಿಗೆ ಅತ್ಯಲ್ಪ ವಿಸ್ತಾರಗೊಂಡು ಏಳು ಜನರದಷ್ಟು ಹರಹನ್ನು ಹೊಂದಿತು. ಎಣಿಕೆ ಮಾಡುವಾಗ ಎಂಟು ಜನರೆಂದು ಭ್ರಮೆ ಉಂಟಾಗುತ್ತದೆ. ಆದರೆ ಅದಕ್ಕೆ ಕಾರಣ, ಅಡವಿಕೃಷ್ಣ ಎಂಬ ಒಬ್ಬ ವ್ಯಕ್ತಿಯ ಹೆಸರು ದತ್ತಕದ ಕಾರಣ ಎರಡು ಕಡೆಗಳಲ್ಲಿ ದಾಖಲಾಗಿರುವದರಿಂದ.

ಯಕ್ಕುಂಡಿಯ ಅಡವಿಕೃಷ್ಣ (ಶ್ಯಾಮಾಚಾರ್ಯರ ಮಗ) ತನ್ನ ದೊಡ್ದಪ್ಪ ಗುರಾಚಾರ್ಯರಿಗೆ ಮಕ್ಕಳಾಗದೆ ಹೋದಾಗ ಅವರಿಗೆ ದತ್ತು ಪುತ್ರನಾಗಿ ಹೋಗಿದ್ದು ಆ ತಲೆಮಾರಿನಲ್ಲಿ ತಮ್ಮ ಮನೆತನದಲ್ಲಿಯೆ ದತ್ತಕ ಕೊಟ್ಟು ತೆಗೆದುಕೊಂಡ ವ್ಯವಹಾರದಿಂದಾಗಿ ಅಡವಿ ಆಚಾರ್ಯ ಎಂಬ ಹೆಸರಿನಲ್ಲಿ ಉಲ್ಲೇಖಗೊಂಡಿದೆ. ಮತ್ತು ಇದನ್ನು ದತ್ತಕ ಹೋದ ಮತ್ತು ದತ್ತಕ ಬಂದ ಎಂದು ಶಬ್ದ ರೂಪದಲ್ಲಿ ಬರೆಯದೆ ಹೋಗಿದ್ದರೂ, ಅಡವಿಕೃಷ್ಣ ನೆಂಬ ವ್ಯಕ್ತಿ ಅಡವಿ ಆಚಾರ್ಯ ಎಂಬ ಹೆಸರಿನಿಂದ ಗುರಾಚಾರ್ಯ ಮತ್ತು ಶ್ಯಾಮಾಚಾರ್ಯರ ಹೆಸರಿನ ಕೆಳಗಿನಿಂದ ಹೊರಟ, ಟಿಂ ಟಿಂ ರೇಷೆಯೊಂದು ಜೋದಣೆಯಾದ ರೂಪದಲ್ಲಿ, ಆ ಅರ್ಥವನ್ನು ಹೊಮ್ಮಿಸುತ್ತದೆ. ಜೊತೆಗೇ ಗುರಾಚಾರ್ಯರ ಹೆಸರ ಕೆಳಗೆ ನಿಪುತ್ರಕನೆಂದು ಸೂಚಿಸುವ ತಲೆಕೆಳಗಾಗಿರುವ ಪ್ರಶ್ನ ಚಿಹ್ನದ ಸಂಕೇತದಿಂದಲೂ ತೋರಿಸಲಾಗಿದೆ. ಹಿಗಾಗಿ ಆ ಅದ್ದ ಸಾಲಿನಲ್ಲಿ ಎಂಟು ಹೆಸರುಗಳು ಕಾಣುತ್ತಿದ್ದರೂ ಅವರು ಏಳೇ ಜನ. (ಹಾಗೆಯೆ ವೇಣಾಚಾರ್ಯರೂ ನಿಪುತ್ರಕರೆಂದು ಸೂಚಿಸುವ ಚಿಹ್ನೆ ಅವರ ಹೆಸರ ಕೆಳಗಿದೆ.

  • ಏಳನೇ ತಲೆಮಾರಿನ ಆ ಏಳು ಜನ ಯಾರು ಯಾರು ಎಂದರೆ : ೧) ಕೃಷ್ಟಾಚಾರ್ಯರ ಏಕಮಾತ್ರ ಪುತ್ರ ಶ್ರೀನಿವಾಸಚಾರ್ಯ ೨) ಸ್ವಾಮಿರಾಚಾರ್ಯರ ಏಕಮಾತ್ರ ಪುತ್ರ ರಾಮಾಚಾರ್ಯ ೩) ಗುರಾಚಾರ್ಯರ ದತ್ತಕ ಪುತ್ರ (?) ಅಡವಿಕೃಷ್ಣ (ಅಡವಿಆಚಾರ್ಯ ?) ೪) ಬಂಡಾಚಾರ್ಯರ ಮೂವರು ಮಕ್ಕಳು – ಪಾಂಡುರಂಗಾಚಾರ್ಯ, ಬಾಳಾಚಾರ್ಯ (ತೊರವಿ ಗಲ್ಲಿ, ಹುಬ್ಬಳ್ಳಿಯಲ್ಲಿದ್ದವರು) ಮತ್ತು ಸ್ವಾಮಿರಾಚಾರ್ಯರು. ೫) ಶ್ಯಾಮಾಚಾರ್ಯರ ಇಇಬ್ಬರು ಮಕ್ಕಳು – ಹಣಮಂತಾಚಾರ್ಯರು ಮತ್ತು ಅಡವಿ ಕೃಷ್ಣ. ( ಈ ಎಂಟು ಜನರ ಯಾದಿಯಲ್ಲಿ ಅಡವಿ ಕೃಷ್ಣ ಅವರ ಹೆಸರು ಎರಡು ಕಡೆಗಳಲ್ಲಿ – ಒಂದೆಡೆ ಗುರಾಚಾರ್ಯರ ದತ್ತು ಪುತ್ರನೆಂದು, ಇನ್ನೊಂದೆಡೆ ಹಣಮಂತಾಚಾರ್ಯರ ಪುತ್ರನೆಂದು ಬಂದಿದ್ದರೂ ವ್ಯಕ್ತಿಯೊಬ್ಬನೆ ಆಗಿರುವದರಿಂದ – ಒಟ್ಟು ಜನರ ಸಂಖ್ಯೆ ಏಳು ಮಾತ್ರ.)

ಇಲ್ಲಿ ಮತ್ತೊಂದು ವಿಶೇಷ ಹೇಳಬೇಕಿದೆ. ಸಂಪ್ರದಾಯ ರೀತ್ಯಾ ರಚಿತವಾಗಿರುವ ಈ ವಂಶಾವಳಿಯಲ್ಲಿ ಆಗಿನ ರೂಢಿಯಂತೆ ಬೇರೆ ಬೇರೆ ತಲೆಮಾರಿನಲ್ಲಿ ಹುಟ್ಟಿದ ಯಾವ ಹೆಣ್ಣು ಮಕ್ಕಳ ಹೆಸರೂ ದಾಖಲಾಗಿಲ್ಲ. ಆದರೆ ಈ ತಲೆಮಾರಿನ ಶ್ಯಾಮಾಚಾರ್ಯರಿಗೆ ಇಬ್ಬರು ಹೆಣ್ಣು ಮಕ್ಕಳು ಹುಟ್ಟಿದ್ದರೆಂದು ಬೇರೆ ಮೂಲಗಳಿಂದ ನನಗೆ ಗೊತ್ತಾಗಿದೆ. ಧೋಂಡೂಬಾಯಿ ಮತ್ತು ಭಾಗೀರಥಿ ಎಂಬ ಅವರ ಹೆಸರುಗಳನ್ನು ನಾನು ಸಿದ್ಧಪಡಿಸಿದ ವಂಶಾವಳಿ ಚಾರ್ಟಿನಲ್ಲಿ ಸೇರಿಸಿದ್ದೇನೆ.

ಇವರನ್ನೂ ಸೇರಿಸಿದರೆ ಏಳನೇ ತಲೆಮಾರಿನ ಜನರ ಸಂಖ್ಯೆ ಒಂಬತ್ತು ಆಗುತ್ತದೆ. ಹೀಗೆಯೆ – ಉಳಿದವರಿಗೆ ಸೋದರಿಯರು ಇದ್ದರೋ ಇಲ್ಲವೋ! ಹಿಂದಿನ ಯಾವ ತಲೆಮಾರಿನಲ್ಲಿಯೂ ಯಾರಿಗೂ ಸ್ತ್ರೀ ಸಂತಾನವಾಗಲೇ ಇಲ್ಲವೆ? ಅಥವಾ, ಆಗಿದ್ದರೂ ವಂಶಾವಳಿ ಚಾರ್ಟಿನಲ್ಲಿ ‘ಪುತ್ರ ರತ್ನ‘ ರಿಗೆ ಮಾತ್ರ ಸ್ಥಾನವಿದ್ದುದರಿಂದ, ಆ ‘ಕನ್ಯಾರತ್ನ‘ ಗಳ ಹೆಸರು ಉಲ್ಲೇಖವಾಗದೆ ‘ಹೇಳಹೆಸರಿಲ್ಲದೆ’ ಹೋದರೆ! – ಹಾಗೆ ಆಗಿರಬೇಕು.

