ದಶಕಗಳುರುಳಿದರೂ ನೆನಪು ಮಾಸದ ಜಯವಂತಿದೇವಿಯ ಆ ಧ್ವನಿ

ಭೀಮಸೇನ ಜೋಶಿಯವರ ಧ್ವನಿಯಲ್ಲಿನ ಭಾಗ್ಯದ ಲಕ್ಷ್ಮೀ ಬಾರಮ್ಮಾ ಈ ಪುರಂದರದಾಸರ ಕೃತಿಯನ್ನು ಕೇಳದ ಕನ್ನಡಿಗನಾರೂ ಇರಲಿಕ್ಕಿಲ್ಲ. ಹಾಡದ ಹೆಂಗಳೆಯರಾರೂ ಇರಲಿಕ್ಕಿಲ್ಲ. ಅಷ್ಟೊಂದು ಜನಪ್ರಿಯವಾದ ಹಾಡು ಅದು. ಆದರೆ ಇದೇ ಕೃತಿಯ ಮತ್ತೊಂದು ಅವತರಣಿಕೆ, ಭೀಮಸೇನ ಜೋಶಿವರಷ್ಟೇ ಮೋಡಿ ಮಾಡಿದ್ದ ಮಧುರಕಂಠದ ಇನ್ನೊಂದು ಧ್ವನಿಮುದ್ರಿಕೆ ಒಂದೊಮ್ಮೆ ಇದ್ದಿತು. ಆದರೆ ಅದು ಇಂದಿನ ಪೀಳಿಗೆ ಕೇಳದ ಧ್ವನಿ, ಅಪರಿಚಿತ ಹೆಸರು.

೧೯೫೦ ರ ದಶಕದಲ್ಲಿ, ಧ್ವನಿಮುದ್ರಿಕೆಗಳ ಸಂಗೀತ ಮನೆಮನೆಯಲ್ಲಿ ಕೇಳಸಿಗುತ್ತಿದ್ದುದು ರೇಡಿಯೋದಲ್ಲಿ ಮಾತ್ರ. ಆಗಲೂ ಭೀಮಸೇನ ಜೋಶಿಯವರ ದಾಸರ ಪದ, ಭಾವಗೀತೆಗಳನ್ನು ಕೇಳುತ್ತಿದ್ದೆವು. ಅದೇ ತಾರುಣ್ಯದಲ್ಲಿ ಕಾಲಿರಿಸಿದ್ದ ಅವರ ಆ ಧ್ವನಿಯ ಸವಿಯೇ ಬೇರೆಯದು. ಕೇಳಿದ ಕೂಡಲೆ ನಮ್ಮ ನಾಲಿಗೆಯೂ ‘ಬಂತಿದೊ, ಬಂತಿದೊ ಶೃಂಗಾರ ಮಾಸ’ ಎಂದು ಗುಣಗುಣಿಸ ತೊಡಗುತ್ತಿತ್ತು. ಆದರೆ ಭಾಗ್ಯದ ಲಕ್ಷ್ಮೀ ಬಾರಮ್ಮಾ ಮತ್ತು ಸದಾ ಎನ್ನ ಹೃದಯದಲ್ಲಿ ವಾಸ ಮಾಡೊ ಶ್ರೀಹರಿ ಈ ಪದಗಳನ್ನು ಪಿ. ಜಯವಂತಿದೇವಿ ಅವರ ಧ್ವನಿಯಲ್ಲಿ ಕೇಳುತ್ತಿದ್ದಾಗ ಆಗುತ್ತಿದ್ದ ಅನುಭೂತಿ ಬೇರೆಯದೆ ಬಗೆಯದು. ‘ಎನಿತು ಇನಿದು ಈ ಧ್ವನಿಯು, ಕೋಗಿಲೆಯ ಇಂಚರವಿದು‘ ಎನಿಸಿ ಮೋಡಿಯೊಳಗಾಗಿ, ಅದೇ ಗುಂಗಿನಲ್ಲಿರುತ್ತಿದ್ದೆವು.

