ಹಳೆಯ ಫೋಟೋಗಳು ಕೆಣಕಿದ ನೆನಪುಗಳು

ಯಾವ ವಿಷಯದ ಮೇಲೂ ಒಳ್ಳೆಯ ಸಾಹಿತ್ಯದ ಸ್ತರಕ್ಕೆ ಏರುವ ಬಣ್ಣನೆ, ಬರಹಗಳು ಆಗೀಗ ಬರುತ್ತಿರುತ್ತವೆ. ಕೆಲ ಭಾಷೆಗಳಲ್ಲಿ ಎಲ್ಲದರ ಮೇಲೂ ಅನೇಕಕಾನೇಕ ಬರಹಗಳು ಬಂದಿದ್ದರೆ, ಕೆಲದರಲ್ಲಿ ಆ ಬಾಹುಳ್ಯ ಇಲ್ಲ. ಕನ್ನಡಕ್ಕೂ ಕೆಲ ಕೆಲವು ಕಡೆ ಆ ಕೊರತೆ ಇದೆ.

ಈ ಹಿನ್ನೆಲೆಯಲ್ಲಿ ನಾನೀಗ ಹೇಳಲು ಹೊರಟಿರುವದು ಹಳೆಯ ಫೋಟೊ ಒಂದು ಕೆಣಕಿದ ನೆನಪುಗಳ ಬಗ್ಗೆ.  ಹಾಗೆಯೆ ಮತ್ತೊಂದು ಪೋಟೊ ನನ್ನಲ್ಲಿ ಕೆಣಕಿದ ಕೆಲ ನೆನಪುಗಳ ಬಗ್ಗೆ.

ನೀವು ಸಂಗೀತ ಮತ್ತು ಗಾಯಕರ ಬಗ್ಗೆ -ಸಂಗೀತ ಕಚೇರಿ, ಗಾಯನ ಸಭೆಗಳಲ್ಲಿನ ಆ ಗಾನ ಮಾಧುರ್ಯದ ಸವಿ ಸವಿದ ಕ್ಷಣಗಳ ಬಗ್ಗೆ, ಆ ತಾನಬಾಜಿ, ಗಾಯಕ ಪಕ್ಕವಾದ್ಯದವರ ನಡುವಿನ ಸರಸ ವಿರಸದಿಂದ ಹುಟ್ಟಿದ ನಾದದ ಆ ‘ಖಟ್ ಖಡಲ್’ ದಂತಹ ಪ್ರಸಂಗದ ಬಗ್ಗೆ  ವರ್ಣನೆ, ವಿವರ ಓದಿರ ಬಹುದು. ಹಾಗೆಯೆ ಕುಂಚ ಕಲಾವಿದನ ವರ್ಣ ಚಿತ್ರಗಳಲ್ಲಿ ಒಂದೊದ್ದರ ಬಗ್ಗೆಯೂ ವಿವರವಾಗಿ ಬಣ್ಣಿಸಿದ ಬರಹಗಳನ್ನೂ ಓದಿರ ಬಹುದು.

ಆದರೆ ಕೆಮರಾ ಕೈದು ಮಾಡಿದ, ಅದೂ ಗ್ರುಪ್ ಫೋಟೊ ಒಂದರ ಬಗ್ಗೆ ಯಾರಾದರೂ ಕನ್ನಡದಲ್ಲಿ ಬರೆದದ್ದು ಓದಿದ್ದೀರಾ! ಅದೂ ಒಂದು ಸುಲಲಿತ ಲೇಖವಾಗಿ! ಮಿಂಚಿನಲ್ಲಿ ಕ್ಷಣಮಾತ್ರ ಕಾಣಸಿದ ಸುಂದರ, ಸಮ್ಯಗ್ ನೋಟ ಸಾಹಿತ್ಯದ ತುಣುಕೊಂದಾಗಿ ಸೃಷ್ಟಿಗೊಂಡ ಬರಹವಾಗಿ! ಅಂತಹ ಯಾವುದಾದರೂ  ನಿಮ್ಮ ಗಮನಕ್ಕೆ ಬಂದಿದೆಯೆ? ಹಳೆಯ ಫೋಟೊ ಬಗ್ಗೆ ಬರೆದರೆ ಅದರ ಕಾಲ, ಅದರಲ್ಲಿನ ವ್ಯಕ್ತಿಗಳು ಇದನ್ನು ಬಿಟ್ಟು ಬೇರೇನು ಇರುತ್ತದೆ!