ನನಗೆ ಸಿಕ್ಕ ಹಳೆಯ ೧೯೦೫ ರಲ್ಲಿ ರಚಿತವಾದ ಆ ವಂಶಾವಳಿಯಲ್ಲಿ ಈ ಏಳು ತಲೆಮಾರಿನಲ್ಲಿ ಹುಟ್ಟಿದ ಗಂಡು ಮಕ್ಕಳೆಲ್ಲರ ಹೆಸರು ದಾಖಲಿಸಲ್ಪಟ್ಟಿವೆ. ನಾನು ಈಗ ಸಿದ್ಧ ಪಡಿಸಿದ ಚಾರ್ಟಿನಲ್ಲಿ ನಂತರದ- ಇದೇ ಟಿಸಿಲಿನ ಎಂಟು. ಒಂಬತ್ತು ಮತ್ತು ಹತ್ತನೆ ಪೀಳಿಗೆಯ ಜನರ ಹೆಸರುಗಳನ್ನು ಸಂಬಂಧಿಸಿದವರನ್ನು ಕೇಳಿಕೊಂಡು ಸೇರಿಸಿ ಈವತ್ತಿನ ವರೆಗಿನ (updated version) ಚಿತ್ರವನ್ನು ಕೊಟ್ಟಿದ್ದೇನೆ.

ಪ್ರತಿ ತಲೆಮಾರಿನ ಜನರ ಹೆಸರುಗಳ ಯಾದಿ

ಮೂಲ ಪುರುಷ – ಮಾಣಿಕ ಭಟ್ಟ

ಎರಡನೆ ತಲೆಮಾರು (ಒಬ್ಬ ವ್ಯಕ್ತಿ)
ಮಾಣಿಕ ಭಟ್ಟರ ಮೂವರು ಪುತ್ರರು – ೧) ಬಾಳಂ ಭಟ್ಟ ೨) ಗೋವಿಂದಭಟ್ಟ ೩) ಅನಂತಾಚಾರ್ಯ

  • ಮಾಣಿಕ ಭಟ್ಟ
    • ಬಾಳಂ ಭಟ್ಟ
    • ಗೋವಿಂದಭಟ್ಟ
    • ಅನಂತಾಚಾರ್ಯ

ನನ್ನ ಟಿಪ್ಪಣಿ : ಆ ಹಳೆಯ ಕಾಗದದಲ್ಲಿ ಈ ಮೂರನೆ ಮಗನ ಹೆಸರೂ ಬಾಳಂಭಟ್ಟನೆಂದೇ ಬರೆಯಲ್ಪಟ್ಟಿದೆ, ಹಿರಿಯ ಮಗನ ಹೆಸರನ್ನೆ ಕೊನೆಯ ಮಗನಿಗೂ ಇಟ್ಟಿದ್ದರೆ? ಏಕೋ ಮನಕ್ಕೆ ಅಷ್ಟು ಒಪ್ಪಿಗೆಯಾಗುವದಿಲ್ಲ. ಆದರೆ, ೧೮೬೪ ರಲ್ಲಿ ನಮ್ಮ ಮನೆತನದ ಒಳಗಡೆಯೆ ಆದ ನನ್ನ ತಂದೆಯ ದತ್ತಕದ ಸಂಬಂಧದಿಂದಾಗಿ ನೇರವಾಗಿ ನನಗೆ ಮುತ್ತಜ್ಜನಾದ ಭೀಮಸೇನಾಚಾರ್ಯಗೆ ಅವರ ಮದುವೆ ಕಾಲಕ್ಕೆ ಗೃಹದಾನವಾಗಿ ದೊರೆತ ಕಿತ್ತೂರಿನ ಮನೆಯ ದಾನ ಪತ್ರದಲ್ಲಿ, ಅವರನ್ನು ಅನಂತಾಚಾರ್ಯರ ಪ್ರಪೌತ್ರ ಎಂದರೆ ಮರಿಮಗನೆಂದು ಹೇಳಲಾಗಿದೆ. ಈ ಅನಂತಾಚಾರ್ಯರ ಕಾಲ, ಮಾಣಿಕಭಟ್ಟರ ಮಕ್ಕಳ ಕಾಲಕ್ಕೇ ಹೋಗಿ ನಿಲ್ಲುತ್ತದೆ. ಈ ಹಿನ್ನೆಲೆಯಲ್ಲಿ – ಒಂದೋ ಅಲ್ಲಿ ಬಾಳಂ ಭಟ್ಟ ಎಂಬ ಹೆಸರು ಮೂಲ ಕಾಗದದ ನಕಲು ತೆಗೆಯುವಾಗ ಕೈತಪ್ಪಿನಿಂದ ಲಿಖಿತಗೊಂಡಿರಬೇಕು, ಇಲ್ಲ, ನಿಜವಾದ ಹೆಸರು ಅನಂತಾಚಾರ್ಯ ಎಂದಿದ್ದರೂ,ಬಾಳನೆಂಬ nickname ದಿಂದ ಆ ದಿನಗಳಲ್ಲಿ ಕರೆಯುತ್ತಿದ್ದರೇನೋ. ನನಗಂತೂ ಆ ಹೆಸರು ಅನಂತಾಚಾರ್ಯವೆಂಬುದೇ ನಿಶ್ಚಿತ ವೆನಿಸಿ, ಹಾಗೆಯೆ ಬರೆದಿದ್ದೇನೆ. ನನ್ನ ನಂಬುಗೆ ತಪ್ಪಾಗಿದ್ದರೆ ಇದ್ದಿರಬಹುದಾದ ಮತ್ತೊಂದು ಸಾಧ್ಯತೆ – ಬಾಳಾಚಾರ್ಯ ಎಂಬ ಹಿರಿಯ ಮಗನ ಹೆಸರನ್ನೇ ಕಿರಿಯ ಮಗನಿಗೂ ಯಾವುದೋ ಕಾರಣದಿಂದ ಇಟ್ಟಿದ್ದೆ ನಿಜವಾಗಿದ್ದರೆ, ಅನಂತಾಚಾರ್ಯರು ಅವರ ಮಗನಾಗಿದ್ದಿರಬಹುದು.

ಇದು ಒಂದನೆ ಟಿಸಿಲಿನ ತಲೆಮಾರುಗಳ ಪ್ರತ್ಯೇಕ ಯಾದಿಯಾದುದರಿಂದ ಬಾಳಂಭಟ್ಟರ ಹೆಸರನ್ನು ಮಾತ್ರ ಉಳಿಸಿಕೊಂಡು ಮುಂದುವರೆ ಯಲಾಗಿದೆ

ಮೂರನೆ ತಲೆಮಾರು – ಬಾಳಂ ಭಟ್ಟರ ಇಬ್ಬರು ಮಕ್ಕಳು

  • ಬಾಳಂ ಭಟ್ಟ
    • ಪಾಂಡುರಂಗಾಚಾರಿ
    • ಮಧ್ವಾಚಾರಿ

ನಾಕನೆ ತಲೆಮಾರು – ಪಾಂಡುರಂಗಾಚಾರ್ಯರ ಮೂವರು ಮಕ್ಕಳು – ೧. ಕೃಷ್ಟಾಚಾರ್ಯ ೨. ರಾಮಾಚಾರಿ ೩. ಕಾಂತಾಚಾರಿ ಮತ್ತು ಮಧ್ವಾಚಾರ್ಯರ ಒಬ್ಬ ಪುತ್ರ ಬಾಳಾಚಾರಿ

  • ಪಾಂಡುರಂಗಾಚಾರಿ
    • ಕೃಷ್ಟಾಚಾರ್ಯ
    • ರಾಮಾಚಾರ್ಯ
    • ಕಾಂತಾಚಾರ್ಯ
  • ಮಧ್ವಾಚಾರ್ಯ
    • ಬಾಳಾಚಾರಿ