ಕೊರೋನಾದ ಲಾಕ್ ಡೌನ್ ಎಂಬ ಒಂದುತರಹದ ಗೃಹಬಂಧನದ ಸ್ಥಿತಿಯಲ್ಲಿ ಅರವತ್ತು ಎಪ್ಪತ್ತು ವರ್ಷಗಳ ಹಿಂದಿನ ನೆನಪುಗಳು ಈಗ ಮತ್ತೆ ಬರುತ್ತಿವೆ. ಭಾವಗೀತೆ – ಸುಗಮ ಸಂಗೀತ ಎಂಬುದಿನ್ನೂ ಅದೇ ತಾನೆ ಬೆಳೆಯುತ್ತಿದ್ದ ಕಾಲವದು. ಆ ಹಳೆಯ ಹಾಡುಗಳು ನೆನಪಿಗೆ ಬಂದು. ಮತ್ತೊಮ್ಮೆ ಕೇಳು ಎಂದು ಕಾಡತೊಡಗಿದವು. ಈಗ ಯೂ ಟ್ಯೂಬ ಸೌಕರ್ಯವಿದೆಯಲ್ಲ. ಹಳೆಯ ಹಾಡು, ಚಲಚಿತ್ರ, ಧ್ವನಿ ಮತ್ತು ಚಿತ್ರ ಮುದ್ರಣಗಳು ಬೇಕೆಂದಾಗ, ಬೇಕೆಂದಲ್ಲಿ ಲಭ್ಯ, ಕೈಯಲ್ಲಿ ಸ್ಮಾರ್ಟ ಫೋನ ಒಂದು ಇದ್ದರಾಯಿತು!

ಇರಲಿ, ಯಾರ ಧ್ವನಿ ನಮ್ಮನ್ನು ಸಮ್ಮೋಹಿತ ಗೊಳಿಸುತ್ತಿತ್ತೊ ಆ ಜಯವಂತಿದೇವಿ ಅವರ ಒಂದು ಸ್ಥೂಲ ಪರಿಚಯ: ಅವರು ಪಡುಕೋಣೆ ರಮಾನಂದರಾಯರ ಮಗಳು. ತಾಯಿ ಸೀತಾಬಾಯಿ. ಜನ್ಮ: ೧೯೨೭ರ ಎಪ್ರಿಲ್ ೨೪ರಂದು. ಮದುವೆ ಆದುದು ೧೯೪೭ ರಲ್ಲಿ. ದಿನಕರ ಹಿರೇಬೆಟ್ಟ ಅವರೊಡನೆ. ಮರಣ : ತಮ್ಮ ೯೧ ನೆ ವಯಸ್ಸಿನಲ್ಲಿ, ಮೇ ೨೦೧೮ ರಲ್ಲಿ.

ಅವರು ಹುಟ್ಟಿದ ಪಡುಕೋಣೆ ಮನೆತನ ತನ್ನ ಕಲಾಪ್ರೇಮಕ್ಕೆ ಪ್ರಸಿದ್ಧವಾದುದು. ಬಹಳ ಅಪರೂಪದ ಒಂದು ಮನೆತನ. ಅದರಲ್ಲಿ ಹುಟ್ಟಿದ ಅಷ್ಟೂ ಜನ ಮುಂದೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಖ್ಯಾತನಾಮರಾದವರು.

ಹಳೆಯ ತಲೆಮಾರಿನ ಸಾಹಿತ್ಯಾಸಕ್ತರಿಗೆ ಪಡುಕೋಣೆ ರಮಾನಂದರಾಯರು ಗೊತ್ತಿಲ್ಲದಿಲ್ಲ. ‘ನನ್ನ ಭಾವ’, ‘ಹರಿಕಮತನ ಹಿಂದಿ’, ‘ಕೊಡೆ‘  ಮೊದಲಾದ ಹಾಸ್ಯಬರಹಗಳಿಂದ ಹೆಸರಾಗಿದ್ದವರು. ಅಜ್ಜ ನರಸಿಂಗರಾಯರ ಕಿರಿಯ ಸೋದರ ಶಿವಶಂಕರ ಅವರು ಪ್ರಸಿದ್ಧ ಹಿಂದಿ ಸಿನೆಮಾ ದಿಗ್ದರ್ಶಕ ಮತ್ತು ನಟ ಗುರುದತ್ತ ಮತ್ತು ಆತ್ಮಾನಂದ ಅವರ ತಂದೆ. ಅಕ್ಕ ಚಂದ್ರಭಾಗಾದೇವಿ ಪ್ರಸಿದ್ಧ ನೃತ್ಯಪಟು, ಮತ್ತೊಬ್ಬ ನಾಮಾಂಕಿತ ನೃತ್ಯಪಟು ಯೂ.ಎಸ್. ಕೃಷ್ಣರಾವ ಅವರ ಪತ್ನಿ. ಮತ್ತೊಬ್ಬ ಅಕ್ಕ ಶಾಂತಿ ಚಿತ್ರಕಲಾ ಪ್ರೇಮಿ. ತಂಗಿ ಯಶೋಧರಾ ನೃತ್ಯ ಕಲಾವಿದೆ. ಅಣ್ಣ ಪ್ರಭಾಕರ ಇಂಜಿನೀಯರ.

