ವಿಷಯ ಸಂಗ್ರಹ

ಮುರಗೋಡದಲ್ಲಿ ಸಿಕ್ಕ ಆ ಹಳೆಯ ವಂಶಾವಳಿ ಚಾರ್ಟು ನಮ್ಮ ಕೈಗೆ ಹತ್ತಿದ ಕಥೆ. 

(ಶುಕ್ರವಾರ, ೬ ಡಿಸೆಂಬರ ೨೦೧೩ ಅಂದರೆ ಮಾರ್ಗಶೀರ್ಷ ಶುದ್ಧ ಚತುರ್ದಶಿಯಂದು ಧಾರವಾಡದಲ್ಲಿ ಬರೆದಿಟ್ಟಿದ್ದ ಟಿಪ್ಪಣಿ – ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಮತ್ತು  ಒಂದಿಷ್ಟು ವಿಸ್ತರಿಸಿ ಬರೆದುದು)

ನಮ್ಮ ಮನೆತನದ ವಂಶಾವಳಿಯ ಈ ಹಳೆಯ ಚಾರ್ಟ ನಮ್ಮ- ಅಂದರೆ ಸುಧೀರ ಮತ್ತು ನನ್ನ-  ಕೈಗೆ ಹತ್ತಿದ್ದು ಅತ್ಯಂತ ಆಕಸ್ಮಿಕವಾಗಿ. ಮುರಗೋಡದ ದಾಮೂಆಚಾರ್ಯರ ಮಂಗಳೂರಿ ಹಂಚಿನ ದುಮ್ಮಜಲಿ ಮನೆಯಲ್ಲಿ. ಸಂಬಂಧಿಸಿರುವವರನ್ನು ಸಂದರ್ಶಿಸಿ, ಹಳೆಯ ಕಾಗದಪತ್ರಗಳನ್ನು ಕೆದಕಿ, ನೆನಪುಗಳ ದೋಣಿಯಲ್ಲಿ ಕಾಲ ಪ್ರವಾಹದಲ್ಲಿ ಹಿಂದಕ್ಕೆ ಪಯಣಿಸುತ್ತ ನಮ್ಮ ಮನೆತದ ಇತಿಹಾಸವನ್ನು ತಿಳಿದುಕೊಳ್ಳುವ ಕೆಟ್ಟ ಕುತೂಹಲ ಆ ದಿನಗಳಲ್ಲಿ ನನ್ನಲ್ಲೂ, ಹಾಗೆಯೆ ದಾಮೂಆಚಾರ್ಯರ ಕಿರಿಯ ಮಗ ಸುಧೀರ ಅವರಲ್ಲಿಯೂ ಹುಟ್ಟಿ “ಏನಾದರೂ ಮಾಡುತಿರು ತಮ್ಮ” ಎಂದು ನಮ್ಮಿಬ್ಬರನ್ನೂ ತಿವಿತಿವಿದು ಕಾಡುತ್ತಿತ್ತು. ಭೆಟ್ಟಿಯಾದಗಲೆಲ್ಲ ಗತಿಸಿ ಹೋದವರ, ಈಗ ಬದುಕಿ ಇದ್ದರೂ ಸಂಬಂಧಗಳು ಹಳಸಿ ಹೋಗಿರುವವರ, ಹತ್ತಿರವಿದ್ದರೂ ದೂರವಾಗಿದ್ದವರ, ಕಳೆದು ಹೋದ ಹೊಲ- ಮನೆ ಆಸ್ತಿಪಾಸ್ತಿಯ ಬಗ್ಗೆ, ಹೀಗೆ ಹಲವು ಹತ್ತು ವಿಷಯಗಳು ಮಾತಿನಲ್ಲಿ ತಂತಾನೆ ಹೊರಟು, ಮುರಗೋಡದಲ್ಲಿ ನಮ್ಮ ಹಿರಿಯರೆಲ್ಲರೂ ಇರುತ್ತಿದ್ದ ಗತಕಾಲದ ಆ ಚಿತ್ರ ಮಬ್ಬು ಮಬ್ಬಾಗಿ ಮೂಡುತ್ತಿತ್ತು.ಈಗ  ಅಪರಿಚಿತರಾಗಿ ಚದುರಿ ಹೋಗಿರುವ ನಾವು ಸಂಬಂಧಿಗಳು ಎಂದು ನೆನಪಿಸಿಕೊಳ್ಳಲು  ಸಾಧ್ಯವಿಲ್ಲವೆ. ನಮ್ಮ ಬೇರುಗಳು ಎಲ್ಲಿವೆ ಎಂದು ಹುಡುಕಲು ಸಾಧ್ಯವಿಲ್ಲವೆ. ಆ ಕೆಲಸವನ್ನು ನಾವು ಮಾಡಬೆಕು. ನಮ್ಮದೇ ಆಗಿದ್ದರೂ ನಮಗೇ ಗೊತ್ತಿಲ್ಲದ ಅ ಕತೆಯನ್ನು ಮತ್ತೊಮ್ಮೆ ನೆನಪಿನಾಳದಿಂದ ಹೊರತೆಗೆಯ ಬೇಕು. ಉಳಿದ ಈಗಿನವರಿಗೆ ಹೇಳಬೇಕು ಎಂದು ಅನಿಸುತ್ತಿತ್ತು.

ಬಹುಶಃ ೧೯೯೮ ಅಥವಾ ೧೯೯೯ರಲ್ಲಿಯ ಯವುದೋ ಒಂದು ದಿನ. ವಾರ ತಿಂಗಳು ನೆನಪಿಲ್ಲ. ತಿಥಿ ಮಾತ್ರ ನೆನಪಿದೆ. ಅಂದು ಅಮಾವಾಸ್ಯೆ. ಧಿಡೀರಾಗಿ ಅಂದು ಸುಧೀರ ಬಂದು. ಮುರಗೋಡಿಗೆ ಬರುತ್ತೀರೇನು, ಕಾರು ಇದೆ. ಹೊಗಿಬರಲು ತೊಂದರೆಯೇನೂ ಇಲ್ಲ. ಬಂದರೆ ಅಲ್ಲಿನ ನಮ್ಮ ಮನೆ ತೋರಿಸುತ್ತೇನೆ ಎಂದಾಗ ಖುಶಿ ಯಿಂದ ಕೂಡಲೆ ಒಪ್ಪಿಕೊಂಡು ಅವಸರದಲ್ಲಿಯೆ ತಯಾರಾದೆ. ಒಂದು ತಾಸಿನಲ್ಲಿ ಮುರಗೋಡಿನಲ್ಲಿದ್ದೆವು. ಅದೋ, ಆ ಮಂಗಳೂರಿ ಹಂಚಿನ ಮನೆಯೆ ನಮ್ಮದು. ಅಲ್ಲಿ ಈಗ ಯಾರೂ ಇರುವದಿಲ್ಲ. ಕೊಟ್ಟುಬಿಡಬೇಕೆಂದು ಮಾಡಿದ್ದೇವೆ, ಒಳ್ಳೆ ದರ ಬಂದರೆ. ಇಲ್ಲಿನ ನನ್ನ ಗೆಳೆಯ ಬಲರಾಮ ಸಕ್ರಿ ಅವರಿಗೆ ಗಿರಾಕಿಗಳಿದ್ದರೆ ಕರೆದುಕೊಂಡು ಬರಲೂ ಹೇಳಿದ್ದೇನೆ. ಆದರೂ ಕೆಲ ಅಡಚಣಿಗಳಿವೆ. ಎಲ್ಲ ಅಣ್ಣ ತಮ್ಮಂದಿರು ಒಂದೆಡೆ ಸೇರಬೇಕು, ಒಪ್ಪಿಕೊಳ್ಳಬೇಕು, ಎನ್ನುತ್ತಲೆ ಮನೆ ಹತ್ತಿರಕ್ಕೆ ಹೋಗಿದ್ದೆವು. ಹಳೆಕಾಲದ ಮನೆ. ಹೊರಗೊಂದು ತಲೆಬಾಗಿಲು. ಒಳಗೆ ಒಂದು ಸಣ್ಣ ಅಂಗಳ. ಕೀಲಿ ಹಾಕದ ತಲೆ ಬಾಗಿಲ ಚಿಲಕವನ್ನು ತೆರೆದು ನೋಡಿದರೆ, ಅಂಗಳಲ್ಲಿ ಯಾರೋ ಬಣವಿಯನ್ನು ಒಟ್ಟಿದ್ದರು.

ತನ್ನ ಒಪ್ಪಿಗೆಯಿಲ್ಲದೆ ಯಾರೋ ತನ್ನ ಮನೆ ಅಂಗಳನ್ನು ತಮ್ಮ ಸ್ವಂತದ್ದಂತೆ ಉಪಯೋಗಿಸಿಕೊಂಡಿದ್ದ ಈ ಕೃತ್ಯ, ಕೆಲ ವಿಷಯಗಳ ಬಗ್ಗೆ ಮೂಗಿನ ತುದಿಯಲ್ಲಿಯೆ ಸದಾ ಸಿಟ್ಟು ಇರುತ್ತಿದ್ದ ಸುಧೀರ ಅವರಿಗೆ, ಅದು ಕ್ಷಣದಲ್ಲಿಯೆ ತಲೆಗೆ ಏರಿ ಬಿಸಿಯಾಗಿಸಿತು. ಯಾರ ಕೆಲಸ ಇದು, ಏನೆಂದು ತಿಳಿದಿದ್ದಾರೆ ಎಂದು ಏರುದನಿಯಲ್ಲಿ ಗುಡುಗಿ, ಬಣವಿಯನ್ನು ಕಿತ್ತಿಹಾಕಲು ಹೆಜ್ಜೆಯಿಟ್ಟರು. ಆಗ ಎಲ್ಲಿದ್ದನೋ ಆ ಬಣವಿಯ ಯಜಮಾನ , ಈಗ ಎಲ್ಲಿಂದಲೊ ಮಿಂಚಿನಂತೆ ಒಮ್ಮೆಲೆ ಪ್ರತ್ಯಕ್ಷ್ಯನಾದ. ಚಿಕ್ಕ ಚಿಕ್ಕ ವಿಷಯಕ್ಕೂ ಕುಡುಗೋಲು ಬೀಸುತ್ತ ಮಾತನಾಡುವ ಜನ. ಆದರೆ ಆ ಹೊತ್ತಿಗೆ ಕೈಯಲ್ಲಿ ಕುಡುಗೋಲಿಲ್ಲದ ಕಾರಣ, ಬದಿಯಲ್ಲೆ ಬಿದ್ದಿದ್ದ ದೊಡ್ದ ಹೆಂಟೆಯಂತಿದ್ದ ಭಾರಿ ಕಲ್ಲೊಂದನ್ನು ನೆಗವಿ  ಎರಡೂ ಕೈಯಲ್ಲಿ ಮೇಲಕ್ಕೆತ್ತಿ, ’ಬಣವಿಗೆ ಕೈ ಹಚ್ಚು,  ನಿನ್ನ ತಲೆ ಒಡೆಯುತ್ತೇನ” ಎಂದು ಆರ್ಭಟಿಸುತ್ತ ಸುಧೀರ ತಲೆಯ ಮೇಲೆ ಅಪ್ಪಳಿಸಲು ಆ ಬಣವಿ ಯಜಮಾನ, ಧಾವಿಸಿದ.

ಜನರ ಗುರುತು ಇಲ್ಲದ ಊರು. ತಲೆತಿರುಕತನ ಮಿಂಚಾಗಿ ಝಳಪಳಿಸುತ್ತಿತ್ತು. ಸಿಡಿಲಾಗಿ ಗುಡುಗುಡಿಸುತ್ತಿತ್ತು. ಆಗಬಹುದಾಗಿದ್ದ ಅನಾಹುತ ಥಕಥೈ ಎಂದು ಎದುರಿನಲ್ಲಿ ಭೀಕರವಾಗಿ ಕುಣಿಯುತ್ತಿತ್ತು. ಮತ್ತಾರೂ ಸಹಾಯಕ್ಕಿಲ್ಲ. ತಡೆಯುವ ತಾಕತ್ತು ತೋಳಿನಲ್ಲಿಲ್ಲ. ಅಸಹಾಯಕತೆ, ಗಾಬರಿ. ಹೇ ಹೇ ಎಂದು ಗಂಟಲಿನಿಂದ ಅರ್ಥವಿಲ್ಲದ ಧ್ವನಿ ತೆಗೆದು, ಇಬ್ಬರನ್ನೂ ತಡೆಯುವ ಶಕ್ತಿಹೀನ ಪ್ರಯತ್ನವೊಂದನ್ನು ಮಾಡಿದೆ. ಅಷ್ಟರಲ್ಲಿ ಯಾರೋ ಒಂದಿಷ್ಟು ಜನ ಸೇರಿದ್ದರು. ಇದು ನಿನ್ನಪ್ಪನ ಜಾಗವೆ, ಬಣವಿ ಒಟ್ಟಲು. ನನ್ನ ಪರಮಿಶನ್ನು ತೆಗೆದುಕೊಂಡಿದ್ದೆಯಾ? ಎಂದು ಒಂದೆಡೆ ತಾರಕಕ್ಕೇರಿದ ಸಿಡಿಲ ಧ್ವನಿ, ಖಾಲಿ ಜಾಗ, ಬಣವಿ ಒಟ್ಟಿದ್ದೇವೆ. ಅದನ್ನು ಹೊತ್ತುಕೊಂಡೇನೂ ಹೋಗಿಲ್ಲ. ಅದನ್ನು ತೆಗೆಯಿರಿ ಎಂದರೆ ತೆಗೆಯುತ್ತೇವೆ. ಆದರೆ ಅದಕ್ಕೆ ಕೈ ಹಚ್ಚಿದರೆ ಜೋಕೆ ಎಂಬ ಗುಡುಗು. ಖಟ್ ಖಡಲ್ ಎಂಬ ಆರ್ಭಟದ ವೀರಾವೇಶದ ಕೋಲ್ಮಿಂಚುಗಳು.

ಆ ದಿನ ಕೆಟ್ಟ ಗಳಿಗೆ. ಹಿಂದು ಮುಂದು ನೋಡದೆ ಹೋಗಿದ್ದೆವು. ಒಮ್ಮೆಲೆ ಆವೇಶ, ಆರ್ಭಟ, ಆಕ್ರಮಣ, ಮಿಂಚು, ಗುಡುಗು ಶುರು ಆಗಿಬಿಟ್ಟಿತ್ತು. ನಮ್ಮ ಪುಣ್ಯ, . ಅಂಜಿಕೆ ಹುಟ್ಟಿಸಿದರೂ ಅನಾಹುತವೇನೂ ಆಗದೆ, ದೇವರ ದಯೆಯಿಂದ ಅದು ಹೇಗೋ ಎಲ್ಲವೂ ಅಷ್ಟಕ್ಕೇ ನಿಂತು, ತುಸು ಹೊತ್ತಿನ ನಂತರ  ತಣ್ಣಗಾಯಿತು.

ಆದರೆ, ಇನ್ನೇನು, ಮನೆ ನೋಡಲೆಂದು ಬಾಗಿಲು ದೂಡಿ ಒಳಹೋಗುತ್ತಿದ್ದೆವು. ಇದ್ದಕ್ಕಿದ್ದಂತೆ ಮತ್ತೊಮ್ಮೆ ಭಯದಿಂದ ಬೆಚ್ಚುವಂತಾಯಿತು. ಬಹುಶಃ ಅದೊಂದು ಮುಂದಿನ ಕೋಣೆಗೆ ಹೋಗುವ ಕಿರುದಾರಿ. ಅಥವಾ ಅಟ್ಟಕ್ಕೆ ಹೊರಳುವ ಚಿಕ್ಕ ತಿರುವು,ಒಳಗಿನ ಬೆಳಕಿಗೆ ಕಣ್ಣು ಇನ್ನೂ ಹೊಂದಿಕೊಂಡಿರಲಿಲ್ಲ. ಮಬ್ಬುಗತ್ತಲೆ ಎನಿಸಿತು, ಕೆದರಿದ ನೆಲ್ಲಕ್ಕಿ, ಕಸ ಬಳಿಯದ ದಾರಿ,  ತಲೆಗೆ ತಾಗುತ್ತವೇನೋ ಎನಿಸುವ ಜೇಡುಬುಡ, ಇಲ್ಲಣ. ಇನ್ನೂ ಎರಡು ಹೆಜ್ಜೆ ಇಟ್ಟಿರಲಿಲ್ಲ, ಇದ್ದಕ್ಕಿದ್ದಂತೆ ಮನುಷ್ಯಾಕೃತಿಯಂತಿದ್ದ ಏನೋ ಒಂದು ಬುದಿಂಗನೇ ಎದ್ದುನಿಂತಿತು. ನಮ್ಮ ಎದೆಬಡಿತ ಒಂದು ಕ್ಷಣ ನಿಂತುಹೋಯಿತು. ಧೈರ್ಯ ತಂದುಕೊಂಡು ನೋಡಿದರೆ, ದೆವ್ವವಲ್ಲ! ಒಂದು ಹೆಂಗಸು!  ಎಷ್ಟೋ ದಿನಗಳಿಂದ ಬಾಚದ, ಜಡೆಗಟ್ಟಿದ, ಹೊಲಸು ಹಂಜಿಬುಟ್ಟಿಯಂತಹ ತಲೆ, ಚಿಂದಿ ಚಿಂದಿ ಸೀರೆ.ಮುಖ ಕಾಣದಂತೆ ತಲೆಮೇಲೆ ಹೊದ್ದ ಸೆರಗು. ಯಾವುದೊ ಅನಾಥ, ಭಿಕ್ಷುಕಿ. ಒಂದು ಬಟ್ಟೆಗಂಟು ಸಮೇತ ಅಲ್ಲಿ ವಾಸವಾಗಿದ್ದಳೆಂದು ಕಾಣುತ್ತದೆ. ನಮ್ಮನ್ನು ನೋಡಿ ಅವಳೂ ಗಾಬರಿಗೊಂಡಿದ್ದಳು. ಅವಳನ್ನು ನೋಡಿ ನಾವೂ ಹೆದರಿದ್ದೆವು. ಯಾರು ನೀನು ಎಂದು ಕೇಳುವಷ್ಟರಲ್ಲಿ ತನ್ನ ಅರಿವೆಯ ಗಂಟಿನ ಸಹಿತ, ತನಗೇನು ಕಾದಿದೆಯೋ ಎಂಬ ಜೀವಭಯದಿಂದ, ಅಲ್ಲಿಂದ ಕಾಲ್ತೆಗೆದಿದ್ದಳು, ಮಾಯವಾಗಿದ್ದಳು. ಗದರಿಸಿ, ಇನ್ನೊಮ್ಮೆ ಇಲ್ಲಿ ಬಂದು ವಾಸ ಮಾಡಿದೆಯಾದರೆ ಜೋಕೆ, ನೆಟ್ಟಗಾಗಲಿಕ್ಕಿಲ್ಲ ಎಂದು ಎಚ್ಚರಿಕೆ  ಕೊಡೋಣವೆಂದರೆ, ಆಕೆ ಅಲ್ಲಿದ್ದರೆ ತಾನೆ!

ಮುಂದೆ ಆ ಮನೆಯ ಒಳಗೆ ಹೋಗಿ ಒಂದೆರಡು ಕೋಣೆದಾಟಿ ಹೋಗುತ್ತಿದ್ದಂತೆ ಹೊಸತಿಲ ಮೇಲೆ ಹಳದಿ ಲೋಹದ ಸಣ್ಣ ತುಂಡೊಂದು ಕಾಣಿಸಿ mood ಒಮ್ಮೆಲೆ ಬದಲಾಯಿತು. ಬಗ್ಗಿ ಅದನ್ನು ಹೆಕ್ಕಿಕೊಂದು ನೋಡಿದೆ. ಅದು ನಯೆ ಪೈಸೆ ಚಾಲತಿಯಲ್ಲಿ ಬರುವ ಮೊದಲಿನ ಚೌಕಾದ, ಎರಡು ದುಡ್ಡಿನದೊ ಅಥವಾ ಎರಡು ಆಣೆಯದೊ ನಾಣ್ಯ. ಈಗ ನೆನಪಿಲ್ಲ. ಇರಲಿ. ಕೂಡಲೆ ಕೂಗಿ ” ಹೇ, ಸುಧೀರ, ಹಿರಿಯರ ಸಂಪತ್ತಿನಲ್ಲಿ ನಿಮಗೆ ಸಿಗಬೇಕಾಗಿದ್ದ, ಆದರೆ ಸಿಗದೆ ಹೋಗಿದ್ದ ಒಂದು ಚಿಕ್ಕ ಪಾಲು ಇಂದು ಸಿಗುತ್ತಾ ಇದೆ. ತೊಗೊಳ್ಳಿರಿ. ಅಂತೂ ಲಕ್ಷ್ಮೀ ಕಟಾಕ್ಷ ಇಂದು ನಿಮ್ಮ ಮೇಲಿದೆ. ಇದನ್ನು ಕಳೆದುಕೊಳ್ಳ ಬೇಡಿರಿ. ಕಾಯ್ದಿಡಿ” ಹೇಳಿದೆ. ಮನಸೋ ನಕ್ಕೆವು.

ಆದರೆ ನಮಗೆ ಇನ್ನೂ ದೊಡ್ಡ ಲಾಭವಾಗಲಿತ್ತು. ಆಟ್ಟವನ್ನು ಇನ್ನೂ ನೋಡಿರಲಿಲ್ಲ. ಆ ಮನೆಯ ಬಗ್ಗೆ ಇನ್ನೂ ಒಂದೆರಡು ಮಾತು ಹೇಳಬೇಕು. ಅದು ದುಮ್ಮಜಲಿನ, ಮಂಗಳೂರು ಹಂಚಿನ ಮನೆ. ಕೆಲವು ತಿಂಗಳುಗಳಿಂದ ಪೂರ್ಣ ಖಾಲಿಯಾಗಿದ್ದದ್ದು. ಹಿರಿಯರಂತೂ ಉಳಿದಿರಲಿಲ್ಲ. ವಾರಸುದಾರರಾಗಿದ್ದ ದಾಮೂಆಚಾರ್ಯರ ಮಕ್ಕಳು, ಅಂದರೆ ಸುಧೀರ ಅವರು ಮತ್ತು ಅವರ ಅಣ್ಣಂದಿರು ಆ ಊರು ಬಿಟ್ಟು,  ಹೊಟ್ಟೆ ಪಾಡಿಗಾಗಿ, ನೌಕರಿ ನಿಮಿತ್ತ ಎಲ್ಲೆಲ್ಲೊ ಚದುರಿ ಹೋಗಿದ್ದರು. ಅಷ್ಟು ಹೊತ್ತಿಗೆ ಹೊಲಗಳೂ ಟೆನೆನ್ಸಿ ಕಾಯದೆಯಿಂದಾಗಿ ಬಹುಶಃ ಇವರದಾಗಿ ಉಳಿದಿರಲಿಲ್ಲ. ಉಳಿದುಕೊಂಡಿದ್ದ ಆ ಹಳ್ಳಿ ಮನೆಯ ಬಗ್ಗೆ ಯಾರಿಗೂ ಆಸ್ಥೆಯಿರಲಿಲ್ಲ. ಯೋಗ್ಯ ದರ ಬಂದರೆ ಕೊಟ್ಟು ಬಿಡುವ ಯೋಚನೆಯಲ್ಲಿದ್ದರು. ಆದರೆ ಅದು ಒಮ್ಮೆಲೆ ಸಾಧ್ಯವಾಗುವಂತಹದಲ್ಲ. ಅಷ್ಟುದಿನ ಮನೆಯನ್ನು ಖಾಲಿ ಬೀಳಗೊಡಬೇಕೆ?, ಬಾಡಿಗೆ ಕೊಟ್ಟರಾಯಿತೆಂದು ಒಳಗಡೆ ಬಣ್ಣ ಹಚ್ಚಿಸಿದ್ದರು. ಅಟ್ಟಕ್ಕೆ ಹೋಗುವ ಜಿನ್ನೆಗೆ ಕೂಡ ಆಯಿಲ ಪೇಂಟ ಆಗಿತ್ತು. ಅಗತ್ಯವಿದ್ದಲ್ಲೆಲ್ಲ ಹೊಸ ಹಂಚು ಹೊದಿಸಿದ್ದರು. ಖರ್ಚು ಮಾಡಿ ಅಷ್ಟೆಲ್ಲ ಅಲಂಕರಿಸಿದ್ದರೂ, ಬಾಡಿಗೆ ಕೇಳಿಕೊಂಡು ಯಾರೂ ಬಂದಿರಲಿಲ್ಲ. ಮನೆ ಎಷ್ಟು ಖಾಲಿ ಖಾಲಿ ಸ್ಥಿತಿಯಲ್ಲಿತ್ತು ಎಂದರೆ, ಆ ಮೇಲೆ ಒಯ್ದರಾಯಿತು ಎಂದು ತಮ್ಮದಾದ ಹಳೆಯ ಯಾವುದೊಂದನ್ನೂ, ಆ ಮೊದಲಿದ್ದ ಆ ಅಣ್ಣ ತಮ್ಮಂದಿರ ಪೈಕಿ ಯಾರೊಬ್ಬರೂ ಏನೂ ಉಳಿಸಿರಲಿಲ್ಲ.