ನನ್ನ ಟಿಪ್ಪಣಿ : ಆ ಹಳೆಯ ಕಾಗದದಲ್ಲಿ ಕೃಷ್ಟಾಚಾರ್ಯರ ಹೆಸರ ಕೆಳಗೆ ಕೃಷ್ಟಾಚಾರಿ ತೊರಗಲ್ಲದಲ್ಲಿರುವರು ಎಂದೂ ಬಾಳಾಚಾರಿ ಹೆಸರಿನ ಕೆಳಗಡೆ ಯಕ್ಕುಂಡಿ ಯಲ್ಲಿರುವರು ಎಂದು ಬರೆಯಲಾಗಿದೆ.
ಜೊತೆಗೇ ಮಧ್ವಾಚಾರ್ಯರ ಪುತ್ರ ಬಾಳಾಚಾರ್ಯರ ಹೆಸರ ಕೆಳಗೆ ಅವರಿಗೆ ಗಂಡು ಮಕ್ಕಳಾಗದೆ ವಂಶ ನಿಂತು ಹೋದುದರ ಸಂಕೇತವಾದ ತಲೆ ಕೆಳಗಾದ ಪ್ರಶ್ನಾರ್ಥಕ ಚಿಹ್ನೆಯೂ ಇದೆ. ಆದರೆ – ಮುಂದಿನ ಐದನೆ ತಲೆಮಾರಿನಲ್ಲಿ ಕಾಂತಾಚಾರ್ಯರಿಗೆ ಹುಟ್ಟಿದ ಬಾಳಾಚಾರಿ ಎಂಬ ಹೆಸರಿನ ಮೇಲೆ, ಮಧ್ವಾಚಾರಿ ಹೆಸರಿನ ಎದಪಕ್ಕದಿಂದ, ನಾವು ಆಡುಭಾಷೆಯಲ್ಲಿ ಯಾವುದನ್ನು ಟಿಂ ಟಿಂ ರೇಷೆಯೆಂದು ಕರೆಯುತ್ತೇವೆಯೊ ಅಂತಹ ತುಂಡು ರೇಷೆಯೊಂದು ಕೆಳಗಿಳಿದು ಹೊರಟು ಐದನೆ ತಲೆಮಾರಿನ ಬಾಳಾಚಾರಿ ಹೆಸರಿನ ಮೇಲೆ ಇಳಿಯುತ್ತದೆ. ಹೀಗೆ ಮೂರನೆ ತಲೆಮಾರಿನ ಮಧ್ವಾಚಾರ್ಯ ಮತ್ತು ಐದನೆ ತಲೆಮಾರಿನ ಬಾಳಾಚಾರ್ಯರ ಹೆಸರುಗನ್ನು ತುಂಡು ರೇಷೆ ಜೋಡಿಸುತ್ತದೆ – ಬಾಳಾಚಾರ್ಯರು ಮಧ್ವಾಚಾರ್ಯರ (ದತ್ತಕ) ಮಗನೆಂದು ಸೂಚಿಸುವಂತೆ. ಮತ್ತು ಈ ಜೋಡಣೆಯ ಗೆರೆ ನೇರವಾಗಿಯೂ ಇರದೆ, ಕೆಲ ಕಾಲಾಂತರದಲ್ಲಿ ನೆನಪಿಗೆ ಬಂದಮೇಲೆ, ಸೊಟ್ಟಸೊಟ್ಟಾಗಿ ಎಳೆಯಲ್ಪಟ್ಟಿದೆ. ಆದರೆ ದತ್ತಕ ಹೋದನೆಂಬ ಶಬ್ದರೂಪದಲ್ಲಿ ಬರೆದಿದ್ದೇನೂ ಇಲ್ಲ.

ಐದನೆ ತಲೆಮಾರು – ಕೃಷ್ಟಾಚಾರ್ಯರ ಒಬ್ಬ ಪುತ್ರ – ರಾಘವಾಚಾರ್ಯ ; ರಾಮಾಚಾರ್ಯರ ಒಬ್ಬ ಪುತ್ರ – ಮತ್ತು ಕಾಂತಾಚಾರ್ಯರ ಇಬ್ಬರು ಮಕ್ಕಳು – ೧. ಸುಬ್ಬಣ್ಣಾಚಾರ್ಯ ಮತ್ತು ೨. ಬಾಳಾಚಾರ್ಯ

  • ಕೃಷ್ಟಾಚಾರ್ಯ
    • ರಾಘವಾಚಾರ್ಯ
  • ರಾಮಾಚಾರ್ಯ
    • ಗೋವಿಂದಾಚಾರ್ಯ
  • ಕಾಂತಾಚಾರ್ಯ
    • ಸುಬ್ಬಣ್ಣಾಚಾರ್ಯ
    • ಬಾಳಾಚಾರ್ಯ

ನನ್ನ ಟಿಪ್ಪಣಿ : ಆಗಲೆ ಮೇಲಿನ ತಲೆಮಾರಿನ ವಿಷಯ ಬರೆಯುವಾಗ ಹೇಳಿದಂತೆ – ಮೂರನೆ ತಲೆಮಾರಿನ ಮಧ್ವಾಚಾರ್ಯ ಮತ್ತು ಐದನೆ ತಲೆಮಾರಿನ ಬಾಳಾಚಾರ್ಯರ ಹೆಸರುಗನ್ನು ತುಂಡು ರೇಷೆಯೊಂದು ಜೋಡಿಸುತ್ತದೆ – ಬಾಳಾಚಾರ್ಯರು ಮಧ್ವಾಚಾರ್ಯರ (ದತ್ತಕ) ಮಗನೆಂದು ಸೂಚಿಸುವಂತೆ. ಈ ಜೋಡಣೆಯು ಕೆಲ ಕಾಲಾಂತರದಲ್ಲಿ ನೆನಪಿಗೆ ಬಂದಮೇಲೆ ಎಳೆಯಲ್ಪಟ್ಟಿದ್ದು. ದತ್ತಕ ಹೋದಬಗ್ಗೆ ಶಬ್ದರೂಪದಲ್ಲಿ ಬರೆದಿದ್ದೇನೂ ಇಲ್ಲ. ಆದರೆ ಆ ಸೂಚನೆ ಇದ್ದೇ ಇದೆ.

ಆರನೆ ತಲೆಮಾರು – ರಾಘವಾಚಾರ್ಯರಿಗೆ (ಗಂಡು) ಮಕ್ಕಳಾಗಲಿಲ್ಲ. ಗೋವಿಂದಾಚಾರ್ಯರಿಗೆ ಇಬ್ಬರು (ಗಂಡು) ಮಕ್ಕಳು – ೧. ಕೃಷ್ಟಾಚಾರ್ಯ ಮತ್ತು ೨. ವೆಂಕಣ್ಣಾಚಾರ್ಯ. ಸುಬ್ಬಣ್ಣಾಚಾರ್ಯರಿಗೆ (ಗಂಡು) ಮಕ್ಕಳಾಗಲಿಲ್ಲ. ಬಾಳಾಚಾರ್ಯರಿಗೆ ನಾಕು ಮಕ್ಕಳು – ೧. ಸ್ವಾಮಿರಾಚಾರ್ಯ ೨.ಗುರಾಚಾರಿ ೩. ಬಂಡಾಚಾರ್ಯ ೪.ಶಾಮಾಚಾರ್ಯ

  • ರಾಘವಾಚಾರ್ಯ
    • O
  • ಗೋವಿಂದಾಚಾರ್ಯ
    • ಕೃಷ್ಟಾಚಾರ್ಯ
    • ವೇಣಾಚಾರ್ಯ
  • ಸುಬ್ಬಣ್ಣಾಚಾರ್ಯ
    • O
  • ಬಾಳಾಚಾರ್ಯ
    • ಸ್ವಾಮಿರಾಯಚಾರ್ಯ
    • ಗುರಾಚಾರ್ಯ
    • ಬಂಡಾಚಾರ್ಯ
    • ಶ್ಯಾಮಾಚಾರ್ಯ

ಏಳನೆ ತಲೆಮಾರು – ಕೃಷ್ಟಾಚಾರ್ಯರ ಒಬ್ಬ ಪುತ್ರ – ಶ್ರೀನಿವಾಸ ; ವೇಣಾಚಾರ್ಯರಿಗೆ (ವೆಂಕಣ್ಣಾಚಾರ್ಯ ?) ಮಕ್ಕಳಾಗಲಿಲ್ಲ ; ಸ್ವಾಮಿರಾಚಾರ್ಯರಿಗೆ ಒಬ್ಬ ಪುತ್ರ – ರಾಮಾಚಾರ್ಯ ; ಬಂಡಾಚಾರ್ಯರಿಗೆ ಮೂವರು ಪುತ್ರರು – ೧. ಪಾಂಡುರಂಗಾಚಾರ್ಯ ೨. ಬಾಳಾಚಾರ್ಯ ೩. ಕೃಷ್ಟಾಚಾರ್ಯ ಉರ್ಫ ಸ್ವಾಮಿರಾಚಾರ್ಯ ; ಶಾಮಾಚಾರ್ಯರಿಗೆ ನಾಕು ಮಕ್ಕಳು ( ಇಬ್ಬರು ಪುತ್ರರು + ಇಬ್ಬರು ಪುತ್ರಿಯರು) – ೧. ಹಣಮಂತಾಚಾರ್ಯ ಉರ್ಫ ತಮ್ಮಣ್ಣ ೨. ಅಡವಿಕೃಷ್ಣ ೩.ಧೋಂಡೂಬಾಯಿ ೪. ಭಾಗೀರಥಿ

