ಕನ್ನಡವೇ ಬೇಕೆನಿಸಿದಾಗ…..ಕನ್ನಡದ ಕೆಚ್ಚನ್ನು ಕೆಣಕಿದಾಗ…..

ಗಣೇಶನ ಹಬ್ಬವನ್ನೀಗ ಎಲ್ಲೆಡೆ ಆಚರಿಸಲಾಗುತ್ತಿದೆ. ಇದು, ನೀವು ಕನ್ನಡ ಮರಾಠಿ ಗಡಿ ಭಾಗದವರಾಗಿದ್ದರೆ ಆಗಲೆ ಕೇಳಿದ ಆದರೂ ಕೇಳದ ಗಣಪತಿಯ ಆರತಿಯ ಹಾಡೊಂದರ ಬಗ್ಗೆ ಬರೆಯುತ್ತಿದ್ದೇನೆ. ಅದು ಹಳೆಯದೇ ಆಗಿದ್ದರೂ ಹೊಸದಾದ ಹಾಡು. ಇದೇನು ವಿಚಿತ್ರವಾಗಿದೆಯಲ್ಲ, ಮನದಲ್ಲಿ ಗೊಂದಲ ಹುಟ್ಟಿಸುವ ಮಾತಾಗಿದೆಯಲ್ಲ ಅನಿಸುತ್ತಿದೆಯೆ!  ಓದಿ, ಗಟ್ಟಿಯಾಗಿ ಅಂದು ನೋಡಿರಿ…

ಸುಖ ಕೊಡುವ ದುಃಖ ಹರಿವ ವಿಘ್ನನಾsಶsಕಾ

ಇರಲಿ ಪ್ರೇಮದ ಕೃಪೆಯು ಭಕ್ತಿ ಪೋಷಕಾ

ಹೊಳೆವ ಕೇಶರಿ ಬಣ್ಣಾ ಸುಂದರs ನಯನಾ

ಕೊರಳಲಿ ಮುತ್ತಿನ ಹಾರಾ ಚಂದೀರ ವದನಾss

ಜಯದೇವ ಜಯದೇವ.. (೧)

ಜಯದೇವ ಜಯದೇವ ಜಯ ಮಂಗಳ ಮೂರ್ತಿ

ದರ್ಶನ ಮಾತ್ರದಿಂದ ಕಾಮನೆಗಳು ಪೂರ್ತಿ ಜಯದೇವ..  (ಪ)

ರತ್ನ ಖಚಿತ ನೀನು  ಹರಗೌರಿ ಕುವರ

ಚಂದನದಿಂದೊಪ್ಪುವ ಕುಂಕುಮ ಕೇಶರ

ವಜ್ರಖಚಿತ ಮುಕುಟ ಚಂದದೀ ನಿಂದ

ಗೆಜ್ಜೆ ಕಾಲ್ಗಳ ಕುಣಿಸಿ ಝಣಝಣುತಾ ಬಂದಾss (೨)

ಜಯದೇವ..ಜಯದೇವ……..(ಪ)

ಲಂಬೋದರ ಪೀತಾಂಬರ ಹಣೆಗೆ ಸಿಂದೂರಾ

ಸುರುಳಿ ಸೊಂಡಿಲ ವಕ್ರತುಂಡ ತ್ರಿನಯನಾ

ದಾಸರಾಮರು ನಿನಗೆ ಕಾಯ್ದಿರುವ ಶರಣಾ

ಕಷ್ಟ ಕೋಟಲೆ ಹರಿಸು ಸುರವರ ವಂದನಾss (೩)

ಜಯದೇವ ..ಜಯದೇವ……. (ಪ)

ಈ ಆರತಿ ಪದ್ಯದ ಭಾವ, ಕೆಲ ಶಬ್ದಗಳು ಪರಿಚಿತವಾದವು, ಕೇಳಿದ ಹಾಗಿದೆ ಎನಿಸಿದರೆ ಅದು ಆಶ್ಚರ್ಯವೇನಿಲ್ಲ.

ಹೌದು! ಮೂಲದಲ್ಲಿನ ಇದು ಸುಖಕರ್ತಾ ದುಃಖಹರ್ತಾ ಎಂಬ, ಛತ್ರಪತಿ ಶಿವಾಜಿಯ ಗುರು ಶ್ರೀ ಸಮರ್ಥ ರಾಮದಾಸರು (೧೬೦೮-೧೬೮೧) ರಚಿಸಿದ, ಗಣಪತಿಯ ಅತ್ಯಂತ ಜನಪ್ರಿಯ ಮರಾಠಿ ಆರತಿ ಹಾಡು. ಮರಾಠಿ ಜನರಿಗೆ ಗಣಪತಿಯ ಶಾಸ್ತ್ರೋಕ್ತ ಪೂಜಾ ವಿಧಾನದಲ್ಲಿ ಏನಾದರೊಂದು ಸಣ್ಣಪುಟ್ಟ ತಪ್ಪಾದರೆ ಅದು ಗೊತ್ತಾಗದೆ ಹೋದೀತು. ಆದರೆ ಈ ಹಾಡು ಇಲ್ಲದೆ ಮರಾಠಿಗರಲ್ಲಿ ಗಣಪತಿಯ ಪೂಜೆಯನ್ನು ಊಹಿಸುವದೂ ಸಾಧ್ಯವಿಲ್ಲ. ಅಷ್ಟೊಂದು ಅದು ಪೂಜೆಯ ಅವಿಭಾಜ್ಯ ಅಂಗವಾಗಿದೆ. ಹಾಗೆಯೆ ಮಹಾರಾಷ್ಟ್ರಕ್ಕೆ ಹತ್ತಿದ ಗಡಿ ಭಾಗದ ಕನ್ನಡಿಗರಲ್ಲಿಯೂ ಇದು ಅಷ್ಟೇ ಜನ ಮನ್ನಣೆ, ಪ್ರೀತಿಗಳಿಸಿದೆ. ಅದಿಲ್ಲದೆಯೆ ಗಣಪತಿ ಪೂಜೆ ಮುಗಿಯುವದಿಲ್ಲ..

ಇರಲಿ, ಈ ಕನ್ನಡಾನುವಾದ ಪದ್ಯ ಇನ್ನೂ ಪ್ರಕಟವಾಗಿಲ್ಲ. ಆದರೆ ಕುಟುಂಬವೊಂದರಲ್ಲಿ ಗಣಪತಿ ಹಬ್ಬದ ಆಚರಣೆಯಲ್ಲಿ  ಆರತಿ ಪದ್ಯವಾಗಿ ನಾಕು ವರ್ಷಗಳಿಂದ ಹಾಡಲ್ಪಡುತ್ತಿದೆ. ಅದೂ ಎಲ್ಲಿ ಅಂದರೆ ಗೋವೆಯಲ್ಲಿ. ಅನುವಾದಕ ಮೈಸೂರು ನಗರ ವಾಸಿ. ಗೋವೆಯಲ್ಲಿ ಇರುವವರು ಅವರ ಹಿರಿಯ ಅಣ್ಣ. ಹಬ್ಬದಲ್ಲಿ ಸೋದರರೆಲ್ಲ ಅಲ್ಲಿ ಸೇರುತ್ತಾರೆ. ಕರೋನಾದ ಕಾರಣದಿಂದಾಗಿ ಕಳೆದ ಸಲ ಮಾತ್ರ ಅದು ತಪ್ಪಿದ್ದಿತು.

ಡಾ.ಆಶೋಕ ಸಾತಪುತೆ

ಕನ್ನಡದ ಅಸ್ಮಿತೆ ಈ ರೂಪದಲ್ಲಿ ಹುಟ್ಟಲು ’ಕಾರಣ ಪುರುಷ’ನಾದ ವ್ಯಕ್ತಿ ವೃತ್ತಿಯಿಂದ ಒಬ್ಬ ವೈದ್ಯಶಿಕ್ಷಕ, ಡಾ.ಆಶೋಕ ಸಾತಪುತೆ. ಮೈಸೂರಿನ ಸರಕಾರಿ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಂಶುಪಾಲ. ೨೦೧೯ ರಲ್ಲಿ ರಾಜ್ಯದ ರಾಜೀವ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ಥ ಸಾಯನ್ಸೆಸ್ ಇವರಿಗೆ  ಆಯುರ್ವೇದ ಫ್ಯಾಕಲ್ಟಿಯಲ್ಲಿ ಪ್ರೊಫೆಸರ ಎಮೆರಿಟಸ್ ಸ್ಥಾನಮಾನವನ್ನು ಪ್ರದಾನ ಮಾಡಿದೆ..