ಅಟ್ಟದ ಮೇಲೆ ಹೋಗಿ ನೋಡಿದಾಗ – ಅಲ್ಲೊಂದು hall ದಂತಹ ಕೋಣೆ. ಹೊಸದಾಗಿ ಹಚ್ಚಿದ್ದ ಪಿಸ್ತಾ ಹಸಿರು ಬಣ್ಣ, (ಅಥವಾ ಅದು aqua marine ಬಣ್ಣವಾಗಿತ್ತೊ?), ಆಯಿಲ್ ಪೇಂಟ ಬಳಿದುಕೊಂಡಿದ್ದ ಆ ಜಿನ್ನೆ – ಆದರೆ ಮನುಷ್ಯ ವಾಸವಿಲ್ಲದ ಆ ಮನೆಯನ್ನು ನೋಡಿ ಮನ ಮರುಗಿತು. ಅಂತಹದರಲ್ಲಿಯೂ, ಅಟ್ಟದ ಆ ಕೋಣೆಯ ಮೂಲೆಯೊಂದು ಗಮನ ಸೆಳೆಯಿತು. ಒಂದು ಸಣ್ಣ ದಿನ್ನೆಯಂತೆ ಆಗಿದ್ದ ಆ ಜಾಗದ ಕೆಳಗೆ ಇದ್ದುದು ಕಾಣದಂತೆ ಹಳೆಯ ರದ್ದಿ ಪೇಪರುಗಳಿಂದ ಅದನ್ನು ಹೊದೆಸಲಾಗಿತ್ತು. ಏನು ಅದು ಎಂದು ಕುತೂಹಲ ಕೆರಳಿ ಆ ಕಡೆ ಹೆಜ್ಜೆ ಹಾಕುತ್ತಿದ್ದ ಹಾಗೆ, ಅದು ಒಟ್ಟಿದ ಕಸವೂ ಆಗಿರಬಹುದೆಂದೂ ಹೊಳೆಯಿತು. ನೋಡಿದಾಗ, ಅದು ಕಸವೇ ಆಗಿತ್ತಾದರೂ – ಬೇರೆ ತರಹದ ಕಸವಾಗಿತ್ತು. ಹಳೆ ಕಾಗದಪತ್ರಗಳ ಕಸ. ಪೋಸ್ಟ ಕಾರ್ಡಗಳು, ಇನ್ ಲ್ಯಾಂಡ ಪತ್ರಗಳು, ನಾಕೆಂಟು ಹಳೆ ಪಂಚಾಂಗಗಳು, ನಿತ್ಯ ವ್ಯವಹಾರದ ಜಮಾಖರ್ಚಿನ ಪುಸ್ತಕಗಳು, ಹುಡುಗರು ತೀಡಿ ತೀಡಿ ಬರೆದ copy book ಗಳು ಹೀಗೆ ಮನೆ ಖಾಲಿಮಾಡುವಾಗ ಬೇಡವೆನಿಸಿ ರದ್ದಿ ಸ್ಥಾನಮಾನಕ್ಕಿಳಿದಿದ್ದ ಕಾಗದಗಳು. ಮೇಲೆ ಹಂಚುಗಳನ್ನು ಹೊಸದಾಗಿ ಹೊದೆಸಿದ್ದರೂ, ಮಂಗಗಳ ಹಾವಳಿಯಿಂದ ಗೋಡೆಯ ಮೇಲಿದ್ದ ಹಂಚೊಂದು ಒಡೆದು, ಮಳೆ ಇಳಿದು ಅದರ ಗುರುತಾಗಿ ಮಣ್ಣಿನ ಕಲೆ ಮೂಡಿತ್ತು. ಆದರೆ ನಮ್ಮ ಪುಣ್ಯ. ಕಾಗದಗಳು ತೊಯ್ದು ಕೆಟ್ಟಿರಲಿಲ್ಲ.

ಅವುಗಳನ್ನು ಕೆದಕಿ ಬೆದಕಿದಂತೆ  ಆಸ್ತಿ ಪಾಸ್ತಿ, ಹೊಲ ಮನೆಗೆ ಸಂಬಂಧಿಸಿದ ಕಾಗದಗಳು, ಕಂದಾಯದ ರಿಸೀಟುಗಳು, ನೋಟೀಸುಗಳು ಮತ್ತೂ ಏನೇನೋ ಕಾಣಿಸಿಕೊಂಡವು. ಸುದೈವದಿಂದ, ಇತಿಹಾಸವನ್ನು ಹೇಗೆ ಅಗೆದು  ಬಗೆದು ಹೊರತರಬೇಕು ಎನ್ನುವದರ ಅಲ್ಪಸ್ವಲ್ಪ ತಿಳಿವಳಿಕೆ ನನಗೆ ಇದ್ದಿತು. ಹೀಗಾಗಾಗಿ ಈ ಹಳೆಯ ಕಾಗದ ಪತ್ರಗಳ ತ್ಯಾಜ್ಯ ಕೇವಲ ರದ್ದಿ ರಾಶಿಯಲ್ಲ, ನಮ್ಮ ಮನೆತನದ ಇತಿಹಾಸದ ಒಂದು ಖನಿ, ದಾಖಲೆಗಳ ಆಕರ ಎಂದು ನೋಡನೋಡುತ್ತಲೆ ಹೊಳೆದಿತ್ತು. ಇದನ್ನು ಹಾಗೆ ಬಿಟ್ಟು ಹೋಗುವದು ಕೈಗೆಟುಕಿದ ಅಪೂರ್ವ, ಅಲಭ್ಯ ಮಾಹಿತಿಯನ್ನು ತಿರಸ್ಕರಿಸಿದಂತಾದೀತು ಎಂದು ಮನಸ್ಸು ಆ ಕ್ಷಣಕ್ಕೆ ನಿರ್ಣಯಿಸಿದ್ದಿತು.

ನಾನು ಹುಡುಕುತ್ತಿದ್ದ ವಿಷಯದ  ಗಣಿಯ ಎದುರೇ ನಿಂತಿದ್ದೆ. ಕೈಗಳು ಗಣಿಯಲ್ಲಿ ರತ್ನಗಳ ಹುಡುಕಾಟ ನಡೆಸಿದ್ದವು. ಒಂದು ಕಾಗದ ಸ್ಪರ್ಶಕ್ಕೂ, ದೃಷ್ಟಿಗೂ ಇದು ಎಲ್ಲ ಕಾಗದಗಳಿಗಿಂತ ಹಳೆಯದು ಅನಿಸಿತು. ಮೇಲಾಗಿ, ದೇವನಾಗರಿಯಲ್ಲಿ ಬಹಳ ಒಳ್ಳೆ ಕೈಬರಹದಿಂದ ಬರೆದದ್ದು,  ಅನಾಯಾಸವಾಗಿ ಓದಲು ಬರುವಂತಹದು ಇದ್ದಿತು. ಮೊದಲ ಕೆಲಸಾಲುಗಳಲ್ಲಿಯೆ ನಮ್ಮ ಮನೆತನದ ಅಡ್ಡ ಹೆಸರು ಮಂಗಲವೇಢೆ (ದೇವನಾಗರಿಯಲ್ಲಿ ಳ ಕಾರ ಇರದ್ದರಿಂದ)  ಎಂಬುದು ಢಾಳಾಗಿ ಕಣ್ಣಿಗೆ ಬಿತ್ತು. ಆದರೆ, ಆ ನಮ್ಮ ಅಡ್ದಹೆಸರು ಬರಿಯ ಮಂಗಲವೇಢೆ ಆಗಿರದೆ, ಜೋತಿಸಿ ಮಂಗಲವೇಢೆ ಎಂಬುದಾಗಿ ಬರೆಯಲ್ಪಟ್ಟಿದ್ದಿತು.ಕೂಡಲೆ ನನ್ನ ಬಾಯಿಂದ ಆನಂದೋದ್ಗಾರ ಹೊರಟಿತು. “ಸುಧೀರ, ಬಾಳಾಚಾರ್ಯರು ನಮ್ಮ ಅಡ್ಡಹೆಸರು ಒಂದುಕಾಲಕ್ಕೆ ಜೋಶಿ ಮಂಗಳವೇಢೆ ಎಂದಿದ್ದಿತು ಅಂದಿದ್ದರಲ್ಲವೆ. ಅದು ನಿಜ. ಅದಕ್ಕೆ ಸಾಕ್ಷಾಧಾರ ಈ ಕಾಗದ” ಎಂದೆ. ಸಾವಕಾಶವಾಗಿ  ಅ ನಾಕಾರು ಸಾಲುಗಳನ್ನು ಓದಿದಾಗ ಅದು ಶ್ರೀಮನ್ನೃಪ ಶಾಲಿವಾಹನ ಶಕೆ ೧೬೮೪, ಚಿತ್ರಭಾನು ಸಂವತ್ಸರದಲ್ಲಿ, ಫಾಲ್ಗುಣ ವದಿ ತ್ರಯೋದಶಿ, ಮಂದವಾಸರೆ, ಲಿಖಿತಗೊಂಡ ಕಾಗದ, “ಗೋತ್ರ ಕಾಸ್ಯಪ, ಋಕ್ ಶಾಖೀಯ, ಸೂತ್ರ ಅಶ್ವಲಾಯನ”ದ ವೇದಶಾಸ್ತ್ರ ಸಂಪನ್ನ ರಾಜಮಾನ್ಯ ರಾಜಶ್ರೀ ಗೋವಿಂದಭಟ್ಟ ಪಿತಾ ಮಾಣಿಕ ಭಟ್ಟ ಎಂಬ ನಮ್ಮ ಪೂರ್ವಿಕರಿಗೆ ಮಾಡಿಕೊಟ್ಟ ಕಾಗದ ಎಂದು ಗೊತ್ತಾಯಿತು.

ಅದರ ಹಿಂದೆಯೆ ಮತ್ತೊಂದು ಕಾಗದ, ಅದೇ ಕೈಬರಹ, ಅದೇ ಒಕ್ಕಣೆ, ಅದೇ ವ್ಯಕ್ತಿಯ ಹೆಸರಲ್ಲಿ, ಶ್ರೀ ಮನ್ನೃಪ ಶಾಲಿವಾಹನ ಶಕೆ ೧೭೧೫, ಪ್ರಮಾಥಿನಾಮ ಸಂವತ್ಸರದಲ್ಲಿ ಬರೆಯಲ್ಪಟ್ಟದ್ದು ಕೈಗೆ ಹತ್ತಿತು. ಆದರೆ ಮೊದಲ ಕಾಗದದ ಅಪೂರ್ಣವಾಗಿತ್ತು. ದೇವನಾಗರಿಯಲ್ಲಿ ಬರೆದ ಒಂಬತ್ತು ಸಾಲುಗಳ ನಂತರ, ಮೋಡಿ ಬರಹದಲ್ಲಿನ ಎರಡು ಸಾಲುಗಳು. ಅಲ್ಲಿಗೆ ಆ ಕಾಗದದ ಉತ್ತರಾರ್ಧದ ಭಾಗ ಕತ್ತರಿಸಿ ಹೊಗಿತ್ತು. ಮತ್ತೊಂದು ಕಾಗದ – ಅಂತಹದೇ- ಉದ್ದವಾದದ್ದು, ತುಂಡಾಗಿ ಕತ್ತರಿಸಿ ಹೋಗದೇ ಪೂರ್ಣವಾಗಿದ್ದುದು, ಅದೇ ತರಹ ನಂತರದಲ್ಲಿ ಮೋಡಿ ಬರಹದಿಂದ ಮುಂದುವರೆದದ್ದು ಕೈಗೆ ಹತ್ತಿತು. ಅದರಲ್ಲಿಯೂ ಒಂದು ಶ್ಲೋಕ ದೇವನಾಗರಿಯಲ್ಲಿನದು – ಸ್ವದತ್ತಾ ದ್ವಿಗುಣಂ ಪುಣ್ಯಂ ಪರದತ್ತಾನುಪಾಲನಂ, ಪರದತ್ತಾಪಹರೇಣ ಸ್ವದತ್ತಾನಿಷ್ಫಲಂಭವೇತ್, ಸ್ವದತ್ತಾ ದುಹಿತಾ ಭೂಮಿ ಪರದತ್ತಾ ಸಹೋದರಿ, ಅನ್ಯದತ್ತಾ ಭವೇನ್ಮಾತಾ ಯೋ ಹರೋ ತ್ರಿಷು ಸಂಗಮೆ- ಎಂಬುದರ ಉಲ್ಲೇಖದಿಂದ ಅದು ಒಂದು ದಾನಪತ್ರ ಎಂದು ಗೊತ್ತಾಯಿತು. ಎರಡೂ ಕಾಗದಗಳಲ್ಲಿ ಗೋವಿಂದಭಟ್ಟ, ವಾಸ್ತವ್ಯ ಮುರಗೋಡ, ಎಂಬ ಉಲ್ಲೇಖ.

ನನಗೆ ಬೇಕಾಗಿದ್ದ ನಮ್ಮ ಮನೆತನದ ಇತಿಹಾಸ ಹಿಗೆ, ಅಂದು ಅಲ್ಲಿ, ತಂತಾನೆ ತೆರೆದು ಕೊಳ್ಳುತ್ತಿತ್ತು. ಅದರ ಬೆನ್ನ ಹಿಂದೆಯೆ ಮತ್ತೊಂದು ಹಳೆಯ ಕಾಗದ, ಸುದೀರ್ಘ ಕಾಲ ಕಳೆದು ವಿವರ್ಣಗೊಂಡು, ಹಳದಿ ಬಣ್ಣಕ್ಕೆ ತಿರುಗಹತ್ತಿದ, ಆಕಾರದಲ್ಲಿ ಡ್ರಾಯಿಂಗ ಪೇಪರ ಅಳತೆಯ ದೊಡ್ಡ ಕಾಗದ. ನೋಡುತ್ತಲೆ ಇದು ವಂಶಾವಳಿಯ ಚಾರ್ಟ ಎಂದು ಗೊತ್ತಾಗುವಂತಹದು ಸಿಕ್ಕಿತು. ಅಂದು ನನಗೆ ಒಂದರಹಿಂದೊಂದು ಸಿಕ್ಕ ಅತ್ಯಂತ ಮಹತ್ವದ ಮೂರನೆ ಕಾಗದವದು, ಇಂಗ್ಲೀಷಿನಲ್ಲಿ Hattrick  ಅನ್ನುತ್ತಾರಲ್ಲ ಹಾಗೆ. ಕ್ರಿ.ಶ. ೧೯೦೫ ರಲ್ಲಿ ರಚಿತಗೊಂಡಿದ್ದ ಕಾಗದವದು. ಮೂಲ ಪುರುಷ ಮಾಣಿಕಭಟ್ಟ, ಗೋತ್ರ ಕಾಸ್ಯಪ ಎಂದು, ಅದು ಯಾರ ವಂಶಾವಳಿ ಎಂಬುದನ್ನು ಸ್ಪಷ್ಟವಾಗಿ ತಿಳಿಯುವಂತೆ ಬರೆದಿದ್ದ ಕಾಗದ. ಅಷ್ಟೆ ಅಲ್ಲ, ಅದರಲ್ಲಿ, ೧೯೦೪ರಲ್ಲಿ ಹುಟ್ಟಿದ್ದ ನನ್ನ ತಂದೆ ರಂಗನಾಥ ಅವರ ಹೆಸರೂ ಉಲ್ಲೇಖ ಗೊಂಡಿದ್ದಿತು. ಎರಡು ವರ್ಷಗಳ ನಂತರ ಹುಟ್ಟಿದ್ದ ನನ್ನ ಕಕ್ಕ ಗೋವಿಂದ ಅವರ ಹೆಸರನ್ನೂ, ನಂತರ ಸೇರಿಸಿದ್ದರು. ಇರಲಿ, ಆ ಕಾಗದದ ಮಜಕೂರಿನ ಬಗ್ಗೆ ಮುಂದೆ ಪ್ರತ್ಯೇಕವಾಗಿ ಬರೆಯಲಿದ್ದೇನೆ, ಆದ್ದರಿಂದ ಅದರ ಬಗ್ಗೆ ಈಗ ಇಷ್ಟೆ ಸಾಕು.

ಮನೆ ಖಾಲಿ ಮಾಡುವಾಗ, ರದ್ದಿಯೆಂದು ತಿಳಿದು ಬೇಡವಾಗಿ ಬಿಟ್ಟು ಮೂಲೆಯಲ್ಲಿ ಒಟ್ಟಿದ್ದ ಅ ರಾಶಿಯಲ್ಲಿ ಹಿಂದೆ ಆಗಿಹೋಗಿದ್ದ ನಮ್ಮ  ಹಿರಿಯರಿಗೆ ಮಾಡಿಕೊಟ್ಟಿದ್ದ ಮತ್ತೂ ನಾಕಾರು ದಾನಪತ್ರಗಳು, ಕಾಶಿ, ಪ್ರಯಾಗ, ಗಯಾ ಮೊದಲಾದ ತೀರ್ಥಕ್ಷೇತ್ರಗಳ ಯಾತ್ರಾಕಾಲದಲ್ಲಿ ಮಾಡಿದ್ದ ಖರ್ಚಿನ ವಿವರಗಳು, ಕುಟುಂಬದಲ್ಲಿ ಆಗಿದ್ದ ಒಂದೆರಡು ಸಾವಿನ ಸಂದರ್ಭದಲ್ಲಿ ದಿನಕರ್ಮಕ್ಕೆ ಮಾಡಿದ್ದ ಖರ್ಚು, ಮಕ್ಕಳ ಮದುವೆ ಗೊತ್ತದಾಗ ಬರೆದ ನಿಶ್ಚಯದ ಯಾದಿ, ಪರವೂರುಗಳಿಂದ ಬರೆದ ಮಕ್ಕಳ ಪತ್ರಗಳು, ತುಂಬಿದ್ದ ಕಾಲೇಜ ಫೀ ಯ ರಸೀದಿಗಳು, ಸರಕಾರಕ್ಕೆ ಬರೆದುಕೊಂಡ ಅರ್ಜಿ, ಇವರು ಜೋಯಿಸರೂ ಆಗಿದ್ದರಿಂದ ಬರೆದಿಟ್ಟುಕೊಂಡಿದ್ದ, ಯಾರುಯಾರಿಗೊ ಕುಂಡಲಿ ಹಾಕಿಕೊಡಲೆಂದು ಬರೆದಿಟ್ಟುಕೊಂಡ ಜನ್ಮಕಾಲ, ದಿನ, ನಕ್ಷತ್ರ ಇತ್ಯಾದಿ ವಿವರಗಳು, ಹೀಗೆ ವೈವಿಧ್ಯಮಯ ವಿಷಯಕ ಕಾಗದ ಪತ್ರಗಳು ಅಲ್ಲೆಲ್ಲ ಸುತ್ತಮುತ್ತ ಹರಡಿಕೊಂಡಿದ್ದವು. ಅಲ್ಲಿಯೆ ಕುಳಿತು ಒಂದರ್ಧ ಗಂಟೆ ಅವುಗಳನ್ನು ಪರಿಶೀಲಿಸಿ, ಬೇಕು ಎನಿಸಿದ ಕೆಲವನ್ನು ಆಯ್ಕೆಮಾಡಿ ಒಯ್ಯಲು ಸಾಧ್ಯವಿಲ್ಲದಷ್ಟು ಬಾಹುಳ್ಯ ಸಂಖ್ಯೆಯಲ್ಲಿ, ಧೂಳುಮಯವಾದ ಸ್ಥಿತಿಯಲ್ಲಿ ಇದ್ದವು.

ಅವು ನಮ್ಮ ಕೈಗೆ ಸಿಗಬೇಕು ಎಂದು ದೈವ ಸಂಕಲ್ಪ ವಿದ್ದಿರಬೇಕು. ಆಗಲೆ, ಆ ಮನೆಗೆ ಬಾಡಿಗೆಗೆ ಯಾರೊಬ್ಬರು ಬಂದಿದ್ದರೆ, ಅಥವಾ ಅದು ಮಾರಾಟವಾಗಿ ಹೋಗಿದ್ದರೆ, ಮನೆ ಮಾಲಿಕರೇ ಕಸವೆಂದು ಎಸೆದು ಹೋಗಿದ್ದನ್ನು, ಅವರು ಎತ್ತಿ, ಜೋಡಿಸಿ, ಗಂಟುಕಟ್ಟಿ ಸುರಕ್ಷಿತವಾಗಿ ತೆಗೆದಿರಿಸುತ್ತಿದ್ದರೆ! ಅದು ಹೋಗಲಿ. ಅಂದು ನನ್ನನ್ನು ಕರೆದುಕೊಂಡು ಹೋಗಿ ತಮ್ಮ ಮನೆ ತೋರಿಸಬೇಕೆಂದು ಸುಧೀರ ಅವರ ಮನಸ್ಸಿಗೆ ತೋಚಿದ್ದೂ,  ಕರೆದ ಕೂಡಲೆ ಸಿದ್ಧನಾಗಿ ನಾನು ಹೋಗಿದ್ದೂ ದೈವ ಪ್ರೇರಣೆಯಿಂದಲೆ ಅಲ್ಲವೆ!  ಮನೆಯೇನೋ ಸುಧೀರ ಅವರದೆ ಆಗಿದ್ದರೂ ಅದನ್ನು ಬಾಡಿಗೆಗಾಗಿಯೊ, ಮಾರಲೊ ಅಂತೂ ಖಾಲಿ ಮಾಡಿದ್ದವರು ಬಹುಶಃ ಅವರು ಅಲ್ಲ. ಅವರೆ ಆಗಿದ್ದರೆ  ಹೀಗೆ ಆ ಹಳೆಯ ಕಾಗದಗಳನ್ನು ನೋಡಿದ ಮೇಲೂ, ಅವು ನಿರುಪಯುಕ್ತ, ಆದ್ದರಿಂದ ರದ್ದಿ, ರದ್ದಿಯಾದ್ದರಿಂದ ತ್ಯಾಜ್ಯ ಎಂದೆಲ್ಲ ಅವಸರದಲ್ಲಿ ನಿರ್ಣಯಿಸಿ ಕಸದಂತೆ ಮೂಲೆಯಲ್ಲಿ ಒಟ್ಟಿ ಹೋಗಿರುತ್ತಿದ್ದರೇ?