  • ರಾಘವಾಚಾರ್ಯ
    • ಶ್ರೀನಿವಾಸ
  • ವೇಣಾಚಾರ್ಯ
    • O
  • ಸ್ವಾಮಿರಾಚಾರ್ಯ
    • ರಾಮಾಚಾರ್ಯ
  • ಗುರಾಚಾರ್ಯ
    • O
      • ಹಣಮಂತಾಚಾರ್ಯ ಉರ್ಫ ತಮ್ಮಣ್ಣ
  • ಬಂಡಾಚಾರ್ಯ
    • ಪಾಂಡುರಂಗಾಚಾರ್ಯ
    • ಬಾಳಾಚಾರ್ಯ
    • ಕೃಷ್ಟಾಚಾರ್ಯ
  • ಶ್ಯಾಮಾಚಾರ್ಯ
    • ಹಣಮಂತಾಚಾರ್ಯ ಉರ್ಫ ತಮ್ಮಣ್ಣ
    • ಅಡವಿಕೃಷ್ಣ
    • ಧೋಂಡೂಬಾಯಿ
    • ಭಾಗೀರಥಿ

ನನ್ನ ಟಿಪ್ಪಣಿ:
೧. ಈ ತಲೆಮಾರಿನಲ್ಲಿಯೂ ಟಿಂ ಟಿಂ ರೇಷೆಯ ಜೋದಣೆ ಯಿದೆ. ಶ್ಯಾಮಾಚಾರ್ಯರ ಎರಡನೆ ಮಗ ಅಡವಿಕೃಷ್ಣ ಹೆಸರಿನ ಕೆಳಗೆ ದತ್ತಕ ಗೇಲಾ ಎಂದಿದ್ದು ಟಿಂ ಟಿಂ ರೇಷೆಯಿಂದ ಗುರಾಚಾರ್ಯರ ಮಗನೆಂದು ಜೋದಣೆಗೊಂಡಿದ್ದು, ದತ್ತಕ ಆಲಾ ಎಂಬ ಮರಾಠಿ ಶಬ್ದವನ್ನು ಬರೆಯಲಾಗಿದೆ. ಗುರಾಚಾರ್ಯರ ಹೆಸರ ಕೆಳಗೆ ನಿಪುತ್ರಕ ಎಂದು ಸಂಕೇತಿಸುವ ತಲೆಕೆಳಗಾದ ಪ್ರಶ್ನಾರ್ಥಕ ಚಿಹ್ನೆ ಇದೆ. ಮತ್ತು ಹೆಸರಿನ ಮೇಲುಗಡೆ ಕತ್ತರಿಯ ಖಾಟು ಚಿಹ್ನೆ ಇದೆ.

೨. ಆ ಹಳೆಯ ಕಾಗದದಲ್ಲಿ ಬಂಡಾಚಾರ್ಯರಿಗೆ ಇಬ್ಬರು ಮಕ್ಕಳು – ೧.ಕೃಷ್ಣಾಚಾರಿ ೨. ಪಾಂಡುರಂಗಾಚಾರಿ ಎಂದು ಮೊದಲಿಗೆ ಬರೆದಿದ್ದರೂ, ಬಹುಶಃ ಮರೆತುಹೋದ ಹೆಸರು ನೆನಪಾಗಿ ಬಾಳಾಚಾರಿ ಎಂಬ ಹೆಸರನ್ನು ಆ ಎರಡೂ ಹೆಸರುಗಳ ನಡುವೆ ಒಂದು ರೇಷೆ ಎಳೆದು ಸೇರಿಸಲಾಗಿದೆ. ನಂತರ ಬಹುಶಃ ಜ್ಯೇಷ್ಠತಾ ಕ್ರಮ ತಪ್ಪಿದೆಯೆಂದು ಗೊತ್ತಾಗಿ ಆಯಾ ಹೆಸರುಗಳ ಹಿಂದೆ ಅಂಕಿಯನ್ನು ಹಾಕಿ – ೧. ಪಾಂಡುರಂಗಾಚಾರಿ ೨. ಬಾಳಾಚಾರಿ ೩.ಕೃಷ್ಟಾಚಾರಿ ಎಂದು ಸರಿಪಡಿಸಲಾಗಿದೆಯೆಂದು ತೋರುತ್ತದೆ. ಹೀಗೆ ಈ ಮೂರೂ ಹೆಸರು ಮತ್ತು ಅವುಗಳ ಜ್ಯೇಷ್ಠತಾ ಕ್ರಮ ಸರಿಯಾಗಿ ಇದ್ದ ಬಗ್ಗೆ ಸಂಬಧಿಸಿದವರನ್ನು, ಅಂದರೆ ಮಕ್ಕಳು ಮೊಮ್ಮಕ್ಕಳು ಇವರನ್ನು ಕೇಳಿ ಖಾತರಿ ಮಾಡಿಕೊಳ್ಳಬೇಕಿದೆ. ಮತ್ತೊಂದು ವಿಶೇಷ : ಮೊದಲ ಬಾರಿಗೆ ಈ ತಲೆಮಾರಿನ ಹೆಸರುಗಳಲ್ಲಿ ಎರಡು ಹೆಣ್ಣು ಹೆಸರುಗಳು ಸೇರಿವೆ. ಇವೆ ಆ ಹಳೆಯ ನಕಲಿನ ಮೂಲ ಕಾಗದಲ್ಲಿ ಇಲ್ಲ. ಬೇರೆ ಮೂಲಗಳಿಂದ ನನಗೆ ತಿಳಿದುಬಂದವು. ಇಲ್ಲಿನ ವರೆಗೆ, ಸಂಪ್ರದಾಯದಂತೆ ಕೇವಲ ಪುತ್ರ ರತ್ನಗಳು ವಂಶವಾಹಿನಿಯನ್ನು ಮುಂದೆ ಒಯ್ಯುವ ಅಧಿಕಾರಸ್ಥ ರೆಂದು ಅವರ ಮಾತ್ರ ಹೆಸರುಗಳು ಮಾತ್ರ ವಂಶಾವಳಿಯಲ್ಲಿ ಬರೆಯಲ್ಪಟ್ಟಿವೆ. ಆದರೆ ಈಗಿನ ಹೊಸ ವಿಚಾರದ ಪ್ರಕಾರ ಮಗಳೂ ಮಗನಷ್ಟೆ ಸಮಾನಳು ಎಂದು ಒಪ್ಪಿತವಾಗಿದ್ದರಿಂದ, ನಾನು ನಮ್ಮ ಮನೆತನದಲ್ಲಿ ಹುಟ್ಟಿದ ಕನ್ಯಾ ರತ್ನಗಳ ಹೆಸರುಗಳನ್ನೂ ಡಾಖಲಿಸಿದ್ದೇನೆ. ಮತ್ತು ಇನ್ನು ಮುಂದೆ, ಹಳೆಯ ತಲೆಮಾರಿನಲ್ಲಿ ಆಗಿ ಹೋದ ಹೆಣ್ಣು ಮಕ್ಕಳ ಹೆಸರು ಗೊತ್ತಾದ ಹಾಗೆಲ್ಲ, ಅವುಗಳನ್ನೂ ಸೆರಿಸಲಿದ್ದೇನೆ.

೩. ಅಂತೂ, ಆ ಹಳೆಯ ಕಾಗದಲ್ಲಿ ದಾಖಲೆಯಾದ ತಲೆಮಾರುಗಳು ಏಳು. ಆ ಕಾಗದದ ಆಧಾರದಿಂದ ಈ ಹೊಸ ಚಾರ್ಟನ್ನು ಸಿದ್ಧಪಡಿಸಿ ಅದರಲ್ಲಿ ಮುಂದಿನ ತಲೆಮಾರಿನ ಹೆಸರುಗಳನ್ನು ಸಂಬಂಧಿಸಿದವರನ್ನು ಸಂಪರ್ಕಿಸಿ, ಕೇಳಿ ತಿಳಿದು ದಾಖಲಿಸಿದ್ದೇನೆ.