ಆದರೆ, ಕೆಲ ದಿನಗಳ ಹಿಂದೆ ಅಂತಹ ಅಪರೂಪದ ಬರವಣಿಗೆಯೊಂದು ಅಕಸ್ಮಾತ್ತಾಗಿ ಕಣ್ಣಿಗೆ ಬಿದ್ದಿತು. ಆ ಗ್ರುಪ್ ಫೋಟೊ ಕೂಡ ಇಂದಿಗೆ ಸುಮಾರು ೬೭ ವರ್ಷಗಳಷ್ಟು ಹಿಂದಿನದು. ಅಂತಿಂತಹವರದಲ್ಲ. ಕನ್ನಡ ಸಾಹಿತ್ಯದ ಹದಿನೆಂಟು ಖ್ಯಾತನಾಮರು ಒಟ್ಟಾಗಿ ಕುಳಿತ ಚಿತ್ರ. ಕುರ್ಚಿ ಮೇಲಲ್ಲ, ಬಾವಿ ಕಟ್ಟೆಯ ಮೇಲೆ ಚಕ್ಕಳಮಕ್ಕಳ ಹಾಕಿ ಕುಳಿತ ಚಿತ್ರ. ಗೋಕರ್ಣದ ಮೂಲೆ ಮನೆ ಶೇಷಭಟ್ಟರ ಮನೆ ಹಿತ್ತಲ ಅಂಗಳ. ಬಹುಶಃ ೧೯೫೩ರಲ್ಲಿ, ಆ ಹೆಸರಾಂತವರೆಲ್ಲ ಕುಮಟಾ ಸಾಹಿತ್ಯ ಸಮ್ಮೇಳನ ಮುಗಿದ ಮೇಲೆ ಕ್ಷೇತ್ರ ಗೋಕರ್ಣವನ್ನು ನೋಡ ಬೇಕೆಂದು ಬಂದಿದ್ದಿರಬಹುದು.

ಬರೆದವರು ಪ್ರಸಿದ್ಧ ಕವಿ, ಲೇಖಕ ಶ್ರೀ ಜಯಂತ ಕಾಯ್ಕಿಣಿ. ಆ ಫೋಟೊ ತೆಗೆದ ಕಾಲ ಜಯಂತ ಅವರು ಇನ್ನೂ ಶೈಶವದಲ್ಲಿ ಇದ್ದಾಗಿನದು. ಅದರಲ್ಲಿ ವರಕವಿ ಇದ್ದಾರೆ, ನವ್ಯ ಕಾವ್ಯದ ಪ್ರವರ್ತಕರಿದ್ದಾರೆ, ಜನಪ್ರಿಯತೆಯ ಶಿಖರವನ್ನೇರಿದ ಕಾದಂಬರಿಕಾರ ಇದ್ದಾರೆ, ಪತ್ರಿಕಾರಂಗದ ಹೆಸರಾಂತ ವ್ಯಕ್ತಿ ಇದ್ದಾರೆ, ತಮ್ಮ ಮಧುರ ಕಂಠದಿಂದ ಹೆಸರು ಮಾಡಿದವರಿದ್ದಾರೆ.

ಇಷ್ಟೆಲ್ಲ ಏಕೆ! ಕೆಲ ಹೆಸರುಗಳನ್ನೆ ಹೇಳುತ್ತೇನೆ : ದ.ರಾ,.ಬೇಂದ್ರೆ, ತ.ರಾ.ಸು, ಗೋಪಾಲಕೃಷ್ಣ ಅಡಿಗ,  ರಾಮಚಂದ್ರ ಶರ್ಮ, ಸು.ರಂ.ಎಕ್ಕುಂಡಿ, ಗೌರೀಶ ಕಾಯ್ಕಿಣಿ, ದಾಮೋದರ ಚಿತ್ತಾಲ, ರಮೇಶ ನಾಡಕರ್ಣಿ, ವೈಎನ್ಕೆ, ರಂಗರಾವ ತಲಚೇರಕರ ಮೊದಲಾದವರು. ಎಲ್ಲರೂ ಹೊರಗಿನಿಂದ ಬಂದಿದ್ದವರಲ್ಲ,  ಕೆಲವು ಸ್ಥಳೀಯರೂ (ಪತ್ನಿ ಸಮೇತ) ಇದ್ದಾರೆ.