ಜಯವಂತಿದೇವಿಯವರ ಸಂಗೀತ ಪ್ರೇಮ ಬಾಲ್ಯದಲ್ಲಿ ತಾಯಿಯಿಂದ ಬಳುವಳಿ ಬಂದದ್ದು. ತಾಯಿ – ಅಜ್ಜಿಯರು ಮನೆಯಲ್ಲಿ ಹಾಡುತ್ತಿದ್ದ ದೇವರನಾಮಗಳನ್ನು ಸ್ವಾಭಾವಿಕವಾಗಿ ಕಲಿತು ಹಾಡಿಕೊಳ್ಳುತ್ತಿದ್ದರು. ಚಿಕ್ಕಪ್ಪ ಪ್ರಭಾಕರರೂ ಸಂಗೀತಾಸಕ್ತರು.  ಅಷ್ಟೆ ಅಲ್ಲ, ತಬಲಾ ಮತ್ತು ದಿಲರುಬಾ ವಾದನದಲ್ಲಿ ಪರಿಣತಿಯೂ ಇದ್ದಿತು. ಅವರು ಹೇಳಿಕೊಟ್ಟಿದ್ದು ಮತ್ತು ಹಿಂದುಸ್ಥಾನಿ ಸಂಗೀತದ ಸ್ವಲ್ಪ ತರಬೇತಿ, ನಂತರದಲ್ಲಿ ಮದರಾಸಿನ ಬಿ.ಜಿ.ರಾಮನಾಥರಿಂದ ಕಲಿತ ಕರ್ನಾಟಕ ಸಂಗೀತ ಇದೆಲ್ಲವೂ ದೈವದತ್ತ ಕಂಠ ಮಾಧುರ್ಯದೊಂದಿಗೆ ಮಿಳಿತವಾಗಿತ್ತು.

ಇಲ್ಲಿ, ಸಂಗೀತದ ಈ ಹಿನ್ನೆಲೆಯಲ್ಲಿ ಜಯವಂತಿದೇವಿಯವರ ಶಾಲಾ ಶಿಕ್ಷಣದ ವಿಚಿತ್ರ ವಿಶೇಷವನ್ನೂ ಹೇಳಲೇ ಬೇಕು. ಅವರಿಗೆ ಮಾಧ್ಯಮಿಕ ಶಾಲೆಯನ್ನೂ ಕಲಿಯಲಾಗಲಿಲ್ಲ. ಕಾಲೇಜಿನಲ್ಲಿ ಕೆಮಿಸ್ಟ್ರಿ ಶಿಕ್ಷಕರಾಗಿದ್ದ ರಮಾನಂದರಾಯರಿಗೆ ಮದರಾಸಿಗೆ ವರ್ಗವಾಗಿ ಕೆಲವರ್ಷ ಅಲ್ಲಿ ಇರಬೇಕಾಯಿತು. ಜಯವಂತಿದೇವಿಯವರು ಆಗ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದರು.  ಹಾಯರ ಎಲೆಮೆಂಟರಿಯ ಎಂಟನೆ ವರ್ಗಕ್ಕೆ ಸೇರಬೇಕಾಗಿದ್ದಿತು. ಆದರೆ ಅಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಸುವ ವ್ಯವಸ್ಥೆ ಇರಲಿಲ್ಲ.  ಇಂಗ್ಲಿಷ ಮಾಧ್ಯಮದಲ್ಲಿ ಕಲಿಯಲು ಇವರು ಒಪ್ಪಿಕೊಳ್ಳಲಿಲ್ಲ. ಶಿಕ್ಷಣ ಅಲ್ಲಿಗೇ ಮೊಟಕುಗೊಂಡಿತು. ಆದರೆ ಈ ಕೊರತೆಯ ನಡುವೆಯೂ ಅಚ್ಚರಿಯೆನಿಸುವಂತೆ ಕಲಾ ಜೀವನದ ಪಯಣ ಮುಂದುವರೆಯಿತು.