ಎಂಟನೆ ತಲೆಮಾರು
ಈ ಟಿಸಿಲಿನ ಈ ತಲೆಮಾರಿನವರು ನನ್ನ ಸಮಕಾಲೀನರು. ೧೯೪೨ರಲ್ಲಿ ಹುಟ್ಟಿದ ನಾನು, ಅನಂತಾಚಾರ್ಯರಿಂದ ಕೊನರಿದ ನಮ್ಮ ಮನೆತನದ ಮೂರನೆ ಟಿಸಿಲಿನ, ಎಂಟನೆ ತಲೆಮಾರಿನವನು. ಇದರಲ್ಲಿನ ಸ್ವಲ್ಪ ಜನ ನನಗಿಂತ ಸುಮಾರು ಹತ್ತು ಅಥವಾ ಅದಕ್ಕೂ ತುಸು ಹೆಚ್ಚು ವರ್ಷ₹ ಹಿರಿಯರು, ಮತ್ತೆ ಕೆಲವರು ಚಿಕ್ಕವರು. ಈ ಯಾದಿಯಲ್ಲಿ ಕೊನೆಗೆ ಬರುವ ಅಡವಿಕೃಷ್ಣ ಅವರ ಪುತ್ರ ಗುರುರಾಜ ಅನ್ನುವ ವ್ಯಕ್ತಿಯೊಬ್ಬರನ್ನು ಬಿಟ್ಟು ನನಗೆ ಇವರಲ್ಲಿ ಬೇರೆ ಯಾರೊಬ್ಬರ ಹೆಸರು, ಮುಖಪರಿಚಯ ಹೋಗಲಿ, – ಅವರ ಇರುವಿಕೆಯ ಬಗ್ಗೇ ಗೊತ್ತಿರಲಿಲ್ಲ.

ಇತ್ತೀಚೆಗೆ ತೀರಿಕೊಂಡ ಗುರುರಾಜ ಮಂಗಳವೇಢೆಯವರನ್ನು ಮೊದಲು ನಾನು ನೋಡಿದ್ದು ಮತ್ತು ಅವರ ಹೆಸರು ಗೊತ್ತಾದದ್ದು ೧೯೭೦ರ ದಶಕದಲ್ಲಿರಬಹುದು. ಬೆಳಗಾವಿಯ ಅಝಾದ ಟಾಕೀಸದಲ್ಲಿ ಆಗ ಕನ್ನಡ ನಾಟಕೊತ್ಸವವನ್ನು ಸಂಘಟಿಸಲಾಗಿತ್ತು. ಬಹುಶಃ ಎಂ. ಆರ್. ಶ್ರೀನಿವಾಸಮೂರ್ತಿ ಯವರ ಪ್ರಸಿದ್ಧ ನಾಟಕ ಕೃತಿ ನಾಗರಿಕ ಎಂಬುದು ಆ ದಿನದ ನಾಟಕವಾಗಿತ್ತು. ಅದರಲ್ಲಿನ ಒಂದು ಪಾತ್ರವಾಗಿ ಎತ್ತರದ, ಬಲವಾದ ಮೈಕಟ್ಟಿನ ಈ ವ್ಯಕ್ತಿ ರಂಗಭೂಮಿಯ ಮೇಲೆ ನೋಡಿದ್ದೆ. ಹೆಸರೂ ಗೊತ್ತಾದಾಗ ಮತ್ತು ಅದು ನಮ್ಮದೆ ಅಡ್ಡ ಹೆಸರಾಗಿದ್ದರಿಂದ, ಈ ವ್ಯಕ್ತಿ ಯಾರು ಎಂದು ತಿಳಿದುಕೊಳ್ಲು ಕುತೂಹಲ ಹುಟ್ಟಿದ್ದಿತು. ಆ ಮೇಲೆ ಅವಕಾಶ ಸಿಕ್ಕಾಗ ಒಂದೆರಡು ಸಲ ಗುರುತು ಮಾಡಿಕೊಂಡು – ನಮಗೂ ನಿಮಗೂ ಸಂಬಂಧವೆನಾದರೂ ಇದ್ದ ಬಗ್ಗೆ ನಿಮಗೇನಾದರೂ ಗೊತ್ತೇ ಎಂದು ಕೇಳಿಯೂ ಇದ್ದೆ. ಒಂದೇ ಅಡ್ದ ಹೆಸರು ಎಂಬುದನ್ನು ಬಿಟ್ಟು, ಬಹುಶಃ ಬೇರೆ ನಂಟು ಯಾವುದೂ ಇಲ್ಲ, ನಾವು ಯಕ್ಕುಂಡಿಯವರು. ನೀವೇ ಹೇಳುವ ಹಾಗೆ ನೀವು ಮುರಗೋಡದವರು. ಅಂದ ಮೇಲೆ ಯಾವ ಸಂಬಂಧ? ಎಂದು ಅವರು ತಮಗೆ ಆಗ ಹೊಳೆದದ್ದನ್ನು ಹೇಳಿದ್ದರು.

ಗುರುರಾಜ ಅವರ ಗುರುತು ಕಾಲ ಕಳೆದಹಾಗೆ ಸ್ವಲ್ಪ ಬೆಳೆಯಿತು. ಅದಕ್ಕೆ ಕಾರಣವಾಗಿದ್ದುದು ಅವರು ಮಾಡುತ್ತಿದ್ದ ಕೆಲಸ. ಅವರೂ ಮತ್ತು ಅವರ ಅಣ್ಣ ಅಪ್ಪಣ್ಣಾಚಾರ್ಯರೂ ಬೆಳಗಾವಿಯಲ್ಲಿ ಟೆಲೆಗ್ರಾಫ ಡಿಪಾರ್ಟಮೆಂಟಿನಲ್ಲಿ ಕೆಳಸ ಮಾಡುತ್ತಿದ್ದರು. ೧೯೮೦ ರ ಸುಮಾರಿನಲ್ಲಿ ನಾನು ದಿ ಹಿಂದೂ ಇಂಗ್ಲಿಷ ಪತ್ರಿಕೆಯ ಬೆಳಗಾವಿ ವರದಿಗಾರನಾಗಿ ನೇಮಕಗೊಂಡೆ. ಆಗ ಪ್ರತಿ ದಿನ, ಸುದ್ದಿಯೆನಿಸಿದ ಬೆಳಗಾವಿಯ ಘಟನೆಗಳ ವರದಿಗಳನ್ನು ಟೆಲಿಗ್ರಾಮ ಮಾಡಿ ನನ್ನ ಪತ್ರಿಕೆಗೆ ಕಳಿಸಲು ಅವರ ಆಫೀಸಿಗೆ ಹೋಗಬೆಕಾಗುತ್ತಿತ್ತು. ಅಲ್ಲದೆ, ಆ ದಿನಗಳಲ್ಲಿ ಅವರು ವಾಸವಾಗಿದ್ದ ಬಾಡಿಗೆ ಮನೆ ಕೋನವಾಳಗಲ್ಲಿಯಲ್ಲಿ ಇದ್ದಿತು. ಅ ಜಾಗ ನಾವು ಮೇಲಿಂದ ಮೇಲೆ, ಒಂದಿಲ್ಲ ಒಂದು ಕಾರಣದಿಂದ ಹೊಗಿಬರುವಂತಹದು., ಆ ಓಣಿ ರಾಯರ ಮಠವಿರುವ ಟಿಳಕ ಚೌಕಕ್ಕೆ ಕೂಡುತ್ತಿತ್ತು. ಅಲ್ಲದೆ ಅಲ್ಲಿ ನನ್ನ ಕೆಲ ಬಾಲ್ಯ ಮಿತ್ರರೂ ಇದ್ದರು. ಟಿಳಕ ಚೌಕ ಊರಲ್ಲಿ ಒಂದು ಆಯಕಟ್ಟಿನ ಸ್ಥಳ. ಹೀಗಾಗಿ ಆಫೀಸು ವೇಳೆಯ ಹೊರತಾಗಿಯೂ ಅವರ ಮನೆ ಹತ್ತಿರ, ಇಲ್ಲ, ಟಿಳಕ ಚೌಕದಲ್ಲಿ ಆಗೀಗ ಭೆಟ್ಟಿ ಆಗುತ್ತಿತ್ತು. ಒಂದೆರಡು ಸಲ ಮನೆಗೆ ಹೋಗಿದ್ದೂ ಆಗಿತ್ತು.
ಅವರ ಅಣ್ಣ ಅಪ್ಪಣ್ಣಾಚಾರ್ಯ ಅವರು ಹಿಂಡಲಗಾದ ಹತ್ತಿರವಿರುವ ವಿಜಯನಗರ ಎಂಬ ಬಡಾವಣೆಯಲ್ಲಿ ಬಹಳ ಹಿಂದೆಯೆ ಕೊಂಡಿದ್ದ ಒಂದು ನಿವೇಶನದಲ್ಲಿ ಮನೆಯೊಂದನ್ನು ಕಟ್ಟಿಕೊಂದಿದ್ದರು. ಗುರುರಾಜ ಅವರೂ ಅದೇ ನಿವೇಶನದಲ್ಲಿ ತಮ್ಮ ಒಂದು ಮನೆಯನ್ನೂ ಕಟ್ಟಿಕೊಂಡು, ಅಲ್ಲಿಯೆ ಹೋಗಿ ಇರಹತ್ತಿದ್ದರು. ೧೯೯೩ ರ ಮೇ ತಿಂಗಳಲ್ಲಿ – ಆಗ ನನಗೆ ಯಕ್ಕುಂಡಿಯ ಈ ಜನರೂ ನಮ್ಮ ಬಳಗವೇ ಎಂದು, ಬಹುಶಃ ಮುರಗೋಡದಲ್ಲಿ ಸಿಕ್ಕ ಆ ಹಳೆಯ ವಂಶಾವಳಿ ಚಾರ್ಟದಿಂದಾಗಿ ಗೊತ್ತಾಗಿದ್ದಿತು – ಇ ಇಬ್ಬರೂ ಸೋದರರನ್ನು ಸಂದರ್ಶಿಸಿ ಟಿಪ್ಪಣಿಗಳನ್ನು ತೆಗೆದುಕೊಂಡಿದ್ದೆ. ಮುಂದೆ ಅದೇ ವರ್ಷದ ಸಪ್ಟಂಬರದಲ್ಲಿ ಇದೇ ಯಕ್ಕುಂಡಿ ಮೂಲದ ಇನ್ನೊಬ್ಬ ಹಿರಿಯರು ಬಾಳಾಚಾರ್ಯರನ್ನು ಹುಬ್ಬಳ್ಳಿಯಲ್ಲಿ ಭೆಟ್ಟಿಯಾದಾಗ ಅವರು, ನಾವೂ ನೀವೂ ಒಂದೇ ಜನ ಎಂದು ದೃಢ ಪಡಿಸಿದ್ದರು. ಆ ನಂತರ ಧಾರವಾಡದಲ್ಲಿನ ನೇಕಾರ ಗಲ್ಲಿಯಲ್ಲಿದ್ದ, ಅದೇ ಟಿಸಿಲಿನ ಮಾಧವಾಚಾರ್ಯ, ಅನಂತಾಚಾರ್ಯ ಮೊದಲಾದವರನ್ನು ಭೆಟ್ಟಿಯಾಗಿ ಮತ್ತಷ್ತು ಮಾಹಿತಿಯನ್ನು ಕಲೆ ಹಾಕಿದ್ದೆ.