ಇನ್ನು ಆ ಫೋಟೊದ ಕುರಿತು ಬರೆದ ಒಂದೆರಡು ವಿವರಣಾತ್ಮಕ ವರ್ಣನೆ, ಕಾಯ್ಕಿಣಿ ಅವರ ಶಬ್ದದಲ್ಲಿ: “ಈ ಫೋಟೊ ಇಡಿಯಲ್ಲಿಯೂ ಬಿಡಿಯಲ್ಲಿಯೂ ವಿಶಿಷ್ಟವೊಂದನ್ನು ಉದ್ದೀಪಿಸುವಂತಿದೆ…..ಕನ್ನಡದ ಕಣ್ಮಣಿಗಳ ಚಿತ್ರ….ವಟುವಿನಂತೆ ಕಾಣುತ್ತಿರುವ ಎಳೆ ಗೋಪಾಲ ಕೃಷ್ಣ ಅಡಿಗ….ಬೇಂದ್ರೆಯವರ ಪಕ್ಕದಿಂದ ತೊಡೆಗೆ ತೊಡೆ ಕೊಟ್ಟು ಆಪ್ತರಾಗಿ ಕೂತವರು ತ.ರಾ.ಸು”. ಕುಳಿತ ಬೇಂದ್ರೆಯವರು ಕಾಣುತ್ತಿದ್ದುದು “ಕೃಷ್ಣಾಜಿನದ ಮೇಲೆ ಸಿವಿಲ ಡ್ರೆಸ್ಸಿನಲ್ಲಿರುವ ಸ್ವಾಮಿಯಂತೆ ಕೂತಿರುವ ಬೇಂದ್ರೆಯವರ ನಗುವೂ ಇದೂ ಒಂದು ಆಗಿಹೋಗಲಪ್ಪಾ ಎನ್ನುವಂತಿದೆ”. “ಏನೊ ಒಂದು ಒಳ್ಳೆಯದರಲ್ಲಿ ತೊಡಗಿರುವ ಭಾವವೊಂದು ನಿಚ್ಚಳವಾಗಿದೆ. ‘ಬೇಂದ್ರೆ -ತ.ರಾ.ಸು ತೊಡೆನಾಟ‘ ಇದಕ್ಕೆ ಸೊಗಸಾದ ಸಾಕ್ಷಿ.

ಮತ್ತೂ ಬೇಕಾದಷ್ಟು ಇನ್ನೂ ಸೊಗಸಾದ ಬೇರೆ ಹಲವು ಮಾತುಗಳಿದ್ದರೂ ಇಷ್ಟಕ್ಕೇ ಇದನ್ನು ಮೊಟಕುಗೊಳಿಸುತ್ತೇನೆ, ಏಕೆಂದರೆ ನೀವೂ ಆ ಫೋಟೊ ಮತ್ತು ಆ ಮೂಲ ಬರೆಹವನ್ನು ಓದಿ ಸವಿಯಿರಿ, ಕೆಂಡಸಂಪಿಗೆ.ಕಾಮ್ ದಲ್ಲಿ. ಬೆಳಗಾವಿಯವರಿಗೆ ಇಂಟೆರೆಸ್ಟಿಂಗ ಆಗಿರುವ ವಿಷಯ – ಗೋಕರ್ಣದ ಆ ಮೂಲೆ ಮನೆ ಎಂದರೆ ಖಾಸಬಾಗದ ಹಾಯಸ್ಕೂಲಿನಲ್ಲಿ ಮೂವತ್ತು ವರ್ಷಗಳ ಹಿಂದೆ ಮುಖ್ಯಾಧ್ಯಾಪಕರಾಗಿದ್ದ ದಿ. ಶ್ರೀ. ಆರ್.ಎಸ್.ಮುಳೆಯವರ ಮನೆ. ಶೇಷಭಟ್ಟರು ಅವರ ತಂದೆ.