ಮದರಾಸಿನಲ್ಲಿ ಇವರಿದ್ದ ಮನೆ ಚಿತ್ರರಂಗದಲ್ಲಿ ಪ್ರಸಿದ್ಧರಾಗಿದ್ದ ಹಾಗೆಯೆ ಸಂಗೀತ ನಿರ್ದೇಶಕರಾಗಿದ್ದ ವಿ.ನಾಗಯ್ಯ ಅವರ ಪಕ್ಕದಲ್ಲಿನದು. ನಾಗಯ್ಯ ಆಂದ್ರದ ಚಿತ್ತೂರಿನವರು. ಹೆಚ್ಚಾಗಿ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಂಡ ಅವರು ನಟ, ನಿರ್ದೇಶಕ, ಗಾಯಕ, ಸಂಗೀತ ನಿರ್ದೇಶಕ, ಪಟಕಥಾಲೇಖಕನಾಗಿ ಹಲವು ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ ತೋರಿಸಿದ್ದವರು. ತೆಲುಗು, ತಮಿಳು, ಕನ್ನಡ, ಮಲೆಯಾಳಿ ಮತ್ತು ಹಿಂದಿ ಭಾಷೆಗಳ ಚಲಚಿತ್ರಗಳಲ್ಲಿ ಅಭಿನಯಿಸಿದವರು.

ಪಕ್ಕದ ಮ ನೆಯಲ್ಲಿದ್ದ ಬಾಲಕಿ ಜಯವಂತಿ ತನ್ನ ತಾಯಿ, ಅಜ್ಜಿಯರಿಂದ ಕೇಳಿದ್ದ ದೇವರ ನಾಮಗಳನ್ನು ಹಾಡಿಕೊಳ್ಳುತ್ತಿದ್ದರು. ಒಮ್ಮೆ ಅದನ್ನು ಕೇಳಿ ಆ ಮಧುರ ಕಂಠವನ್ನು ಮೆಚ್ಚಿಕೊಂಡರು. ಅಷ್ಟೆ ಅಲ್ಲ, ತಮ್ಮ ಸಂಗೀತ ನಿರ್ದೇಶನದಲ್ಲಿ ಎರಡು ಹಾಡುಗಳ – ಭಾಗ್ಯದ ಲಕ್ಷ್ಮೀ ಬಾರಮ್ಮಾ ಮತ್ತು ಹೂವ ತರುವರ ಮನೆಗೆ ಹುಲ್ಲ ತರುವಾ – ಇವುಗಳ ಧ್ವನಿ ಮುದ್ರಣವನ್ನೂಮಾಡಿಸಿದರು. ಇದು ೧೯೪೫-೪೬ ರಲ್ಲಿ, ಜಯವಂತಿದೇವಿ ಇನ್ನೂ ಹದಿನೆಂಟರ ಹುಡುಗಿಯಾಗಿದ್ದಾಗ.

ಮುಂದೆ, ಅದೆ ನಾಗಯ್ಯಾ ತ್ಯಾಗರಾಜರ ಜೀವನ ಕಥೆಯನ್ನು ತೆಲುಗಿನಲ್ಲಿ ತ್ಯಾಗಯ್ಯ ಎಂಬ ಚಲಚಿತ್ರವಾಗಿಸಿ ೧೯೪೬ ರಲ್ಲಿ ಬಿಡುಗಡೆ ಮಾಡಿದರು. ಅದರಲ್ಲಿ ಜಯವಂತಿದೇವಿ ಅವರಿಗೆ ಹಾಡುವ ಅವಕಾಶ ಮಾಡಿಕೊಟ್ಟರು. ಹಾಗೆಯೆ ಆಲ್ ಇಂಡಿಯಾ ರೇಡಿಯೋ ಮದ್ರಾಸ ಕೇಂದ್ರದವರಿಗೆ ಪರಿಚಯ ಮಾಡಿಕೊಟ್ಟರು.

ಈ ಗಾಯಕಿಗೆ ಸಿನಿಮಾದಲ್ಲಿ ಹಾಡುವ ಅವಕಾಶ ಇದೊಂದಕ್ಕೆ ಸೀಮಿತವಾಗಲಿಲ್ಲ. ಎರಡು ವರ್ಷಗಳ ನಂತರ ೧೯೪೮ ರಲ್ಲಿ ಬಿಡುಗಡೆಯಾದ ಮತ್ತೊಂದು ಪ್ರಸಿದ್ಧ ಚಿತ್ರ ಕಲ್ಪನಾದಲ್ಲಿಯೂ ಒಂದೆರಡು ಹಾಡುಗಳ ಅವಕಾಶ ಸಿಕ್ಕಿತು. ಅದು ಜಾಗತಿಕ ಪ್ರಸಿದ್ಧಿಯ ನೃತ್ಯ ಪಟು ಉದಯಶಂಕರ ನಿರ್ಮಿಸಿ,  ನಾಯಕನಾಗಿ ಅಭಿನಯಿಸಿ, ನಿರ್ದೇಶಿಸಿದ್ದ ಚಿತ್ರ.  ಅವರು ಸಿತಾರವಾದಕ ರವಿಶಂಕರ ಅವರ ಹಿರಿಯಣ್ಣ.