ಡಾ.ಅಶೋಕ ಸಾತಪುತೆ ಕನ್ನಡ ಅಸ್ಮಿತೆಯುಳ್ಳ ಕವಿ ಹೃದಯದ, ಸಾಹಿತ್ಯ ಪ್ರೇಮಿ. (ಆಗೀಗ ವಿಶ್ವವಾಣಿಯಲ್ಲಿ ಚಿಕ್ಕ ಪುಟ್ಟ ಲೇಖಗಳನ್ನೂ ಬರೆದಿದ್ದಾರೆ) ಗೋವೆಯಲ್ಲಿರುವ ಅವರ ಅಣ್ಣ ಶ್ರೀ. ಕೃಷ್ಣ ದೊಡ್ಡ ಕಂಪನಿಯ ನಿವೃತ್ತ ಫೈನಾನ್ಸ ಜನರಲ ಮ್ಯಾನೆಜರ. ಕಿರಿಯ ಸೋದರ ಶ್ರೀ ಸುರೇಶ ಬೆಂಗಳೂರಿನ ಕಿಡ್ವಾಯಿ ಕ್ಯಾನ್ಸರ ಆಸ್ಪತ್ರೆಯಲ್ಲಿ ಸೈಟೊ ಟೆಕ್ನಿಶಿಯನ ಆಗಿ ನಿವೃತ್ತನಾದ ವ್ಯಕ್ತಿ. ಈ ಇಡೀ ಕುಟುಂಬ ಬೆಳಗಾವಿಯ ಖಾಸಬಾಗ ಮೂಲದ್ದು. ಮೂರು ದಶಕಗಳಹಿಂದೆ ನೇಕಾರಿಕೆಯನ್ನು ಅವಲಂಬಿಸಿದ್ದ ಮನೆತನ.

ಇವರೆಲ್ಲರ ಹೆಸರು ಇಲ್ಲಿ ಉಲ್ಲೇಖಿಸಲು ಕಾರಣವಿಷ್ಟೆ! ಇವರಾರೂ ಸಾರ್ವಜನಿಕವಾಗಿ ಹೆಸರು ಪಡೆದವರೇನಲ್ಲ. ಲಕ್ಷಾವಧಿ ಸಾಮಾನ್ಯರಲ್ಲಿ ಸೇರಿಹೋದವರು. ಆದರೆ ಕನ್ನಡದ ಉಳಿವು ಮತ್ತು ಬೆಳವಣಿಗೆ ಇಂತಹ ಸಾಮಾನ್ಯ ಜನರ ನಿತ್ಯ ಜೀವನದಲ್ಲಿ ಅದು ಎಷ್ಟು ಬೆರೆತಿದೆ ಎಂಬುದನ್ನು ಅವಲಂಬಿಸಿದೆ ಎಂದು ಒತ್ತುಗೊಟ್ಟು ಹೇಳಲು. ಮನೆಯಲ್ಲಿ ಕನ್ನಡದಲ್ಲಿಯೆ ಆರತಿ ಹಾಡನ್ನು ಹೇಳಬೇಕೆಂದೆನಿಸಿ, ಆ ಎಲ್ಲರ ಪ್ರೇರಣೆ, ಪ್ರೋತ್ಸಾಹದಿಂದ ಈ ’ಸುಖಕೊಡುವ ದುಃಖ ಹರಿವ’ ಈ ಅನುವಾದಿತ ಗಣಪತಿ ಆರತಿ ಹಾಡು ಹೊರಹೊಮ್ಮಿತು.

ಕೆಲ ದಶಕಗಳ ಅವಧಿಯ ಉದ್ದಕ್ಕೂ ಈ ಮರಾಠಿ ಆರತಿ ಪದ್ಯ ಗಡಿ ವಿವಾದದ ಕಲುಷಿತ ವಾತಾವರಣದ ಹಿನ್ನೆಲೆಯಲ್ಲಿಯೂ ಸಾವಿರಾರು ಕನ್ನಡಿಗರ ಮನೆಗಳಲ್ಲಿ ಸಮೂಹ ಕಂಠದಲ್ಲಿ ಕೇಳಿ ಬರುತ್ತಿತ್ತು. ಜನಕ್ಕೆ ಅದರಲ್ಲಿ ಅಷ್ಟು ಶ್ರದ್ಧಾ ಭಕ್ತಿ. ಅದು ಹೇಗೊ ಡಾ. ಸುರೇಶ ಸಾತಪುತೆಯವರಿಗೆ ಗಣಪತಿಯ ವರ್ಣನೆಯನ್ನು ಇದೇ ಭಕ್ತಿ ಭಾವದಲ್ಲಿ ಕನ್ನಡಲ್ಲಿ ಹಾಡುವದು ಸಾಧ್ಯವಿಲ್ಲವೆ ಎಂಬ ಪ್ರಶ್ನೆ ಕಾಡತೊಡಗಿತು. ಏಕೆ ಸಾಧ್ಯವಿಲ್ಲ! ನಿನ್ನಲ್ಲಿ ಕವಿತಾ ರಚನೆಯ ಸಾಮರ್ಥ್ಯವಿದೆ, ಪ್ರಯತ್ನ ಮಾಡು, ಅದನ್ನು ಒಪ್ಪಿಕೊಂಡು ಆರತಿಯ ವೇಳೆಗೆ ಅನ್ನಲು ನಾವು ತಯಾರು ಎಂದು ಸೋದರರೆಲ್ಲ ಹುರಿದುಂಬಿಸಿದರು.

ಕನ್ನಡದ ಪೂಜಾರಿ ಎಂದು ಖ್ಯಾತಿ ಪಡೆದ ಶ್ರೀ ಹಿರೆಮಗಳೂರು ಕಣ್ಣನ್ ಹೇಗೆ ಪೂಜಾ ವಿಧಾನದಲ್ಲಿ ಕನ್ನಡವನ್ನು ಅಳವಡಿಸಿ ಮಂತ್ರಗಳನ್ನು ಕನ್ನಡದಲ್ಲಿ ಹೇಳಿದ ರೀತಿಯಲ್ಲಿ ಸಾಸುವೆ ಗಾತ್ರದ ಈ ಚಿಕ್ಕ ಪ್ರಯತ್ನ ಆಯಿತು. ಆದರೆ ಅದಿನ್ನೂ ಪ್ರಕಟನೆಗೊಂಡಿಲ್ಲ, ಆದ್ದರಿಂದ ಜನಕ್ಕೆ ಗೊತ್ತೂ ಆಗಿಲ್ಲ, ಹೀಗಾಗಿ ಇನ್ನೂ ಅಪರಿಚಿತವಾಗಿ ತೆರೆಯ ಮರೆಯಲ್ಲಿಯೆ ಇದೆ.