ಒಂದೊಂದಾಗಿ ನಾನು ಆ ಕಾಗದಗಳನ್ನು ಹೆಕ್ಕಿ ಅದರಲ್ಲಿನ ಮಜಕೂರನ್ನು ಘೋಷಿಸುತ್ತ ಹೋದ ಹಾಗೆ ಅವುಗಳ ಮಹತ್ವ ನಮ್ಮಿಬ್ಬರಿಗೂ ಚೆನ್ನಾಗಿ ಹೊಳೆದಿತ್ತು. ಯಾವುದೊ ಒಂದು ಹಂತದಲ್ಲಿ, ಅವುಗಳನ್ನು ಒಂದೂ ಬಿಡದಂತೆ ಬೆಳಗಾವಿಗೆ ಒಯ್ದು ಕೂಲಂಕಷವಾಗಿ ಪರಿಶೀಲಿಸಬೇಕೆಂದು ಅನಿಸಿಬಿಟ್ಟಿತು. ಹಾಗೆ ತೋಚಿದ್ದೇ ತಡ,  ಸಮೀಪದ ಕಿರಾಣಿ ಅಂಗಡಿಯೊಂದಕ್ಕೆ ಹೋಗಿ ಸಂಯುಕ್ತ ಕರ್ನಾಟಕದ ರದ್ದಿ  ಮತ್ತು ಕಟ್ಟಲು ದಾರವನ್ನು ಕೊಂಡು ಮರಳಿ ಮನೆಗೆ ಧಾವಿಸಿದೆವು. ಒಂದು ಅಳತೆಯ, ಒಂದು ತರಹದ ಕಾಗದ ಪತ್ರಗಳನ್ನು  ಜೋಡಿಸಿ ಜೋಡಿಸಿ ಕೆಲವು ಕಟ್ಟುಗಳನ್ನು ಮಾಡಿ  ರದ್ದಿ ಕಾಗದದಲ್ಲಿ  ಕಟ್ಟಿದೆವು. ಅಲ್ಲಿಯೆ ಜಂಗು ತಿಂದು ಆಕಾರವೆಲ್ಲ ವಿಕಾರಗೊಂಡಿದ್ದ, ಧೂಳಲ್ಲಿ ಮಿಂದು ಅದನ್ನೆ ಮೆತ್ತಿಕೊಂಡಿದ್ದ, ಹಳೆಯ ಸಣ್ಣ ಟ್ರಂಕೊಂದು ಬಾಯ್ತೆರೆದು ಬಿದ್ದುಕೊಂಡಿತ್ತು. ಆದರೆ, ಏನಿದ್ದರೂ, ಹೇಗಿದ್ದರೂ ಒಂದು ಟ್ರಂಕ್ ಪೆಟ್ಟಿಗೆಯಲ್ಲವೆ, ಮೇಲಾಗಿ ಸಮಯಕ್ಕೊದಗಿದ ಆಪದ್ಬಾಂಧವ ಎಂದು ತಿಳಿದು ಅದರಲ್ಲಿ ಈ ಕಾಗದರೂಪೀ ಸಂಪತ್ತನ್ನು ತುಂಬಿ, ಚಿಲಕವಿದ್ದರೂ ಹಾಕಲು ಬರದಂತಿದ್ದರಿಂದ, ತಂದಿದ್ದ ಸುತಳಿಯಿಂದ ಸುತ್ತಿ, ಕಟ್ಟಿ, ಭದ್ರಗೊಳಿಸಿ ಒಯ್ದಿದ್ದ ಟ್ಯಾಕ್ಸಿಯ ಡಿಕ್ಕಿಯಲ್ಲಿ ಇಟ್ಟೆವು. ಹೀಗೆ ಅಂತೂ ಆ ದಿನ, ಹಿರಿಯರ ಮನೆಯಲ್ಲಿ ಸಿಕ್ಕ ಒಂದು ನಿಧಿಯೊಂದಿಗೆ ಬೆಳಗಾವಿಗೆ ಮರಳಿದೆವು.

ಇನ್ನೇನು ನನ್ನನ್ನು ಇಳಿಸಿ,  ತಮ್ಮ ಮನೆಗೆ ಗಾಡಿ ಹೊಡೆಯಬೇಕು, ಆಗ ಸುಧೀರ ಅವರಿಗೆ,  ಇತಿಹಾಸವನ್ನು ಪರಿಶೋಧಿಸುವ ದೃಷ್ಟಿಯಿಂದ ಈ  ದಾಖಲೆಗಳನ್ನು ಪರಿಶೀಲನೆ ಮಾಡುವ ಕೆಲಸಕ್ಕೆ ತಮಗಿಂತ ನಾನೇ ಯೋಗ್ಯ ಎಂದೆನಿಸಿ ಆ ಟ್ರಂಕನ್ನೂ ಇಳಿಸಿದರು. ನೀವೇ ಅವುಗಳನ್ನು ಓದಿ, ಅದರ ಉಪಯೋಗದ ಬಗ್ಗೆ ನಿರ್ಧರಿಸಿರಿ ಎಂದು ನನ್ನಲ್ಲಿ ವಿಶ್ವಾಸವಿಟ್ಟು ಹೇಳಿದರು. ಹೀಗೆ, ಅವರ  ಹಿರಿಯರಿಗೆ ಸಂಬಂಧಿಸಿದ ಆ ದಾಖಲೆಗಳು ನನ್ನ ಮನೆಗೆ ಬಂದವು. ಮುಂದಿನ ಹತ್ತು ಹದಿನೈದು ದಿನ ನಾನು ಅವುಗಳಲ್ಲಿನ ಒಂದು ಕಾಗದವನ್ನೂ ಓದಲಿಲ್ಲ. ನಾನು ಮಾಡಿದ, ಮಾಡಲೆ ಬೇಕಾಗಿದ್ದ ಮೊದಲ ಕೆಲಸ – ಅವುಗಳಿಗೆ ಅಂಟಿದ್ದ ಆ ಯಥೇಚ್ಛ ಧೂಳನ್ನು ಜಾಡಿಸಿ ವಿಷಯವಾರು ಜೋಡಿಸಿದ್ದು. ಆಗ ನಾನಿರುತ್ತಿದ್ದ ಬೆಳವಿ ಚಾಳಿನ ಮನೆಯ ಹಿಂದೆ ಇದ್ದ ಕಟ್ಟಿಗೆ ಒಟ್ಟುವ ಖೋಲಿಯ ಕಟ್ಟೆಮೇಲೆ ಕುಳಿತು ನಿತ್ಯ ಒಂದೆರಡು ತಾಸು ಧೂಳು ಜಾಡಿಸುತ್ತಿದ್ದೆ. ಎದುರಿಗಿದ್ದ ಬಚ್ಚಲದ ಗಟಾರದ ನೀರಿನ ಬಣ್ಣ ಕೆಲದಿನ ಈ ಧೂಳದಿಂದಾಗಿ ಹಳದಿಯಾಗಿ ಹೋಗಿತ್ತು.

ಈ ಘಟನೆ ನಡೆದು ಒಂದು ದಶಕಕ್ಕೂ ಹೆಚ್ಚು ಕಾಲ ಸಂದುಹೋಗಿದೆ. ನಮ್ಮ ಮನೆಯ ಇತಿಹಾಸ ಕೆದಕುತ್ತ ಅನೇಕರನ್ನು ಸಂದರ್ಶಿಸಿದ್ದೇನೆ. ವಿಷಯ ಸಂಗ್ರಹದ ಜೊತೆಗೆ ಒಂದೆರದು ಕಡೆಯಿಂದ ಕೆಲ ದಾಖಲೆಗಳನ್ನೂ ಕೇಳಿ ಇಸಿದು ತಂದಿದ್ದೇನೆ. ಟಿಪ್ಪಣಿಗಳನ್ನು, ದಿನಾಂಕ ಸಹಿತ ಬರೆದುಕೊಂಡಿದ್ದೇನೆ. ಆದರೂ ಕೆಲ ಸಲ ದಿನಾಂಕ ನಮೂದಿಸದೆಯೆ, ಆ ಮೇಲೆ ಬರೆದರಾಯಿತು ಎಂಬ ಉದಾಸೀನತೆಯನ್ನು ತೋರಿಸಿದ್ದೂ ನಿಜ. ಇದು, ಇಂತಹ ವಿಷಯದಲ್ಲಿ ಎಂದೂ ಮಾಡಬಾರದ ತಪ್ಪು.  ಮುರಗೋಡ ಭೆಟ್ಟಿಯ ವಿಷಯದಲ್ಲಿ ನಾನು ಟಿಪ್ಪಣಿಯನ್ನೂ ಬರೆಯಲಿಲ್ಲ, ಹಾಗಾಗಿ ಆ ದಿನ ಮತ್ತು ದಿನಾಂಕ ನಮೂದು ಆಗಲಿಲ್ಲ. ಹೀಗೆ ಮುಖ್ಯ ವಿಷಯ ಒಂದರ ಬಗ್ಗೆ ನನ್ನಿಂದ ಪ್ರಮಾದವಾಗಿ ಹೋಗಿದೆ. ಈಗ ದಿನಾಂಕ ಹೋಗಲಿ, ಯಾವ ತಿಂಗಳು, ಯಾವ ವರ್ಷಎಂದೂಕೂಡ ಹೇಳಲಾರದಷ್ಟು ಮರೆವಿನ ದೌರ್ಬಲ್ಯಕ್ಕೆ ತುತ್ತಾಗಿದ್ದೇನೆ. ನೆನಪು ಮಾಡಿಕೊಡಲು, ಅಲ್ಲಿಗೆ ನನ್ನನ್ನು ಕರೆದುಕೊಂಡು ಹೋಗಿದ್ದ ಸುಧೀರ ಈಗ ಇಲ್ಲದಿದ್ದುದು ಮತ್ತೊಂದು ನೋವು. ವಯಸ್ಸಿನಲ್ಲಿ ನನಗಿಂತ ಒಂದು ವರ್ಷ ಚಿಕ್ಕವನಾದ ಆತ ತೀರಿಹೋಗಿ ಹನ್ನೆರಡು ಹದಿಮೂರು ವರ್ಷಗಳಾದವು.

ಆದಾಗ್ಯೂ, ಅದು ನಡೆದದ್ದು ಬಹುಶಃ ೧೯೯೯ ಅಥವಾ ಅದರ ಹಿಂದಿನ ವರ್ಷ ಇದ್ದಿರಬಹುದು. ಇದಕ್ಕೆ ಆಧಾರ ೧೯೯೯ನೆ ಇಸವಿಯ ಡಿಸೆಂಬರದಲ್ಲಿ  ನಾನು ಕೈಗೊಂಡಿದ್ದ ಪಂಢರಪುರ ಯಾತ್ರೆಯ ಬಗ್ಗೆ ಕೆಲದಿನಗಳ ನಂತರ ನಾನು ಬರೆದಿಟ್ಟ ಟಿಪ್ಪಣಿಗಳು. ಅದರಲ್ಲಿ, ನಾನು ಪಂಢರಪುರದಲ್ಲಿದ್ದ ನಮ್ಮ ಅಡ್ಡಹೆಸರಿನವರೊಬ್ಬರನ್ನು – ನರಸಿಂಹ ದತ್ತೋಪಂತ ಜೋಶಿ ಮಂಗಳವೇಢೆಕರ ಎಂಬುವರನ್ನು ಭೆಟ್ಟಿಯಾಗಿದ್ದೆ. ಅವರ ಕಡೆ  ಮಂಗಳವೇಢೆ ಊರನ್ನು ಬಿಟ್ಟು ಮುರಗೋಡಕ್ಕೆ ವಲಸೆ ಬಂದಿದ್ದ ನಮ್ಮ ಪೂರ್ವಿಕರ ಮಾಹಿತಿಯೇನಾದರೂ ಸಿಗಬಹುದೇ ಎಂದು ಹುಡುಕಿಕೊಂಡು ಹೋಗಿದ್ದೆ. ಅವರೂ ತಮ್ಮ ಸಂಗ್ರಹದಲ್ಲಿ, ಆ ಊರಿನ ಕಾಶ್ಯಪ ಗೋತ್ರದ ಜೋಶಿ ಮಂಗಳವೇಢೆಗಳ ನಾಕು “ಗಡ್ಡೆ”ಗಳ ೧೨ ರಿಂದ ೧೫ ಪೀಳಿಗೆಯ ವಂಶಾವಳಿಗಳು ಇವೆಯೆಂದು ಹೇಳಿದರೂ, ಅವುಗಳನ್ನೇನೂ ಹೊರತೆಗೆದು ತೋರಿಸಿರಲಿಲ್ಲ. ಇರಲಿ, ನಾನು ಅವರಿಗೆ – “ನಿಮ್ಮ ಆ ವಂಶಾವಳಿ ಚಾರ್ಟುಗಳಲ್ಲಿ ಮಾಣಿಕ ಭಟ್ಟ ಎನ್ನುವ ಹೆಸರಿದೆಯೆ ಎಂದು ಹುಡುಕಿರಿ. ಏಕೆಂದರೆ ಆ ವ್ಯಕ್ತಿಯ ಕಾಲದಲ್ಲಿಯೆ ನಮ್ಮ ಹಿಂದಿನವರು ಆ ಊರಿನಿಂದ ಮುರಗೋಡಕ್ಕೆ ವಲಸೆ ಬಂದದ್ದು”, ಎಂದು ವಿನಂತಿಯನ್ನು ಮಾಡಿಕೊಂಡು ಬಂದಿದ್ದೆ.

ಇಲ್ಲಿ ಉಲ್ಲೇಖಿಸಬೆಕಾದ ಇನ್ನೊಂದು ಅಂಶ, ಮಾಣಿಕ ಭಟ್ಟ ಎಂಬ ನಮ್ಮ ಮೂಲಪುರುಷನ ನಾಮಧೇಯ ನಮಗೆ ಪರಿಚಿತವಾಗಿದ್ದೇ ಸುಧೀರ ಅವರ ಮುರಗೋಡದ ಮನೆಯಲ್ಲಿ. ಅದುವರೆಗೆ ಆ ಹೆಸರನ್ನೇ ಯಾರ ಬಾಯಿಯಿಂದಲೂ ಕೇಳಿದ್ದಿಲ್ಲ. ಮೇ ೧೯೯೫ ರಲ್ಲಿಯೂ ನಾವು (ಅಂದರೆ ಸುಧೀರ ಸಹಿತ) ಪಂಢರಪುರಕ್ಕೆ ಹೋಗಿದ್ದೆವು. ಆಗಲೂ ನಾನು ಬರೆದಿಟ್ಟಿದ್ದ ಟಿಪ್ಪಣಿಗಳಿವೆ. ಆ ಸಲವೂ, ನಮ್ಮ ಅಡ್ಡ ಹೆಸರಿನ, ಆ ಊರಿನ ನಿವಾಸಿ, ಹಿರಿಯ ವ್ಯಕ್ತಿ ಶಂಕರರಾವ ಎನ್ನುವವರ ಬಗ್ಗೆ ಕೇಳಿ ತಿಳಿದು ಭೆಟ್ಟಿಯಾಗಿದ್ದೆ. ಆದರೆ ಮಾಣಿಕ ಭಟ್ಟರ ಕುರಿತು ಅವರ ಹತ್ತಿರ ಯಾವ ಪ್ರಸ್ತಾಪವನ್ನೂ ಮಾಡಿರಲಿಲ್ಲ. ಇದರ ಅರ್ಥ ಇಷ್ಟೇ, ಆಗ ನನಗೆ ಮಾಣಿಕ ಭಟ್ಟರ ಬಗ್ಗೆ ಗೊತ್ತೇ ಇರಲಿಲ್ಲ. ಪಂಢರಪುರದಲ್ಲಿ ನಾನು ಆಗ ಹುಡುಕುತ್ತಿದ್ದುದು ಕಾಶ್ಯಪ ಗೋತ್ರದ ಜೋಶಿ ಮಂಗಳವೇಢೆ ಅಥವಾ ಮಂಗಳವೇಢೆ ಜೋಶಿ ಹೆಸರಿನ ಜನರನ್ನು ಮಾತ್ರ, ಅಷ್ಟನ್ನೆ ಒಂದು ಆಧಾರವೆಂದು ಬಗೆದು.

ನಾವು ಮುರಗೋಡಿಗೆ ಹೋಗಿದ್ದ ತಾರೀಖು ಮತ್ತೊಂದೆಡೆ  ದಾಖಲಾಗಿರುವ ಒಂದು ಸಂಭಾವ್ಯತೆ ಇದೆ. ಸುಧೀರ ತಮ್ಮ ದಿನಚರಿಯನ್ನು ಬರೆದಿಟ್ಟಿದ್ದರೆ, ಅದರಲ್ಲಿ ಇದ್ದಿರಬಹುದು. ದಿನಚರಿಯನ್ನು ಬರೆಯುವದು ನಮ್ಮ ಜನರಲ್ಲಿ ಕ್ವಚಿತ್ತಾಗಿ ಕಾಣುವ ಹವ್ಯಾಸವೆಂಬುದು ನಿಜವಾದರೂ, ಸುಧೀರ ಬಹುಶಃ ಆಗ ದಾಂಡೇಲಿ ಪೇಪರ ಮಿಲ್ಲಿನ ವಿತರಕನಾಗಿ ಅಥವಾ ಯಾವುದೋ ಪ್ಲಾಯ್ ವುಡ್ ಕಂಪನಿಯ ವಿತರಕನಾಗಿ ಉದ್ಯೋಗದಲ್ಲಿದ್ದ ವ್ಯಕ್ತಿ. ತಮ್ಮ ನಿತ್ಯದ ವಹಿವಾಟುಗಳ ವಿವರಗಳನ್ನು ಬರೆದಿಡಬೇಕಾದ ಅಗತ್ಯ ಅಂತಹವರಿಗೆ ಇದ್ದೇ ಇರುತ್ತದೆ. ಅಂದು ಮುರಗೋಡಿಗೆ ಟ್ಯಾಕ್ಸಿ ಮಾಡಿಕೊಂಡು ಹೋಗಿದ್ದು ಅಂತಹ ವ್ಯವಹಾರಕ್ಕೆ ಸಂಬಂಧಿಸಿದ ಕಾರಣದಿಂದ ಎಂದು ನನ್ನ ಅನಸಿಕೆ. ಇದು ನಿಜವಾಗಿದ್ದರೆ, ಅವರ diary ಯಲ್ಲಿ ಅದು ನಮೂದಾಗಿರಲೆ ಬೇಕು.

ಆದರೆ ಅದೂ ಈಗ ಕೈಗೆ ಸಿಗುವದು ಕಠಿಣವಾಗಿದೆ. ಸುಧೀರ ಅವರ ಹೆಂಡತಿ ಮಕ್ಕಳು ಈಗ ಬೆಳಗಾವಿಯಲ್ಲಿಲ್ಲ. ಉದ್ಯೋಗವನ್ನರಸಿಕೊಂಡು, ಹಿರಿಯ ಮಗ ದಾಮೋದರ ಮತ್ತು ಎರಡನೆ ಮಗ ಮನೋಹರ ಬೆಂಗಳೂರಿನಲ್ಲಿ ಇರುತ್ತಿದ್ದಾರೆ. ಬೆಳಗಾವಿ ಮನೆಯನ್ನು ಕೊಟ್ಟುಬಿಟ್ಟಿದ್ದಾರೆ. ಹೀಗೆ ಮೊದಲಿನ ತಮ್ಮ ಮನೆ ಊರು ಇವುಗಳನ್ನು ಬಿಟ್ಟು ಹೋಗುವಾಗ, ತಂದೆಯ ಅನೇಕ  ವಸ್ತುಗಳನ್ನು ಹುಬ್ಬಳ್ಳಿಯಲ್ಲಿರುವ ತಮ್ಮ ಒಬ್ಬ ಸೋದರ ಮಾವನಲ್ಲಿ ಇಟ್ಟು ಬಂದಿದ್ದಾರೆ. ನಾನು ಈಗ ಧಾರವಾಡದಲ್ಲಿ ಇರುತ್ತಿದ್ದೇನೆ. ಹುಬ್ಬಳ್ಳಿ  ಅರ್ಧ ಗಂಟೆಯಲ್ಲಿ ಮುಟ್ಟಬಹುದಾದಷ್ಟು ಸಮೀಪವಿದೆ. ಅಲ್ಲದೆ, ಆ ಸೋದರಮಾವ ರಾಯಚೂರ ಅವರು ತಕ್ಕ ಮಟ್ಟಿಗೆ ನನಗೆ ಗುರುತಿನವರು. ಆದರೂ, ತೀರಿಕೊಂಡಿರುವ ವ್ಯಕ್ತಿಯೊಬ್ಬರ ಖಾಸಗಿ ಡಾಯರಿಯನ್ನು ನೋಡಲೆಂದು ಕೇಳುವದು, ಅಥವಾ ನೀವೇ ನೋಡಿ ಹೇಳಿರೆಂದು ಕೇಳುವದು ಸರಿಯಾಗಲಾರದು. ಆ ಕೆಲಸವನ್ನು ಆಸಕ್ತಿಯಿಂದ ಮಾಡಬೇಕಾದವರು  ಸುಧೀರ ಅವರ ಮಕ್ಕಳು. ಹಾಗೆ ಮಾಡಲು ಅವರು ತಯಾರಿದ್ದರೂ,  ಅವರ ಬಿಡುವಿಲ್ಲದ ಕಾರ್ಯ ಬಾಹುಳ್ಯ, ದೂರದ ಊರುಗಳಲ್ಲಿನ ವಾಸ ಇದಕ್ಕೆ ಅಡ್ಡಿಯಾಗಿದೆ. ಆವು ಅಟ್ಟದ ಮೇಲೆ, ಕರು ಬೆಟ್ಟದ ಮೇಲೆ ಎಂಬಂತಾಗಿದೆ.  ಅದೇನೆ ಇರಲಿ, ಈ ಅಡಚಣಿಯ ವಿಷಯವೆ ದೊಡ್ಡದಾಗುವದು ಬೇಡ.  ಸುಧೀರ ಈಗ ಇಲ್ಲ. ಮಕ್ಕಳ ಸಂಪರ್ಕ ಸುಲಭ ಸಾಧ್ಯವಾಗಿ ಉಳಿದಿಲ್ಲ. ಕಷ್ಟಸಾಧ್ಯವಾಗಿದೆ. ಆದರೆ ಹತ್ತು ವರ್ಷಗಳಿಗಿಂತ ಕಡಿಮೆಯ ನಮ್ಮಿಬ್ಬರ ಒಡನಾಟ ಕಾಲದಲ್ಲಾದ ವಿಷಯ ಸಂಗ್ರಹದಲ್ಲಿ – ಅವರು ಮೊದಲ ಸಲ ನಮ್ಮ ಮನೆಗೆ ಬಂದದ್ದೇ ೧೯೯೩ ರ ಫೆಬ್ರುವರಿಯಲ್ಲಿ. ತೀರಿಕೊಂಡದ್ದು ೨೦೦೨ರ ಎಪ್ರಿಲಿನಲ್ಲಿ-  ಸುಧೀರ ಅವರು ನೀಡಿದ್ದ ನೆರವು ದೊಡ್ದದು ಎಂಬುದನ್ನು ಒತ್ತು ನೀಡಿ ಹೇಳಬೇಕು. ನನ್ನ ಆಸಕ್ತಿಯ ತೀವ್ರತೆಯನ್ನು ಕೂಡಲೆ ತಿಳಿದುಕೊಂಡರು. ನಿಶ್ಚಿತವಾಗಿ ಅವರ ಮನದಾಳದಲ್ಲಿಯೂ ಆ ವಿಷಯಕ ಆಸಕ್ತಿ ಮತ್ತು ಅಷ್ಟೆ ತೀವ್ರತೆ ಇದ್ದಿತು. ಆದರೆ ಸುಪ್ತವಾಗಿದ್ದ ಅದನ್ನು, ಆ ವರೆಗೆ ಯಾರೂ ಕೆಣಕದೆ ಇದ್ದುದರಿಂದ, ಅವರ ಅರಿವಿಗೂ ಅದು ಬರದೆ ಹೋಗಿತ್ತು. ಒಮ್ಮೆ ಅದು ಅರಿವಿಗೆ ಬಂದಮೇಲೆ, ಮತ್ತು ಆ ಕಾರ್ಯ ವನ್ನು ಅವರಿಗಿಂತ ನಾನು ಹೆಚ್ಚು ಸಮರ್ಥವಾಗಿ ಮಾಡಬಲ್ಲೆನೆಂದು ಅನಿಸಿದಾಗ, ನನ್ನಲ್ಲಿ ವಿಶ್ವಾಸವಿಟ್ಟು ನಾನು ಕೇಳುವ ಮುಂಚೆಯೆ ತಮ್ಮ ಮನೆಯಲ್ಲಿ ಇದ್ದ ಇಪ್ಪತ್ತು ಮೂವತ್ತು ದಾಖಲೆಗಳನ್ನು ನನ್ನ ಸುಪರ್ದಿಗೆ ವಹಿಸಿದ್ದರು. ಅವು ನನ್ನ ಕಡೆಗೆ ಇನ್ನೂ ಹಾಗೆಯೆ ಇವೆ. ನಮ್ಮ ಮನೆತನದ ಅವರ ಟಿಸಿಲಿನ (ಎರಡನೆ ಟಿಸಿಲು) ಜನರ ಕುರಿತ ಆ ಅಧಿಕೃತ ದಾಖಲೆಗಳು ಈ ಪುಸ್ತಕ ರಚನೆಗೆ ಗಟ್ಟಿ ಮುಟ್ಟಾದ ನೆಲಗಟ್ಟನ್ನು ಒದಗಿಸಿವೆ.

