ಲಾಕ್ ಡೌನ್

ಲಾಕ್ ಡೌನ್ ಅನ್ನುವ ಒಂದು ತರಹದ ಈ ಗೃಹ ಬಂಧನ, ಶತಾಯುಷಿಗಳನ್ನೂ ಹಿಡಿದು ಬರಿಯ ನನ್ನ ತಲೆಮಾರಿನವರಿಗಷ್ಟೆ ಅಲ್ಲ, ಹಿಂದಿನ ತಲೆಮಾರಿನವರಿಗೂ ಕೂಡ ಕಂಡು, ಕೇಳಿ, ಅರಿಯದ ಮತ್ತು ಊಹಿಸಲೂ ಆಗದ ಅನುಭವವನ್ನು ತಂದು ಒದಗಿಸಿದೆ.

ಆಗಲೂ, ಇಂದಿನ ಕೊರೋನಾ ಕಾಡಿದಂತೆ ಪ್ಲೇಗ ಎಂಬ ಮಹಾಮಾರಿ ಕಾಡಿತ್ತು. ಅದು ೧೯೦೦ನೆ ಇಸವಿಯ ಒಂದೆರಡು ವರ್ಷಗಳ ಮುಂಚೆ, ಎರಡು ದಶಕಗಳ ಕಾಲ ಸಾವಿರಾರು ಜೀವಗಳನ್ನು ಕಬಳಿಸಿ ಹಾಹಾಕಾರಕ್ಕೆ ಕಾರಣವಾಗಿತ್ತು. ಇಲಿಯೊಂದು ಮನೆಯಲ್ಲಿ ಸತ್ತು ಬಿದ್ದರೆ ಮುಂದಿನ ಮೂರು ನಾಕು ದಿನಗಳಲ್ಲಿ ಆ ಮನೆ ಮತ್ತು ಓಣಿಯಲ್ಲಿ ನಾಕಾರು ಹೆಣಗಳು ಬೀಳುತ್ತಿದ್ದವು, ಸುಡುಗಾಡಿಗೆ ಹೊತ್ತೊಯ್ಯಲೂ ಜನ ಸಿಗದೆ ಅಂತ್ಯಕ್ರಿಯೆಯನ್ನು ಹೇಗು ಹೇಗೋ ಮುಗಿಸುತ್ತಿದ್ದ ದಿನಗಳವು.

ಫರಕು ಇಷ್ಟೆ! ಆಗ ತಮ್ಮ ಮನೆ, ಊರನ್ನು ತ್ಯಜಿಸಿ ಹೊರಗಿನ ಬಯಲಲ್ಲಿ ಗುಡಿಸನ್ನು ಹಾಕಿಕೊಂಡು ವಾಸ ಮಾಡುತ್ತಿದ್ದರು. ಬೆಳಗಾವಿಯ ಉದಾಹರಣೆ ಹೇಳಬಕೆಂದರೆ ಹೊರವಲಯದ ಠಳಕವಾಡಿ ಹೀಗೆಯೆ ನಿರ್ಮಾಣಗೊಂಡ ನಗರದ ಮೊದಲ ಬಡಾವಣೆ. ಹಾಗೆ ಆ ಕಾಲದಲ್ಲಿ, ಮೊದಲು ಹೊರಬಿದ್ದು ನಾಗಝರಿ ಹಳ್ಳದ ದಂಡೆಯ ಮೇಲಿದ್ದ ತಮ್ಮ ಹೊಲದಲ್ಲಿ ಇರಹತ್ತಿದವರು ಈಗ ಪ್ರಸಿದ್ಧವಾಗಿರುವ ಕಿರ್ಲೋಸ್ಕರ ಮನೆತನದ ಹಿರಿಯರಾದ ಲಕ್ಷ್ಮಣರಾವ ಮತ್ತು ಅವರ ಅಣ್ಣ ರಾಮರಾವ.

ಈಗ ಊರು ಬಿಡುವದಿರಲಿ, ಮನೆಯಿಂದಲೂ ಹೊರ ಬರದಿರಲು ಕಟ್ಟುಪಾಡುಗಳನ್ನು ಹಾಕಲಾಗಿದೆ.

ಆಗ ಡೌಗಿ ಬರವೆಂದು ಕುಪ್ರಸಿದ್ಧವಾಗಿದ್ದ ಆ ಮತ್ತೊಂದು ಕಾಲದಲ್ಲಿ, ಜನ ಬರೀ ಊರಹೊರಗಲ್ಲ, ನೂರಾರು ಮೈಲುಗಳಾಚೆ ವಲಸೆ ಹೋದರು. ಗಟ್ಟಿ ಆಯುಷ್ಯ ಇದ್ದವರು ಹೇಗೋ ಉಳಿದರು. ಅಲೆದರು. ಅನ್ನ, ನೀರೂ ಸಿಗದೆ ಒದ್ದಾಡಿ ಹುಲ್ಲು, ಗಿಡದ ತೊಪ್ಪಲನ್ನು ತಿಂದು ಹನಿ ಹನಿ ನೀರಿನಿಂದ ಗಂಟಲು ಹಸಿ ಮಾಡಿಕೊಂಡು, ಎಲ್ಲೆಲ್ಲೊ ಹೋಗಿ ಹೇಗೋ ಬದುಕಿ ಹೊಸ ಜೀವನವನ್ನು ಕಟ್ಟಿಕೊಂಡರು.