ಕನ್ನಡದ ಅಸ್ಮಿತೆ ಬೇರೆ ರೂಪದಲ್ಲಿಯೂ – ಅದೇಕೆ ಮರಾಠಿಯಲ್ಲಿಯೆ – ವ್ಯಕ್ತವಾಗಿರುವ ಉದಾಹರಣೆಯೂ ಇದೆ. ಮೂರು ವರ್ಷಗಳ ಹಿಂದೆ ಒಂದು ಧ್ವನಿ ಮುದ್ರಿಕೆಯನ್ನು ಅಕಸ್ಮಾತ್ತಾಗಿ ಕೇಳಿದೆ. ಮೊದಲಿಗೆ ಅದು ಪಂ.ಭೀಮಸೇನ ಜೋಶಿಯವರ ಧ್ವನಿ, ಭಾಗ್ಯದ ಲಕ್ಷ್ಮೀ ಬಾರಮ್ಮ ಎಂಬ ಪುರಂದರ ದಾಸರ ಕನ್ನಡ ಪದ ಎನಿಸಿತು. ಕೇಳುತ್ತ ಹೋದಂತೆ ಇದು ಕನ್ನಡ ಹಾಡಲ್ಲ, ಭೀಮಸೇನ ಜೋಶಿಯವರೂ ಅನ್ನುತ್ತಿಲ್ಲ ಎನಿಸಿತು. ಅದು ಭಾಗ್ಯಾಚೀ ಲಕ್ಷ್ಮೀ ಯೇಗ ಯೇ ಎಂಬ ಮರಾಠಿ ಭಾಷಾಂತರ, ಪಂ.ವಾಮನಾಚಾರ್ಯ ಜೋಶಿ ಎಂಬ ಲಾತೂರಿನ ವೈದಿಕ ಪಂಡಿತರ ಧ್ವನಿಯೆಂದು ಗೊತ್ತಾಯಿತು. ದುರ್ದೈವದಿಂದ ೨೦೧೭ ರ ಡಿಸೆಂಬರಿನಲ್ಲಿ ಅವರ ಅಕಾಲ ಮರಣವಾಯಿತು.

ದಾಸ ಸಾಹಿತ್ಯ ಸುಧೆಯ ರುಚಿಯನ್ನು ಮರಾಠಿಗರಿಗೂ ಉಣಿಸಲು ಬೇರೆ ಬೇರೆ ದಾಸರ ಹಲವು ನೂರು ಪದಗಳನ್ನು, ಉಗಾಭೋಗಗಳನ್ನು, ಮುಂಡಿಗೆಗಳನ್ನು ವರದ ವಿಠ್ಠಲ ಎಂಬ ಅಂಕಿತದಲ್ಲಿ ಮರಾಠಿಗೆ ಭಾಷಾಂತರಿಸಿ, ಪ್ರಕಟಿಸಿದ್ದಾರೆ ಶ್ರೀ ರಾಮಮೂರ್ತಿ ಕೆಂಭಾವಿಯವರು. ಸಾಹಿತ್ಯ ಕೃತಿಗಳ ಭಾಷಾಂತರ ಕೆಲಸ ಅಪರೂಪದ್ದೇನೂ ಅಲ್ಲ. ಆದರೆ ಇವರ ಕೆಲಸ ಇನ್ನೂ ಹೆಚ್ಚಿನದು. ಕನ್ನಡಿಗರು ಅನ್ನುವ ಧಾಟಿಯಲ್ಲೆ ಮರಾಠಿಯಲ್ಲಿಯೂ ಆ ಪದಗಳನ್ನು ಅನ್ನುವ ಹಾಗೆ ರಚನೆ ಮಾಡಿರುವದಲ್ಲದೆ, ಪುಣೆ ಮತ್ತಿತರ ಕಡೆಗಳಲ್ಲಿನ ಮಾಧ್ವ ಮಹಿಳಾ ಭಜನಾ ಮಂಡಲಿಗಳವರು ಅವುಗಳನ್ನು ನಿಯಮಿತವಾಗಿ ಅರ್ಥ ತಿಳಿದು ಹೇಳುವ ತರಬೇತಿಯ ವ್ಯವಸ್ಥೆಯನ್ನೂ ಮಾಡಿದ್ದಾರೆ.

ಇಂಜಿನೀಯರ ಆಗಿರುವ ಕನ್ನಡಿಗ ಶ್ರೀ ಕೆಂಭಾವಿಯವರು ಮಹಾರಾಷ್ಟ್ರದ ನೀರಾವರಿ ಇಲಾಖೆಯಲ್ಲಿ ಅಧಿಕಾರಿಯಾಗಿ ಇದ್ದು ನಿವೃತ್ತರಾಗಿರುವರು.  ಅವರ ಪ್ರಯತ್ನದ ಫಲದ ಒಂದು ಉದಾಹರಣೆಯೆಂದರೆ ಈಗ ಕನ್ನಡದವರೆ ಆಗಿದ್ದರೂ ಅದನ್ನು ಮರೆತಿರುವ, ಮರಾಠಿಯಲ್ಲೆ ವ್ಯವಹರಿಸುತ್ತಿರುವ ಮಹಾರಾಷ್ಟ್ರದ ದಾಸ ಸಾಹಿತ್ಯದ ಆಸಕ್ತರು ‘ಭಾಗ್ಯದ ಲಕ್ಶ್ಮಿ ಬಾರಮ್ಮ‘, ‘ಪವಮಾನ ಪವಮಾನ‘ ದಂತಹ ಎಲ್ಲರ ಬಾಯಲ್ಲಿ ಇರುವ ಮತ್ತು ಲಕ್ಷ್ಮೀ ಶೋಭಾನೆಯ ಪೂರ್ತಿ ಪಾಠವನ್ನು ಕರ್ನಾಟಕದಲ್ಲಿ ಜನ ಹಾಡುವ ಧಾಟಿಯಲ್ಲಿಯೆ ಮರಾಠಿಯಲ್ಲಿಯೂ ಅನ್ನುತ್ತಿದ್ದಾರೆ.

ಶ್ರೀ ರಾಮಮೂರ್ತಿ ಕೆಂಭಾವಿ

ಪಂ.ವಾಮನಾಚಾರ್ಯ ಜೋಶಿ ಮತ್ತು ಶ್ರೀ ರಾಮಮೂರ್ತಿ ಕೆಂಭಾವಿ ಇಬ್ಬರೂ ಮಹಾರಾಷ್ಟ್ರದಲ್ಲಿನ ಸಾಮಾನ್ಯರು. ಆದರೆ ಕನ್ನಡದ ಅಸ್ಮಿತೆ, ದಾಸ ಸಾಹಿತ್ಯದ ರುಚಿ, ತಾವು ನಂಬಿದ ಕನ್ನಡ ನೆಲದಲ್ಲಿ ಹುಟ್ಟಿದ ತತ್ವವಾದವನ್ನು ಮರಾಠಿಗರಿಗೂ ಪರಿಚಯಿಸುವ ‘ಗೀಳು‘ ಹೊಂದಿದವರು. ಮಹಾರಾಷ್ಟ್ರಕ್ಕೆ ಬಹಳ ಹಿಂದೆಯೆ ಉದ್ಯೋಗ ನಿಮಿತ್ತದಿಂದ ವಲಸೆ ಹೋಗಿ ಈಗ ಅನಿವಾರ್ಯವಾಗಿ ಮರಾಠಿಯಲ್ಲಿಯೆ ವ್ಯವಹರಿಸುತ್ತಿರುವ ಕನ್ನಡಿಗರು ಈ ಅನುವಾದಿತ ಸಾಹಿತ್ಯದಿಂದಾದರೂ ಕನ್ನಡತನವನ್ನು ಉಳಿಸಿಕೊಳ್ಳಲಿ ಎಂಬ ತೀವ್ರ ಇಚ್ಛೆ ಇವರದು.

ಇಂದು ನಮ್ಮ ಜೀವನ ಶೈಲಿ, ಬೇಕು ಬೇಡಗಳು ಬಹು ವೇಗವಾಗಿ, ಗಾಬರಿ ಹುಟ್ಟಿಸುವ ರೀತಿಯಲ್ಲಿ ಬದಲಾಗುತ್ತಿವೆ. ಕುಟುಂಬದಲ್ಲಿ ಸಂಬಂಧಗಳು ಸಡಿಲಾಗುತ್ತಿವೆ. ಸಮಾಜ ಬದಲಾಗುತ್ತಿದೆ. ಇಂಗ್ಲೀಶಿನ ವ್ಯಾಮೋಹ ಬೆಳೆಯುತ್ತಿದೆ. ವಿದೇಶಗಳಿಗೆ ಹೋಗಿ ಅಲ್ಲಿಯೆ ಉಳಿಯುತ್ತಿರುವವರು ಹೆಚ್ಚಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ತಾಯಿ ನುಡಿ ಕನ್ನಡ ಇನ್ನು ಮುಂದೆ ಉಳಿದೀತೇ, ಉಳಿದರೂ ಬೆಳೆದೀತೇ ಎಂಬ ಆತಂಕ ಆಗೀಗ ಕನ್ನಡ ಮಾತೃ ಭಾಷಾ ಪ್ರೇಮಿಗಳನ್ನು ಕಾಡುತ್ತಿದೆ.