ಈ ಸಿನಿಮಾದಲ್ಲಿ ಸಿಕ್ಕ ಅವಕಾಶದೊಂದಿಗೆ ಮತ್ತೂ ಧ್ವನಿ ಮುದ್ರಣಗೊಂಡ – ಕನಕದಾಸರ “ತಲ್ಲಣಿಸದಿರು ಕಂಡ್ಯ ತಾಳು ಮನವೆ” , ವಿಜಯದಾಸರ “ಸದಾ ಎನ್ನ ಹೃದಯದಲ್ಲಿ ವಾಸ ಮಾಡೊ ಶ್ರೀ ಹರಿ” ಮತ್ತು ಕೆ.ಎಸ್.ನರಸಿಂಹಸ್ವಾಮಿಯವರ ಭಾವಗೀತೆ “ಹತ್ತು ವರ್ಷಗಳ ಹಿಂದೆ” ಅಲ್ಲದೆ ಮತ್ತೂ ಕೆಲವು ಗೀತೆಗಳು ಬಿಡುಗಡೆಯಾಗಿ ಬಹಳ ಜನಪ್ರಿಯವಾಗಿದ್ದವು. ಜಯವಂತಿದೇವಿ ತನ್ನ ಕಂಠ ಮಾಧುರ್ಯದಿಂದ ದೊಡ್ಡ ಹೆಸರು ಮಾಡಿದ್ದರು. ಕರ್ನಾಟಕದಲ್ಲಿಯೆ ಉಳಿದಿದ್ದರೆ ಇನ್ನೂ ಅನೇಕಾನೇಕ ಹಾಡುಗಳ ಧ್ವನಿಮುದ್ರಿಕೆಗಳು ಬರುತ್ತಿದ್ದುದರಲ್ಲಿ ಸಂಶಯವಿಲ್ಲ. ಆದರೆ ಅವರ ವಿವಾಹ ಅವರನ್ನು ಮೊದಲು ಪುಣೆಗೂ ನಂತರ ಕೆಲ ಕಾಲ ಜಮಶೆಡಪುರಕ್ಕೂ ಕರೆದೊಯ್ದಿತು. ದಾಸರ ಪದ, ಭಕ್ತಿ ಗೀತೆ, ಭಾವಗೀತೆಗಳ – ಕನ್ನಡ ಸುಗಮ ಸಂಗೀತದ ಕ್ಷೇತ್ರದ ಸಂಬಂಧ ಕಡಿಮೆಯಾಯಿತು. ಆದರೆ ಇದಾವುದಕ್ಕೂ ಅವರು ಕೊರಗಲಿಲ್ಲ. ಮನ ತಲ್ಲಣಗೊಳ್ಳಲಿಲ್ಲ.

ಜಯವಂತಿದೇವಿ ದಿನಕರ ಹಿರೇಬೆಟ್ಟರನ್ನು ಮದುವೆಯಾಗಿ ಪುಣೆಗೆ ಬಂದಾಗ ಅಲ್ಲಿ ಆಕಾಶವಾಣಿ ಕೇಂದ್ರ ಶುರುವಾಗಿರಲಿಲ್ಲ, ಮುಂಬಯಿ ಆಕಾಶವಾಣಿಯಲ್ಲಿ ಹಿಂದಿ, ಮರಾಠಿಯಲ್ಲೂ ಹಾಡಿದರು. ನಂತರ ಪುಣೆಯಲ್ಲಿ ಆಕಾಶವಾಣಿ ಕೇಂದ್ರ ಸ್ಥಾಪನೆಯಾದ ಮೇಲೆ ಅವರ ಧ್ವನಿ ಅಲ್ಲಿಂದಲೂ ಬಿತ್ತರಗೊಂಡಿತು. ಅವಕಾಶ ಸಿಕ್ಕಾಗಲೆಲ್ಲ ಕನ್ನಡ ಹಾಡುಗಳನ್ನೂ ಅಂದರು. ಆದರೆ ಧ್ವನಿ ಮುದ್ರಿಕೆಯ ರೂಪದಲ್ಲಿ ಅವೆಲ್ಲ ಸಿಗದೆ ಹೋದವು.