ಬೆಳವಿ ಚಾಳಿನ ನಮ್ಮ ಮನೆಯಲ್ಲಿ ಕುಳಿತು ಸುದೀರ್ಘವಾಗಿ ಮಾತನಾಡಿದ ಆ ಮೊದಲ ಭೆಟ್ಟಿಯೆ ನನ್ನಲ್ಲಿ ಕೆರಳಿದ್ದ ನಮ್ಮ ಮನೆತನದ ಇತಿಹಾಸ ಶೋಧನೆಯ  ಆಸಕ್ತಿ ಅಂದು ಹೊಸ ಆಯಾಮವನ್ನು ಪಡೆಯಿತು. ನಾನು, ನಮ್ಮ ಕುಟುಂಬ, ತಂದೆ, ಕಕ್ಕಂದಿರು, ಅಜ್ಜ ಮೊದಲಾದವರ  ಬಗ್ಗೆ ಹೇಳಿದೆ. ಸುಧೀರ, ತಮ್ಮ ಅಣ್ಣಂದಿರು, ಅಕ್ಕ, ತಂದೆ ಮತ್ತು ಅಜ್ಜ ಅವರ ಬಗ್ಗೆ ಹೇಳುತ್ತ ಹೋದರು. ಒಬ್ಬೊಬ್ಬರ ಬಗ್ಗೆ  ಮಾಹಿತಿ ಕೊಡುತ್ತ ಹೋದಂತೆ ಅದನ್ನೆಲ್ಲ ಬರೆದಿಟ್ಟುಕೊಳ್ಳಬೇಕೆಂದು ಅನಿಸಿ ಟಿಪ್ಪಣಿಗಳನ್ನು ತೆಗೆದುಕೊಳ್ಳಹತ್ತಿದಂತೆ, ಆ ಮಂಗಳವೇಢೆ ಜನರ  ಬಗೆಗಿನ ವಿವರಣೆ – ಜನ್ಮ ತಾರೀಖು, ಶಿಕ್ಷಣ, ಉದ್ಯೋಗ, ವಾಸಸ್ಥಳ, ಕೌಟುಂಬಿಕ ಜೀವನ ಇತ್ಯಾದಿಯಾಗಿ ರಣೆ ಒಂದು ಕ್ರಮದಲ್ಲಿ, ವ್ಯವಸ್ಥಿತವಾಗಿ ಸಿಗುತ್ತ ಹೋಯಿತು. ಗತ ಕಾಲದಲ್ಲಿ ತಮ್ಮ ಹಿರಿಯರದಾಗಿದ್ದ ಆಸ್ತಿಪಾಸ್ತಿ, ಹೊಲ ಮನೆ, ಹೊಂದಿದ್ದ ಸ್ಥಾನಮಾನ ಮೊದಲಾದ ಬಗ್ಗೆಯೂ ಗೊತ್ತಾಯಿತು.

ಆದರೆ ಅಂದು ಅವರು ಕೊಟ್ಟ ವಿವರಣೆ ತಮ್ಮ  ಒಂದೇ ಕುಟುಂಬಕ್ಕಷ್ಟೆ ಸೀಮಿತವಾಗಿರಲಿಲ್ಲ.. ತಮ್ಮ ತಂದೆ ದಾಮೂ ಆಚಾರ್ಯರ ಬಗ್ಗೆ ಹೇಳಿದಂತೆ, ದಾಮೂ ಆಚಾರ್ಯರ ಅಣ್ಣ ರಂಗಾಚಾರ್ಯರು, ತಮ್ಮ, ವೆಂಕಣ್ಣಾಚಾರ್ಯರ ಮತ್ತು ಅವರ ಒಡಹುಟ್ಟಿದ ಸೋದರಿಯರ ಕುರಿತೂ, ವೆಂಕಣ್ಣಾಚಾರ್ಯರ ಮಕ್ಕಳ ಬಗ್ಗೆಯೂ ಮಾಹಿತಿಕೊಟ್ಟರು. ಎಲ್ಲವೂ ಥೇಟ ನಮ್ಮ ಜನರ ಬಗ್ಗೆ ಹೇಳಿದಂತೆ ಇತ್ತು. ಅವರಲ್ಲಿಯೂ ಸಂಬಂಧಗಳು ಸಡಿಲಗೊಂಡಿದ್ದವು. ಮನೆಗಳು ಅಷ್ಟು ದೂರದಲ್ಲಿ ಇರದಿದ್ದರೂ ಮನಗಳು ದೂರವಾಗಿ – ಹೋಗಿ ಬರುವದು ಕಡಿಮೆಯಾಗಿ, ಸ್ವಕೀಯರ ಬಗೆಗೆ ಇರಬೇಕಾಗಿದ್ದ ಭಾವನಾತ್ಮಕ ಸಾಮೀಪ್ಯ, ಅಂತಃಕರಣ, ಮಮತೆ ಈ ಮೊದಲಾದ ಸಂಬಂಧದ ಅಂಟು ತನ್ನ ಜಿಗುಟನ್ನು ಕಳೆದುಕೊಂಡಿತ್ತು.  ಅಲ್ಪಸ್ವಲ್ಪ ಪರಿಚಯದವರ ಬಗ್ಗೆ ಗೊತ್ತಿರಬಹುದಾಗಿದ್ದಷ್ಟೆ ಕನಿಷ್ಠ ಮಾಹಿತಿ ಮಾತ್ರ ಆ ಸಂಬಂಧಿಕರ ಬಗ್ಗೆಯೂ ಇದ್ದಿತು. ಅದನ್ನೇನೂ ಮುಚ್ಚಿಡದೆ, ಅವರ ವಿಳಾಸ ಮತ್ತು ಗೊತ್ತಿದ್ದ ಕೆಲ ಕೌಟುಂಬಿಕ ವಿವರಗಳನ್ನು ಹೇಳಿದರು.

ಒಟ್ಟಾರೆ ಅಂದಿನ ಮಧ್ಯಾಹ್ನದ ಆ ಭೆಟ್ಟಿ,  ನಾನು ಮಾಡಬೇಕೆಂದಿದ್ದ ಕೆಲಸಕ್ಕೆಒಂದು ಸ್ಫೂರ್ತಿ, ಪ್ರೇರಣೆ ಅಷ್ಟೆ ಅಲ್ಲ, ಹೊಸದೊಂದು ಆಯಾಮವನ್ನೇ ಕೊಟ್ಟಿತು. ಅಂದೇ ಸಂಜೆ ನಮ್ಮ ಮನೆಯಿಂದ ಅಷ್ಟೇನೂ ದೂರದಲ್ಲಿರದ ಭಾಂದೂರಗಲ್ಲಿಗೆ – ಅದು ನಿತ್ಯ ನಾನು ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಖಾಸಬಾಗದಲ್ಲಿನ ಶಾಲೆಗೆ ಹೋಗುವ ದಾರಿಯಲ್ಲಿದ್ದುದು, ಕಪಿಲೇಶ್ವರ ಗುಡಿಯ ಹತ್ತಿರದ ರೇಲ್ವೆ ಗೇಟಿನ ಹತ್ತಿರದಲ್ಲಿನ ಓಣಿ – ಗಂಗೂತಾಯಿಯವರನ್ನು ಹುಡುಕಿಕೊಂಡು ಹೋದೆ.  ಅವರು ಸುಧೀರ ಅವರ ಕಕ್ಕಿ. ವೆಂಕಣ್ಣಾಚಾರ್ಯರ ಮಗಳು. ಸ್ವಾತಂತ್ರ್ಯ ಯೋಧರಾಗಿದ್ದ ಶ್ರೀಪಾದ  ಜೋಶಿಯವರ ವಿಧವಾ ಪತ್ನಿ. ಆಗಲೆ, ಅಂದರೆ ೧೯೯೩ ರಲ್ಲಿ, ಅವರು ಸುಮಾರು  ೭೦ ವರ್ಷದ ವೃದ್ಧೆ. ಅವರಿಂದ ನನಗೆ ವೆಂಕಣ್ಣಾಚಾರ್ಯರ, ರಂಗಾಚಾರ್ಯರ ಮತ್ತು  ಉಳಿದ ಸಂಬಂಧಿಕರ ಬಗೆಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆಯಬೇಕಾಗಿತ್ತು. ಆದರೆ ಹೋಗಿದ್ದು ಸಂಜೆಯ ಹೊತ್ತು, ಹೆಂಗಸರಿಗೆ ಮನೆಗೆಲಸದ ಒತ್ತಡದ ವೇಳೆ,  ರಾತ್ರಿಯ ಅಡುಗೆ, ಊಟದ ವ್ಯವಸ್ಥೆ ಆಗಬೇಕಲ್ಲ. ಅದೇ ಹೊತ್ತು ಹೊರಗೆ ಆಟವಾಡಿ ಮನೆಗೆ ಬಂದಿದ್ದ ಮೊಮ್ಮಕ್ಕಳ ಧಾಂದಲೆಯೂ ನಡೆದಿತ್ತು. ಸಿಕ್ಕ ಅಲ್ಪ ಅವಧಿಯಲ್ಲಿ, ನೆನಪಿಗೆಬಂದ ಕೆಲ ವಿವರಗಳನ್ನು ಕೊಟ್ಟರು. ಆದರೂ – ಇದೆಲ್ಲ ಪ್ರಯೋಜನವಿಲ್ಲದ ಕಾಡುಗೆಲಸ, ವ್ಯರ್ಥ ಪ್ರಯತ್ನ ಎಂಬ ಭಾವನೆ ಇದ್ದಂತಿತ್ತು. ಅದೇನೆ ಇದ್ದರೂ, ನನ್ನ ಕೆಲಸ ಸ್ವಲ್ಪ ಮುಂದುವರೆದದ್ದು, ಸುಳ್ಳಲ್ಲ

ಆಗಷ್ಟೆ ಈ ಕೆಲಸಕ್ಕೆ ಕೈಹಚ್ಚಿ ಒಂದು ವರ್ಷಆಗಿತ್ತು. ೧೯೯೨ ರ ಭಾರತ ಹುಣ್ಣಿಮೆಯ ಕಿತ್ತೂರ ವಿಟ್ಠಲ ದೇವಸ್ಥಾನದ ಜಾತ್ರೆಗೆ ಹೊಗಿದ್ದೆನಷ್ಟೆ. ಪ್ರತಿಸಲದಂತೆ, ಶ್ಯಾಮಾಚಾರ್ಯ ಗಿರಿಭಟ್ಟನವರ ಅವರ ಮನೆಯಲ್ಲಿ ಉಳಿದುಕೊಂಡಿದ್ದೆ. ನಮಗೂ ಅವರಿಗೂ ಏನೋ ಒಂದು ಸಂಬಂಧ ಎಂದಷ್ಟೆ ಗೊತ್ತಿತ್ತು. ಆ ರಾತ್ರಿ ಅನಿವಾರ್ಯವಾಗಿ ಅಲ್ಲಿಯೆ ಉಳಿಯ ಬೇಕಾಯಿತು. ಮರುದಿನ ಬೆಳಿಗ್ಗೆ ಅದು ಹೇಗೋ ಈ ಸಂಬಂಧದ ಬಗ್ಗೆ ತಿಳಿದುಕೊಳ್ಳುವ ಪ್ರೇರಣೆ ಹುಟ್ಟಿತ್ತು. ನನ್ನ ತಂದೆ ಕಿತ್ತೂರಿನಲ್ಲಿದ್ದ ತಮ್ಮ ಕಕ್ಕಿಗೆ ಸೀತಾಬಾಯಿಗೆ, ಕಕ್ಕ ಕೃಷ್ಟಾಚಾರ್ಯರು ತೀರಿಕೊಂಡ ಎರಡು ಮೂರು ತಿಂಗಳಲ್ಲಿಯೆ ದತ್ತಕ ಹೋಗಿದ್ದರು. ಮುರಗೋಡದಲ್ಲಿ ಮಂಗಳವೇಢೆ ಮನೆತನದಲ್ಲಿಯೆ ಹುಟ್ಟಿದ್ದ ಶ್ಯಾಮಾಚಾರ್ಯರೂ ಕಿತ್ತೂರಿನ ಗಿರಿಭಟ್ಟನವರ ಮನೆಗೆ ದತ್ತಕ ಬಂದಿದ್ದರು. ನಮ್ಮ ಮತ್ತು ವರ ಮನೆಗಳು ಎಂಟು ಹತ್ತು ಮನೆಗಳಾಚೆ, ಗದ್ದಿ ಓಣಿಯೆಂಬಲ್ಲಿ ಇದ್ದವು. ಈ ಹಿನ್ನೆಲೆಯಲ್ಲಿ ದತ್ತಕದಿಂದಾಗಿ ಆದ ಕಿತ್ತೂರಿನ ಅಜ್ಜನ ಬಗ್ಗೆ, ಮುರಗೋಡಿನ ಅಜ್ಜನ ಬಗ್ಗೆ ಮತ್ತು ಅದಕ್ಕೂ ಹಿಂದಿನ ಹಿರಿಯರ ಬಗ್ಗೆ ಒಂದೊಂದಾಗಿ ಪ್ರಶ್ನೆಗಳನ್ನು ಕೇಳುತ್ತ ಹೋದೆ. ಟಿಪ್ಪಣಿಗಳನ್ನು ಬರೆದುಕೊಳ್ಳುತ್ತ ಹೋದೆ. ಹಿಂದಿನ ಮೂರು ನಾಕು ತಲೆಮಾರಿನವರ ಹೆಸರು ಮತ್ತು ಸ್ವಲ್ಪ ವಿವರಗಳು ಸಿಕ್ಕಿದ್ದವು. ಜೊತೆಗೆ, ಕೃಷ್ಟಾಚಾರ್ಯರು ಮತ್ತು ಅವರ ತಂದೆ ಭೀಮಸೇನಾಚಾರ್ಯರ ಕಾಲದ,  ನಂತರದ ಅಜ್ಜಿ ಸೀತಾಬಾಯಿ ಮತ್ತು ನನ್ನ ತಂದೆಯ ಕಾಲದ ಅನೇಕ ಕಾಗದ ಪತ್ರಗಳು ನನ್ನ ಹತ್ತಿರವೆ ಇದ್ದವು.

ಕಿತ್ತೂರಿನಿಂದ ಶುರುವಾದ ಮಾಹಿತಿ ಸಂಗ್ರಹದ ಈ ಕೆಲಸ, ಮರುವರ್ಷ ೧೯೯೩ ರಲ್ಲಿ, ಸುಧೀರ ಅವರ ಭೆಟ್ಟಿಯ ನಂತರ ದಾಪುಗಾಲಿನಿಂದ, ದೊಡ್ಡ ದೊಡ್ಡ ಹೆಜ್ಜೆಗಳನ್ನಿಡುತ್ತ  ಗಮ್ಯದೆಡೆ ಸಾಗಿತು.  ವೆಂಕಣ್ಣಾಚಾರ್ಯರ ಮಗಳು ಗಂಗೂತಾಯಿಯನ್ನು ಭೆಟ್ಟಿಯಾದ ಹೊಸದರಲ್ಲಿಯೆ, ಮೇ ತಿಂಗಳಲ್ಲಿ, ಅದೇ ವೆಂಕಣ್ಣಾಚಾರ್ಯರ ಸೊಸೆ ಸುಶೀಲಾ ಅವರನ್ನು ಭೆಟ್ಟಿಯಾದೆ. ಅವರು, ರೈತರಿಂದ ಕೊಲೆಯಾಗಿ ಇಲ್ಲವಾಗಿದ್ದ, ಶ್ರೀನಿವಾಸ ಅವರ ವಿಧವಾ ಪತ್ನಿ. ಬೆಳಗಾವಿಯಲ್ಲಿಯೆ, ಭಾಂದುರ ಗಲ್ಲಿಯ ಹತ್ತಿರದ ಮತ್ತೊಂದು ಓಣಿ ಫುಲಬಾಗ ಗಲ್ಲಿಯಲ್ಲಿ ಮಗ ಮತ್ತು ಸೊಸೆಯೊಂದಿಗೆ ಇದ್ದರು. ಊರಿನಲ್ಲಿಯ ಪ್ರತಿಷ್ಠಿತ ಮಾಧ್ಯಮಿಕ ಶಾಲೆಗಳಲ್ಲಿ ಒಂದಾದ ಬಿ.ಕೆ. ಮಾಡೆಲ್ ಹಾಯಸ್ಕೂಲಿನಲ್ಲಿ ಅವರ ಮಗ ಬಿಂದುಮಾಧವ ಕ್ಲರ್ಕ ಆಗಿ ಕೆಲಸ ಮಾಡುತ್ತಿದ್ದರು. ಅವರಿಂದ ಶ್ರೀನಿವಾಸ ಅವರ ಜನ್ಮ ವರ್ಷ, ವೃತ್ತಿ, ವಿವಾಹ, ಮಕ್ಕಳು – ಬಿಂದುಮಾಧವ ಮತ್ತು ಪದ್ಮನಾಭ, ರೈತರಿಂದ ಕೊಲೆಯಾಗಿ ಮರಣಿಸಿದ ದಿನ ಮೊದಲ್ಲದ ವಿವರಗಳು ಸಿಕ್ಕವಲ್ಲದೆ, ವೆಂಕಣ್ಣಾಚಾರ್ಯರ ಹಿರಿಯ ಮಗ – ಸುಮಾರು ಒಂಬತ್ತು ವರ್ಷ ಮೊದಲು ತೀರಿಕೊಂಡಿದ್ದ ರಂಗಾಚಾರ್ಯ ಉರ್ಫ ತಮ್ಮಣ್ಣ ಮತ್ತು ಖಾನಾಪುರದಲ್ಲಿದ್ದ ಅವರ ಏಕಮಾತ್ರ ಪುತ್ರ ಕಿಶೋರ ಇವರ ಬಗ್ಗೆಯೂ ಅಲ್ಪ ಸ್ವಲ್ಪ ಮಾಹಿತಿ ಸಿಕ್ಕಿತು. ಕೆಲ ದಿನಗಳ ನಂತರ, ಖಾನಾಪುರಕ್ಕೂ ಬೇರೊಂದು ಕೆಲಸಕ್ಕೆ ಹೊಗಿದ್ದಾಗ, ಕಿಶೋರ ಅವರನ್ನೂ ಹುಡುಕಿಕೊಂಡು ಹೋಗಿದ್ದೆ. ಆದರೆ, ಊರಲ್ಲಿರಲಿಲ್ಲ. ಅವರ ಪತ್ನಿಯನ್ನು ಭೆಟ್ಟಿಯಾಗಿ ಅವರಿಂದ ಸಿಕ್ಕ ಸ್ವಲ್ಪ ಮಾಹಿತಿಯನ್ನು ಬರೆದುಕೊಂಡೆ.

ಈ ನಡುವೆ, ಗಂಗೂತಾಯಿಯವರನ್ನು ಭೆಟ್ಟಿಯಾಗಿದ್ದಾಗ, ವೆಂಕಣ್ಣಾಚಾರ್ಯರ ಮತ್ತೊಬ್ಬ ಮಗ ಪುಣೆಯಲ್ಲಿ ಕೆಲಸ ಮಾಡುತ್ತಿದ್ದ  ವಿಟ್ಠಲ ಅವರಬಗ್ಗೆ ಕೇಳಿದ್ದೆನಲ್ಲ. ಅವರಿಂದ ಇನ್ನೂ ಹೆಚ್ಚಿನ ಮಾಹಿತಿಯ ನಿರೀಕ್ಷೆ ಯಿಂದ, “ನಿಮ್ಮ ತಮ್ಮ ಆಗೀಗ ಬೆಳಗಾವಿಗೆ ಬರುತ್ತಿರಬೇಕಲ್ಲ, ಹಾಗೆ ಬಂದಾಗ ಅವರನ್ನು ಅಗತ್ಯವಾಗಿ ಭೆಟ್ಟಿಯಾಗಬೇಕಿದೆ. ಆದ್ದರಿಂದ ಅವರು ಬೆಳಗಾವಿಗೆ ಬಂದಾ,ಗ ನಮ್ಮ ಮನೆಗೆ ಬರಲು ಆಗ್ರಹದಿಂದ ವಿನಂತಿಸಿಕೊಂಡಿದ್ದಾಗಿ ತಿಳಿಸಲು ಹೇಳಿದ್ದೆ. ಆ ಕೋರಿಕೆ ಮಾನ್ಯವಾಗಿ ಮುಂದೆ ಕೆಲ ವಾರಗಳ ನಂತರ ಅವರು ಮನೆಗೆ ಬಂದು,  ತಮ್ಮ ಬಗ್ಗೆ ಸಾಕಷ್ಟು ಮಾಹಿತಿ ಕೊಟ್ಟುಹೋದರು.

ವಿಸ್ತಾರ ಭಯದಿಂದ ೧೯೯೩ ರಲ್ಲಿ ಮತ್ತೆ ಯಾರ ಯಾರ ಭೆಟ್ಟಿಯಾಯಿತು, ಏನೇನು ಗೊತ್ತಾಯಿತು ಎಂಬುದನ್ನು ವಿವರವಾಗಿ ಹೇಳದೆ, ಸುಧೀರ ಅವರ ಬಳಗದ ಮತ್ತೊಬ್ಬ ಹಿರಿಯ ವ್ಯಕ್ತಿಯ ಭೆಟ್ಟಿಯ ಬಗ್ಗೆ ಮಾತ್ರ ಹೇಳುತ್ತೇನೆ. ಅವರೆ ಪಾಂಡುರಂಗಾಚಾರ್ಯ ರಾಘವೇಂದ್ರಾಚಾರ್ಯ ಮುರಗೋಡ ಅವರು. ಅವರಿಗಾಗಲೆ ೭೩ ವರ್ಷವಾಗಿತ್ತು. ಅವರೇನೂ ಬೆಳಗಾವಿಯಲ್ಲಿದ್ದವರಲ್ಲ. ಶಿವಮೊಗ್ಗಾ ಮತ್ತು ಧಾರವಾಡದಲ್ಲಿದ್ದವರು.  ಅಕ್ಟೋಬರದಲ್ಲಿ ಆಕಸ್ಮಿಕವಾಗಿ  ಭೆಟ್ಟಿಯಾಯಿತು, ಆದರೆ ಈ ಗುರುತು ಸುಧೀರ ಅವರಿಂದಾದುದಲ್ಲ, ಪರಿಚಯವಾದರೂ ಇದ್ದಿತೋ ಇಲ್ಲವೋ, ಈಗ ನಾನು ಹೇಳಲಾರೆ. ಸುಧೀರಕೂಡ. ಏಕೆಂದರೆ ಅವರೀಗ ತೀರಿಹೋಗಿದ್ದಾರೆ.