ಇದರ ಪರಿಣಾಮವಾಗಿ ಕನ್ನಡದ ರಕ್ಷಣೆಗಾಗಿ ಚಳುವಳಿಗಳಾಗುತ್ತಿವೆ. ರಾಜ್ಯ ಸರಕಾರ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ .ಮಾಡಿದೆ.  ಕಾವಲು ಸಮಿತಿಯ ರಚನೆಯೂ ಆಗಿದೆ. ಸಾಹಿತ್ಯ ಪರಿಷತ್ತು ಸಮ್ಮೇಳನಗಳನ್ನು ನಡೆಸುವದರಿಂದ ಹಿಡಿದು, ಪುಸ್ತಕ ಪ್ರಕಟನೆಯಂತಹ ಕೆಲ ಯೋಜನೆಗಳನ್ನು ಹಾಕಿಕೊಂಡಿದೆ. ಕನ್ನಡ ಸಾಹಿತ್ಯ ಅಕ್ಯಾಡೆಮಿ, ಪುಸ್ತಕ ಪ್ರಾಧಿಕರಣ ತಮ್ಮ ತಮ್ಮ ಕೆಲಸ ಮಾಡುತ್ತಿವೆ. ಕನ್ನಡ ಚಳುವಳಿಗಾರರಂತೂ ಮೇಲಿಂದ ಮೇಲೆ ಸುದ್ದಿಯಲ್ಲಿರುತ್ತಾರೆ. ಇಷ್ಟೆಲ್ಲ ಭಾಗ್ಯವಿದ್ದರೂ ಕನ್ನಡ ಅಪೌಷ್ಟಿಕತೆಯಿಂದ ಸೊರಗುತ್ತಿದೆಯೇನೋ ಎಂಬ ಅನುಮಾನ ಕಾಡುತ್ತಲೇ ಇದೆ.

‘ಹೀಗಿರುವಾಗಲೂ, ಕನ್ನಡದ ಉಳಿಕೆಯ ಸಾಧ್ಯತೆ ಜನಸಾಮಾನ್ಯರಲ್ಲಿನ ಅಸ್ಮಿತೆಯನ್ನು ಹೆಚ್ಚಾಗಿ ಅವಲಂಬಿಸಿದೆ. ಈ ಸತ್ಯದ ಅರಿವು ಆಗಬೇಕಿದೆ. ಆಗೀಗ ನಮ್ಮ ಗಮನಕ್ಕೆ ಬರುವ ಜನರಲ್ಲಿನ ಅಸ್ಮಿತೆಯ ಉದಾಹರಣೆಗಳು ಕನ್ನಡದ ಉಳಿವಿನ ಭರವಸೆಯನ್ನು ಹುಟ್ಟಿಸುತ್ತಿವೆ. ಒಂದು ವಿಶೇಷವೆಂದರೆ, ಕನ್ನಡವು ತನ್ನ ತಾಯಿ ನಾಡಿಗಿಂತ ಹೊರಗೆಯೆ ಈಗೀಗ ಹೆಚ್ಚು ಚೈತನ್ಯಶೀಲವಾಗಿ, ಚಟುವಟಿಕೆಯಿಂದ ಇದೆಯೇನೋ ಎನ್ನುವ ಅನಸಿಕೆ. ಅಮೇರಿಕಾದಲ್ಲಿನ ‘ಅಕ್ಕ‘, ‘ನಾವಿಕ‘ ನಡೆಸುತ್ತಿರುವ ಸಮ್ಮೇಳನಗಳು, ಮೊನ್ನೆ ಮೊನ್ನೆ ಅಲ್ಲಿನ ಒಂದೆರಡು ಶಾಲೆಗಳಲ್ಲಿ ಕಲಿಸುತ್ತಿದ್ದ ವಿದೇಶಿ ಭಾಷೆಗಳ ಯಾದಿಯಲ್ಲಿ ಕನ್ನಡವೂ ಸೇರಿದ್ದು, ದುಬೈ, ಸಿಂಗಾಪುರದಲ್ಲಿನ ಕನ್ನಡಿಗರ ಚಟುವಟಿಕೆಗಳು ಹೊಸ ಆಯಾಮವನ್ನೆ ತೆರೆದಿವೆ.

ಇಲ್ಲಿ ಕನ್ನಡ ನಾಡಿನಲ್ಲಿ ತಾಯಿನುಡಿಯ ಅಸ್ಮಿತೆ ಸಾಮಾನ್ಯ ಜನರಲ್ಲಿ ಇಲ್ಲವೆ ಇಲ್ಲ ಎಂದೇನಿಲ್ಲ. ಆದರೆ ಅದರ ಅಸ್ತಿತ್ವದ ಉದಾಹರಣೆಗಳು ಮಾಧ್ಯಮದ ಗಮನ ಸೆಳೆದಿರುವದಿಲ್ಲ, ಅಷ್ಟೆ!  ವೈದ್ಯಕೀಯ ಶಿಕ್ಷಣ ಕ್ಷೇತ್ರದ ಆ ನನ್ನ ಪರಿಚಿತ ವ್ಯಕ್ತಿ ಗಣಪತಿ ಆರತಿಯ ಆ ಮರಾಠಿ ಹಾಡನ್ನು ಕನ್ನಡಕ್ಕೆ ಅನುವಾದ ಮಾಡಿ ಪೂಜಾ ಕಾಲಕ್ಕೆ ಅನ್ನುತ್ತಿದ್ದ ಸಂಗತಿ ಗೊತ್ತಾಗುತ್ತಿದ್ದಂತೆಯೆ ನೆನಪಿನ ಓಣಿಯನ್ನು ಸೇರಿದ್ದೆ.

ಶ್ರೀ.ನ.ಹ.ಕಟಗೇರಿ

ಅದು ಕಳೆದ ಶತಮಾನದ ಎಂಟನೆ ದಶಕದ ಪ್ರಾರಂಭದ ಕಾಲ. ಧಾರವಾಡದಲ್ಲಿ ಶ್ರೀ.ನ.ಹ.ಕಟಗೇರಿ ಎಂಬ ನನ್ನ ಬಳಗದವರು ಒಬ್ಬರಿದ್ದರು. ಈಗ ದಿವಂಗತರಾಗಿದ್ದಾರೆ. ಒಂದು ದಿನ ಧಿಡೀರನೆ ಆಗ ನಾನಿದ್ದ ಬೆಳಗಾವಿಗೆ ಬಂದು, ನನ್ನ ಗೆಳೆಯರಲ್ಲಿ ಇದ್ದ ಕೆಲ ಕನ್ನಡ ಮತ್ತು ಸಾಹಿತ್ಯ ಪ್ರೇಮಿಗಳ ಮನೆಗೆ ತಮ್ಮನ್ನು ಕರೆದೊಯ್ಯಲು ಕೇಳಿಕೊಂಡರು. ಯಾವ ಕೆಲಸಕ್ಕಾಗಿ  ಎಂದು ಕೇಳಿದಾಗ ತಮ್ಮ ಬ್ಯಾಗನ್ನು ತೆರೆದು ತೋರಿಸಿದರು. ಅದರಲ್ಲಿ ಕಾಣಿಸಿದ್ದು ಕನ್ನಡ ಕುಲಪುರೋಹಿತ ಆಲೂರ ವೆಂಕಟರಾಯರ ಮುದ್ರಿತ ವರ್ಣ ಚಿತ್ರಗಳು. ಕೆಲವು ಕಟ್ಟು ಹಾಕಿಸಿದ್ದವು, ಮತ್ತೆ ಕೆಲವು ಕಟ್ಟು ಹಾಕಿಸದವು.