ಈಗ ನನ್ನ ನೆನಪುಗಳನ್ನು ಕೆಣಕಿದ ಮತ್ತೊಂದು ಫೋಟೊ ಬಗ್ಗೆ. ಅದು ನೆನಪಾಗಿ ಕಣ್ಣೆದುರು ಬರಲು ಕಾರಣವಾದದ್ದೂ ಶ್ರೀ ಜಯಂತ ಕಾಯ್ಕಿಣಿಯವರ ‘ಮುಕ್ತ ಹಾಜರಿ’ ಎಂಬ ಮುಕುಂದ ಜೋಷಿಯವರ ಮೇಲಿನ ಲೇಖನ.(ಮಯೂರದ ಜೂನ ಸಂಚಿಕೆ).  “ಕನ್ನಡ – ಮರಾಠಿ- ಹಿಂದಿ ಸಾಹಿತ್ಯಗಳ ನಡುವೆ ಕೊಂಡಿಯಾದವರು, ಕವಿ, ಕನ್ನಡದ ಸಂವೇದನೆಯುಳ್ಳ”, ಮುಂಬಯಿಯಲ್ಲಿದ್ದ ಮುಕುಂದ ಜೋಶಿ ಬೆಳಗಾವಿಯವರು, ನನ್ನ ವರ್ಗ ಮಿತ್ರ. ಯಾವ ಫೋಟೊದ ಬಗ್ಗೆ ಬರೆಯುತ್ತಿದ್ದೇನೊ ಅದು ಅವರ ಮನೆ ಗೋಡೆಯ ಮೇಲಿನದು.

ಗೋಕರ್ಣದ ಆ ಫೋಟೊ ಒಂದು ತರಹದ ‘ಅಸಾಮಾನ್ಯ‘ರದು. ನನ್ನ ಗೆಳೆಯನ ಮನೆಯಲ್ಲಿದ್ದುದು ತೀರ ‘ಸಾಮಾನ್ಯ‘, ಅಜ್ಜ-ಅಜ್ಜಿಯರದು. ಕುಟುಂಬದವರಿಗೆ ಮತ್ತು ತೇರದಾಳದ ಪರಿಚಿತರಿಗೆ ಮಾತ್ರ ಗೊತ್ತಿದ್ದವರು. ಆದರೆ ಕೆಮರಾದಲ್ಲಿ ಕೈದಾದ ಆ ಚಿತ್ರದಲ್ಲಿ ಎದ್ದು ಕಾಣುತ್ತಿದ್ದುದು ಅವರಿಬ್ಬರೂ ತಮ್ಮ ಸುಖ-ದುಖಃವನ್ನು ಮಾತನಾಡಿಕೊಳ್ಳುತ್ತಿದ್ದ ಆತ್ಮೀಯತೆಯ ಆ ಭಾವ, ಅದನ್ನು ಬಿಟ್ಟು ಮತ್ತೇನಲ್ಲ! ಯಾವನಿಗೂ ಎದ್ದು ಕಾಣುತ್ತಿದ್ದ ಆ ಭಾವವೆ ಅಲ್ಲಿ ಹೋದಾಗೆಲ್ಲ ನನ್ನ ಕಣ್ಣುಗಳನ್ನು ಸೆಳೆಯುತ್ತಿದ್ದುದು.

 

ಆ ಫೋಟೊದಲ್ಲಿದ್ದವರು ಮುಕುಂದನ ಅಜ್ಜ – ತಂದೆಯ ತಂದೆ (ಲಕ್ಷ್ಮಣ ಗುಂಡಾಚಾರ್ಯ ಜೋಶಿ) ಮತ್ತು ಮುತ್ತಜ್ಜಿ- ತಾಯಿಯ ತಂದೆಯ ತಾಯಿ (ಗಂಗಾಬಾಯಿ ನಾಡಪುರೋಹಿತ) ಇಬ್ಬರೂ ತೇರದಾಳದವರೆ! ಅಕ್ಕ ತಮ್ಮನ ಸಂಬಂಧ ಇದ್ದಿತವರಲ್ಲಿ. ಅವರ ಫೋಟೊ ತೆಗೆದ್ದದ್ದು ಮುಕುಂದ ಅವರ ಮದುವೆಯ ಮರುದಿನ, ಫೆಬ್ರುವರಿ ೨,೧೯೭೧, ಮಿರಜಿಯಲ್ಲಿ ಮದುವೆ ಮುಗಿಸಿಕೊಂಡು ಹಿಂದಿನ ರಾತ್ರಿ ಬಂದಿದ್ದರು, ಬೆಳಗಾವಿ ಕೋನವಾಳಗಲ್ಲಿ ಮನೆಗೆ. ಮುಕುಂದ ಅವರ ತಮ್ಮ ಜಯಂತ ಅವರಿಗೆ ತಾವು ತೆಗೆದ ಮದುವೆ ಫೋಟೊಗಳನ್ನು ಡೆವಲಪ್ ಮಾಡಿಸಿ ಪ್ರಿಂಟಗಳನ್ನು ನೋಡುವ ತವಕ. ಆದರೆ ಕೆಮರಾದಲ್ಲಿ ಇನ್ನೊಂದು ಫಿಲ್ಮು ಉಳಿದಿತ್ತು. ಅದನ್ನು ತೆಗೆದಾದ ಮೇಲೆಯೆ ಮುಂದಿನ ಕೆಲಸಕ್ಕಾಗಿ ಸ್ಟುಡಿಯೋಕ್ಕೆ ಹೋಗಬೇಕು.