ಪಾಂಡುರಂಗಾಚಾರ್ಯರು, ನಮ್ಮ ಊರಲ್ಲಿಯೆ ಇದ್ದ ಅವರ ಮಗಳು ಪ್ರೇಮಾ  ಮತ್ತು ಅಳಿಯ ಎಸ್.ಬಿ. ಪಾಗಾ ಅವರ ಕಡೆಗೆ ಬಂದಿದ್ದರು. ನನ್ನನ್ನು ಅವರ ಕಡೆ ಕರೆದು ಒಯ್ದವ ನನ್ನ ಕಕ್ಕನ ಮಗ ಪ್ರಮೋದ. ಈಗ ಅವನು ಇಲ್ಲ. ಚಿಕ್ಕ ವಯಸ್ಸಿನಲ್ಲೆ ತೀರಿಹೋದ. ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅವನು ಕೆಲವು ಕಾಲ ಶಿವಮೊಗ್ಗಾದಲ್ಲಿ ಇದ್ದ. ಆಗ, ಗುರುತಾಗಿತ್ತು. ಮುರಗೋಡ ಎಂಬ ಅಡ್ಡಹೆಸರು ಪರಿಚಯ ಮಾಡಿಕೊಳ್ಳಲು ಪ್ರೇರೇಪಿಸಿತ್ತು. ನಂತರ ಗೊತ್ತಾದದ್ದು, ಹಿಂದೆ ಅವರೂ ತಮ್ಮನ್ನು ಮಂಗಳವೇಢೆ ಎಂದೆ ಕರೆದುಕೊಳ್ಳುತ್ತಿದ್ದರು. ಮತ್ತೂ ಒಂದು ವಿಶೇಷವೆಂದರೆ, ಅವರ ತಂದೆ ರಾಘವೇಂದ್ರಾಚಾರ್ಯರು ಮುರಗೋಡನ್ನು ಬಿಟ್ಟು, ಕಿತ್ತೂರಿನ ಹತ್ತಿರದ ಬೀಡಿಯಲ್ಲಿ ಇರುತ್ತಿದ್ದರು. ಅಲ್ಲಿ ಮನೆಯನ್ನೂ ಮಾಡಿದ್ದರು. ಮಾತಿನಲ್ಲಿ, ಅವರಿಗೆ ನನ್ನ ಕಿತ್ತೂರಿನ ಅಜ್ಜ ಕೃಷ್ಟಾಚಾರ್ಯರ ಗುರುತು ಇದ್ದಿತಲ್ಲದೆ, ಅವರು ತೀರಿಕೊಂಡಾಗ ಅವರ ಹಿರಿಯರು ಮೈಲಿಗೆಯನ್ನು ಪಾಲಿಸಿದ್ದರು ಎಂದು ತಿಳಿಯಿತು.

ಅವರು ತಮ್ಮ ತಂದೆ ರಾಘವೇಂದ್ರಾಚಾರ್ಯ, ತಮ್ಮದೆ ಹೆಸರಿನ ಅಜ್ಜ ಪಾಂಡುರಂಗಾಚಾರ್ಯ, ತಮ್ಮ ಅಣ್ಣಂದಿರು ವಾದಿರಾಜ ಮತ್ತು ಬೀಡಿ ಭೀಮಾಚಾರ್ಯ ಮತ್ತು ತಮ್ಮ ಕೃಷ್ಟಾಚಾರ್ಯ, ತಂಗಿ (ಕಕ್ಕನ ಮಗಳು) ಸಾವಿತ್ರಿಬಾಯಿ, ತಮ್ಮ ಕುಟುಂಬ ಮತ್ತು ಮಕ್ಕಳು,  ಅಣ್ಣ ಭೀಮಸೇನಾಚಾರ್ಯರ ಮಕ್ಕಳು, ತಮ್ಮ ಕೃಷ್ಟಾಚಾರ್ಯರ ಮಕ್ಕಳು ಹೀಗೆ ಸ್ವಲ್ಪ ಅವಧಿಯಲ್ಲಿಯೆ ಆ ಕೊಂಬೆ -ರೆಂಬೆಯ ಒಂದು ಸ್ಥೂಲ ಚಿತ್ರವನ್ನು ಕೊಟ್ಟರು. ಹೀಗೆ ದಾಮೂ ಆಚಾರ್ಯರ ಶಾಖೆಯ ಹೆಚ್ಚು ಕಡಿಮೆ ಎಲ್ಲರ ಬಗ್ಗೆ ಒಂದು ಸಂಕ್ಷಿಪ್ತ, ಆದರೆ, ಒಟ್ಟಾದ ಸ್ಥೂಲ ಚಿತ್ರವೊಂದು ಆಗಲೆ ಸಿಕ್ಕಿತ್ತು.

ಅದೇ ವರ್ಷ ಮೇ ತಿಂಗಳಲ್ಲಿ, ಬೆಳಗಾವಿಯಲ್ಲಿ ಇದ್ದ ಬೇರೆ ಇಬ್ಬರು ಸಹೋದರರು – ಅಪ್ಪಣ್ಣಾಚಾರ್ಯ ಮತ್ತು ಗುರುರಾಜ ಎನ್ನುವವರನ್ನು ಭೆಟ್ಟಿಯಾಗಿದ್ದೆ. ಅವರು ಅಡವಿಕೃಷ್ನ ಎನ್ನುವವರ ಮಕ್ಕಳು ಇಬ್ಬರೂ. ಟೆಲೆಗ್ರಾಫ ಡಿಪಾರ್ಟಮೆಂಟಿನಲ್ಲಿ ಕೆಲಸ ಮಾಡುತ್ತಿದ್ದರು. ಆಣ್ಣ ಆಗಲೆ ನಿವೃತ್ತಿಗೊಂಡಾಗಿತ್ತು. ತಮ್ಮನ ಸರ್ವೀಸು ಇನ್ನೊಂದು ವರ್ಷ ಇದ್ದಿತು. ತಾವು ಮತ್ತು ತಮ್ಮ ಹಿರಿಯರ ಮತ್ತು ಸಂಬಂಧಿಕರ ಬಗ್ಗೆ ಬಹಳ ವಿವರವಾದ ಚಿತ್ರಣವನ್ನು ಅವರು ಕೊಡದೆ ಹೋಗಿದ್ದರೂ, ಒಂದು ಸಣ್ಣ, ಅಸ್ಪಷ್ಟ ಚಿತ್ರ ಸಿಕ್ಕಿದ್ದಿತು. ಚಿತ್ರ ಎಷ್ಟು ಅಸ್ಪಷ್ಟವಾಗಿತ್ತು ಎಂದರೆ ಅವರು ಗುರುತಾಗಿ ಎರಡು ಮೂರು ಹಿಂದಿನ ತಲೆಮಾರಿನ ಅವರ ಪೂರ್ವಿಕರು ಮತ್ತು ಕೆಲ ಕೌಟುಂಬಿಕ ವಿವರಗಳು ಗೊತ್ತಾದದ್ದು ಅಷ್ಟೆ ಲಾಭ. ಅದರ ಹೊರತಾಗಿ ನಮಗೂ, ಯಕ್ಕುಂಡಿಯನ್ನು ತಮ್ಮ ಪೂರ್ವಜರ ಸ್ಥಳವೆಂದು ಅವರಿಗೂ ಅದೆ ರೀತಿ ನಮ್ಮಂತೆಯೆ ಮುರಗೋಡನ್ನೆ ತಮ್ಮ ಹಿರಿಯರ ಮೂಲಸ್ಥಳವೆಂದು ಗುರುತಿಸುತ್ತಿದ್ದ  ಸುಧೀರ ಅವರ ಬಳಗಕ್ಕೂ ಯಾವುದು ನಮ್ಮೆಲ್ಲರನ್ನು ಜೋಡಿಸುವ ಕೊಂಡಿಯಾಗಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಒಂದೇ ಆಗಿದ್ದ ಅಡ್ಡ ಹೆಸರೆ ನಮ್ಮ ನಡುವೆ ಇದ್ದಿರ ಬಹುದಾದ ಸಂಬಂಧದ ಕೊಂಡಿ ಎಂದು ನಮ್ಮ ಅಜ್ಞಾನ ಹೇಳುತ್ತಿತ್ತು. ಈ ಅಜ್ಞಾನವೆ ನಮ್ಮ ಮನೆತನದ ಮೂರೂ ಟಿಸಿಲುಗಳಲ್ಲಿ- ನನಗೂ, ಸುಧೀರಗೂ, ಗುರುರಾಜಗೂ- ಇದ್ದ ಸಾಮಾನ್ಯ ಅಂಶವಾಗಿತ್ತು.

“ಯಕ್ಕುಂಡಿ ಮೂಲದ” ಈ ಸಹೋದರರನ್ನು ಭೆಟ್ಟಿಯಾದ ಮೇಲೆ, ಅಕ್ಟೋಬರದಲ್ಲಿ, ಅದೇ ಬಳಗದ ಹಿರಿಯರೊಬ್ಬರ ಭೆಟ್ಟಿಯ ವಿಶೇಷ ಸೌಭಾಗ್ಯ ನನ್ನದಾಗಿತ್ತು. ವಿಶೇಷವೆಂದು ಹೇಳಲು ಕಾರಣ ಅವರು ಆಗಲೆ ೯೦ ವರ್ಷ ದಾಟಿದ್ದ ವಯೋವೃದ್ಧರು, ಪಂಡಿತರು ಎಂಬುದು ಅಷ್ಟೇ ಅಲ್ಲ. ನನ್ನ ಆ ಮೊದಲ ಭೆಟ್ಟಿಯೆ ಕಡೆಯದೂ ಆಗಿತ್ತು. ಅಂದು, ಒಳ್ಳೆ ಆರೋಗ್ಯದಿಂದ ಕಾಣುತ್ತಿದ್ದ ಅವರು ಹದಿನೈದೆ ದಿನಗಳ ನಂತರ ಕಾಲವಶರಾದ ಸುದ್ದಿ ತಿಳಿಯಿತು.

ಇಲ್ಲಿಯ ವರೆಗೆ ಯಾರೂ ತಿಳಿಸದಿದ್ದ ಮೂರು ಮಹತ್ವದ ಅಂಶಗಳನ್ನು ಅವರು ಹೇಳಿದ್ದರು. ಒಂದು -ನಮ್ಮ ಪೂರ್ವಿಕರು ಮಂಗಳವೇಢೆ ಊರಿನಲ್ಲಿದ್ದಾಗ, ಟೀಕಾರಾಯರ ಕಾಲದಲ್ಲಿ, ಅವರ ಮನೆಯ ಅಂದರೆ ದೇಶಪಾಂಡೆ ಮನೆತನದ ಪುರೋಹಿತರಾಗಿದ್ದರು ಎಂದು, ಎರಡನೆಯದು ಆ ದಿನಗಳಲ್ಲಿದ್ದ ನಮ್ಮ ಪೂರ್ವಿಕ ವ್ಯಕ್ತಿಯ ನಾಮಧೇಯ ವೇದ ಪಂಡಿತ ಕುಂಭಾರಿ ಗೋಪಾಳಾಚಾರ್ಯ ಜೋಶಿ. ರಾಜಪುರೋಹಿತರಾಗಿ ಮಾನ್ಯರಾದವರು, ಎಂಬುದು. ಮೂರನೆಯದು -ಧೋಂಡೋಪಂತರು ಸನ್ನ್ಯಾಸವನ್ನು ತೆಗೆದುಕೊಂಡು ಜಯತೀರ್ಥರಾದ ನಂತರ, ನಮ್ಮ ಆ ಕಾಲದ ಪೂರ್ವಿಕರು ಕುಂಭಾರಿಯವರ ಕಾಲದಲ್ಲಿಯೆ ಮಂಗಳವೇಢೆ ಊರನ್ನು ತೊರೆದು ಕೆಲವರು ಬೇರೆ ಬೇರೆ ಕಡೆಗೆ ತೆರಳಿದರು. ಅವರಲ್ಲಿನ ವೈದಿಕ ಜನ ಪಂಢರಪುರ, ಮುರಗೋಡ, ಯಕ್ಕುಂಡಿ, ಅಹಮ್ಮದಾಬಾದ, ಗುರ್ಲಹೊಸೂರ, ಬಡ್ಲಿ ಇತಾದಿ ಕಡೆ, ಗೃಹಸ್ಥರು (ಯಜಮಾನರು) (ಟೀಕಾರಾಯರ ಮನೆತನದವರು) ಬಾಗಲಕೋಟೆಗೆ ಮತ್ತೂ ಬೇರೆ ಬೇರೆಕಡೆಗೆ ಹೊಟ್ಟೆಯ ಸಲುವಾಗಿ ಹೋದರು. ಚಿದಂಬರ ದೀಕ್ಷಿತರ ಕಾಲದಲ್ಲಿಯೂ ಮುರಗೋಡಕ್ಕೆ ಬಂದರು.

ಇದಿಷ್ಟೆ ಅಲ್ಲ, ತಮ್ಮ ವಂಶಾವಳಿಯ ಬಗ್ಗೆ ಅವರಿಗಿದ್ದಷ್ಟು ಮಾಹಿತಿ ಉಳಿದ ಯಾರಲ್ಲಿಯೂ ಇದ್ದಿರಲಿಲ್ಲ ಎನಿಸುತ್ತದೆ. ಮುರಗೋಡದಲ್ಲಿನ ನಮ್ಮ ಜನರ ಮೂಲ ಪುರುಷ ಮಾಣಿಕ ಭಟ್ಟರ ಹೆಸರೊಂದನ್ನು ಬಿಟ್ಟು – ತಮ್ಮ ಹಿಂದಿನವರು ತಂದೆ ಬಂಡಾಚಾರ್ಯ > ಅಜ್ಜ ಬಾಳಾಚಾರ್ಯ > ಮುತ್ತಜ್ಜ ಮದ್ದಂಭಟ್ಟ > ಗಿರಿಯಜ್ಜ ಬಾಲಕೃಷ್ಣಭಟ್ಟ ಜೋಶಿ ಎಂದು ಹೇಳಿದ್ದರು, ಅಲ್ಲದೆ, ಬರೆದಿಟ್ಟ ವಂಶಾವಳಿಯೂ ತಮ್ಮ ಹತ್ತಿರ ಇದೆಯೆಂದು, ಮುಂದಿನ ಭೆಟ್ಟಿಯಲ್ಲಿ ಅದನ್ನು ತೋರಿಸುವದಾಗಿ ಭರವಸೆ ಕೊಟ್ಟಿದ್ದರು. ಆದರೆ ವಿಧಿ ಹಾಗೆ ಆಗಗೊಡಲಿಲ್ಲ.. ಹದಿನೈದೇ ದಿನಗಳಲ್ಲಿ ತೀರಿಹೋದರು. ನಂತರದ ದಿನಗಳಲ್ಲಿ, ಮಗ ಸೊಸೆ ಆ ತೊರವಿ ಗಲ್ಲಿಯಲ್ಲಿನ ಆ ಮನೆಯನ್ನೂ ಬಿಟ್ಟರು. ಆ ದಾಖಲೆಗಳೆಲ್ಲ ಏನಾದವೋ! ತಮ್ಮ ಹತ್ತಿರವಂತೂ ಅಂತಹ ಹಳೆಯ ಕಾಗದಗಳಾವವೂ ಇಲ್ಲ ಎಂದು ಮಗ ಗೋವರ್ಧನಾಚಾರ್ಯರು ಹೇಳಿದರು.

ಅವರಿಂದ ಮೊದಲ ಸಲ ಕೇಳಿದ್ದ, ನಮ್ಮ ಮನೆತನದವರು ಒಂದು ಕಾಲದಲ್ಲಿ ಮಂಗಳವೇಢೆ ಜೋಶಿ ಎಂಬಅಡ್ಡಹೆಸರಿನವರು ಎನ್ನುವ ಮಾತು, ಮತ್ತು ಅವರು ಹೇಳಿದ್ದ ತಮ್ಮ ಅಜ್ಜ, ಮುತ್ತಜ್ಜ, ಗಿರಿಯಜ್ಜ ಅವರ ಹೆಸರುಗಳು, ಇವೆಲ್ಲ ಮುರಗೋಡದಲ್ಲಿ, ಆ ನಂತರ ಸಿಕ್ಕ ವಂಶಾವಳಿಯ ದಾಖಲೆ ಮತ್ತು ಇತರ ಕಾಗದಪತ್ರಗಳಿಂದ ನಿಜವೆಂದು ಸಿದ್ಧವಾಯಿತು. ಅಲ್ಲದೆ, ಪಂಢರಪುರದಲ್ಲಿ ಕಾಸ್ಯಪ ಗೋತ್ರದ ಜೋಶಿ- ಮಂಗಳವೇಢೆ ಎಂಬ ಅಡ್ಡಹೆಸರಿನ ಜನರನ್ನೂ ಭೆಟ್ಟಿಯಾಗಿ ಬಂದಿದ್ದೇನೆ.

ಹೀಗೆ ೧೯೯೨ ರಲ್ಲಿ ಪ್ರಾರಂಭಗೊಂಡ ಈ ಕೆಲಸಕ್ಕೆ, ಮರು ವರ್ಷ೧೯೯೩ ರಲ್ಲಿ, ಭದ್ರ ಬುನಾದಿ ಬಿದ್ದಿತು. ನಂತರ ಆ ಕೆಲಸ ಒಂದು ವೇಗವನ್ನು, ಹಾಗೆಯೆ ಒಂದು ವಿಸ್ತಾರವನ್ನು ಕಂಡದ್ದು ೨೦೧೪ ಮತ್ತು ೨೦೧೫ರಲ್ಲಿ. ಈ ಇಪ್ಪತ್ತೆರಡು ವರ್ಷಗಳಲ್ಲಿ , ಮೂರೂ ಟಿಸಿಲಿನಲ್ಲಿ, ಏಳನೇ ತಲೆಮಾರಿನ ನಂತರ ಬೆಳೆದ ಸಂತಾನ ಮತ್ತು  ಪ್ರತಿ ವ್ಯಕ್ತಿಯ ವಿವರಗಳು ಸಿಗಹತ್ತಿ, ಒಂದು “ಕಟ್ಟಡ” ತಲೆ ಎತ್ತತೊಡಗಿತು. ಚಿತ್ರ ದೊಡ್ಡದಾಗಿ, ಸ್ಪಷ್ಟವಾಗ ಹತ್ತಿತು.ಈಗಿನ ಚಿತ್ರ ಮೂಡುವ ಮೊದಲಿನ ಆ ಮಸುಕು ಬಿಂಬ ಹೇಗೆ ಇದ್ದಿತು ಎಂಬುದನ್ನೂ ಹೇಳಬೇಕು.

ನನ್ನ ತಂದೆ ೧೯೫೬ ರಲ್ಲಿ ತೀರಿಕೊಂಡರು. ನಾನು ಆಗ ಬರಿಯ ಹದಿನಾಕು ವರ್ಷದವ. ಏಳನೆ ಇಯತ್ತೆ ಪಾಸಾಗಿದ್ದೆ. ಎಂಟನೆ ಇಯತ್ತೆಗೆ ಇನ್ನೂ ಹೋಗಿರಲಿಲ್ಲ. ಆ ಎಳೆಯ ಹೆಗಲ ಮೇಲೆ ಮನೆಯ ಹೊರೆ ಬಿದ್ದಿತ್ತು. ಕಿತ್ತೂರಿನಲ್ಲಿ, ನನ್ನ ತಂದೆಯನ್ನು ದತ್ತಕ ತೆಗೆದುಕೊಂಡ ಸೀತಕ್ಕ ಅಜ್ಜಿ ಇದ್ದಳು. ಮನೆ ಇದ್ದಿತು. ಸುತ್ತಲಿನ ಬಚ್ಚನಕೇರಿ, ಉಗರಖೋಡ, ಬಸರಕೋಡ, ದೇಗಲೊಳ್ಳಿ (ದೇಗಲವಳ್ಳಿ) ಮತ್ತು ಗಂದಿಗವಾಡಗಳಲ್ಲಿ ಹೊಲಗಳಿದ್ದವು. ಆದರೆ, ಆಗ ಅವು ಕೇವಲ ಕನಸಿನಲ್ಲಿ ಕೇಳಿದ ಹಳ್ಳಿ ಹೆಸರುಗಳಾಗಿದ್ದವು. ಎಲ್ಲಿವೆ ಗೊತ್ತಿರಲಿಲ್ಲ. ಆ ಹೊಲಗಳ ಗುರುತು, ಹಾದಿ, ರೈತರು ಒಂದೂ ಗೊತ್ತಿಲ್ಲದ ವಿಚಿತ್ರ ಸನ್ನಿವೇಶ. ಗಂದಿಗವಾಡದ ರೈತರ ಬಗ್ಗೆ ಮಾತ್ರ ಗೊತ್ತಿತ್ತು. ಏಕೆಂದರೆ, ದತ್ತಕದ ನಂತರ, ಅಲ್ಲಿನ ಹೊಲಗಳ ಉಪಭೋಗ ಮಾಡಲು ನನ್ನ ತಂದೆಯ ಹೆಸರಲ್ಲಿ ಸೀತಕ್ಕಅವುಗಳನ್ನುಮಾಡಿಕೊಟ್ಟಿದ್ದಳು. ಆ ರೀತಿ ರೈತರು ನಮ್ಮ ಪಾಲನ್ನು ಪ್ರತಿವರ್ಷ ತಂದುಕೊಡುತ್ತಿದ್ದರು. ಒಂದು ದಿನ ಉಳಿದು, ಬಂದಿದ್ದ ಕನ್ನಡ ಸಿನಿಮಾ ನೋಡಿ, ಸಂತೆಪೇಟೆ ಮಾಡಿಕೊಂಡು  ಹೋಗುತ್ತಿದ್ದರು. ಇರಲಿ, ತಂದೆಯನ್ನು ಚಿಕ್ಕವನಿದ್ದಾಗಲೆ ಕಳೆದುಕೊಂಡು, ಏನೆಲ್ಲ ಅನುಭವಿಸಿ, ನಾನು ಬೆಳೆದೆನೆಂಬ ಕಥೆಯನ್ನು ಮತ್ತೆ ಬೇರೆಡೆ ಹೇಳುತ್ತೇನೆ.

ಈಗ, ಇಲ್ಲಿ ಹೇಳಹೊರಟಿರುವದು, ಕಿತ್ತೂರಿಗೆ ಹೊಲ, ಸುಗ್ಗಿಯೆಂದು ಹೋದರೆ ನೆರವಿಗಾಗಿ ಶ್ಯಾಮಾಚಾರ್ಯರ ಕಡೆಗೆ ಹೋಗಲೆ ಬೇಕಾಗುತ್ತಿತ್ತು. ಅದು ಮುಂದೆ ಮೂರು ನಾಕು ದಶಕಗಳ ದೀರ್ಘಾವಧಿಯಲ್ಲಿ ಹಾಗೇ ಮುಂದುವರೆಯಿತು. ಸುಮಾರು ೧೯೬೦ ರಿಂದ ೧೯೯೩ ರ ಭಾರತ ಹುಣ್ಣಿಮೆಯ ವಿಟ್ಠಲ ದೇವರ ಜಾತ್ರೆಗೆ ಹೋಗಿದ್ದೆನಲ್ಲ, ಅಲ್ಲಿಯ ವರೆಗೆ, ಅಚ್ಚರಿಯ ಸಂಗತಿಯೆಂದರೆ ಇಷ್ಟೆಲ್ಲ ಹೋಗಿಬರುವದು ನಡೆದಿತ್ತಾದರೂ, ಆ ಶ್ಯಾಮಾಚಾರ್ಯರು ಮತ್ತು ನಮಗೂ ಇದ್ದ ನಿಖರವಾದ ಸಂಬಂಧವೇನು ಎಂಬುದೇ ಗೊತ್ತಿರಲಿಲ್ಲ. ಕೊನೆಗೊಮ್ಮೆ ಕುತೂಹಲ ಕೆರಳಿ, ನನ್ನ ಅಜ್ಞಾನದ ನಗೆಗೀಡು ಪ್ರದರ್ಶನವಾದರೂ ಅಡ್ಡಿಯಿಲ್ಲ ಎಂದು ಬಗೆದು, ಆ ಬಗ್ಗೆ ಅವರನ್ನೆ ಕೇಳಿದ್ದು ಈ ಕೆಲಸದ ನಾಂದಿಯಾಯಿತು.