ನನಗೆ ಅವರ ಉದ್ದೇಶಿತ ಕೆಲಸ ಅರ್ಥವಾಗಲಿಲ್ಲ. ಅವರೆ ವಿವರಿಸಿದರು. “ಇವನ್ನು ಅವರಿಗೆ ಮಾರಲು ತಂದಿಲ್ಲ. ಅವರ ಮನೆಯ ಗೋಡೆಯನ್ನು ಆಲೂರರ ಈ ವರ್ಣ ಚಿತ್ರ ಅಲಂಕರಿಸಲಿ. ಎಲ್ಲಿ ಎಂದು ಅವರು ಹೇಳಿದರೆ ಅಲ್ಲಿ ಈ ಚಿತ್ರವನ್ನು ನಾನೇ ತೂಗು ಬಿಡುತ್ತೇನೆ. ಅದಕ್ಕಾಗಿ ಮೊಳೆ, ಬಡಿಯಲು ಸುತ್ತಿಗೆಯನ್ನೂ ತಂದಿದ್ದೇನೆ. ಕೇಳಿ ಅವಾಕ್ಕಾದೆ. ಆ ಚಿತ್ರಗಳನ್ನು ಅವರು ತಮ್ಮ ಕೈಯಿಂದ ಖರ್ಚು ಮಾಡಿ ಮುದ್ರಿಸಿದ್ದರಲ್ಲದೆ, ಕನ್ನಡ ಪ್ರೇಮಿಗಳ ಮನೆಯ ಗೋಡೆಯನ್ನು ಅಲಂಕರಿಸುವ ಹಾಗೆ ಮಾಡಲು ಮನೆ ಮನೆಗಳನ್ನು ಸುತ್ತುವ ಕೆಲಸವನ್ನೂ ಹಮ್ಮಿಕೊಂಡಿದ್ದರು.

ಇಂತಹ ಅಂಗಡಿಯಲ್ಲಿ ಈ ಫೋಟೊಗಳು ಸಿಗುತ್ತವೆ. ಕೊಂಡು ಫ್ರೇಮ್ ಹಾಕಿಸಿ ನಿಮ್ಮ ಪಡಸಾಲೆಯಲ್ಲಿ ಎದ್ದುಕಾಣುವ ಸ್ಠಳದಲ್ಲಿ ಹಾಕಿ  ನಿಮ್ಮ ಕನ್ನಡ ಪ್ರೇಮ ವ್ಯಕ್ತ ಮಾಡಿರಿ ಎಂದು ಕೇಳಿಕೊಂಡರೆ ನಿರೀಕ್ಷಿತ ಮಟ್ಟದಲ್ಲಿ ಪ್ರತಿಸ್ಪಂದನೆ ಸಿಗಲಿಕ್ಕಿಲ್ಲ ಎಂದುಕೊಂಡು ದಿ.ಕಟಗೇರಿಯವರು ಈ ಹಾದಿಯನ್ನು ಹಿಡಿದಿದ್ದರು. ಇದನ್ನೆಲ್ಲ ನೋಡಿದ್ದ ಅನೇಕರು ಧಾರವಾಡದಲ್ಲಿ ಇನ್ನೂ ಇದ್ದಾರೆ. ಆದರೆ ನ.ಹ.ಕಟಗೇರಿ ಮಾತ್ರ ಈಗ ನೆನಪಾಗಿ ಉಳಿದು ಕೊಂಡಿದ್ದಾರೆ. ಅವರು ಇಲ್ಲವಾಗಿ ಒಂದು ದಶಕಕ್ಕೂ ಹೆಚ್ಚು ಕಾಲಾವಧಿ ಕಳೆದಿದೆ.

ನೆನಪಿನ ಓಣಿಯಲ್ಲಿ ಇನ್ನೂ ಹಿಂದಕ್ಕೆ ಹೋದಾಗ, ನನ್ನ ಶಾಲಾ ಕಾಲೇಜು ದಿನಗಳ ಐದನೆ ದಶಕದ ಬೆಳಗಾವಿಯ ಎರಡು ಘಟನೆಗಳ ನೆನಪು ಬರುತ್ತದೆ. ೧೯೫೫ ರಲ್ಲಿ ಅದೇತಾನೆ  ಕರ್ನಾಟಕ ಏಕೀಕರಣದ ಕನಸು ನನಸಾಗಲಿದ್ದ ರಾಜ್ಯ ಪುನಾರಚನಾ ಆಯೋಗ ತನ್ನ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿದ್ದಿತು. ಮತ್ತು ಅದು ಬೆಳಗಾವಿಯ ಮೇಲಿನ ಕನ್ನಡಿಗರ ಹಕ್ಕನ್ನು ಪುರಸ್ಕರಿಸಿದ್ದಿತು. ಅದೇ ವೇಳೆ ದೀಪಾವಳಿ ಹಬ್ಬವೂ ಬಂದಿತ್ತು.

ಆ ದಿನಗಳಲ್ಲಿ ಕನ್ನಡ ಹೋರಾಟಗಾರ ಅರವಿಂದರಾವ ಜೋಶಿ ಮತ್ತು ತಮ್ಮ ಅಣ್ಣ ನರಸಿಂಗರಾವ ಅವರ ಮನೆಯಲ್ಲಿ ಕೂಡಿ ಇದ್ದರು. ಹಬ್ಬದ ಜೊತೆಗೆ ಬೆಳಗಾವಿ ಸಹಿತವಾದ ಕರ್ನಾಟಕ ನಿರ್ಮಾಣವಾಗಲಿರುವ ಸಂಭ್ರಮವೂ ಸೇರಿಕೊಂಡಿತ್ತುಜೋಶಿ ಮನೆತನದ ಹುಡುಗರಲ್ಲಿ ಆ ಸಂಭ್ರಮ ಕರ್ನಾಟಕ ನಕಾಶೆಯ ಆಕಾರದಲ್ಲಿ ಮೂರು ಫೂಟು ಎತ್ತರದ ಆಕಾಶಬುಟ್ಟಿಯೊಂದನ್ನು ತಯಾರಿಸುವ ಹಾಗೆ ಪ್ರೇರೇಪಿಸಿದ್ದಿತು. ಅದರಲ್ಲಿ ಬೆಳಗಾವಿಯನ್ನೂ ಕೆಂಪು ಬಣ್ಣದಿಂದ ಗುರುತಿಸಲಾಗಿತ್ತು. ಹಬ್ಬದ ಸಂಜೆ ಗ್ಯಾಲರಿಯಲ್ಲಿ  ತೂಗು ಬಿಟ್ಟ ಅದನ್ನು ನೋಡಿದ ಮರಾಠಿಗರ ಹೊಟ್ಟೆ ಉರಿದು ಹೋಯಿತು. ಮರುದಿನ ಮನೆಯ ಮೇಲೆ ಕಲ್ಲಿನ ಸುರಿಮಳೆಯಾಗಿ ಆಕಾಶ ಬುಟ್ಟಿ ಹರಿದು, ಕಿಟಕಿ ಕಾಜುಗಳು, ಒಳಗಿನ ಕೋಣೆಯಲ್ಲಿದ್ದ ಕಪಾಟು ಎಲ್ಲ ಒಡೆದವು. ಆದರೆ ಹುಡುಗರಲ್ಲಿನ ಕನ್ನಡದ ಕೆಚ್ಚು ಕೆರಳಿದ್ದಿತು.