ಇತ್ತೀಚೆಗ – ಒಂದು ವರ್ಷದ ಹಿಂದೆಯಷ್ಟೆ- ಜನೆವರಿ ೨೦೧೪ ರಲ್ಲಿ, ಧಾರವಾಡದಲ್ಲಿ ಇದ್ದ ಇದೇ ಟಿಸಿಲಿನ ಇನ್ನೊಂದು ಕುಟುಂಬದ ಒಂಬತ್ತನೆ ತಲೆಮಾರಿನ ರಂಗನಾಥ (ನಾರಾಯಣ ರಾಮಾಚಾರ್ಯ ಮಂಗಳವೇಢೆಯವರ ಕಿರಿಯ ಪುತ್ರ) ಭೆಟ್ಟಿಯಾದ ಮೇಲೆ, ಅವರ ಬಗ್ಗೆ ಅವರ ಸೋದರರು, ಹಿರಿಯರು, ಕಕ್ಕಂದಿರು ಮೊದಲಾದ ಅನೇಕರ ಮಾಹಿತಿ ಸಿಕ್ಕು, ಇನ್ನೂ ಚಿಕ್ಕವರಾಗಿರುವ ೧೦ ನೆ ತಲೆಮಾರಿನ ಕೆಲ ಹೆಸರುಗಳೂ ಸೇರ್ಪಡೆಯಾಗಿ , ಒಟ್ಟು ಹತ್ತು ತಲೆಮಾರುಗಳ ಒಂದು ಚಿತ್ರ ಬಹಳ ಬಹಳ ಮಟ್ಟಿಗೆ ಸ್ಪಷ್ಟವಾಗಿದೆ, ವಿಸ್ತಾರವಾಗಿದೆ.

ಸಂತಾನದ ಬಳ್ಳಿ ಚಿಗುರಿದ್ದು, ಮುರುಟಿದ್ದು

ಮೂಲಪುರುಷ ಮಾಣಿಕ ಭಟ್ಟರ ಮೂರು ಗಂಡು ಮಕ್ಕಳಲ್ಲಿ ಬಾಳಂ-ಭಟ್ಟರು ಜ್ಯೇಷ್ಠ ಪುತ್ರರು. ಹೀಗಾಗಿ ಅವರೆ ಮಾಣಿಕ ಭಟ್ಟರ ಸಂತಾನದ ಮೊದಲ ಟಿಸಿಲು. ಮೂಲಪುರುಷನೆ ಮೊದಲಿಗನೆಂದು ಶುರುವಾಗುವ ತಲೆಮಾರುಗಳ ಎಣಿಕೆಯಲ್ಲಿ ಬಾಳಾಚಾರ್ಯರು ಎರಡನೆ ತಲೆಮಾರಿನವರು. ಅವರ ಇಬ್ಬರು ಮಕ್ಕಳು – ೧. ಪಾಂಡುರಂಗಾಚಾರ್ಯರು ಮತ್ತು ೨. ಮಧ್ವಾಚಾರ್ಯರು ಮೂರನೆ ತಲೆಮಾರಿನವರು.

ಇದೇ ಟಿಸಿಲಿನ ಏಳನೆ ತಲೆಮಾರಿನಲ್ಲಿ ಕಳೆದ ಶತಮಾನದ ಪ್ರಾರಂಭದಲ್ಲಿ (೧೯೦೩ ರಲ್ಲಿ) ನಾನೂ, ನನ್ನ ಸಮಕಾಲೀನರೂ ನೋಡಿದ್ದ ಮತ್ತೊಬ್ಬ ಬಾಳಾಚಾರ್ಯರು ಹುಟ್ಟಿದರು. ಈ ಟಿಸಿಲಿನಲ್ಲಿ ಇವರು ನಾಕನೆ ಬಾಳಾಚಾರ್ಯರು. ಹುಬ್ಬಳ್ಳಿಯಲ್ಲಿ ವಾಸವಾಗಿ ಸುತ್ತಮುತ್ತಲೆಲ್ಲ ತಮ್ಮ ಪಾಂಡಿತ್ಯದಿಂದ ಪ್ರಸಿದ್ಧರಾಗಿದ್ದರು. ಪರಿಚಯಮಾಡಿಕೊಳ್ಳಲೆಂದು ಆಗ ಅವರಿದ್ದ, ತೊರವಿಗಲ್ಲಿಯ ಮನೆಗೆ ನಾನೊಮ್ಮೆ ಹೋಗಿದ್ದೆ.(ದುರ್ದೈವದಿಂದ, ಅದೇ ಅವರ ಕೊನೆಯ ಭೆಟ್ಟಿಯೂ ಆಗಿತ್ತು. ಆ ಸಂದರ್ಭದಲ್ಲಿ ಅವರು ತಮ್ಮ ಹಿರಿಯರ ಹೆಸರುಗಳನ್ನು ಹೇಳುತ್ತ, ತಮ್ಮ ಮುತ್ತಜ್ಜ ಮದ್ದಂ ಭಟ್ಟರೆಂದೂ, ಮತ್ತು ಅವರು ಬಾಲಕೃಷ್ಣ ಭಟ್ಟ ಜೋಶಿಯವರ ಮಗನೆಂದು ಹೇಳಿದ್ದರು. ಹಾಗೆ ಹೆಸರಿಸಿದ ಬಾಲಕೃಷ್ಣ ಭಟ್ಟ ಮತ್ತು ಮದ್ದಂ ಭಟ್ಟರೇ ಬಾಳಾಚಾರ್ಯ ಮತ್ತು ಮಧ್ವಾಚಾರ್ಯರು.

ಬಾಳಕೃಷ್ಣ / ಬಾಳಂಭಟ್ಟ ಎಂಬ ಹೆಸರ ವ್ಯಕ್ತಿಯಿಂದ ಅಂಕುರಗೊಂಡ ಈ ಟಿಸಿಲಿನಲ್ಲಿ ಇದೇ ನಾಮಧೇಯ ಮತ್ತೆ ಮೂರುಸಲ, ಏಳನೆ ತಲೆಮಾರಿನ ವರೆಗೆ ಪುನರಾವೃತ್ತಿಯಾಗಿದೆ.