ಇದ್ದುದರಲ್ಲಿಯೆ ಒಂದು ಸಮಾಧಾನ. ಸುಗಮ ಸಂಗೀತದಲ್ಲಿನ ಅವರ ಸಾಧನೆ, ಸಿದ್ಧಿಯನ್ನು ಕೊನೆಗೂ ಕರ್ನಾಟಕ ಸರಕಾರ ಗುರುತಿಸಿತು. ಸಂತ ಶಿಶುನಾಳ ಶರೀಫರ ಹೆಸರಿನಲ್ಲಿ ಪ್ರಶಸ್ತಿ ಶುರು ಮಾಡಬೇಕೆಂದು ೧೯೯೫ ರಲ್ಲಿ ನಿರ್ಧರಿಸಿದಾಗ ಅದರ ಮೊದಲ ಪುರಸ್ಕರ್ತೆಯಾಗಿ ಜಯದೇವಿಯವರನ್ನು ಆರಿಸಿತು.

ಇದೊಂದು ಅವರ ಜೀವನದ ಒಂದು ಸಂಕ್ಷಿಪ್ತ ಕಥೆ. ಅವರ ಆ ಹಾಡುಗಳ ನೆನಪು ಮತ್ತು ಅತ್ಯಲ್ಪ ಮಾಹಿತಿ ಇಷ್ಟೇ ನನಗೆ  ಗೊತ್ತಿದ್ದುದು. ಆದರೆ ಎರಡು ವರ್ಷಗಳಿಗಿಂತಲೂ ಮೊದಲೊಮ್ಮೆ ಅಂತರ್ಜಾಲದಲ್ಲಿ ತಡಕಾಡುತ್ತಿದ್ದಾಗ ಈ ಕಲಾವಿದೆಯ ಬಗ್ಗೆ  ರಹಮತ ತರಿಕೆರೆಯವರ ಬರಹವೊಂದು ಕಣ್ಣಿಗೆ ಬಿತ್ತಲ್ಲದೆ, ಜಯವಂತಿದೇವಿಯವರು ಪುಣೆಯ ಒಳ್ಳೆಯ ಸೌಕರ್ಯದ  ‘ವೃದ್ಧಾಶ್ರಮ‘ವೊಂದರಲ್ಲಿ ಇದ್ದಾರೆಂದು ಗೊತ್ತಾಯಿತು. ಆದರೆ ಅವರ ಸಂದರ್ಶನ ಸಾಧ್ಯವಾಗಲಿಲ್ಲ.

ಈಗ ಮತ್ತೊಮ್ಮೆ ಓದಲು ಆ ಬರೆಹ ಸಿಗುತ್ತಲೂ ಇಲ್ಲ. ಅಲ್ಲದೆ ಆ ಮಹಾನ್ ಕಲಾವಿದೆ ಈಗ ಉಳಿದೂ ಇಲ್ಲ. ಆದರೆ ಎಲ್ಲರೂ ಅವರನ್ನು ಪೂರ್ಣವಾಗಿ ಮರೆತೂ ಇಲ್ಲ. ಇತಿಹಾಸದ ಬಗ್ಗೆ ಜಿಜ್ಞಾಸುವಾಗಿರುವ ವ್ಯಕ್ತಿ ಅಲ್ಲೊಬ್ಬ, ಇಲ್ಲೊಬ್ಬ ಇದ್ದೇ ಇರುತ್ತಾರೆ. ಪುಣೆಯ ಸಂಗೀತ ರಸಿಕರೊಬ್ಬರು ೨೦೧೫ ರಲ್ಲಿ ‘ಸವಾಯಿ ಗಂಧರ್ವ ಮಹೋತ್ಸವ‘ಕ್ಕೆ ಹೋದಾಗ ಅಲ್ಲಿ ಉಪೇಂದ್ರ ಭಟ್ಟ ಅವರ ಕಾರ್ಯಕ್ರಮ ಇದ್ದಿತು. ಅವರು ಪ್ರಾಸಂಗಿಕವಾಗಿ ‘ಭಾಗ್ಯದ ಲಕ್ಷ್ಮೀ ಬಾರಮ್ಮ‘ ದ ಪ್ರಸ್ತಾಪಮಾಡಿ, ತಾವು ಕೇಳಿದ್ದ ಜಯವಂತಿದೇವಿಯವರ ನೆನಪು ಮಾಡಿಕೊಂಡರಂತೆ.