ಶ್ರೀ ಅರವಿಂದರಾವ ಜೋಶಿ

ಮರುದಿನ ಮತ್ತೆ ಅದಕ್ಕೂ ದೊಡ್ಡ ಅಂತಹದೆ ಆಕಾಶಬುಟ್ಟಿಯನ್ನು ಸಿದ್ಧಮಾಡಿ ತೂಗು ಬಿಡಲಾಯಿತು. ಸ್ವಲ್ಪ ಹೊತ್ತಿನಲ್ಲಿಯೆ ಹಿಂದಿನ ದಿನದ ಶಿಲಾವೃಷ್ಟಿಯ ಪುನರಾವರ್ತನೆ. ಹುಡುಗರೂ ಹಟಕ್ಕೆ ಬಿದ್ದರು. ನಾಕು ದಿನ ಇದೇ ನಡೆಯುತ್ತ ಹೋಯಿತು. ಆರು ಫೂಟು ಎತ್ತರದ ಆಕಾಶಬುಟ್ಟಿ ವಿಜೃಂಭಿಸಿತು.  ಕೊನೆಗೂ ಕಡೆ ಪಂಚಮಿಯಂದು ಪ್ರತಿಬಂಧಕಾಜ್ಞೆ ಕಟ್ಟುನಿಟ್ಟಾಗಿ ಜಾರಿಯಲ್ಲಿ ಬಂದು ಆಕಾಶಬುಟ್ಟಿಯ ಮೇಲಿನ ಆಕ್ರಮಣ ನಿಂತಿತು. ಆದರೆ ಮರಾಠಿಗರ ಸೇಡಿನ ಹೊಗೆ ಹಾಗೆಯೆ ಉಳಿದು ಮುಂದೆ ಜನೆವರಿಯಲ್ಲಿ ಪ್ರಜ್ವಲಿಸಿತು. ಹೆಂಗಸರು ಮಕ್ಕಳ ಸಹಿತ ಮನೆ ಸುಡುವ ಪ್ರಯತ್ನ ನಡೆದು, ಪೋಲಿಸರು ಗೋಳಿಬಾರು ಮಾಡ ಬೇಕಾಯಿತು.

ಜೋಶಿ ಮನೆತನದವರು  ಆ ಕನ್ನಡ ಮರಾಠಿ ವಿವಾದದ ಕಾಲದಲ್ಲಿ ಕಾಣಿಸಿಕೊಂಡ ಬಗೆಯನ್ನು ಬದಿಗಿಟ್ಟರೆ ಉಳಿದ ಹಾಗೆ ಸಾಮಾನ್ಯ ಕುಟುಂಬ.

ನಂತರದ ಚಿತ್ರ ೧೯೫೮ ರದು. ಅದು ಒಬ್ಬರ ಮನೆಯ ಗೋಡೆಯ ಮೇಲೆ ತೆಗೆದ ಚಿತ್ರದ ನೆನಪು.. ಭಾಂದೂರ ಗಲ್ಲಿಯ ಆ ಕರಿ ಹಂಚಿನ ಮಣ್ಣಿನ ಗೋಡೆಯ, ಬಾಡಿಗೆ ಮನೆಯಲ್ಲಿ ಇದ್ದವರು ಶ್ರೀ ವೆಂ.ಗೊ. ತೊರಗಲ್ಲ ಎಂಬ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಕಾಲೇಜಿನ ಪ್ರಾಧ್ಯಾಪಕರು. ಅದು ಮರಾಠಿ ಬಾಹುಳ್ಯದ, ಉರಿತ ಮೆರೆತದ ಓಣಿ. ಆ ಮನೆಯ ನೆನಪು ಈಗಲೂ ಮಾಸದೆ ಉಳಿದಿರಲು ಕಾರಣ, ತಲೆಬಾಗಿಲನ್ನು ದಾಟಿದೊಡನೆಯೆ ಪಡಸಾಲೆಯಲ್ಲಿ ಬಲಕ್ಕಿದ್ದ ಗೋಡೆಯ ಮೇಲೆ ಕಾಣುತ್ತಿದ್ದುದು ‘ಪೇಂಟ‘ ಮಾಡಿಸಿದ್ದ ಚಾಲುಕ್ಯ ಚಕ್ರವರ್ತಿ ಪುಲಿಕೇಶಿ ಪರ್ಷಿಯಾದ ರಾಯಭಾರಿಯೊಡನೆ ಇದ್ದ ವರ್ಣ ಚಿತ್ರ. ಬಹುಶಃ ನಮ್ಮ ಇಡಿಯ ನಾಡಿನಲ್ಲಿ ಯಾರ ಮನೆಯ ಗೋಡೆಯೂ ಇಂತಹ ಚಿತ್ರದಿಂದ ವರ್ಣ ರಂಜಿತವಾದುದಿರಲಿಕ್ಕಿಲ್ಲ ಅಂದೂ, ಇಂದೂ.

ಶ್ರೀ ವೆಂ.ಗೊ. ತೊರಗಲ್ಲ

೧೯೫೮ ರಲ್ಲಿ ತೊರಗಲ್ಲರ ವಿದ್ಯಾರ್ಥಿ – ತರಬೇತಿ ಪಡೆಯುತ್ತಿದ್ದ ‘ವಾಲ್ ಪೇಂಟಿಂಗ್‘ ಕಲಾವಿದನೂ ಆಗಿದ್ದ ಶಿಕ್ಷಕ – ತೆಗೆದ ಚಿತ್ರವದು. ಗುರುಗಳಲ್ಲಿ ತನ್ನ ನೆನಪಿಗಾಗಿ ಕೊಟ್ಟ ಭಿತ್ತಿಚಿತ್ರದ ಕಲಾಕಾಣಿಕೆಯದು. ಯಾವ ಚಿತ್ರವನ್ನು ‘ಪೇಂಟ್‘ ಮಾಡಬೇಕು ಎಂದು ಕೇಳಿದಾಗ ಇತಿಹಾಸವನ್ನು ಕಲಿಸುತ್ತಿದ್ದ ಗುರುವಿಗೆ ‘ಉತ್ತರಾಪಥದ‘ ಚಕ್ರವರ್ತಿ ಹರ್ಷವರ್ಧನನನ್ನು ಸೋಲಿಸಿ ದಕ್ಷಿಣಾಪಥಕ್ಕೆ ಬಾರದಂತೆ ಮಾಡಿದ ಹೆಮ್ಮೆಯ ವೀರ ಕನ್ನಡ ಚಕ್ರವರ್ತಿ ಪುಲಿಕೇಶಿಯ ಚಿತ್ರವನ್ನು ತೆಗೆಸಬೇಕು ಎಂದೆನಿಸಿತಂತೆ.

ಆ ಕಟ್ಟಾ ಕನ್ನಡಾಭಿಮಾನ ಆ ಓಣಿಯ ಮರಾಠಿ ಉಗ್ರರಿಗೆ ಕಣ್ಣುಗಿಚ್ಚಾಗಿ ಮುಂದೆ ಕೆಲತಿಂಗಳು ಆಗುವಷ್ಟರಲ್ಲಿ ಇವರ ಮನೆಯ ಮುಂದೆ ಒಂದು ದಿನ ಬೆಳಿಗ್ಗೆ ಬುಟ್ಟಿಗಟ್ಟಲೆ ಮಲವನ್ನು ಸುರುವಿ ಮನೆ ಜನ ಹೊರಬರದಂತೆ, ಹೇಸಿಗೆಯ ಭಾವ ದಿನಗಟ್ಟಲೆ ಉಳಿಯುವಂತೆ ಅಸಹ್ಯ ವಿಕೃತಿ ತೋರಿದ್ದರು.

ಅಂತಹ ಕನ್ನಡಾಭಿಮಾನಿ ದಿ.ತೊರಗಲ್ಲ ಅವರು. ಬೆಳಗಾವಿಯ ಕನ್ನಡಿಗರೂ ಹೋಳಿಗೆಯನ್ನು ಲಟ್ಟಿಸುವದು ‘ಪೋಳಪಾಟ‘ದ ಮೇಲೆಯೆ. ಆದರೆ ಆ ಮರಾಠಿ ಶಬ್ದವೇಕೆ? ‘ಹೋಳಿಗೆ ಮಣೆ‘ಯ ಮೇಲೆ ಲಟ್ಟಿಸಲು ಬಾರದೆ ಎಂದು ಕನ್ನಡ ಶಬ್ದವನ್ನೆ ಬಳಸುತ್ತಿದ್ದರು. ಅವರಿಗೊಬ್ಬ ತಂಗಿಯಿದ್ದಳು. ತೊಟ್ಟಿಲಲ್ಲಿ ಹಾಕುವಾಗ ಅವಳನ್ನು ‘ಸೋನಾ‘ ಎಂದು ಹಿರಿಯರು ಕರೆದಿದ್ದರು. ಆದರೆ ಶಾಲೆಯಲ್ಲಿ ಹೆಸರು ಹಚ್ಚುವಾಗ ಇವರು ‘ಸೋನಾ‘ಳನ್ನು ಹೊನ್ನಮ್ಮ ಎಂದು ಅರ್ಥವ್ಯತ್ಯಾಸ ಆಗದಂತೆ ಬದಲಾಯಿಸಿದ್ದರು.