ಒಂದು ಹೆಸರು ಆ ಮನೆತನದ ಹಲವು ತಲೆಮಾರುಗಳಲ್ಲಿ ಪುನರಾವರ್ತನೆಯಾಗುವದು ವಿಶೇಷವೇನಲ್ಲ. ತೀರಿಕೊಂಡ ಹಿರಿಯರ ಹೆಸರನ್ನು, ತೀರಿಕೊಂಡ ನಂತರದ ದಿನಗಳಲ್ಲಿ, ಹುಟ್ಟಿದ ಮಗುವಿಗೆ – ಮತ್ತೆ ಅದೇ ವ್ಯಕ್ತಿ ಮರಳಿ ಹುಟ್ಟಿಬಂದನೆಂದು ತಿಳಿದು – ಗೌರವಪೂರ್ವಕವಾಗಿ, ಇಡುತ್ತಿದ್ದುದು, ನಮಗೆ ಪುರಾತನರಿಂದ ಬಂದ ರೂಢಿ. ಹೀಗಾಗಿಯೆ ಮೊಮ್ಮಕ್ಕಳಲ್ಲಿ ಒಬ್ಬರಲ್ಲ ಒಬ್ಬರು ಅಜ್ಜನ ಹೆಸರಿನವರೆ.

ಆದರೆ ಬಾಳಂಭಟ್ಟ / ಬಾಳಾಚಾರ್ಯ ಎಂಬ ಈ ಹೆಸರು, ಈ ಟಿಸಿಲಿನ ಬೆಳವಣಿಗೆಯಲ್ಲಿ ಅತ್ಯಂತ ವಿಶಿಷ್ಟ ಪಾತ್ರವನ್ನಾಡಿದೆ ಎಂಬುದು ವಿಶೇಷ. ಈ ಟಿಸಿಲಿನ ಮೊದಲಿಗ ಬಾಳಾಚಾರ್ಯರಿಗೆ ಇಬ್ಬರು ಮಕ್ಕಳಷ್ಟೆ! ಆ ಇಬ್ಬರಿಗೂ ಸಂತಾನವೃದ್ಧಿಯಾಗಿ, ನಂತರದವರೂ ಮಕ್ಕಳನ್ನು ಪಡೆದು ರೆಂಬೆ ಕೊಂಬೆಗಳು ಹುಟ್ಟಿ, ಶಾಖೋಪಶಾಖೆಗಳಾಗಿ ವಂಶವೃಕ್ಷ ವಿಸ್ತಾರಗೊಳ್ಳಬೇಕಾಗಿತ್ತಲ್ಲವೆ!. ಆದರೆ, ಕಾಲಾಂತರದಲ್ಲಿ, ಹೊಸ ಹೊಸ ತಲೆಮಾರುಗಳು ಹುಟ್ಟಿದಂತೆ, ಚಿಗುರಿದ್ದ ಶಾಖೆಗಳು ಮುರುಟಿಕೊಂಡು, ಅಲ್ಲಿಗೇನೆ ಆ ಶಾಖೆ ಮೊಟಕುಗೊಳ್ಳುವ ಭಯಾವಹ ಸ್ಥಿತಿ ಎರಡುಸಲ ನಿರ್ಮಾಣಗೊಂಡಿತ್ತು. ಮೂರನೆ ತಲೆಮಾರಿನ ಆ ಪಾಂಡುರಂಗಾಚಾರ್ಯ ಮತ್ತು ಮಧ್ವಾಚಾರ್ಯರಿಬ್ಬೈಂದಲೂ ಕೊನರಿದ್ದ ಟೊಂಗೆಗಳು, ಸ್ವಲ್ಪ ಬೆಳೆದು, ನಂತರ ಚಿಗುರುವದು ನಿಂತು, ಬಾಡಿ ಬಿದ್ದು ಹೋಗುವ ಅಂಜಿಕೆ ಆತಂಕ ಹುಟ್ಟಿತ್ತು.

ಆದರೆ ಹಾಗೆ ಆಗದಂತೆ ಕಾರಣನಾದ ಕೇವಲ ಒಬ್ಬ ವ್ಯಕ್ತಿ, ಐದನೆ ತಲೆಮಾರಿನ ಬಾಳಾಚಾರ್ಯ.
ಅದು ಹೇಗೆ ನೋಡೋಣ. ನಾಕನೆ ತಲೆಮಾರಿನಲ್ಲಿ ಪಾಂಡುರಂಗಾಚಾರ್ಯರ ಮೂವರು ಮಕ್ಕಳು ೧. ತೊರಗಲ್ಲದಲ್ಲಿ ಇರಹತ್ತಿದ ಕೃಷ್ಟಾಚಾರ್ಯರು, ೨. ರಾಮಾಚಾರ್ಯರು ಮತ್ತು ೩. ಕಾಂತಾಚಾರ್ಯರು (ಇವರು ಪಾಂಡುರಂಗಾಚಾರ್ಯರ ಸಂತಾನದ ಬಳ್ಳಿ ಹಬ್ಬುವಂತೆ ಮಾಡಬೇಕಾಗಿದ್ದವರು) ಹಾಗೂ ಮಧ್ವಾಚಾರ್ಯರ (ಅಥವಾ ಮದ್ದಂಭಟ್ಟ) ಏಕ ಮಾತ್ರ ಪುತ್ರ – ಯಕ್ಕುಂಡಿಯಲ್ಲಿರುತ್ತಿದ್ದ – ಬಾಳಾಚಾರ್ಯರು (ಇವರು ಮದ್ದಂಭಟ್ಟರ ಬಳ್ಳಿ ಬೆಳೆಯುವಂತೆ ಮಾಡಬೇಕಿದ್ದವರು), ಹೀಗೆ ನಾಕು ಜನರು.

ಇವರಲ್ಲಿ ಬಾಳಾಚಾರ್ಯರಿಗೆ (ಅಂದರೆ – ಮಾಣಿಕ ಭಟ್ಟರ ಪ್ರಪೌತ್ರ, ಬಾಳಂ ಭಟ್ಟರ ಪೌತ್ರ, ಮಧ್ವಾಚಾರ್ಯ/(ಮದ್ದಂಭಟ್ಟರ ಪುತ್ರ) ಗಂಡು ಮಕ್ಕಳಾಗದೆ ನಿಪುತ್ರಕನೆಂಬ ವಿಶೇಷಣ ಅಂಟಿಕೊಂಡಿತು. (ಮುಂದೆ ಬಹುಶ್ಃ ಅವರು ತೀರಿಯೂ ಹೋದಮೇಲೆ) ಆಗ ಅವರ ತಂದೆ ಮಧ್ವಾಚಾರ್ಯರು ತಮ್ಮ ಸದ್ಗತಿಯ ಕುರಿತು ಚಿಂತಿತರಾಗಿರಬೇಕು. ತಮ್ಮ ನಿಪುತ್ರಕ ಪುತ್ರ ದತ್ತಕವಿಧಾನದಿಂದ ಕೂಡ ತನ್ನ ವಂಶಾಭಿವೃದ್ಧಿಯ ವ್ಯವಸ್ಥೆ ಮಾಡಿಕೊಳ್ಳದೆ ಹೋಗಿದ್ದರಿಂದ, ಆ ಕೆಲಸಕ್ಕೆ ತಾವೇ ಮುಂದಾದರು. ಹೊರಗೆಲ್ಲಿಯೂ ಹುಡುಕದೆ, ಮನೆತನದವನೆ ಆಗಿದ್ದ, ತಮ್ಮ ಅಣ್ಣ ಪಾಂಡುರಂಗಾಚಾರ್ಯರ ಮೊಮ್ಮಗ, ಕಾಂತಾಚಾರ್ಯರ ಎರಡನೆ ಪುತ್ರ ಬಾಳಾಚಾರ್ಯನನ್ನು ತಮ್ಮ ದತ್ತಕ ಮಗನಾಗಿಸಿಕೊಂಡರು.

ಹೀಗೆ ಹೊಟ್ಟೆಯಿಂದ ಹುಟ್ಟಿದ ಬಾಳನ ಸ್ಥಳದಲ್ಲಿ, ನಾತೆಯಿಂದ ಮೊಮ್ಮಗನಾಗಬೆಕಿದ್ದ ಮತ್ತೊಬ್ಬ ಬಾಳನನ್ನು ತುಂಬಿಕೊಂಡರು. ಹೀಗೆ ಮದ್ದಂಭಟ್ಟರು ದತ್ತಕ ತೆಗೆದುಕೊಂಡ ಮೇಲೂ, ನಿಜ ಪುತ್ರನ ನಾಮಧೇಯವೆ ದತ್ತಕವಾಗಿ ಬಂದವನದೂ ಆಗಿದ್ದರಿಂದ – ಅದೇ ಹೆಸರು ಆ ಸ್ಥಳದಲ್ಲಿಯೆ ಉಳಿಯಿತು. ಇದು ಒಂದು ವಿಶೇಷ.