ಶ್ರೀನಾಥ ಶೆಣೈ ಅವರಿಗೆ ಇದಿಷ್ಟೆ ಸಾಕಾಯಿತು, ಜಯವಂತಿದೇವಿಯವರ ಬಗ್ಗೆ ಮತ್ತಷ್ಟು ತಿಳಿಯುವ ಆಸೆ ಹುಟ್ಟಲು, ಪ್ರಯತ್ನ ಮಾಡಲು. ಅದರ ಫಲವೆ, ಅವರು ಹುಡುಕಿ ಕೊಟ್ಟ ೭೫ ವರ್ಷದಷ್ಟು ಹಳೆಯ ತೆಲುಗು ‘ತ್ಯಾಗಯ್ಯ‘ ದ ಆ ದೃಶ್ಯ ಮತ್ತು ಆ ಹಾಡು. ತಂಜಾವೂರಿನ ಮಹಾರಾಜ ಸರಭೊ(ಫೋ)ಜಿ ದರಬಾರ ಪ್ರವೇಶ ಮಾಡಿಯಾದ ಮೇಲೆ ನಡೆದ ಸಂಗೀತ ಕಾರ್ಯಕ್ರಮದ ದೃಶ್ಯ.

ಆ ತರುಣ ಗಾಯಕಿ ಹಿಂದುಸ್ಥಾನಿ ಸಂಗೀತ ಸಾದರಪಡಿಸುತ್ತಾ ತನ್ನ ಕಂಠ ಮಾಧುರ್ಯದಿಂದ ಎಲ್ಲರ ಮನ ಸೆಳೆಯುತ್ತಾಳೆ. ಆ ಹಾಡೆ “ದುನಿಯಾ ತೇರಿ ಸರಕಾರಮೆ ಸರ ಅಪನೆ ಝುಕಾದೇ“. ಆ ದೃಶ್ಯ, ಆ ಗೀತೆ – ಚಲಚಿತ್ರದ ಭಾಗವಾಗಿದ್ದ ತುಣುಕು – ಅದನ್ನು ಹುಡುಕಿ ಒದಗಿಸಿದ ಶ್ರೀನಾಥ ಶೆಣೈರವರದು ಸಾಮಾನ್ಯ ಕನ್ನಡ ಕಲಾಸೇವೆಯಲ್ಲ! ಇಲ್ಲಿಯವರೆಗೆ ನಮ್ಮ ಕೈಯಲ್ಲಿದ್ದುದು ಅವರ ಬೆರಳಮೇಲೆ ಎಣಿಸುವಷ್ಟು ಮಾತ್ರದ ರೆಕಾರ್ಡುಗಳು, ಎರಡು ಫೋಟೊಗಳು ಮಾತ್ರ. ಈಗ ಜೊತೆಗೇ ‘ಬೋನಸ್‘ ಆಗಿ ‘ತ್ಯಾಗಯ್ಯ’ದ ಪೋಸ್ಟರುಗಳು ಮತ್ತು ಬಿ.ಜಯಮ್ಮ ಮತ್ತು ಜಯವಂತಿದೇವಿ ಅವರ ಹೆಸರು ಇದ್ದ ‘ಟೈಟಲ ಕಾರ್ಡ’ ಕೂಡ ಅವರಿಂದಾಗಿ ನೋಡಸಿಕ್ಕಿವೆ. ಅಂದ ಹಾಗೆ ಆ ಚಿತ್ರದಲ್ಲಿನ ಒಂದು ಪ್ರಮುಖ ಪಾತ್ರ ತ್ಯಾಗರಾಜರ ಪತ್ನಿ ಧರ್ಮಾಂಬಾ, ಅದನ್ನು ಮಾಡಿದವರು ಕನ್ನಡತಿ ಬಿ.ಜಯಮ್ಮ.

ಶೆಣೈ ಆರು ತಿಂಗಳ ಹಿಂದೆಯಷ್ಟೆ ಮಾಡಿದ ‘ಪೋಸ್ಟ’ದಲ್ಲಿ ಗೋವೆಯ ಸುಷಮಾ ಆರೂರ ಅವರು ಜಯವಂತಿದೇವಿಯವರ ಕುರಿತು ಬರೆದ ಶ್ರದ್ಧಾಂಜಲಿ ಲೇಖವೊಂದು ಇದೆ. ಅದರಲ್ಲಿ ಆ ಕಲಾವಿದೆ ಮೌನವಾಗಿ ನುಂಗಿಕೊಂಡ ಕಹಿಯಾದ ಮತ್ತು ನೋವಿನ ಘಟನೆಯೊಂದರ ಉಲ್ಲೇಖವಿದೆ.