ಶ್ರೀ ಭೀಮಸೇನ ತೊರಗಲ್ಲ

ಆ ಮನೆತನದ ಕನ್ನಡ ಅಸ್ಮಿತೆ ಮುಂದಿನ ಪೀಳಿಗೆಗೂ ಇಳಿದಿದೆ. ಅವರ ಮಗ – ಹಿಂದೊಮ್ಮೆ ಪ್ರಕಟವಾಗುತ್ತಿದ್ದ ಸಂಜೆ ದಿನಪತ್ರಿಕೆ ’ಸಮತೋಲ’ದ (ಈಗ ಅದು ದಿನ ಪತ್ರಿಕೆ, ಮಾಲಿಕ, ಸಂಪಾದಕರು ಬೇರೆಯವರಿದ್ದಾರೆ) ಸಂಪಾದಕ ಶ್ರೀ ಭೀಮಸೇನ ತೊರಗಲ್ಲರು ತಮ್ಮ ಮಗನಿಗೆ ಪುಲಿಕೇಶಿ ಎಂದೆ ಹೆಸರಿಟ್ಟರು.. ಅವನೀಗ ಅಮೇರಿಕೆಯಲ್ಲಿದ್ದಾನೆ. ಹೆಣ್ಣುಕೊಟ್ಟ ಮಾವ ಬೆಳಗಾವಿಯ ಟಿಳಕವಾಡಿಯೆಂಬ ‘ಪಾಶ್‘ ಉಪನಗರದಲ್ಲಿ ಮನೆಯೊಂದನ್ನು ಖರೀದಿಸಿದಾಗ ಅದಕ್ಕೆ ‘ಅಲಂಪು’ ಎಂಬ ಅಚ್ಚಗನ್ನಡ ಹೆಸರನ್ನು ಇಡಿಸಿದರು. ಇತ್ತೀಚೆಗೆ ಫೆಬ್ರುವರಿ ೭ಕ್ಕೆ ತಮ್ಮ ೮೨ನೆ ವಯಸ್ಸಿನಲ್ಲಿ ಅವರು ತೀರಿಕೊಂಡರು.

ಈ ಮೊದಲು ಹೇಳಿದ ಆಕಾಶ ಬುಟ್ಟಿ ಪ್ರಕರಣದ ಕಾಲಕ್ಕೆ ೧೩ ವರ್ಷದ ಹುಡುಗನಾಗಿ ಅದರಲ್ಲಿ ಸಕ್ರಿಯವಾಗಿ ಪಾಲುಗೊಂಡಿದ್ದ ಶ್ರೀ ಅರವಿಂದರಾಯರ ಪುತ್ರ ಶ್ರೀ ರಾಘವೇಂದ್ರ ಜೋಶಿ ಮುಂದೆ ತಂದೆಯಂತೆಯೆ ಹೋರಾಟಗಾರರಾದರು. ಅದಕ್ಕೆಂದೆ ‘ನಾಡೋಜ‘ವೆಂಬ ಒಂದು ದಿನಪತ್ರಿಕೆಯನ್ನು ಬೆಳಗಾವಿಯಿಂದ ೧೯೭೩ ರಲ್ಲಿ ಹುಟ್ಟಿಹಾಕಿದರು.. ಅವರೂ ಇಂದು ಇನ್ನಿಲ್ಲವಾಗಿದ್ದಾರೆ, ಸುಮಾರು ಎರಡು ವರ್ಷಗಳ ಹಿಂದೆಯೆ. (೨೧-೧೨-೨೦೨೦ರಂದು).

ಶ್ರೀ ರಾಘವೇಂದ್ರ ಜೋಶಿ

ನಾಡೋಜ ಎಂಬುದು ಕನ್ನಡದ ಆದಿಕವಿ ಪಂಪನ ಬಿರುದು. ಈಗಂತೂ ‘ನಾಡೋಜ‘ ಎಂಬುದು ಹಂಪಿ ಕನ್ನಡ ವಿಶ್ವವಿದ್ಯಾಲಯವು ಕನ್ನಡದ ಕೆಲಸ ಮಾಡಿದ ಹೆಸರಾಂತ ಹಿರಿಯರಿಗೆ ಪ್ರದಾನ ಮಾಡುತ್ತಿರುವ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ಅದು ರವೀಂದ್ರನಾಥ ಠಾಕೂರರ ಶಾಂತಿನಿಕೇತನದಲ್ಲಿ ಕೊಡಲಾಗುತ್ತಿರುವ ‘ದೇಶಿಕೋತ್ತಮ‘ ಪದವಿಯಿಂದ ಪ್ರೇರಣೆ ಪಡೆದು ಪ್ರಾರಂಭಿಸಲಾದುದು.

ಗಣಪತಿ ಹಬ್ಬದಲ್ಲಿ ಈ ಭಾಗದಲ್ಲಿ ಬಹಳ ರೂಢಿಯಲ್ಲಿರುವ ಮರಾಠಿ ಆರತಿ ಹಾಡನ್ನು ಕನ್ನಡದಲ್ಲಿಯೆ ಅನ್ನಬೇಕೆಂಬ ಬಯಕೆಯ ಒತ್ತಡದಲ್ಲಿ ಅನುವಾದಿತವಾದ ಹಾಡಿನ ಕತೆಯಿಂದ ಶುರು ಮಾಡಿ ‘ಕನ್ನಡವೇ ಬೇಕು ಎನಿಸಿದಾಗ….ಕನ್ನಡದ ಕೆಚ್ಚನ್ನು ಕೆಣಕಿದಾಗ‘…. ಎಂಬ ಈ ಲೇಖನ ನೆನಪಿನ ಓಣಿಯಲ್ಲಿ ಕಂಡ ಸುಮಾರು ಆರು ದಶಕಗಳ ಕಾಲದ ಕೆಲ ಘಟನೆಗಳ ಚಿತ್ರಣ. ಸಧ್ಯದ ದಿನಗಳಲ್ಲಿ ತಮ್ಮ ತಮ್ಮ ಪರಿಸರದಲ್ಲಿ ನಡೆದ ಇಂತಹ ಒಂದೆರಡಾದರೂ ಘಟನೆಗಳು ಇದನ್ನೋದಿದ ಪ್ರತಿಯೊಬ್ಬನಲ್ಲಿ ಥಟ್ಟನೆ ನೆನಪಿಗೆ ಬಂದರೆ  ಸಾವಿರ ವರ್ಷದಷ್ಟು ಹಳೆಯ ಕನ್ನಡ, ಎಂದಿಗೂ ಸಾವಿರದ ನುಡಿಯಾಗಿ ಉಳಿದೀತು.

 

 