ಮದುವೆ ಮನೆ, ಜನರಿಂದ ತುಂಬಿತ್ತು. ಎಲ್ಲರೂ ತಮ್ಮ ತಮ್ಮ ಗಡಿಬಿಡಿಯಲ್ಲಿ. ಬೆಳಗಿನ ಹೊತ್ತು. ಒಂದೆಡೆ ಸ್ಥಿರವಾಗಿ ಕುಳಿತು ಉಳಿದ ಯಾರ ಗೊಡವೆಗೆ ಹೋಗದೆ ತಮ್ಮ ಮಾತುಗಳಲ್ಲಿ ಪೂರ್ಣ ಗರ್ಕ ಆಗಿದ್ದರು, ಹೀಗೆ ಕೂಡು, ಹಾಗೆ ಮೋರೆ ಹೊರಳಿರಲಿ ಎಂದೆಲ್ಲ ಹೇಳಿ ಅವರನ್ನು ತಯಾರು ಮಾಡುವ, ವೇಳೆ ಹಾಳಾಗುವ ಪ್ರಸಂಗವೆ ಇರಲಿಲ್ಲ. ಜಯಂತ ಸದ್ದುಗದ್ದಲವಿಲ್ಲದೆ ಮುಕಾಟೆಯಿಂದ ಫೋಟೊ ಕ್ಲಿಕ್ ಅನಿಸಿಯೆ ಬಿಟ್ಟಿದ್ದ, ಅಜ್ಜ, ಮುತ್ತಜ್ಜಿಯರಿಗೆ ಗೊತ್ತಾಗದಂತೆ.

ಆದರೆ, ಮುಂದೆ ಎಲ್ಲರ ಮನಸ್ಸನ್ನು ಇದು ಅಪಹರಿಸಿಬಿಟ್ಟಿತು. ಗೋಡೆಯ ಮಹತ್ವದ ಜಾಗದ ಮೇಲೆ ಏರಿ, ಎಲ್ಲರ ಲಕ್ಷ್ಯ ಸೆಳೆಯುತ್ತ ಸ್ಥಾನಾಪನ್ನವಾದದ್ದು ೫೦ ವರ್ಷವರ್ಷಗಳ ನಂತರಯೂ ಯಾರಿಗೂ ತನ್ನ ಜಾಗ ಬಿಟ್ಟುಕೊಟ್ಟಿಲ್ಲ. ಸ್ಟುಡಿಯೊದಿಂದ ಹೊಗಳಿಸಿಕೊಂಡು ಮನೆಗೆ ಬಂದು ಜಾಗ ಹಿಡಿದು ಭದ್ರ ಮಾಡಿಕೊಂಡಿದೆ.

ನೋಡಿದವರಿಗೆಲ್ಲ ಅದು ಒಂದು ಪಾಠ ಹೇಳಿತು. ಸಮಾರಂಭ – ಅದು ಮದುವೆ ಇರಲಿ, ಮುಂಜಿವೆ ಇರಲಿ ಅಥವಾ ಮತ್ತೆ ಯಾವುದಾದರೂ ಇರಲಿ, ವೇದಿಕೆಯ ಮೇಲಿನ ಆ ದಿನದ ನಾಯಕ, ನಾಯಿಕೆ ಇವರದಷ್ಟೆ ಫೋಟೊ ಅಥವಾ ಗ್ರುಪ್ ಫೊಟೊ ತೆಗೆದ ಮಾತ್ರಕ್ಕೆ ಸಮಾರಂಭದ ಆ ಸಂತೋಷದ ಮೂಡ್ ನ್ನು ಇಡಿಯದಾಗಿ ಹಿಡಿಯಲಾಗುವದಿಲ್ಲ. ಸಮಾರಂಭಕ್ಕೆ ಬಂದು, ಆ ಸಂತಸವನ್ನು ಹಂಚಿಕೊಂಡವರು ಕಳೆದ ಆ ಸುಖದ ಕೆಲ ಕ್ಷಣಗಳೂ, ಅಂದಿನ ಕಾರ್ಯಕ್ರಮದ ಒಂದು ಭಾಗವೆ ಅಲ್ಲವೆ! ಅನೇಕ ದಿನಗಳ ನಂತರ ಭೆಟ್ಟಿಯಾದ ಹಳೆಯ ಸಂಬಂಧಿಕರು, ಮಿತ್ರರು, ಸಹೋದ್ಯೋಗಿಗಳು ತಮ್ಮ ತಮ್ಮ ಸುದ್ದಿ, ಸುಖ ದುಖಃ, ಕೌಟುಂಬಿಕ ವಿಷಯ ಮೊದಲಾದವುಗಳನ್ನು ಪರಸ್ಪರ ಹೇಳಿಕೊಂಡು ಸಂತೋಷ ಪಟ್ಟದ್ದೂ, ತಮ್ಮಷ್ಟಕ್ಕೆ ತಾವು ಫ್ರೀ ಆಗಿ ಆಡುತ್ತಿರುವ ಮಕ್ಕಳು ಎಲ್ಲರೂ ಫೋಟೊ ತೆಗೆಯುವವನಿಗೆ ಹಿಡಿದಿಡ ಬೇಕಾದ ವಿಷಯವಲ್ಲವೆ!