ಅದು, ಅವರು ಕೆಲ ಮರಾಠಿ ಹಾಡುಗಳ ತಾಲೀಮು ಮಾಡುತ್ತಿದ್ದ ಸಂದರ್ಭ. ಅದೇ ಕಾಲಕ್ಕೆ ಗೀತಾ ದತ್ತ (ರಾಯ) ಅವರಿಗೂ ಮರಾಠಿ ಭಾವಗೀತೆಗಳನ್ನು ಕಲಿಯುವ ಪ್ರಯತ್ನದಲ್ಲಿದ್ದರು. ಇಬ್ಬರೂ  ಸಂಗೀತ ನಿರ್ದೇಶಕ ಬಾಬೂರಾವ ನಾವಡಿಕರ ಅವರ ಹತ್ತಿರ ಹೇಳಿಸಿಕೊಳ್ಳುತ್ತಿದ್ದರು. ಅದಾಗಲೇ ಜಯವಂತಿದೇವಿ ಗೀತ ರಾಮಾಯಣ ಖ್ಯಾತಿಯ ಗ.ದಿ.ಮಾಡಗೂಳಕರ ಅವರ “ಜಾ ಸಾಂಗ ಲಕ್ಷ್ಮಣಾ ರಾಮರಾಜಾಲಾ, ಸಮಝಲಾ ಮ್ಹಣಾವೆ, ನ್ಯಾಯ ತುಝಾ ಸೀತೇಲಾ” ಹಾಡಿನ ಚೆನ್ನಾದ ಅಭ್ಯಾಸ ಮತ್ತು “ರಿಹರ್ಸಲ್” ಎಲ್ಲವೂ ಆಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಎಚ್.ಎಮ್.ವಿ ಬೇರೆಯದನ್ನೇ ಮಾಡಿತು. ಆ ಹಾಡು ಗೀತಾ ದತ್ತರ ಧ್ವನಿಯಲ್ಲಿ ಮುದ್ರಣಗೊಂಡಿತು. ಕಾರಣ ಜಯವಂತಿದೇವಿಯವರ ಹಾಡುಗಾರಿಕೆಯ ಶ್ರಾವ್ಯತೆ ಕಡಿಮೆ ಇತ್ತೆಂದು ಅಲ್ಲ. ಆದರೆ ಗೀತಾ ದತ್ತರ ಖ್ಯಾತಿ ಹೆಚ್ಚಿದ್ದಿತು. ಸ್ವತಃ ಗೀತಾ ದತ್ತ ಅವರ ಮನಸ್ಸಿಗೂ ಇದು ಚುಚ್ಚುತ್ತಿತ್ತಂತೆ.

ಈ ಪ್ರಸಂಗದ ನೆನಪು ಹೇಳಿದವರು ಸ್ವತಃ ಜಯವಂತಿದೇವಿಯವರೆ, ಅವರು ಪುಣೆಯ ‘ಅಥಶ್ರೀ‘ ಯಲ್ಲಿ ಪ್ರಶಾಂತ ಬುರಡೆಯವರಿಗೆ ಸಂದರ್ಶನ ಇತ್ತಾಗ. ಬುರಡೆ ಒಬ್ಬ ಸಂಗೀತ ರಸಿಕ. ಎಸ್.ಎಲ್.ಭೈರಪ್ಪ ಅವರ ‘ಮಂದ್ರ‘ದ ಮುನ್ನುಡಿಯಲ್ಲಿ ಇವರ ಹೆಸರಿದೆ. ‘ಸಂಗೀತ ಸರಸಿ‘ ಯ ಕರ್ತೃ. ಪರಿಚಯದ ಮತ್ತೊಂದು ಮಾತನ್ನು ಚುಟುಕಾಗಿ ಹೇಳಬೇಕೆಂದರೆ – ಜ್ಯೋತ್ಸ್ನಾ ಕಾಮತ, ಪ್ರಶಾಂತ ಬುರಡೆ ಮತ್ತು ಸುಷಮಾ ಆರೂರ ಈ ಮೂವರೂ ಸೋದರ, ಸೋದರಿಯರು.