ಹಾಗೆಯೆ, ಎಪ್ಪತ್ತರ ದಶಕದಲ್ಲಿ, ನನ್ನ ಸಹೋದ್ಯೋಗಿ ಶಂಕರರಾವ ಕಾಲಕುಂದ್ರಿಕರ ರಣಝುಂಝಾರ ಎಂಬ ಮರಾಠಿ ದಿನಪತ್ರಿಕೆಯನ್ನು,  ಸ್ಥಾಪಕ, ಸಂಪಾದಕರಾಗಿ ಶುರು ಮಾಡಿದ್ದರು. ಅದರಲ್ಲಿನ ವಾರಭವಿಷ್ಯವನ್ನು ಬರೆಯುತ್ತಿದ್ದ ವ್ಯಕ್ತಿ ಸುಧೀರ ಮಂಗಳವೇಢೆ. ಹೆಸರು ಗೊತ್ತಾದ ಮೇಲೆ ಆ ವ್ಯಕ್ತಿ ಯಾರು, ಎಲ್ಲಿರುತ್ತಾರೆ ಎಂಬುದನ್ನು ಪತ್ತೆ ಹಚ್ಚುವದು ಕಠಿಣವಾಗಿರಲಿಲ್ಲ. ಸಂಪಾದಕರನ್ನು ಕೇಳಿ, ಭೆಟ್ಟಿಯಾಗಿ ಗುರುತು ಮಾಡಿಕೊಂಡೆ. ಆದರೂ, ಮುಂದಿನ ಇಪ್ಪತ್ತೈದು ವರ್ಷ ನಮ್ಮ ಸಂಬಂಧದ ಕೊಂಡಿಯ ಬಗ್ಗೆ ನಿಖರವಾಗಿ ಗೊತ್ತಾಗಿರಲಿಲ್ಲ. ಅವರ ತಂದೆ ದಾಮೂಆಚಾರ್ಯ, ಕಕ್ಕ ಮುರಗೋಡದ ಇನ್ನೊಬ್ಬರು ವೆಂಕಣ್ಣಾಚಾರ್ಯರು. ಹೆಸರನ್ನು ಎಲ್ಲೋ ಒಂದೆರಡು ಸಲ ಯಾರ ಬಾಯಲ್ಲೊ ಕೇಳಿದ್ದಷ್ಟೆ ನಿಜ. ನೋಡಿದ್ದಿಲ್ಲ, ಮತ್ತೇನೂ ಗೊತ್ತಿರಲಿಲ್ಲ, ಕೊನೆಕೊನೆಗೆ ಅವರೂ ಬೆಳಗಾವಿಯಲ್ಲಿಯೆ ಇದ್ದರೂ. ಒಂದೇ ಗಡ್ಡೆಯ ಜನ. ಅದರೂ, ಒಂದೇ ಒಂದು ಶುಭಕಾರ್ಯಕ್ಕಾಗಲಿ, ಮರಣದಂತಹ ಸಂದರ್ಭದಲ್ಲಾಗಲಿ ಅವರೂ ಬಂದವರಲ್ಲ, ನಾವೂ ಹೋದವರಲ್ಲ.

ಹಾಗೆಯೆ ಟೆಲಿಗ್ರಾಫ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಗುರುರಾಜ, ಮಾಡೆಲ್ ಹಾಯಸ್ಕೂಲಿನಲ್ಲಿದ್ದ ಬಿಂದುಮಾಧವ ಬಗ್ಗೆ. ಪರಸ್ಪರ ಅಪರಿಚಿತರಾಗಿಯೆ ಏಷ್ಟೋ ವರ್ಷ ಕಳೆದಿದ್ದೆವು. ಹೇಳುತ್ತ ಹೋದರೆ ಅದು ಹನುಮಂತನ ಬಾಲದಂತೆ ಬೆಳೆದೀತು.

ಇಂತಹ ಇನ್ನೊಂದು ವಿಲಕ್ಷಣ ಉದಾಹರಣೆಯನ್ನು ಮಾತ್ರ ಉಲ್ಲೇಖಿಸಿ ಮುಗಿಸುತ್ತೇನೆ. ಬೆಳವಿಚಾಳಿನಲ್ಲಿ, ಒಂದೇ ಗೋಡೆಯಾಚೆ ಇದ್ದ ನೆರೆಮನೆಯ ದೇಶಪಾಂಡೆಯವರ ಕೊನೆಯ ಸೊಸೆ ಸುನೀತಾ. ಆ ಮದುವೆಯಾಗಿ ಎಷ್ಟೋ ವರ್ಷಗಳಾದರೂ ಆಕೆಯ ಅವಳು ಸುಧೀರ ಅವರ ಅಕ್ಕ ಕಮಲಕ್ಕ ಅವರ ಮಗಳು, ದಾಮೂಆಚಾರ್ಯರ ಮೊಮ್ಮಗಳು, ಎಂದು ಒಂದು ಚೂರೂ ಗೊತ್ತಾಗದೆ ಹೋಗಿದ್ದು. ಗೆಳೆಯನೊಬ್ಬನ ಮನೆಯಲ್ಲಿ  ವೈಕುಂಠ ಸಮಾರಾಧನೆಗೆ ಬಂದಿದ್ದ ಕಮಲಕ್ಕ ಅವರ ಗುರುತು ನನ್ನ ಹೆಂಡತಿಗೆ ಆಗಿ, ಮಾತಿನಲ್ಲಿ ಅವರ ತಮ್ಮ ಸುಧೀರ ಎಂದು ಗೊತ್ತಾದದ್ದು.

ವಂಶಾವಳಿಯ ಆ  ಹಳೆಯ ದಾಖಲೆ   ಹಾಗೂ  ಅದರಲ್ಲಿ ಬರೆಯಲಾಗಿರುವ  ಮತ್ತೂ ಬೇರೇ ವಿಚಾರಗಳು                                                                                                                                                                                        

ಮುರಗೋಡದಲ್ಲಿ,  ಸುಧೀರ ಮಂಗಳವೇಢೆಯವರ ಮನೆಯಲ್ಲಿ ಸಿಕ್ಕ, ಮೂಲ ಪುರುಷ  ಮಾಣಿಕಭಟ್ಟ ಇವರ ಹೆಸರಿನಿಂದ ಪ್ರಾರಂಭವಾಗಿ, ನನ್ನ ತಂದೆ ರಂಗನಾಥ ಅವರ ಹೆಸರಿನ ವರೆಗೆ ದಾಖಲಿಸಲ್ಪಟ್ಟ ಆ ವಂಶಾವಳಿಯ ಕಾಗದ ನಮ್ಮ ಕೈಸೇರಿದ ನಂತರದ ಒಂದು ದಶಕಕ್ಕೂ ಮೀರಿದ ಈ ಕಾಲಾವಧಿಯಲ್ಲಿ ಮತ್ತೂ ಜೀರ್ಣ – ವಿದೀರ್ಣವಾಗಿ ಎರಡು ತುಂಡಾಗಿದೆ. ಛಿನ್ನ ಭಿನ್ನವಾದುದಷ್ಟೆ ಅಲ್ಲ, ಅಲ್ಲಲ್ಲಿ ಛಿದ್ರಗಳೂಕಾಣಿಸಿಕೊಂಡಿವೆ. ಆ ರಂಧ್ರಗಳು ಅಲ್ಲಿ ಮೊದಲಿದ್ದ ಅಕ್ಷರಗಳನ್ನು ಮಾಯಮಾಡಿವೆ. ಇನ್ನಷ್ಟು ಕಾಲ ಕಳೆದ ಮೇಲೆ ಅದರ ಸ್ಥಿತಿ ಗತಿ ಏನಾದೀತು, ಇನ್ನೂ ಏನೇನು ವಿಕೃತಿಗಳು ಸೃಷ್ಟಿಯಾದಾವು ಎಂಬ ಕಲವಳ ಹುಟ್ಟಿ, ಈಗ ಇನ್ನೂ ಓದಲು ಸಾಧ್ಯವಿರುವಾಗ, ವಂಶಾವಳಿಯಲ್ಲಿನ ಹೆಸರುಗಳ ಹೊರತಾಗಿಯೂ ಆ ಕಾಗದದ ಮೇಲೆ ಮತ್ತು ಹಿಂದೆಯೂ ಬರೆದಿಟ್ಟ ಇತರ ವಿಷಯಗಳನ್ನು ಪ್ರತ್ಯೇಕವಾಗಿ  ಬರೆದಿಡಬೇಕೆಂದು ತೋರಿ ೨೦೧೩ ರ ಡಿಸೆಂಬರ ೬ ರಂದು (ಶುಕ್ರವಾರ, ಮಾರ್ಗಶೀರ್ಷ ಶುದ್ಧ  ಚತುರ್ಥಿ) ಧಾರವಾಡದಲ್ಲಿ ಬರೆದಿಟ್ಟ ಕೆಲವು ಟಿಪ್ಪಣಿಗಳು.

೧. ವಂಶಾವಳಿಯನ್ನು ಬರೆದ ಇಡೀ ಕಾಗದ ೩೧.೫ ಇಂಚು ಅಗಲ ಮತ್ತು ೧೩ ಇಂಚು ಎತ್ತರದ  ಅಳತೆಯಲ್ಲಿದೆ. ಈ ಕಾಗದದ ನಟ್ಟನಡುವೆ ದೇವನಾಗರಿ ಲಿಪಿಯಲ್ಲಿ

ಮೂಲ ಪುರುಷ ಮಾಣಿಕಭಟ್ಟ

                                                                                                ಗೋತ್ರ ಕಾಸ್ಯಪ                                                                                                                                              

ಎಂದು ತಲೆಬರಹದ ತರಹ ಒಂದು ಚೌಕಟ್ಟಿನಲ್ಲಿ ಬರೆಯಲಾಗಿದೆ. ಇಡೀ ವಂಶಾವಳಿಯನ್ನು ಇದೇ ಲಿಪಿಯಲ್ಲಿ ಬರೆಯಲಾಗಿದೆ. ಏಳು ತಲೆಮಾರುಗಳ ದಾಖಲೆ ಇರುವ ಈ ತಖ್ತೆಯಲ್ಲಿ ಉಲ್ಲೇಖಗೊಂಡಿರುವ ಹೆಸರುಗಳಲ್ಲಿ ಬಹುಶಃ ಕೊನೆಯದು ನನ್ನ ತಂದೆಯದು. ಏಕೆಂದರೆ ಅವರು ಹುಟ್ಟಿದ್ದು ೧೯೦೪ರ ಕೊನೆಯ ಭಾಗದಲ್ಲಿ, ಮತ್ತು ಹಾಯಕೋರ್ಟಿನಲ್ಲಿ ಸಲ್ಲಿಸಲು ಸಿದ್ಧಪಡಿಸಿದ ಈ ಕಾಗದ ಬರೆಯಲ್ಪಟ್ಟಿದ್ದು ೧೯೦೫ ರ ಕೊನೆಯ ಭಾಗದಲ್ಲಿ.

೨. ಕೆಲವು ಕಡೆ ಹೆಸರುಗಳನ್ನು, ಆ ವ್ಯಕ್ತಿಗಳನ್ನು ಕರೆಯುತ್ತಿದ್ದ ರೂಢಿಯ ರೂಪದಲ್ಲಿ ಬರೆಯಲಾಗಿದೆಯೆ ಹೊರತಾಗಿ, ಶುದ್ಧರೂಪದಲ್ಲಿ  ಅಲ್ಲ. ಉದಾಹರಣೆಗೆ : ರಾಮಾಚಾರ್ಯ, ಗುರಾಚಾರ್ಯ ಎಂದು ಬರೆಯದೆ ರಾಮಾಚಾರಿ, ಗುರಾಚಾರಿ ಎಂದು ಬರೆಯಲಾಗಿದೆ.

೩.  ಅದರ ಎಡಗಡೆ ಮೂರು ಸಾಲುಗಳಲ್ಲಿ ಹಾಯಕೋರ್ಟಿನಲ್ಲಿ ಹಾಜರಾದ  ತಾರೀಖು – ೨೩/ ೧೨/ ೧೯೦೫ ಇಶ್ವಿ (ಎಂದು ಕನ್ನಡದಲ್ಲಿ) ರಂಗಾಚಾರ್ಯ ಶೇಷಾಚಾರ್ಯ ಮಂಗಳವೇಡಿ ಮುರಗೋಡ (ಎಂದು ದೇವನಾಗರಿಯಲ್ಲಿ) ಬರೆಯಲಾಗಿದೆ. ಈ ಕೈಬರೆಹ ವಂಶಾವಳಿಯನ್ನು ಬರೆದಾತನದಲ್ಲ. ನಂತರ ನೆನಪಿಗಾಗಿ (ಬಹುಶಃ  ರಂಗಾಚಾರ್ಯರಿಂದ) ಬರೆದಿಟ್ಟದ್ದು.

೪.  ಈ ಮೂರು ಸಾಲುಗಳ ಪಕ್ಕದಲ್ಲಿ, ಅಂದರೆ ಮೂಲ ಪುರುಷ ….. ಎಂಬ ಚೌಕಟ್ಟಿನ ಎಡಗಡೆ, ಈ ಚಾರ್ಟನ್ನು ಬರೆದ ಲಿಪಿಕಾರನ ಕೈಬರೆಹದಲ್ಲಿಯೆ, ದೇವನಾಗರಿಯಲ್ಲಿ ಮೂಲಪುರುಷ ಮಾಣಿಕಭಟ್ಟ ಮಂಗಳವೇಢೆಕರ ಇವರ ವಂಶಾವಳಿ ಎಂದು ಒಂದು ಸಾಲು ಇದ್ದು, ಅದರ ಮುಂದೆ ಜೋಯಿಸ ಎಂಬ (ದೇವನಾಗರಿಯಲ್ಲಿಯೆ ಬರೆದ) ಶಬ್ದವನ್ನು ನಂತರ ಸೇರಿಸಲಾಗಿದೆ, ಬೇರೆ ಕೈಬರೆಹ ಮತ್ತು ಬೇರೆ ಲೇಖನಿಯಿಂದ.

೫.   ಮೇಲೆ ಹೇಳಿದ ಆ ಸಾಲಿನ ಕೆಳಗೆ (ದೇವನಾಗರಿಯಲ್ಲಿಯೆ ಬರೆದ) ಶಕೆ ೧೬೮೫  (ನಂತರ ಕೆಂಪು ಮಸಿಯಲ್ಲಿ) ಚಿತ್ರಭಾನು ಸಂವತ್ಸರ ಫಲಗುಣ ವದ್ಯ ತ್ರಯೋದಶಿ ಮಂದವಾಸರೆ ಎಂದು ಒಂದೆ ಸಾಲಿನಲ್ಲಿ ಬರೆಯಲಾಗಿದೆ.

೬.   ಮೂಲಪುರುಷ…… ಎಂದು ಬರೆಯಲಾದ ಚೌಕಟ್ಟಿನ ಬಲಬದಿಯಲ್ಲಿ, ನಂತರ ದೇವನಾಗರಿಲಿಪಿಯಲ್ಲಿಯೆ, ಆದರೆ ಕನ್ನದ ಭಾಷೆಯಲ್ಲಿ ಬರೆಯಲಾದ ಬೇರೊಂದು ಟಿಪ್ಪಣಿ ;  ಮೂಲಪುರುಷರಿಗೆ ಎರಡೂ ಬಾಜೂಗಳಿಂದ ಹತ್ತು ತಲೆಗಳ ಅಂತ ಬೆಟಗೇರಿ ಕೃಷ್ಣ ಶಾ. ಗಳು ಹೇಳಿರುತ್ತಾರೆ (ಎಂದು ಒಂದು ಸಾಲು), ಮತ್ತು ಅದರ ಕೆಳಗಡೆ (ಕಾಗದದ ಬಲಭಾಗದ ಕೊನೆ ಭಾಗದಲ್ಲಿ) ದ// ರಂಗಾಚಾರ್ಯ ಶೇಷಾಚಾರ್ಯ ಮಂಗಳವೇಡೀ ದ// ಸ್ತೂರ ಎಂದು ಬರೆಯಲಾಗಿದೆ.

೭. ಕನ್ನಡ ಭಾಷೆಯ ಈ ಕಾಗದ,  ದೇವನಾಗರಿ ಲಿಪಿಯಲ್ಲಿ ಕಪ್ಪು ಮಸಿಯಿಂದ ಲಿಖಿತವಾಗಿದೆ. ಲಿಪಿಕಾರ ಒಳ್ಳೆ ಕೈಬರೆಹವಿದ್ದವನು ಅಥವಾ ಚಿತ್ರಕಾರನಿದ್ದಿರಬಹುದು. ನಮಗೆ ಸಿಕ್ಕಿರುವದು ಮೂಲ ಪ್ರತಿಯೇನಲ್ಲ. ಅದರ ನಕಲು ಪ್ರತಿ, ಅದರ ಮೇಲೆ, ಮೂಲದಲ್ಲಿ ಲಿಖಿತಗೊಂಡ ವಂಶಾವಳಿಯಲ್ಲಿನ ಪ್ರತಿ ತಲೆಮಾರಿನ ಹೆಸರುಗಳಲ್ಲದೆ,  ತಮ್ಮ ನೆನಪಿಗಾಗಿ ರಂಗಾಚಾರ್ಯ ಶೇಷಾಚಾರ್ಯ ಮಂಗಳವೇಡಿಯವರೂ, ಅವರ ನಂತರದವರೂ.  ಆಮೇಲೆ ಅಲ್ಲಲ್ಲಿ, ಬೇರೆ ಬೇರೆ ಮಸಿಯಲ್ಲಿ, ಬರೆದಿಟ್ಟ ಚಿಕ್ಕ ಚಿಕ್ಕ ಟಿಪ್ಪಣಿ, ಮಾಹಿತಿಗಳೂ ಇವೆ.

೮. ನಂತರದ ವರ್ಷಗಳಲ್ಲಿ ಸೇರಿದ ಹೊಸ ಹೆಸರುಗಳಲ್ಲಿ ಬಹುಶಃ ಮೊದಲನೆಯದು – ನನ್ನ ಕಕ್ಕ ಗೋವಿಂದಣ್ಣ ಅವರದು, ಏಕೆಂದರೆ ಅವರು ಹುಟ್ಟಿದ್ದು ೧೯೦೬ ರಲ್ಲಿ. ಬೇರೊಂದು ಕೈಬರೆಹದಲ್ಲಿ ಆ ಹೆಸರೂ ಈ ಕಾಗದದಲ್ಲಿ ಬರೆದಿದ್ದು ಇದೆ.

೯. ಈ ಕಾಗದದ ಹಿಂಬದಿಯಲ್ಲಿ ಮತ್ತೆ ದೇವನಾಗರಿಯಲ್ಲಿ ಮೂಲ ಪುರುಷ ಮಾಣಿಕಭಟ್ಟ ಮಂಗಳವೇಡಿ ಎಂದು ಬರೆದಿದ್ದು ಇದೆ. ನಂತರ ನಡುವೆ ಕನ್ನಡದಲ್ಲಿ, ದೊಡ್ಡ ಅಕ್ಷರದಲ್ಲಿ ವಂಶಾವಳಿ ಎಂದು ಬರೆಯಲಾಗಿದೆ. ಅದರ ಕೆಳಗೆ ಬೇರೊಂದು ವಿಷಯದ ಟಿಪ್ಪಣಿ ಇದ್ದು, ಅದರ ವಿವರ :  ದೇವನಾಗರಿಯಲ್ಲಿ ಬರೆದ ಸಾಲು -ದಾಮೂಆಚಾರ್ಯ ಶೇತು ಆಚಾರ್ಯ ಮಂಗಳವೇಡಿ ಮುರಗೋಡ ಎಂಬ ಹೆಸರಿದೆ. ನಂತರದ ಸಾಲು – ಧರ್ಮಶಾಸ್ತ್ರದ ಪ್ರಕಾರ ಎರಡೂ ಕಡೆಗೆ ಏಳು ಏಳು ತಲೆಗಳಾದ ನಂತರ ಎಂಟನೇ ತಲೆಗೆ ಎಂದೂ, ಅದರ ನಂತರದ ಸಾಲಿನಲ್ಲಿ – ಹೋಮ ಹವನಾದಿಗಳನ್ನು ಮಾಡಿ ವಿದ್ವಾನ್ ಬ್ರಾಹ್ಮಣರನ್ನು ಕೇಳಿ ವಂಶಚ್ಛೇದನ ಮಾಡು ಅಂತ ಆಙ್ಞೆ ಆ (ದರೆ), ಮುಂದಿನ ಸಾಲಿನಲ್ಲಿ -ಮಾಡಬೇಕೇ ಹೊರ್ತು ಹಾಗೆ ಮಾಡಬಾರದು. ಇದೇ ಪ್ರಕಾರವಾಗಿ ಧರ್ಮಶಾಸ್ತ್ರ ಹೇಳತದೆ, ಎಂದು ಇದೆ. ಅದರ ಕೆಳಗೆ ಸ್ವಲ್ಪ ಅಂತರದಲ್ಲಿ ಮತ್ತೊಂದು ಸಾಲು – ರಾಮಾಚಾರ್ಯ ಅನಂತಾಚಾರ್ಯ ಮಂಗಳವೇಡಿ ಇವರು ಶೇತುವರದಾಚಾರ್ಯರ ಹೆಂಡತಿ ಧಾರವಾಡದಲ್ಲಿ ಎಂಬ ಅಪೂರ್ಣ ವಾಕ್ಯ ಇದೆ. ನಂತರದ ಸಾಲು -ಹುಬ್ಬಳ್ಳಿ ಬಂಡಾಚಾರ್ಯ ಪೂರ್ಣಾಚಾರ್ಯ ಡಂಬಳ ತೊ(ರವಿ) ಗಲ್ಲಿ ಭಾದ್ರಪದ ಶುದ್ಧ ಸಪ್ತಮಿ ಮಂಗಳವಾರ ಅನುರಾಧಾ ನಕ್ಷತ್ರದಲ್ಲಿ (–?), ಮುಂದಿನ ಸಾಲಿನಲ್ಲಿ – ೧// ತಾಸು ಹೊತ್ತು ಏರಿ ಸ್ವರ್ಗಸ್ಥರಾದರು. ಇವರ ಸೂತಕವನ್ನು ೩ ಮೂರು ದಿವ್ಸ ರಾಮಾಚಾರ್ಯ ಅನಂತಾಚಾರ್ಯ ಮಂಗ ಎಂಬ ಅಪೂರ್ಣ ಸಾಲು,  ಅದರ ನಂತರದ ಸಾಲಿನಲ್ಲಿ – ಳವೇಡಿ ಇವರು ಮಾಡಿದರು ಎಂದು ಬರೆಯಲಾಗಿದೆ. ಮತ್ತು ಆ ಸಾಲು ಮುಗಿದ ಮೇಲೆ, ಸಾಕಷ್ಟು ಅಂತರದ ಮೇಲೆ ಕೆಂಪು ಮಸಿಯಲ್ಲಿ ವಂಶಚ್ಛೇದನ ಮಾಡಿದ ಮಹಾಪುರುಷ ಇವನೇ ಎಂದು ಬರೆಯಲಾಗಿದ್ದು ಆ ವಾಕ್ಯದ ಕೆಳಗೆ, ನಡುವೆ ವೈಮನಸ್ಸಿನಿಂದಾ (ಎಂದಿದೆ). ಬರೆಯಲಾಗಿರುವ ಮತ್ತೊಂದು ವಿಷಯ – ರಾಮಾಚಾರ್ಯ –ಧಾರವಾಡದಲ್ಲಿ ಎಂಬ ವಾಕ್ಯದ ಮೇಲೆ ಪೆನ್ಸಿಲ್ಲಿನಿಂದ ಬರೆದ ತಾರೀಖು ಒಂದಿದೆ – ೨೨ / ೭ /೧೯೪೧ – ಎಂದು (ಆದರೆ ೧೯೪೧ ಎಂಬುದು ಸ್ಪಷ್ಟವಿಲ್ಲ).