ಈ ಹೆಸರಿನ ಮಹಾತ್ಮ್ಯ ದೊಡ್ಡದು. ನಾಕನೆ ತಲೆಮಾರಿನ ಬಾಳಾಚಾರ್ಯ ನಿಪುತ್ರಕ. ಆದರೆ ದತ್ತಕ ತೆಗೆದುಕೊಳ್ಳಲಿಲ್ಲ. ತಂದೆ ಮಧ್ವಾಚಾರ್ಯರು ತಮ್ಮ ವಂಶದ ಕುಡಿ ತಮ್ಮ ನಂತರ ಮುರುಟಿ ಹೋಗಬಾರದೆಂದು ದತ್ತಕ ತೆಗೆದುಕೊಂಡು ಮತ್ತೊಬ್ಬನನ್ನು ಮಗನೆಂದು ಮಾಡಿಕೊಂಡರು. ಆ ಜಾಗದಲ್ಲಿ ಬದಲಿಯಾಗಿ ಬಂದವರೂ, ಅದೇ ಹೆಸರಿನವರೆ. ಐದನೆ ತಲೆಮಾರಿನ ಬಾಳಾಚಾರ್ಯರು.Thus, one Balacharya was replaced by another Balacharya. ಮೂರನೆ ತಲೆಮಾರಿನ ಮೊದಲ ಕುಡಿ ಪಾಂಡುರಂಗಾಚಾರ್ಯರ ಮೊಮ್ಮಗ. ಅವರ ಮೂರನೆ ಮಗ ಕಾಂತಾಚಾರ್ಯರ ಎರಡನೆ ಮಗ.

ಆ ತಲೆಮಾರಿನಲ್ಲಿಯೆ ಪಾಂಡುರಂಗಾಚಾರ್ಯರಿಂದ ಚಿಗಿತ ಬಳ್ಳಿ ಬಾಡಲಾರಂಭಿಸಿತ್ತು. ದತ್ತಕ ಹೋದ ಬಾಳಾಚಾರ್ಯರ ಕಕ್ಕನ ಮಗ- ಅಣ್ಣ ರಾಘವಾಚಾರ್ಯರು (ಕೃಷ್ಟಾಚಾರ್ಯರ ಹಿರಿಯ ಮಗ) ನಿಪುತ್ರಕ. ಹಾಗೆಯೆ, ಖಾಸ ಅಣ್ಣ ಸುಬ್ಬಣ್ಣಾಚಾರ್ಯ ಕೂಡ ನಿಪುತ್ರಕ. ಪಾಂಡುರಂಗಾಚಾರ್ಯರ ವಂಶ ವಲ್ಲಿ ಅವರ ಎರಡನೆ ಮಗ ರಾಮಾಚಾರ್ಯರಿಂದ ಚಿಗಿಯುತ್ತ, ಗೋವಿಂದಾಚಾರ್ಯ ನೆಂಬ ಮಗ, ಕೃಷ್ಟಾಚಾರ್ಯ ನೆಂಬ, ಶ್ರೀನಿವಾಸನೆಂಬ ಮರಿಮಗನ ವರೆಗೆ, ಅಂದರೆ ಏಳನೆ ತಲೆಮಾರಿನ ವರೆಗೆ ಚಿಗಿಯುತ್ತ ನಡೆದಿದ್ದಿತು. ಆದರೆ ಶ್ರೀನಿವಾಸರಿಂದ ಮುಂದೆ ಬೆಳೆಯಲಿಲ್ಲ. ಗೋವಿಂದಾಚಾರ್ಯರ ಎರಡನೆ ಮಗ ವೇಣಾಚಾರ್ಯ (ವೆಂಕಣ್ಣಾಚಾರ್ಯ?) ರಿಗೂ ಗಂಡು ಮಕ್ಕಳಾಗಲಿಲ್ಲ. ಅದೇ ಆರನೆ ತಲೆಮಾರಿನ – ಗುರಾಚಾರ್ಯರಿಗೂ (ಇವರು, ಯಾರ “ಮಹಾತ್ಮ್ಯ”ದ ಬಗ್ಗೆ ಇಷ್ಟೆಲ್ಲ ಬರೆಯುತ್ತಿದ್ದೇನೋ ಆ ಬಾಳಾಚಾರ್ಯರ ಎರಡನೆ ಮಗ) ಅಷ್ಟೆ! ಬಳ್ಳಿ ಅಲ್ಲಿಗೆ ಮುರುಟಿತ್ತು. ಆದರೆ ತಮ್ಮ ಕೊನೆಯ ತಮ್ಮನ ಮಗ ಯಕ್ಕುಂಡಿಯಲ್ಲಿದ್ದ ಅಡವಿಕೃಷ್ಣನನ್ನು ದತ್ತಕ ತೆಗೆದುಕೊಂಡು, ಆ ಆತಂಕವನ್ನು ನಿವಾರಿಸಿಕೊಂಡಿದ್ದರು.

ಐದನೆ ತಲೆಮಾರಿನ – ತಮ್ಮ ಅಜ್ಜನಿಗೆ ದತ್ತಕ ಹೋಗಿ ಮಗನ ಸ್ಥಾನದಲ್ಲಿ ಕುಳಿತ ಆ ಬಳ್ಲಾಚಾರ್ಯರಿಗೆ ನಾಕು ಮಕ್ಕಳು.
ಆದರೆ, ದತ್ತಕ ಹೋದ ಈ ಬಾಳಾಚಾರ್ಯರಿಗೆ ಇಬ್ಬರು ಮಕ್ಕಳು.

ಅಗತ್ಯವಾಗಿ ಮಾತೊಂದನ್ನು ನಾನು ಹೇಳಲೇ ಬೇಕಿದೆ. ನಾನು ಶಬ್ದ ರೂಪದಲ್ಲಿನ ಈ ಚಿತ್ರವನ್ನು ಕೊಟ್ಟದ್ದು, ಅವರ ಮುಂದಿನ ತಲೆಮಾರಿನವರಿಂದ ಅಧಿಕೃತವಾಗಿ ಕೇಳಿದ್ದೇನೂ ಅಲ್ಲ. ಮುರಗೋಡದಲ್ಲಿ ಸಿಕ್ಕ ವಂಶಾವಳಿಯ ಆ ಹಳೆಯ ನಕಲಿನ ಚಾರ್ಟ ನೋಡಿ ಊಹಿಸಿಕೊಂಡದ್ದು. ಆ ಚಾರ್ಟಿನಲ್ಲಿ, ಕೆಲವೆಡೆ ಆಗಿದ್ದ ದತ್ತಕ ಪ್ರಸಂಗದ ಬಗ್ಗೆ ಸ್ಪಷ್ಟವಾಗಿಶಬ್ದದಲ್ಲಿ ಬರೆಯಲಾಗಿದೆ. ಆದರೆ, ಈ ವಿಶಿಷ್ಟ ಪ್ರಸಂಗದ ಬಗ್ಗೆ “ದತ್ತಕ ಗೇಲಾ, ದತ್ತಕ ಆಲಾ” ಎಂದೇನೂ ಬರೆದಿಲ್ಲ. ಆದರೆ ಆ ಸೂಚನೆ – ಜೋದಣೆಯಾದ- ಅದೂ ಸೊಟ್ಟ ಸೊಟ್ಟಾಗಿ ಎಳೆದ ಟಿಂ ಟಿಂ ರೇಷೆಯಿಂದ ಸಿಗುತ್ತದೆ. ಮತ್ತು ಮದ್ದಂಭಟ್ಟರ ಪುತ್ರ ಬಾಳಾಚಾರ್ಯರ ಹೆಸರ ಕೆಳಗೆ ನಿಪುತ್ರಕ ಎಂಬುದರ ಸಂಕೇತವಾದ ತಲೆಕೆಳಗಾದ ಪ್ರಶ್ನಾರ್ಥಕ ಚಿಹ್ನೆ ಯಿಂದ, ಮತ್ತು ನಂತರದ ತಲೆಮಾರಿನ ಅದೇ ಹೆಸರಿನ ವ್ಯಕ್ತಿಯನ್ನು ಮದ್ದಂಭಟ್ಟರ ಹೆಸರಿಗೆ ಟಿಂ ಟಿಂ ರೇಷೆಯಿಂದ ಜೋಡಿಸಿದ್ದು – ಈ ಸೂಚನೆ ನಾನು ತಿಳಿದಂತೆ ಆಗಿದ್ದ ದತ್ತಕ ಪ್ರಸಂಗದ ರೇಖಾ ರೂಪಿ ವರ್ಣನೆ ಇರಬೇಕೆಂದು ಉಹಿಸಿ, ಬರೆದಿದ್ದೇನೆ.ಇದು ಕೇವಲ ಸ್ವಕಪೋಲಕಲ್ಪಿತ ಎಂದು ಯಾರಾದರೂ ಅಧಾರಸಹಿತವಾಗಿ ಹೇಳುವವರು ಇದ್ದರೆ, ತಿದ್ದುಪಡಿ ಮಾಡಲು ನಾನು ಸಿದ್ಧ.