ಒಂದೋ ಎರಡೊ ಫೋಟೊ ಮಾತ್ರ ತೆಗೆಸುತ್ತಿದ್ದ ಆ ಹಳೆಯ ಒಂದಾನೊಂದು ಕಾಲ ಬದಲಾದ ನಂತರವೂ ಸಮಾರಂಭದಲ್ಲಿನ ಇಂತಹ ಮೂಡ್ ನ್ನು ಚಿತ್ರೀಕರಿಸಬೇಕು ಎಂಬ ಕಲ್ಪನೆ ಬಹಳ ಸಾವಕಾಶವಾಗಿ ಬಂದಿತು. ಅಂತಹ ಚಿತ್ರವನ್ನು ಹಲವು ವರ್ಷಗಳ ನಂತರ  ಹಳೆಯ ನೆನಪುಗಳನ್ನು ಮೆಲುಕು ಹಾಕುವದು  ಭಾಗ್ಯವೆ ಅಲ್ಲವೆ!

ಇವೆಲ್ಲ ನನ್ನ ತಲೆಯಲ್ಲಿ ಸುಳಿದ ವಿಚಾರಗಳಾದರೆ, ಆ ಫೋಟೊ ಬಗ್ಗೆ ಕೇಳಿದಾಗ ಆ ಪ್ರಶ್ನೆ ಜಯಂತ ಅವರನ್ನು ಒಮ್ಮೆಲೆ ನೆನಪಿನ ಹಳೆ ಓಣಿಯ ಸಂದುಗೊಂದಿಗಳಲ್ಲಿ ಕರೆದೊಯ್ದು, ಅಡ್ಡಾಡಿಸತೊಡಗಿತು. ಸುಮಾರು ೪೦-೫೦ ನಿಮಿಷ ಹೇಳುತ್ತಲೆ ಹೋದರು. ಅದು ಮುಕುಂದ ಅವರ ಇನ್ನೊಬ್ಬ ತಮ್ಮ ದಿಲೀಪ ಅವರನ್ನು ಫೋನ್ ಮೇಲೆ ಸಂಪರ್ಕಿಸಿದಾಗಲೂ ಪುನರಾವರ್ತನೆಯಾಯಿತು. ಆ ಫೋಟೊ ವಾಟ್ಸಾಪ್ ಮೂಲಕ ನನಗೆ ತಲುಪಿದ್ದು ದಿಲೀಪ ಅವರ ಕೃಪೆಯಿಂದ. ಆದರೆ ಅದನ್ನು ತೆಗೆದಿದ್ದ ಜಯಂತ ಈಗ ಮತ್ತೊಂದು ಕಡೆ ಇದ್ದಾರೆ.

ಆ ಹಳೆಯ ನೆನಪುಗಳೆಲ್ಲ ಮತ್ತೊಮ್ಮೆ ಮನಸ್ಸಿನ ಪಟಲದ ಮೇಲೆ ಸಿನಿಮಾದಲ್ಲಿನ ಫ್ಲ್ಯಾಶಬ್ಯಾಕ್ ತರಹ ಮೂಡತೊಡಗಿದಾಗ ಜಯಂತ ಹೇಳುತ್ತ ಹೊರಟಂತೆ ಮುಕುಂದ ಅವರ ಮದುವೆಯನ್ನು ಅದೇತಾನೆ ಮುಗಿಸಿ ಬಂದಿದ್ದ ಅವರ ಮನೆಯ ಸದ್ದುಗದ್ದಲ, ಕಪ್ಪು ಬಸಿಗಳ ತಾಕಲಾಟದ ಸದ್ದು ಎಲ್ಲ ಹಿನ್ನೆಲೆ ಸಂಗೀತದಂತೆ ಕೇಳುತ್ತಿತ್ತು, ಕಥೆ ಸಾಗುತ್ತಿತ್ತು, ಆ ಫೋಟೊ ತೆಗೆದ ದಿನಾಂಕದಿಂದ, ಬೆಳಗಿನ ವೇಳೆ… ಮುಂದೆ…