ಪುಣೆಯಲ್ಲಿ ಬುಧವಾರ, ೨೩ ಮಾರ್ಚ ೨೦೧೬, ಮನ್ಮಥನಾಮ ಸಂವತ್ಸರ, ಫಾಲ್ಗುಣ ಶುದ್ಧ ಪೌರ್ಣಿಮಾ (ಹೋಳಿ ಹುಣ್ಣಿವೆ) ಯಂದು  ಕಂಪ್ಯೂಟರಿಗೆ ಹಾಕಿದ್ದು

ಗುರುವಾರ, ೨೪ಮಾರ್ಚ೨೦೧೬  (ಧೂಲೀವಂದನ ದಿನ)  ಹೊಸದಾಗಿ  ಸೇರಿಸಿದ ಮತ್ತೂ ಕೆಲ ಅಂಶಗಳು.

೧.  ಇದರಲ್ಲಿ ನಮೂದಾಗಿರುವ ವ್ಯಕ್ತಿಯ ಹೆಸರು, ವಿವಾದ,  ಮತ್ತು ಎರಡು ತಾರೀಖುಗಳ ಕುರಿತು  :   ಒಂದನೆಯದು – ಹಾಯಕೋರ್ಟಿನಲ್ಲಿ ಹಾಜರಾದ ತಾರೀಖು ೨೩/೧೨/೧೯೦೫ ಇಶ್ವಿ ಎಂಬುದು. ಅಂದು ಈ ಪ್ರಕರಣವನ್ನು ಉಚ್ಚ ನ್ಯಾಯಾಲಯಕ್ಕೆ ರಂಗಾಚಾರ್ಯ ಶೇಷಾಚಾರ್ಯ ಮಂಗಳವೇಡಿ ಅವರು ಫಿರ್ಯಾದಿಯಾಗಿ  (complainant ಆಗಿ) ಒಯ್ದಿದ್ದರೊ ಅಥವಾ ಪ್ರತಿವಾದಿಯಾಗಿ (respondent ಆಗಿ) ಹೋಗಿದ್ದರೊ, ಆ ವಿಷಯ ತಿಳಿಯದು. ಹಾಗೆಯೆ, ಮೇಲೆ ಹೇಳಿದ ಆ ದಿನ, ಅವರು ಹಾಜರಾದ ದಿನಾಂಕವನ್ನು ತಿಳಿಸುತ್ತದೆಯೊ ಅಥವಾ ಈ ವಂಶಾವಳಿಯ ದಾಖಲೆಯನ್ನು  ಹಾಜರು ಮಾಡಿದ ದಿನಾಂಕವನ್ನು ಸೂಚಿಸುತ್ತದೆಯೊ ಎಂಬುದೂ ಅಸ್ಪಷ್ಟವಾಗಿದೆ. ಅದರಂತೆಯೆ, ಯಾವ ವಿಷಯ ಈ ವಿವಾದಕ್ಕೆ ಕಾರಣವಾಗಿ ಕೋರ್ಟಿನ ಮೆಟ್ಟಲೇರಿತು ಎಂಬುದೂ ಉಲ್ಲೇಖವಾಗಿಲ್ಲ.

. ಎರಡನೆ ತಾರೀಖು, ಅಲ್ಲಿ ಉಲ್ಲೇಖಗೊಂಡ ಮತ್ತೊಂದು ಮಹತ್ವದ ದಿನಾಂಕವನ್ನು ಸೂಚಿಸುವ ಮೂಲ ಪುರುಷ ಮಾಣಿಕಭಟ್ಟ ಮುರಗೋಡಕ್ಕೆ ಬಂದ ಮಿತಿ  – ಶಕೆ ೧೬೮೫, ಚಿತ್ರಭಾನು ಸಂವತ್ಸರ, ಫಲಗುಣ ವದ್ಯ ತ್ರಯೋದಶಿ ಮಂದವಾಸರೆ – ಎಂಬುದರ ಬಗ್ಗೆ. ಈ ಕುರಿತು ಸ್ವಲ್ಪ ವಿಚಾರ ಮಾಡಿದರೆ, ಆ ಮಾಸ, ವಾರ, ತಿಥಿ ಇವೆಲ್ಲ ನಮ್ಮ ಮೂಲಪುರುಷ ಮುರಗೋಡಕ್ಕೆ ಬಂದ ಮಿತಿಯನ್ನು ನಿರ್ದೇಶಿಸುತ್ತವೆ ಎಂದು ಹಾಗೆ ಹೇಳಲಾಗಿದ್ದರೂ, ಹಾಗೆ ಒಬ್ಬ ವ್ಯಕ್ತಿ,  ತನ್ನ ಮೂಲ ಸ್ಥಳದಿಂದ ವಲಸೆ ಹೊರಟು ಭವಿಷ್ಯದಲ್ಲಿ ತನ್ನ ವಾಸಸ್ಥಳ ವಾಗಲಿರುವ  ಊರನ್ನು ತಲುಪಿದಾಗ, ಆ ದಿನವನ್ನು ಮುಂದೆ ಅನೇಕ ಕಾಲ ನೆನಪಿಟ್ಟಿರ ಬಹುದಾದರೂ, ಈ ದಿನಾಂಕ ಆ ವ್ಯಕ್ತಿ ಮುರಗೋಡಕ್ಕೆ ಆಗಮಿಸಿದ ದಿನವನ್ನು ಸೂಚಿಸುತ್ತಿರಲಾರದು ಎಂದು ಹೇಳಲು, ಬೇರೊಂದು ದಾಖಲೆ ಆಧಾರವಾಗಿದೆ.

ಅದು ಒಂದು ದಾನ ಪತ್ರ. ದೇವನಾಗರಿಯಲ್ಲಿ ಮತ್ತು ಮರಾಠಿಯಲ್ಲಿ ದುಂಡಾಗಿ- ದೊಡ್ದದಾಗಿ  ಬರೆದ ಪ್ರಾರಂಭದ ಒಂಬತ್ತು ಸಾಲುಗಳಲ್ಲಿ ಇದೇ ದಿನಾಂಕ – ಸ್ವಸ್ತಿ ಶ್ರೀ ಜಯಾಭ್ಯುದಯ ಶ್ರೀ ಮನ್ನೃಪ ಶಾಲಿವಾಹನ ಶಕೆ ೧೬೮೪ ಚಿತ್ರ ಭಾನು ಸಂವತ್ಸರೆ ಫಾಲಗುಣ ವದಿ ತ್ರಯೋದಶಿ ಮಂದವಾಸರೆ – ಎಂದು ಆ ದಾನಪತ್ರವನ್ನು ಮಾಡಿಕೊಟ್ಟ ದಿನದ ವಿವರ ಇದೆ. ಆದರೆ ಈ ಭೂದಾನವನ್ನು ಪ್ರತಿಗ್ರಹಿಸಿದ  ವ್ಯಕ್ತಿ “ವೇದಶಾಸ್ತ್ರ ಸಂಪನ್ನ ರಾಜಮಾನ್ಯ ರಾಜಶ್ರೀ ಗೋವಿಂದಭಟ ಪಿತಾ ಮಾಣಿಕಭಟ ಗೋತ್ರ  ಕಾಸ್ಯಪ ಸೂತ್ರ ಅಸ್ವಲಾಯನ ಜೋತಿಸಿ ಮಂಗಳವೇಢೆ ಸಾಂಪ್ರತ ವಾಸ್ತವ್ಯ ಮುರಗೋಡ ಸ್ವಾಮಿ”.

ವಂಶಾವಳಿ ದಾಖಲೆ ಮತ್ತು ಈ ಭೂದಾನ ಪತ್ರ ಇವೆರಡರಲ್ಲಿಯೂ ನಮೂದಾಗಿರುವ ಸಂವತ್ಸರ, ಮಾಸ, ಪಕ್ಷ, ತಿಥಿ, ವಾರ ಒಂದೇ ಆಗಿವೆ. ಆದರೆ  ಉಪೆಕ್ಷಿಸಬಹುದಾದ ಒಂದು ಚಿಕ್ಕ ತಪ್ಪು, ವಂಶಾವಳಿ ದಾಖಲೆಯ ನಕಲು  ಕಾಗದದ ಮೇಲೆ ಲಿಖಿತವಾಗಿದೆ, ಶಕೆ ೧೮೬೫ ಎಂದು. ಆ ಆವರ್ತದ ಚಿತ್ರಭಾನು ಸಂವತ್ಸರ ಬಂದದ್ದು ಶಾಲಿವಾಹನ ಶಕೆಯ ೧೮೬೪ನೆ ವರ್ಷದಲ್ಲಿ. ಬಹುಶಃ ಮೂಲ ಕಾಗದದ ಮೇಲೆ ಇದನ್ನು ಬರೆಯ ಬೇಕಾದ ಅಗತ್ಯ ಇರಲಿಲ್ಲ, ಮತ್ತು ಬರೆದಿರಲಿಕ್ಕೂ ಇಲ್ಲ ಎನಿಸುತ್ತದೆ. ಆಮೇಲೆ, ಯಾರೋ ಈ ಮಾಹಿತಿಯೂ ಇರಲಿ ಎಂದು ಮೂಲ ದಾಖಲೆಯ ನಕಲು ಪ್ರತಿಯಲ್ಲಿ ಸೇರಿಸಿರಬೇಕು.

ಈ ದಾನ ಮಾಣಿಕಭಟ್ಟರಿಗೆ ಮಾಡಿದುದಲ್ಲ. ಅವರ ದ್ವಿತೀಯ ಪುತ್ರ ಗೋವಿಂದಭಟ್ಟರು ದಾನವನ್ನು ಪ್ರತಿಗ್ರಹ ಮಾಡಿದವರು. ಅಷ್ಟು ಹೊತ್ತಿಗೆ ಅವರು ಆ ಯೋಗ್ಯತೆಯನ್ನು ಸಂಪಾದಿಸಿದವರೂ, ಆ ಪ್ರೌಢತ್ವವನ್ನು ಹೊಂದಿದವರೂ ಆಗಿರಲೇಬೇಕು. ಜೊತೆಗೇ ದಾನ ಮಾಡಿದ ವ್ಯಕ್ತಿಗೆ ಅವರ ಪಾತ್ರತೆಯ ಬಗ್ಗೆ ಪೂರ್ಣ ಪರಿಚಯವೂ ಇದ್ದಿರಲೇಬೇಕು. ಈ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ, ಶಕೆ ೧೮೬೪ ರಲ್ಲಿ ಗೋವಿಂದಭಟ್ಟರು ಮುರಗೋಡದಲ್ಲಿ ಚೆನ್ನಾಗಿ ಬೇರೂರಿದವರಾಗಿರ ಬೇಕು. ಹೊರತಾಗಿ ಆ ನಿರ್ದಿಷ್ಟ ದಿವಸವೇ ತಮ್ಮ ತಂದೆ ಮಾಣಿಕಭಟ್ಟರ ಜೊತೆಗೆ ಆ ಊರಿಗೆ ಬಂದವರಾಗಿರಲಿಕ್ಕಿಲ್ಲ ಎಂಬುದು ನಿಶ್ಚಿತ, ತರ್ಕ ಸಮ್ಮತ ಎಂದು ತೋರುತ್ತದೆ. ಈ ಒಕ್ಕಣೆಯ ತಾತ್ಪರ್ಯ ಇಷ್ಟೆ : ಆ ದಿನಾಂಕ ಸೂಚಕ ವಿವರಗಳೆಲ್ಲ ಭೂದಾನದ ಘಟನೆಗೆ ಸಂಬಂಧಿಸಿದ್ದವೆ ಹೊರತಾಗಿ ನಮ್ಮ ಮನೆತನದ ಮೂಲಪುರುಷ ಮುರಗೋಡಿಗೆ ಬಂದ ಮಿತಿಯ ನಿರ್ದೇಶ ಮಾಡುವಂತಹದಲ್ಲ.

೩. ವಂಶಾವಳಿ ದಾಖಲೆಯ ನಕಲು ಪ್ರತಿಯಲ್ಲಿ ಆ ನಂತರ ಸೇರಿಸಲಾದ ಬೇರೆ ಮಾಹಿತಿಯ ಟಿಪ್ಪಣಿಗಳಲ್ಲಿ ಮೂರು ಹೆಸರು ಪ್ರಮುಖವಾಗಿವೆ. ಒಂದನೆಯದು – ರಂಗಾಚಾರ್ಯ ಶೇಷಾಚಾರ್ಯ ಮಂಗಳವೇಡಿ ಮುರಗೋಡ ಎಂಬುದು. ಅವರ ಹೆಸರು ಹಾಯಕೋರ್ಟಿಗೆ ಹಾಜರಾದ ತಾರೀಖು ….ಎಂಬ ಸಾಲಿನ ಕೆಳಗಡೆ ಬರೆಯಲಾಗಿದೆ, ಬಹುಶಃ ಅವರದೆ ಕೈಬರಹದಲ್ಲಿ. ಇದೇ ಹೆಸರು ಮತ್ತೊಂದೆಡೆ, ಬೆಟಗೇರಿ ಕೃಷ್ಣ ಶಾಸ್ತ್ರಿಗಳ ಹೇಳಿಕೆಯ ವಿವರ ಇರುವ ವಾಕ್ಯದ ಕೆಳಗಡೆ, ದ|| ರಂಗಾಚಾರ್ಯ ಶೇಷಾಚಾರ್ಯ ಮಂಗಳವೇಡಿ ದ||  ಸ್ತೂರ ಎಂದು ಇದೆ. ಕೋರ್ಟ ಕಟ್ಟೆಯನ್ನೇರಿದ ಒಂದು ವ್ಯಾಜ್ಯಕ್ಕೆ ಸಂಬಂಧಿಸಿದ ಹಾಗೆ ಈ ರಂಗಾಚಾರ್ಯರ ಹೆಸರು ಬಂದಂತಿದೆ.

ಇವರು ಮಾಣಿಕಭಟ್ಟರ ಎರಡನೆ ಮಗ ಗೋವಿಂದಭಟ್ಟರಿಂದ ಬೆಳೆದ – ಎರಡನೆ ಟಿಸಿಲಿನಲ್ಲಿ- ೭ನೆ ತಲೆಮಾರಿನಲ್ಲಿ ಹುಟ್ಟಿದ ವ್ಯಕ್ತಿ. ನಾನು ಈ ಟಿಸಿಲನ್ನು ದಾಮೂ ಆಚಾರ್ಯರ ಟಿಸಿಲೆಂದೂ ಕೆಲವು ಕಡೆ ಗುರುತಿಸಿದ್ದೇನೆ. ದಾಮೂ ಆಚಾರ್ಯರೆಂದರೆ ಈ ಕಾಗದಗಳೆಲ್ಲ ಸಿಕ್ಕ ಮನೆಯ ಮಾಲಿಕರು. ಅವರ ಕೊನೆಯ ಮಗ ಸುಧೀರ ಅವರು ನನ್ನನ್ನು ಮುರಗೋಡದ ಆ ಮನೆಗೆ ಕರೆದೊಯ್ದಿದ್ದರು ಮತ್ತು ಅಲ್ಲಿ ಈ ಕಾಗದ, ದಾಖಲೆಗಳು ಸಿಕ್ಕ ವಿಷಯವನ್ನು ಆಗಲೆ ಹೇಳಿದ್ದೇನೆ. ದಾಮೂಆಚಾರ್ಯರ ಅಣ್ಣ ರಂಗಾಚಾರ್ಯರು (ಬಹುಶಃ ೧೮೬೩ – ೬೫ ರಲ್ಲಿ ಹುಟ್ಟಿದವರಿರಬೇಕು). ಹೀಗಾಗಿ, ಮೇಲೆ ಉಲ್ಲೇಖಗೊಂಡಿರುವ ಆ ದಾಖಲೆಗಳಲ್ಲಿ, ಆ ಟಿಸಿಲಿನ ಜನರನ್ನೇ ಕುರಿತಾದವು ಸಾಕಷ್ಟು ಮಾಹಿತಿ ಇದೆ. ರಂಗಾಚಾರ್ಯರು ಜ್ಯೋತಿಷ್ಯ ಬಲ್ಲವರಾಗಿದ್ದರು. ಹಿರಿಯರ ಕಾಲದಿಂದಲೂ ಮುರಗೋಡದಲ್ಲಿ ನಡೆಸಿಕೊಂಡು ಬಂದಿದ್ದ ಸಂಸ್ಕೃತ ಪಾಠಶಾಲೆಯನ್ನು ಇವರೂ ನೋಡಿಕೊಳ್ಳುತ್ತಿದ್ದರು. ಗಂಡು ಮಕ್ಕಳಿರಲಿಲ್ಲ. ಇದ್ದ ಒಬ್ಬ ಮಗಳನ್ನು (ಹೆಸರು?) ಧಾರವಾಡದ ಜೋಶಿ ಮನೆತನಕ್ಕೆ ಕೊಟ್ಟಿದ್ದರು. ಅವಳ ಹೊಟ್ಟೆಯಿಂದ ರಾಮ ಮತ್ತು ಲಕ್ಷ್ಮಣ ಎಂಬ ಇಬ್ಬರು ಮಕ್ಕಳಿದ್ದರು. ರಾಮ ಧಾರವಾಡದಲ್ಲಿ ಪಿ.ದಬ್ಲು.ಡಿ ಯಲ್ಲಿ ಸೀನಿಯರ ಡ್ರಾಫ಼್ಟ್ಸಮನ್ ಎಂದು ಕೆಲಸ ಮಾಡುತ್ತಿದ್ದರು. ಅವರ ಬಗೆಗಿನ ಇತ್ತೀಚಿನ ಮಾಹಿತಿ ಇಲ್ಲ. (ಇದು ಸುಧೀರ ಅವರು ೧೯೯೩ ರಲ್ಲಿ ಕೊಟ್ಟ ಮಾಹಿತಿ). ಲಕ್ಷ್ಮಣ ಎನ್ನುವವರು ಆಕಾಶವಾಣಿ, ದಿಲ್ಲಿಯಲ್ಲಿ ನ್ಯೂಸ ರೀಡರ ಆಗಿದ್ದರು ಮತ್ತು ಅಲ್ಲಿರುವಾಗಲೆ ೧೯೬೩ ರಲ್ಲಿ ಅಪಘಾತವೊಂದರಲ್ಲಿ ತೀರಿಕೊಂಡರು.

ಎರಡನೆ ಹೆಸರು ದಾಮೂ ಆಚಾರ್ಯರದು (೧೮೮೫ ?- ೧೯೬೧). ಸುಧೀರ ಅವರ ತಂದೆ. ಕೊನೆ ಕೊನೆಯ ದಿನಗಳಲ್ಲಿ ಬೆಳಗಾವಿಯಲ್ಲಿಯೂ ಇದ್ದರು. ಮಿರಜದಲ್ಲಿ ತೀರಿಕೊಂಡರು. ವಂಶಾವಳಿಯ ಬೆನ್ನುಕಾಗದದ ಮೇಲೆ ಇವರು ಬರೆದಿಟ್ಟ ಧರ್ಮಶಾಸ್ತ್ರದ ಪ್ರಕಾರ ವಂಶಚ್ಛೇದನವನ್ನು ಯಾವಾಗ ಮತ್ತು ಹೇಗೆ ಮಾಡಬೇಕು ಎಂಬ ಕುರಿತು ಟಿಪ್ಪಣಿ ಇದೆ. ಅದರಲ್ಲಿ ರಾಮಾಚಾರ್ಯ ಅನಂತಾಚಾರ್ಯ ಮಂಗಳವೇಡಿ ಇವರು ಶೇತುವರದಾಚಾರ್ಯರ ಹೆಂಡತಿ ಧಾರವಾಡದಲ್ಲಿ ತೀರಿಕೊಂಡಾಗ, ಮೂರು ದಿವಸ ಸೂತಕಮಾಡಿದ್ದನ್ನೂ ಹೇಳಿ, ವಂಶಚ್ಛೇದನವನ್ನೂ ಮಾಡಿದರು, ವೈಮನಸ್ಸಿನಿಂದಾ, ೧೯೪೧ (?) ರಲ್ಲಿ ಎಂದೂ ಸೇರಿಸಿದ್ದಾರೆ.

ಮೂರನೆಯ ಹೆಸರೇ ಮೇಲೆ ಉಲ್ಲೇಖಗೊಂಡಿರುವ ರಾಮಾಚಾರ್ಯರದು. ಇವರು ನನ್ನ ತಂದೆಯ ಜನಕ ತಂದೆ (ನನ್ನ ತಂದೆ ದತ್ತಕ ಹೋಗಿದ್ದರು). ಮುರಗೋಡದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಕೀರ್ತನಕಾರರೂ ಆಗಿದ್ದರು. ನನ್ನ ತಂದೆಗೆ ಬೆಳಗಾವಿಯಲ್ಲಿ ೧೯೩೦ರಲ್ಲಿ ಕೆಲಸವಾದ ನಂತರ, ಬೆಳಗಾವಿಗೆ ಬಂದು ನೆಲಸಿದರು. ೧೮೭೪ರ ಆಸುಪಾಸಿನಲ್ಲಿ  ಹುಟ್ಟಿದ್ದ ಇವರು ೧೯೪೨ ರಲ್ಲಿ ತೀರಿಕೊಂಡರು.

೪.  ಆ ಕಾಲದ- ಅಂದರೆ ೧೯೦೦ ನೆ ಇಸವಿಯ ಸಮೀಪದ ಹಿಂದುಮುಂದಿನ ಕಾಲದಲ್ಲಿ – ಆಗಿನ ನಮ್ಮ ಹಿರಿಯರ ಸ್ಮರಣೆಯಲ್ಲಿ, ಐದು ಆರು ತಲೆಮಾರು ಹಿಂದಿನ ತಮ್ಮ ಪೂರ್ವಿಕರ ಹೆಸರುಗಳು ಗೊತ್ತಿರಬಹುದಾದ ಸಾಧ್ಯತೆ, ಇಂದಿನಕ್ಕಿಂತ ಅಂದು ಹೆಚ್ಚು ಇದ್ದಿರಲು ಸಾಕು. ಅಷ್ಟೆ ಅಲ್ಲ ಮುರಗೋಡ, ಯಕ್ಕುಂಡಿ, ಕಿತ್ತೂರು, ಬೀಡಿ ಮೊದಲಾದ ಕಡೆಗಳಲ್ಲಿ ಚದುರಿ ಹೋದ ಮಂಗಳವೇಢೆ ಬಳಗವರ ಸಂಪರ್ಕವೇನೂ ಇಂದಿನಂತೆ ಕಡಿದು ಹೋಗಿರಲಿಕ್ಕೂ ಇಲ್ಲ. ಅಕಸ್ಮಾತ್ತಾಗಿ ಒಂದೆರಡು ಸಣ್ಣಪುಟ್ಟ ವಿವರಗಳು ಗೊತ್ತಿಲ್ಲದೇ ಇದ್ದರೂ, ಸ್ವಲ್ಪ ಪ್ರಯತ್ನದಿಂದ, ಅಲ್ಲಿ ಇಲ್ಲಿ ಅವರಿವರನ್ನು ಕೇಳಿ ತಿಳಿದು, ಒಂದು ಸಂಪೂರ್ಣ ಚಿತ್ರ ಕೊಡುವ ವಂಶಾವಳಿ ತಖ್ತೆಯನ್ನು ತಯಾರಿಸುವದು ಕಠಿಣವಾಗಿರಲಿಕ್ಕೂ ಇಲ್ಲ. ಆದರೆ ಆ ದಿನಗಳಲ್ಲಿ, ಅಂತಹದೊಂದು  ತಯಾರಾದ ತಖ್ತೆ ಮುರಗೋಡ ಮೂಲದ ಮಂಗಳವೇಢೆ ಜನರಲ್ಲಿ ಯಾರೊಬ್ಬರ ಕಡೆಗೆ ಇದ್ದಿತೆಂದು ಖಾತರಿಯಿಂದ ಹೇಳಲಾರೆ. ಅಂತೂ, ಇಸವಿ ಸನ್ ೧೯೦೫ ರಲ್ಲಿ ಅಂತಹ ತಖ್ತೆಯೊಂದು ಸಿದ್ಧಗೊಂಡಿತು.