ಭಾಗ್ಯಾಚೀ ಲಕ್ಷ್ಮೀ ಯೇಗ ಯೇ |
ಮಾಈ ತೂ |
ಸೌಭಾಗ್ಯಾಚೀ ಲಕ್ಷ್ಮೀ ಯೇಗ ಯೇ ||
ಪಾಉಲಾವರ ಪಾಉಲ ಠೇವಿತ |
ತವ ಪೈಂಜಣ ರುಣುಝುಣೂ ವಾಜವಿತ |
ಸಾವಸುಜನಾಂಚ್ಯಾ ಪೂಜಾ ಸಮಯೀ |
ನವನೀತಾಪರಿ ಪ್ರಕಟ ಹೋತ ||೧||
ಭಾಗ್ಯಾಚೀ ಲಕ್ಷ್ಮೀ ಯೇಗ ಯೇ …
ಕನಕವೃಷ್ಟೀ ಬರಸತ ಯೇಗ |
ಮನಕಾಮನಾ ಪುರವಿತ ಯೇಗ |
ದಿನಕರಕೋಟಿ ತೇಜ ಉಜಳಿತ |
ಜನಕ ರಾಯಾಚೀ ಕುಮಾರಿ ಯೇಗ ||೨||
ಭಾಗ್ಯಾಚೀ ಲಕ್ಷ್ಮೀ ಯೇಗ ಯೇ…
ಭಕ್ತಾಂಚ್ಯಾ ಘರೀ ಸುಸ್ಥಿರ ಹೊಉನೀ |
ನಿತ್ಯ ಮಹೊತ್ಸವ ನಿತ್ಯ ಸುಮಂಗಲ |
ಸತ್ಯದರ್ಶೀ ಸಜ್ಜನ ಸಾಧೂಂಚ್ಯಾ |
ಚಿತ್ತಾತೀಲ ಸುರಮ್ಯ ಪುತಲೀ ||೩||
ಭಾಗ್ಯಚೀ ಲಕ್ಷ್ಮೀ ಯೇಗ ಯೇ …
ಕಂಕಣ ಶೋಭಿತೆ ವರಪ್ರದಾಯಿನೀ |
ಅಸಂಖ್ಯ ಪರಿ ಭಾಗ್ಯ ದೇವುನೀ |
ಕುಂಕುಮಾಂಕಿತೆ ಪಂಕಜ ನಯನೀ |
ವೇಂಕಟರಮಣಾಚೀ ಪಟ್ಟರಾಣೀ ||೪||
ಭಾಗ್ಯಾಚೀ ಲಕ್ಷ್ಮೀ ಯೇಗ ಯೇ …
ಶುಕ್ರವಾರೀ ಪೂಜಾ ಸಮಯೀ |
ಸಾಖರಪೂತಾಚಾ ಊರ ಯೇವುದೆ |
ಕರುಣಾಕರ ಅಳಗಿರಿರಂಗ |
ಶ್ರೀ ಪುರಂದರ ವಿಟ್ಠಲಾಚೀ ಪ್ರಿಯಂವದೆ ||೫||
ಭಾಗ್ಯಾಚೀ ಲಕ್ಷ್ಮೀ ಯೇಗ ಯೇ …
ವಿದ್ಯಾದಾಯಿನೀ ಭಾಗ್ಯದಾಯಿನೀ |
ಕರುಣಾಕರೀ ತೂ ಭವತಾರಿಣೀ |
ಸದ್ಗುಣ ಸರ್ವೊತ್ತಮ |
ಶ್ರೀ ವರದ ವಿಟ್ಠಲಾಚೀ ರುಕ್ಮಿಣೀ ||
ಭಾಗ್ಯಾಚೀ ಲಕ್ಷ್ಮೀ ಯೇಗ ಯೇ …

ಪವಮಾನ ಪವಮಾನ ಜಗತಪ್ರಾಣ ಸಂಕರ್ಷಣಾ |
ಭವ ಭಯಾರಣ್ಯ ದಹನಾSSS ಪವನಾ ||
ಶ್ರವಣಸ್ಮರಣಾದಿ ನವವಿಧ ಭಕ್ತೀ |
ತ್ವರಿತ ಮಜದ್ಯಾವೀ ಕವಿಜನ ಪ್ರೀತ ||ಧ್ರು.ಪ.||
ಹೇಮಕಟಲಂಗೊಟ ಉಪವೀತ -ಭೂಷಿತ ಮಾರುತ, ಕಾಮಾದಿ ವರ್ಗ ರಹಿತ|
ವ್ಯೋಮಾದಿ ಸರ್ವ ವ್ಯಾಪಿತ, ಸತತ ನಿರ್ಭೀತ, ರಾಮಚಂದ್ರಾಚೇ ನಿಜ ದೂತ ||
ಯಾಮಯಾಮಾತ ತವ ಆರಾಧನಾ |
ಕಾಮನಾ ಮಜ ನೇಮಾನೇ ಪುರವೂನ |
ಯಾಮನಾಸ ಸುಖಸ್ತೊಮ ದೇವುನ |
ಪಾಮರಾಸ ಮತಿಮಾನ ಕರಾವೇ ||೧|| ——
ಪ್ರಾಣ ಅಪಾನ ಉದಾನ – ವ್ಯಾನ ಸಮಾನ, ಆನಂದಭಾರತೀ ರಮಣಾ |
ಘನ ಶರ್ವಾದಿ ಗೀರ್ವಾಣಾಂನಾ ಜ್ನಾನ ಧನ ದಾತಾ ಪ್ರಧಾನ||
ಅನುದಿನ ಕಾರ್ಯ ಮೀ ಜೇ ಜೇ ಕರಿತೊ |
ಮಾನಸಾದಿ ಕರ್ಮ ತವ ಸಮರ್ಪಿತೋ ||
ಪ್ರಾಣನಾಥ ಶ್ರೀ ವಿಜಯವಿಟ್ಠಲಾಚೇ |
ದರ್ಶನ ಘಡೂದೇ ಭಾನು ಪ್ರಕಾಶ ||೩||
ಪವಮಾನ …
ವೀರ ಅಮರ ಕಪಿವರ ಹನುಮಂತ |
ಥೋರ ಜೀವೋತ್ತಮ ತೂ ಗುಣವಂತ ||
ಶ್ರೀ ವರದ ವಿಟ್ಠಲಾ ತವ ಸಮರ್ಪಿತ |
ಸುರವರ ಮಾರುತ ಮಹಿಮಾ ಗೀತ ||


ಶೋಭನ ಮ್ಹಣಾವೇ ಸುರಜನ ಸುಭಗಾಸ |
ಶೋಭನ ಮ್ಹಣಾವೇ ಸುಗುಣಾಸ ||
ಶೋಭನ ಮ್ಹಣಾವೇ ತ್ರಿವಿಕ್ರಮರಾಯಾಸ|
ಶೋಭನ ಸುರಪ್ರಿಯ ದೇವಾಸ||ಪ||
ಲಕ್ಷ್ಮೀನಾರಾಯಣ ಚರಣೀ ಶರಣ ಮೀ |
ಪಕ್ಷಿವಾಹನಾಸ ನಮನ ||
ಪಕ್ಷಿವಾಹನಾಸ ನಮಿತೆ ಮೀ ಅನುದಿನ |
ರಕ್ಷಾವೇ ಆಮುಚಾ ವಧುವರಾಸ ||೧||
ಬ್ರಹ್ಮ ಪ್ರಲಯಾತ ರಾಣೀ ಲಕ್ಷ್ಮೀ ಸಹಿತ|
ಪರಬ್ರಹ್ಮ ಪಹುಡಲಾ ತೋ ಪ್ರಶಾಂತ||
ಆಮುಚಾ ನಾರಾಯಣ ಅನ್ ಲಕ್ಷ್ಮೀದೇವೀಸ|
ಜನ್ಮ ಮ್ಹಣಜೇಚ ಅವತಾರ||೩||
ಸುವರ್ಣಾಲಂಕಾರ ಕಂಚುಕೀ ರತ್ನಖಚಿತ|
ದಿವ್ಯ ದೇಖಣೀ ಲಕ್ಷ್ಮೀ ಧಾರಿಯಲೇ||
ದಿವ್ಯ ದೇಖಣೀ ಲಕ್ಷ್ಮೀ ಧಾರಿಯಲೇ ಶ್ರೀದೇವಿ|
ಸರ್ವತ್ರ ರಕ್ಷಾವೇ ವಧುವರಾಸ||೭||
ಹಾರ ಆಶ್ರಯ ಘೇಈ ಕುಂಭವಕ್ಷಾವರೀ|
ಕುರಳೇ ಕುಂತಲ ಮುಖ ಕಮಲಾವರೀ||
ಕುರಳ್ಯಾ ಕುಂತಲಾಂಚೀ ಸುಂದರ ಶ್ರೀ ಲಕ್ಷ್ಮೀ|
ಪರಿಪಾಲನ ಕರಾವೇ ವಧುವರಾಂಚೇ||೮||
ಮಧುರ ಮಂಗಲ ಗೀತ ಲಗ್ನ ಸೋಹಳ್ಯಾತ|
ವಧುವರಾಂಚ್ಯಾ ಘರೀ ಜೇ ಗಾತಾತ|
ವಧೂಸ ಮಿಳೇಲ ಸೌಭಾಗ್ಯ ಶಾಶ್ವತ|
ಮದನಪಿತಾಚ್ಯಾ ಕೃಪಾ ಛತ್ರಾತ||೧೧೨||