ಆ ಫೋಟೊವನ್ನು ದೊಡ್ಡದಾಗಿಸಬೇಕು (ಎನ್ ಲಾರ್ಜ ಮಾಡಿಸಬೇಕು) ಎಂದು ಹೊಳೆದು ಕಟ್ಟಿ ಸ್ಟುಡಿಯೋ ಕ್ಕೆ ಹೋದಾಗ ಅದರ ಮಾಲಕ ಶ್ರೀ ತಮ್ಮಣ್ಣಾ ಅವರು ಥಕ್ ಆದರಂತೆ. “ತೆಗೆದವರು ಯಾರು, ಯಾವ ಕೆಮರಾ, ನೆಗೇಟಿವ ಇದೆಯೆ (ಅದು ಎಲ್ಲೋ ಕಳೆದಿತ್ತು) ಎಂದೆಲ್ಲ ಕೇಳಿ, ಇನ್ನೂ ಮದುವೆಯೂ ಆಗದ ಜಯಂತ ಅವರೆ ಆ ಫೋಟೊಗ್ರಾಫರ ಎಂದು, ಅದು ಸಾದಾ ಹಳೆಯದೊಂದು ಕೆಮೆರಾ ಎಂದೆಲ್ಲಾ ಹೇಳಿದಾಗ, “ಇದು ಖರೆ ಇದ್ದರ, ನೀ ಫೋಟೊಗ್ರಾಫಿಯನ್ನ ವೃತ್ತಿಯನ್ನಾಗಿ ಮಾಡಿಕೋ” ಎಂದರಂತೆ. ಅದನ್ನು ತಾವೆ ತುಂಬ ಮುತುವರ್ಜಿ ವಹಿಸಿ ಎನ್ ಲಾರ್ಜ ಮಾಡಿ ಅದಕ್ಕೆ ತಾವೆ ಕಟ್ಟು ಹಾಕಿಸಿ ಕೊಟ್ಟರಂತೆ.

ಆ ಅಕ್ಕ ತಮ್ಮರಂತಿದ್ದ ಅಜ್ಜ – ಮುತ್ತಜ್ಜಿಯರ  ಚಿತ್ರದಲ್ಲಿ ಕಾಣುವ ಆತ್ಮೀಯತೆ – ಸಖ್ಯ ನಿಜ ಜೀವನದಲ್ಲಿ ಅವರ ಸಾಕಾರ ರೂಪದಲ್ಲಿ, ನಿತ್ಯ ವ್ಯಕ್ತವಾಗುತ್ತಿತ್ತು. ತೇರದಾಳದಲ್ಲಿ  ಏಕಾದಶಿ ಉಪವಾಸದ ದಿನ ಅಕ್ಕನ ಮನೆಗೇ ಹೋಗಿ ಆ ರಾತ್ರಿ ಕಳೆದು ಬೆಳಿಗ್ಗೆ ದ್ವಾದಶಿ ಪೂಜೆ ಮಾಡಿ ಅಕ್ಕನಿಗೆ ತೀರ್ಥ ಕೊಟ್ಟು ಪಾರಣೆ ಮಾಡುತ್ತಿದ್ದರು. ಇನ್ನೂ ಸಂಜೆಯಾಗಲು ಸಾಕಷ್ಟು ಹೊತ್ತು ಇರುವಾಗಲೆ, ಪಾಪ ತಮ್ಮನಿಗೆ ಊಟ ಬೆಳಿಗ್ಗೆಯೆ ಆಗಿದ್ದಕ್ಕೆ ಈಗ ಮತ್ತೆ ಹಸಿವೆಯಾಗುತ್ತಿರಬೇಕು ಎಂದು ಅಳ್ಳಿಟ್ಟಿನ ಊಂಡೆ ಮಾಡಿಕೊಂಡು,ಜೊತೆಗೇ ಗಿಂಡಿಯಲ್ಲಿ ಹಾಲನ್ನೂ ತೆಗೆದುಕೊಂಡು ಅಕ್ಕ ತಮ್ಮನ ಮನೆಗೆ ಹೋಗುತ್ತಿದ್ದರು.