ವಂಶಾವಳಿಯ ಈ ದಾಖಲೆ ಸಿದ್ಧಗೊಂಡ ಹಿನ್ನೆಲೆಯಲ್ಲಿ ನಾನು ಒಂದೆರಡು ವಿಶೇಷಗಳನ್ನು ಕಾಣುತ್ತಿದ್ದೇನೆ. ಒಂದು –  ಆಸ್ತಿ ಸಂಬಂಧದ ಯಾವುದೋ ಒಂದು ವ್ಯಾಜ್ಯ, ಶೇಷಾಚಾರ್ಯರ ಪುತ್ರ ರಂಗಾಚಾರ್ಯರನ್ನು  ಈ ಕೆಲಸ ಮಾಡಲು ಪ್ರೇರೇಪಿಸಿತು. ಸಿದ್ಧಗೊಂಡ ವಂಶಾವಳಿಯ ಆ ಚಿತ್ರ, ನಮ್ಮ ಹಿರಿಯರ ಪೈಕಿ ಇನ್ನೊಬ್ಬರನ್ನು,  ವೃದ್ಧಿ ಸೂತಕಗಳ ಸಂಬಂಧ ಎಲ್ಲಿಯವರೆಗೆ ಬೆನ್ನು ಹತ್ತಿ ಬರುತ್ತದೆ, ಅದಕ್ಕೆ ಪರಿಹಾರವೇನು  ಎಂದು ತಿಳಿಯಲು ಪ್ರಚೋದಿಸಿತು. ದಾಯಾದಿಗಳಲ್ಲಿ  ಜಗಳ,  ಇದು ಜಗದ ರೀತಿ ನೀತಿ. ಅವನು ವಂಶಚ್ಛೇದನೆ ಮಾಡಿದನಲ್ಲವೆ! ಅದು ಧರ್ಮಶಾಸ್ತ್ರದ ಉಲ್ಲಂಘನೆ, ವೈಮನಸ್ಸು, ಎಂಬ ಹಿಯ್ಯಾಳಿಕೆ, ಆರೋಪ., ಆಕ್ಷೇಪಣೆ ವ್ಯಕ್ತ ವಾದುದರಲ್ಲಿ ಆಶ್ಚರ್ಯವೇನು! ಒಮ್ಮೆ ಮನಸ್ಸು ಪೂರ್ವಗ್ರಹ ದೂಷಿತವಾದ ಮೇಲೆ ಮುಂದೆ ಅದು ಸಂಬಂಧಿಗಳ  ನೆಂಟಸ್ತನದ ಮೇಲೆ ಹೇಗೆ ಆಗಿರಬಹುದು ಎಂಬುದನ್ನು ಯಾರೂ ಊಹಿಸಬಹುದಾಗಿದೆ.

೧೯೦೫ರಲ್ಲಿ ಬರೆಯಲ್ಪಟ್ಟಿದ್ದ ವಂಶಾವಳಿಯ ಚಾರ್ಟ ಕುರಿತು:

ನಮ್ಮ ವಂಶಾವಳಿಯ ಆ ಚಾರ್ಟು ಸುಮಾರು ಹದಿನೈದೊ ಹದಿನೆಂಟೊ ವರ್ಷಗಳ ಹಿಂದೆ ನಮಗೆ ಸಿಕ್ಕಿದುದು, ಮುರಗೋಡದಲ್ಲಿ, ಸುಧೀರ ದಾಮೂಆಚಾರ್ಯ ಮಂಗಳವೇಢೆಯವರ ಮನೆಯಲ್ಲಿ. ೧೯೦೫ರಲ್ಲಿ (೨೩ ಡಿಸೆಂಬರದಂದು) ಸಿದ್ಧವಾದ ವಂಶಾವಳಿಯ ಈ ಪ್ರತಿ ಶೋಧವಾಗಿ ನಮ್ಮ ಕೈ ಸೇರಿ ಒಂದೂವರೆ ದಶಕದ ಕಾಲ ಆಗಿಹೋಗಿದೆ. ಈ ಅವಧಿಯಲ್ಲಿ ಹಲವಾರು ಸಲ ಅದನ್ನು ನೋಡಲು ಕೈಗೆತ್ತಿಕೊಂಡಿದ್ದಾಗಿದೆ. ಕನಿಷ್ಠ ನೂರಕ್ಕೂ ಹೆಚ್ಚುಸಲ. ಒಮ್ಮೆ ನೋಡಲೆಂದು, ಮತ್ತೊಮ್ಮೆ  ಟಿಪ್ಪಣಿಗಳನ್ನು ಬರೆದುಕೊಳ್ಳಲೆಂದು, ಇದೆಲ್ಲ ಅನಿವಾರ್ಯ. ಆ ಕಾಗದದ ಮಹತ್ವ- ಅದನ್ನು ಇನ್ನೂ ಹಲವು ಕಾಲ ಉಳಿಸಿಕೊಳ್ಳುವ ಅಗತ್ಯದ ಅರಿವು ಚೆನ್ನಾಗಿ ಇದ್ದಾಗಲೂ, ವಾಸ್ತವದಲ್ಲಿ ಅದೀಗ ಹಲವು ತುಂಡಾಗಿ, ಕೆಲವು ಹೆಸರುಗಳು ಅರ್ಧಮರ್ಧ ಅಳುಗಿ ಹೋದ ಅತಿ ನಾಜೂಕು ಸ್ಥಿತಿಯಲ್ಲಿದೆ.

ನೂರಾರು ಸಲ ಕೈಗೆತ್ತಿಕೊಂಡು ತೆಗೆದಿರಿಸುವ ಅನಿವಾರ್ಯತೆಯ ಕಾರಣದಿಂದಲ್ಲದೆ ಅದನ್ನಿಡುತ್ತಿದ್ದ ರೀತಿಯಿಂದಾಗಿಯೂ  ಸಾವಕಾಶವಾಗಿ ಅದು ಈಗ ಜಾಳಾಗಿ ಹೋಗಿದೆ. ಮುದ್ದೆಯಾಗಬಾರದೆಂದು ಹೆಚ್ಚಾಗಿ ಗಾದಿಯ ಕೆಳಗೆ ಇಟ್ಟು ಕಾಪಾಡಿಕೊಂಡು ಬಂದಿದ್ದೆ. ಆದರೂ, ಅವಸರದಲ್ಲಿ ಕೆಲ ಸಲ ಸುರುಳಿ ಮಾಡಿ, ಮತ್ತೆ ಕೆಲ ಸಲ ಒಂದೊ ಎರಡೊ ಮಡಿಕೆ ಮಾಡಿ ಇಟ್ಟದ್ದೂ ನಿಜ. ಆಗೆಲ್ಲ ತೋರಿಸಬೇಕಿದ್ದ ಅಪೇಕ್ಷಿತ ಕಾಳಜಿಯನ್ನು ಹಲವು ಸಲಆ ಮಟ್ಟದಲ್ಲಿ ತೋರಿಸದೆ ಹೋಗಿದ್ದೂ ನಿಜ. ಪರಿಣಾಮವಾಗಿ ಮಡಿಕೆ ಹಾಕಿದ ಭಾಗ ಕಟಗರಿಸ ತೊಡಗಿತು. ಕಾಗದದ ಮೇಲೆ ಮೂಡಿದ್ದ ಗೆರೆಯಗುಂಟ ಸಾವಕಾಶವಾಗಿ ಹರಿದು ತುಂಡಾಗತೊಡಗಿತ್ತು.

ನಾನು ಆ ಚಾರ್ಟನ್ನು ಶುರುವಿನಲ್ಲೆ ಲ್ಯಾಮಿನೆಶನ್ (lamination) ಮಾಡಿಸಿ, ವಾಸಾಂಸಿ ಜೀರ್ಣಾನಿ ಆಗಿದ್ದ ಅದಕ್ಕೆ ರಕ್ಷಣೆ ಕೊಡಬೇಕಿತ್ತು.

ಗೊತ್ತಿಲ್ಲದೆ ನನ್ನ ಕೈಯಿಂದ  ಇನ್ನೂ ಒಂದು ತಪ್ಪಾಗಿ ಹೋಯಿತು. ಉಪಾಯವೆಂದು ಮಾಡಹೋಗಿದ್ದು ಅಪಾಯವಾಯಿತು. ಅದರ ಮೇಲೆ ಮಸಿಯಿಂದ ಲಿಖಿತಗೊಂಡಿದ್ದ  ನನ್ನ ಪೂರ್ವಿಕರ ಹೆಸರುಗಳ, ಪ್ರತಿ ತಲೆಮಾರಿನ ಅಡ್ಡ ಸಾಲಿನಮೇಲೆ ಪಾರದರ್ಶಕವಾದ ಅಂಟು ಟೇಪನ್ನು ಹಚ್ಚಿ, ಮಡಿಕೆಯಿಂದ ಆ ಕಾಗದ ಹರಿದು ಹೋಗದಂತೆ ಉಳಿಸಿಕೊಳ್ಳಲು ಹೊರಟೆ. ಆ ಕಾಗದವನ್ನು ನಾನಿಟ್ಟಿದ್ದು ಅಟ್ಟದ ಮೇಲೆ. ಅದು ಮಂಗಳೂರು ಹಂಚಿನ ಮನೆ..   ನಿತ್ಯದ ಬಿಸಿಲ ಬೇಗೆ ಆ ಹಂಚುಗಳನ್ನು ಕಾಸಿ, ಕಾವನ್ನು ಕೋಣೆಯೊಳಗೆ ತೂರಿಸುತ್ತಿತ್ತು. ಅದರ ಪರಿಣಾಮ, ಕಾಗದಕ್ಕಂಟಿಸಿದ್ದ ಅಂಟು ಟೇಪು ಅಲ್ಲಲ್ಲಿ ಸಡಿಲಾದುದು.ಅದನ್ನು ಕಾಗದದಿಂದ ಪೂರ್ತಿಯಾಗಿ ಬಿಡಿಸಿಬಿಡೋಣ ಎಂದರೆ, ಬರೆದ ಹೆಸರುಗಳ ಮಸಿ ಅಂಶತ: ತುಂಡು ತುಂಡಾಗಿ ಟೇಪಿಗೆ ಆಂಟಿಕೊಂಡು ಕಾಗದದ ಮೇಲಿನ  ಮಸಿ ಮಸುಕಾಗಿ ಹೋಗಿದ್ದಿತು.  ಜೊತೆಗೇ ಆ ಟೇಪಿನ ಅಂಟಿನ ಕಲೆ –  ಮಸಿಯಿಂದ ಬರೆದ ಹೆಸರುಗಳನ್ನು ಆವರಿಸಿದ ಸುಮಾರು ಸೆಂಟಿಮೀಟರ ಎತ್ತರದ  ಹತ್ತು ಹದಿನೈದು ಅಡ್ಡಸಾಲುಗಳ ಕಲೆ – ವಂಶಾವಳಿಯ ಆ ಹಳೆಯ, ಮಹತ್ವದ ಕಾಗದವನ್ನು ವಿರೂಪಗೊಳಿಸಿತ್ತು.

ಇನ್ನು ಮುಂದೆ ಅಗತ್ಯವಾದಾಗಲೆಲ್ಲ ಆ ಮೂಲ ಕಾಗದವನ್ನು ಕೈಗೆ ತೆಗುದುಕೊಳ್ಳುವದು ಬೇಡ. ಬದಲಿಗೆ ಅದರ ಝೆರೊಕ್ಸ ( xerox ) ಪ್ರತಿಯನ್ನು ಬಳಸುವದೆಂದು ಕೊಂಡು ಅಂಗಡಿಗೆ ಹೋಗಿ ಪ್ರತಿಯನ್ನು ತೆಗೆಸಿದೆ. ಈಗ ಕಿತ್ತು ತೆಗೆದಿದ್ದರೂ,  ಟೇಪು  ಅಂಟಿಸಿದ್ದ  ಆ ಕಫ್ಫು ಕಲೆಯ ಅಡ್ಡ ಸಾಲುಗಳು ಬಿಳಿ ಕಾಗದದ ಮೇಲೆ ಪ್ರಧಾನವಾಗಿ ಮೂಡಿದ್ದವು. ಮೂಲ ಪ್ರತಿ ಒಂದು ರೀತಿಯಲ್ಲಿ ಹಾಳಾಗಿತ್ತು. ಝೆರೊಕ್ಸ ಪ್ರತಿ ಮತ್ತೊಂದು ರೀತಿಯಲ್ಲಿ. ಕಪ್ಪು ಕಲೆಯ ಅಡ್ಡ ಸಾಲುಗಳೆ ಎದ್ದು ಕಾಣಿಸುತ್ತಿದ್ದುದು ಒಂದು ನೋವು. ಲಿಖಿತಗೊಂಡಿದ್ದ ಹೆಸರುಗಳೆ ಕಾಣದಂತೆ ಮಾಯವಾಗಿದ್ದುದು ಮತ್ತೊಂದು.  ನಾ ಮಾಡಿದ ಕರ್ಮ ಒಟ್ಟಾರೆ ವಿಕಾರ ರೂಪದಾಳಿ ಇನ್ನೂ ವಿಕರಾಳವಾಗಿ ನಗುತ್ತ ನನ್ನನ್ನು ಅಣಕಿಸತೊಡಗಿತ್ತು.

ಮೂಲಕಾಗದ ಅನೇಕ ಕಡೆ ತುಂಡುತುಂಡಾಗಿ ಕಟಗರಿಸಿ ಹೋಗಿತ್ತಲ್ಲವೆ! ಅಂಟಿನಿಂದ ಜೋಡಿಸೋಣವೆಂದರೆ ಅದು ಹರಿದ ರೀತಿ ತೇಪೆಹಚ್ಚಲು ಬಾರದಂತಿತ್ತು. ಇದ್ದುದರಲ್ಲಿಯೆ ಸಮಾಧಾನದ ಸಂಗತಿಯೆಂದರೆ ಅದು ಸಿಕ್ಕ ಹೊಸತಿನಲ್ಲಿ, ಅದರ ದೇಹದಾರ್ಢ್ಯ ಅಷ್ಟಾಗಿ ಇನ್ನೂ  ಕಳೆದುಹೋಗದೆ ಇದ್ದಾಗ – ಅದರಲ್ಲಿನ ಮಾಹಿತಿ, ಆ ಹೆಸರುಗಳು, ಆ ಸಾಲುಗಳು ಓದಲು ಬರುವಂತೆ ಇದ್ದಾಗ, ವಂಶಾವಳಿಯಲ್ಲಿದ್ದ ವ್ಯಕ್ತಿಗಳ ನಾಮಧೇಯವನ್ನು ತಲೆಮಾರಿನ ಪ್ರಕಾರ ಬೇರೊಂದು ಕಡೆ ಬರೆದಿಟ್ಟುಕೊಂಡಿದ್ದೆ. ಮೂಲ ಕಾಗದದಲ್ಲೀಗ ಕೆಲ ಸ್ಥಳಗಳಲ್ಲಿ ಆ ಹೆಸರುಗಳು ಓದಲು ಬಾರದಂತೆ ಮಸುಕಾಗಿವೆ. ಇಲ್ಲವೆ ತುಂಡು ತುಂಡಾಗಿಯೊ, ಇಲ್ಲ ತೂತು ಬಿದ್ದು ಕೆಲ ಅಕ್ಷರಗಳೆ  ಮಾಯವಗಿವೆ. ರಾಮಾಚಾರ್ಯರೊ, ಶ್ಯಾಮಾಚಾರ್ಯರೊ, ಭೀಮಾಚಾರ್ಯರೊ ಎಂದು ಸಂದೇಹ ಹುಟ್ಟಿಸುವಂತಿವೆ.

ಈಗ ಮನೆತನದ ಇತಿಹಾಸದ ಕುರಿತು ಸಾಕಷ್ಟು ಮಾಹಿತಿ ಸಂಗ್ರಹವಾಗಿದೆ. ಅದನ್ನು ಆಧರಿಸಿ ಬರೆಯ ಬೇಕಿರುವ, ನನ್ನ ಮನಸ್ಸಿನಲ್ಲಿ ರೂಪುಗೊಂಡಿರುವ ಆ ಪುಸ್ತಕದ ರಚನೆ ಇನ್ನೂ ತಡವಾಗುತ್ತಹೋದರೆ, ಕೊನೆಗೆ ಆ  ಪುಸ್ತಕವೆ ಹೊರಬರಲಿಕ್ಕಿಲ್ಲವೆಂಬ ಆತಂಕ ಆಗಾಗ ಕಾಡುತ್ತಿದೆ.

ಆದರೂ ಕಲೆಹಾಕಿದ ಮಾಹಿತಿಯ ತಥ್ಯದ ಬಗ್ಗೆ ನನ್ನ ಮನಕ್ಕೆ ಒಮ್ಮೆ ಖಾತರಿ ಮಾಡಿಕೊಳ್ಳಬೇಕಲ್ಲವೆ! ವಂಶಾವಳಿಯ ನಕಲನ್ನು ಸಾದರಪಡಿಸುವಾಗ, ಅದರಲ್ಲಿ ದೊಡ್ಡ ತಪ್ಪುಗಳೇನೂ ಆಗಿರದ ಬಗ್ಗೆ, ಎಚ್ಚರಿಕೆಯಿಂದ ಮತ್ತೆ ಮತ್ತೆ ಮರುಪರಿಶೀಲನೆ ಮಾಡಬೇಕಿದೆ.

ನಾನು ಬೇರೊಂದು ವಹಿಯಲ್ಲಿ ಬರೆದಿಟ್ಟುಕೊಂಡಿದ್ದ ಮೂರೂ ಟಿಸಿಲುಗಳ, ಪ್ರತ್ಯೇಕ ಪ್ರತ್ಯೇಕ ಮಾಹಿತಿಯನ್ನು ಕಂಪ್ಯೂಟರಿಗೆ ೨೦೧೦ ರಲ್ಲಿಯೆ ಉಣಿಸಿ,  ಬೇರೆ ಬೇರೆ ಮೂರು ಚಾರ್ಟುಗಳ  ಮುದ್ರಿತ ಪ್ರತಿಯನ್ನೂ ತೆಗೆದಿರಿಸಿಕೊಂಡಿದ್ದೆ.  ಸಂಬಂಧಿಸಿದ ವ್ಯಕ್ತಿಗಳಿಗೆ ಆ ಚಾರ್ಟನ್ನು ತೋರಿಸಿ, ಅವರಿಗೆ ತಮ್ಮ ಹಿರಿಯರ ಬಗ್ಗೆ ಗೊತ್ತಿರುವಷ್ಟಾದರೂ ಮಾಹಿತಿ ಯಥಾರ್ಥತೆಯಿಂದಿದೆ ಎಂದು ನಿಶ್ಚಯಪಡಿಸಿಕೊಳ್ಳಲು ಬೇರೆ ಬೇರೆ ಮನೆಗಳಿಗೆ ಹೋದಾಗ  ಆ ಕೆಲಸದಲ್ಲಿನ ಒಂದು ಅಡಚಣಿ ಲಕ್ಷ್ಯಕ್ಕೆ ಬಂದಿತು. ನಾನು ಪಡೆದುಕೊಂಡಿದ್ದ  ಮುದ್ರಿತ ಪ್ರತಿಯಲ್ಲಿ ವಂಶಾವಳಿಯು ಲಂಬರೂಪದಲ್ಲಿ (ನಿಂತ ಸ್ಥಿತಿಯಲ್ಲಿ – vertical form ದಲ್ಲಿ )   ಇದ್ದಿತಾದ್ದರಿಂದ ಮತ್ತೆ ಮತ್ತೆ ನೋಡಿ, ಅದನ್ನು ಅರ್ಥ ಮಾಡಿಕೊಂಡು, ಅದರ ಯಥಾರ್ಥತೆಯನ್ನು ಖಚಿತಪಡಿಸಲು ಬಹಳ ವೇಳೆ  ಬೇಕಾಗುತ್ತಿತ್ತು. ಕಷ್ಟಕರ ಕೆಲಸವೆನಿಸುತ್ತಿತ್ತು.  ಅಂತೆಯೆ, ಸುಲಭವಾಗಿ ಅರ್ಥವಾಗುವ, ಪರಿಚಿತ ರೀತಿಯಲ್ಲಿರುವ ಅಡ್ಡ ಸಾಲುಗಳಲ್ಲಿನ  ( horizontal form )  ಪ್ರತಿಯನ್ನು ಸಿದ್ಧಗೊಳಿಸುವದು ಅಗತ್ಯವೆನಿಸಿತು.   

ಕಳೆದ ನಾಕುಆರು ದಿನಗಳಲ್ಲಿ ಅದೇ ಕೆಲಸ ಮಾಡಿ, ಒಂದು ಈ ವರೆಗಿನ ಮಾಹಿತಿಯನ್ನು ಹೊಂದಿರುವ ( updated one) , ಮತ್ತು ಅಡ್ಡ ಸಾಲುಗಳಲ್ಲಿರುವ, ನಮ್ಮ ವಂಶಾವಳಿಯ ಮೂರೂ ಟಿಸಿಲುಗಳ  ಮೂರು ಪ್ರತ್ಯೇಕ ಚಾರ್ಟು ಗಳನ್ನು ಕೈಯಿಂದಲೆ ಬರೆದೆ. ಈಗ ನನ್ನ ಪರಿಶೀಲನೆಯ ಕೆಲಸ ಸುಲಭವಾಗಿದೆ. ಸಂಬಂಧಿಸಿದ ವ್ಯಕ್ತಿಗಳು ತಮ್ಮ ಅಜ್ಜನ, ಮುತ್ತಜ್ಜನ, ಗಿರಿಯಜ್ಜನ ಹೆಸರುಗಳು ಸರಿಯಾಗಿವೆಯೆ, ಆ ಪೂರ್ವಿಕರ  ಜ್ಯೇಷ್ಠತಾಕ್ರಮ ಸರಿಯಾಗಿದೆಯೆ, ಯವುದಾದರೂ ಹೆಸರು ಬಿಟ್ಟು ಹೋಗಿದೆಯೆ ಎಂದೆಲ್ಲ ನೋಡಿ ತಿದ್ದುಪಡಿಗಳೇನಾದರೂ ಇದ್ದರೆ ಅದನ್ನು ತಿಳಿಸಲು  ಸಾಂಪ್ರದಾಯಕವಾಗಿ ಅಡ್ಡಡ್ಡವಾಗಿ ರಚಿತವಾದ  ಈ  horizontal chart ಬಹಳ ಅನುಕೂಲವಾಗಿದೆ. 

ಇನ್ನು ಮುಂದೆ, ಆ ಹಳೆಯ ಕಾಗದವೀಗ ಮೊದಲಿನಂತೆ ಬೇಕಾದಾಗಲೆಲ್ಲ ಕೈಗೆತ್ತಿಕೊಳ್ಳುವ ಸ್ಥಿತಿಯಲ್ಲಿ ಇಲ್ಲದಿರುವ ಹಿನ್ನೆಲೆಯಲ್ಲಿ, ಇದು ಯಥಾವತ್ ನಕಲು ಪ್ರತಿಯೆಂದು ಖಚಿತವಾಗಿ ಹೇಳುವಂತೆ ಮತ್ತು ಇನ್ನು ಮುಂದೆ ಆ ನಕಲು ಪ್ರತಿಯನ್ನೆ ನಿಃಸಂಶಯದಿಂದ ಆಧಾರವಾಗಿ ಬಳಸಲು ಬರುವಂತೆ ಮೂಲ ಕಾಗದದೊಡನೆ ಪದೇಪದೆ  ಹೋಲಿಸಿನೋಡಿದ್ದೇನೆ.  ಯಾವ ತಪ್ಪೂ ಉಳಿದಿಲ್ಲ, ಸರಿಯಾಗಿಯೆ ಪ್ರತಿ ಮಾಡಿದ್ದೇನೆ ಎಂದು ನನ್ನ ಮನಕ್ಕೆ ಖಾತರಿಯಾಗುವಂತೆ  ಕಣ್ಣಲ್ಲಿ ಕಣ್ಣಿಟ್ಟು ಮತ್ತೆ ಮತ್ತೆ ಹೋಲಿಸಿ         ನೋಡಿದ್ದೇನೆ.