ಆ ಅಜ್ಜ ಆಗಿನ ಕಾಲದಲ್ಲಿ ತಪ್ಪದೆ ರಾಯರ ಆರಾಧನೆಗೆಂದು ಮಂತ್ರಾಲಯಕ್ಕೆ ಹೋಗುತ್ತಿದ್ದರು., ಮೊದಲು ಅಣು ಮಂತ್ರಾಲಯದಲ್ಲಿ ಇಳಿದು ಊಟ – ವಸತಿ ಮಾಡಿ ಮರುದಿನ ಅಲ್ಲಿಗೆ ಹೋಗುವದು ಆಗಿನ ರೂಢಿ. ಅವರ ಪ್ರಭಾವವೇ ಏನೋ ಐವತ್ತು ವರ್ಷಗಳಿಂದ ಜಯಂತ ಅವರೂ ರಾಯರ ಆರಾಧಕ. ವ್ಯಾಕ್ಸಿನಡಿಪೋ ರಾಯರ ಮಠದಲ್ಲಿ ನಡೆಯುವ ಅಷ್ಟೋತ್ತರಕ್ಕೆ ಪ್ರತಿ ಗುರುವಾರ ಇಪ್ಪತ್ತು ವರ್ಷಗಳಿಂದ ತಪ್ಪದೆ ಹೋಗುತ್ತಿದ್ದಾರೆ.

ಈ ಫೋಟೊದಲ್ಲಿ ಇಲ್ಲದ ಮತ್ತೊಬ್ಬ ಅಜ್ಜ – ತಾಯಿಯ ತಂದೆ – ಭೀಮ ಮಾಮಾ ಅವರ ನೆನಪೂ ಬಂದು ಅವರು ಹೇಳಿಕೊಟ್ಟಿದ್ದ ಭಗವದ್ಗೀತೆಯ ಪಾಠ ಈಗ ಟೀವಿಯಲ್ಲಿ ಮಹಾಭಾರತ ಹತ್ತಿದ್ದಾಗ ತಂತಾನೆ ನೆನಪಿಗೆ ಬರುತ್ತದೆ. “ಊರ್ಧ್ವಮೂಲಮಧಃಶಾಖಾಮಶ್ವತ್ಥಂ” ಶ್ಲೋಕ ನೆನಪಿದೆ, ಎಂದು ಹೇಳಿದರು.

ಆ ಸುಮಾರು ನೂರು ಬಾಣಂತನಗಳನ್ನು ಮಾಡಿದ ಆ ಮುತ್ತಜ್ಜಿ ಬಹಳ ಕಷ್ಟ ಅನುಭವಿಸಿದ ಜೀವ. ಬೇಗನೆ ಬಂದಿದ್ದ ವೈಧವ್ಯ ಒಂದಾಗಿದ್ದರೆ ಮತ್ತೊಂದು ಗಾಂಧಿ ಹತ್ಯೆಯ ನಂತರ ತೇರದಾಳ ಮತ್ತು ಸುತ್ತ ಮುತ್ತ ನಡೆದ “ಜಾಳ ಪೋಳ”, ಬ್ರಾಹ್ಮಣರ ಮನೆಗಳನ್ನು ಸುಟ್ಟು ಸೇಡು ತೀರಿಸಿಕೊಳ್ಳಲು ಮಾಡಿದ ಭಯಂಕರ ಪ್ರಯತ್ನ. ಆದರೆ ಆ ಮುತ್ತಜ್ಜಿ ಎಷ್ಟು ಧೈರ್ಯವಂತರಾಗಿದ್ದರೆಂದರೆ, ಆ ದಿನಗಳಲ್ಲಿ ರಾತ್ರಿಯಿಡೀ ಮನೆ ಕಟ್ಟೆ ಮೇಲೆ ಚಿಮಣಿ ದೀಪ ಹಿಡಿದು ಕುಳಿತು ಕಾಯುತ್ತಿದ್ದರಂತೆ, “ನೋಡೋಣ ಯಾರು ಬರುತ್ತಾರೋ, ನೋಡೋಣ ಹೇಗೆ ಮನೆ ಸುಡುತ್ತಾರೋ” ಎನ್ನುತ್ತಿದ್ದರಂತೆ.