ಇರಲಿ! ಆ ಹಳೆಯ ಮಾತೆಲ್ಲ ಈಗ ಏಕೆ! ಇಂದಿನ ಈ ಅನುಭವ ಹಸಿ ಹಸಿಯಾಗಿ ಇರುವಾಗ!

ಇಂದಿನದು ಹಳೆಯ ಕಣ್ಣುಗಳು ಕಂಡ ಹೊಸ ನೋಟ. ಕೇವಲ ಮೂರು ತಿಂಗಳ ಹಿಂದೆ ಫೆಬ್ರುವರಿಯ ಸುಮಾರಿನಲ್ಲಿ, ನಾವು ಕನಸಿನಲ್ಲಿಯೂ ಕಲ್ಪಿಸದ ಆದರೆ ಈಗ ನಡೆದು ಹೋಗುತ್ತಿರುವ, ವೈಯಕ್ತಿಕವಾದ ನನ್ನ ಅನುಭವಗಳ ಕಥನ, ಕೆಲ ವಿವರಗಳು.

ಅದಕ್ಕೂ ಮೊದಲು ಅಂದು ಇಂದಿಗಿನ ಮತ್ತೊಂದು ಮುಖ್ಯ ಫರಕು – ಇಂದು ಅಗಾಧವಾಗಿ ಬೆಳೆದಿರುವ ವಿಜ್ಞಾನ -ತಂತ್ರಜ್ಞಾನ. ಇಂದಿನದು ದಿನೇ ದಿನೇ ಹೆಚ್ಚು ಹೆಚ್ಚು ವ್ಯಾಪಕವಾಗುತ್ತಿರುವ ಆನ್ ಲೈನ್ ಯುಗ. ಹೊರಗೆ ಹೋಗದೆಯೆ, ಇರುವಲ್ಲಿಯೆ ಇದ್ದು ವಿಡಿಯೋ ಮೀಟಿಂಗು, ಕಾನ್ಪರೆನ್ಸ ಇತ್ಯಾದಿಗಳನ್ನು.ಮಾಡಬಹುದಾಗಿದೆ. ಅಷ್ಟೇ ಏಕೆ, ಆಧುನಿಕ ಈ ಸೌಲಭ್ಯ ಪೂಜೆ ವ್ರತಾಚರಣೆ, ಶುಭ ಕಾರ್ಯಗಳಿಗೂ ಒದಗಿ ಬರುತ್ತಿದೆ.

ಅದರದೇ ಕಥನ ನಾನೀಗ ಮಾಡುತ್ತಿರುವದು. ಪುಣೆಯ ಪಿಂಪರಿ-ಚಿಂಚವಡದ ಬಡಾವಣೆಯೊಂದರಿಂದ. ನಾನೂ ಬೆಳಗಾವಿಯವ. ಆದರೆ ಈಗ ಧಾರವಾಡದವನಾಗಿದ್ದೇನೆ. ಕಾರಣಾಂತರದಿಂದ ಮಗನ ಕಡೆ ಪುಣೆಗೆ ಬಂದವನು ಕೆಲ ತಿಂಗಳಿಂದ ಇಲ್ಲಿಯೆ ಇದ್ದೇನೆ. ಈ ಸ್ಥಳ ಸೂಚಕ ವಿವರಗಳನ್ನೆಲ್ಲ ಹೇಳಲು ಕಾರಣ, ಎಲ್ಲಿ ಕೊರೋನಾದ ಹಾವಳಿ ಹೇಗಿದೆ ಎಂಬುದು ತಿಳಿಯಲಿಯೆಂದು. ಇಲ್ಲಿ ಸುತ್ತಮುತ್ತ ಕೆಲ ಕಡೆ ಲಾಕ್ ಡೌನ್ ಮಾತ್ರವಲ್ಲ, ಸೀಲ್ ಡೌನ್ ಇದೆ.

ಈ ಸಲದ ನೂತನ ಸಂವತ್ಸರ ತನ್ನ ಮೊದಲ ಹೆಜ್ಜೆಯನ್ನಿಟ್ಟಿದ್ದೇ ಜನರನ್ನೆಲ್ಲ ಒಂದು ತರಹ ಕಟ್ಟಿಹಾಕಿ. ಮನೆಯಿಂದ  ಹೊರ ಬೀಳಲೂ ಆಗದೆ ಆಚರಿಸಿದ ಹಬ್ಬ. ಯುಗಾದಿಯ (ಮಾರ್ಚ ೨೫) ಸ್ವಾಗತಕ್ಕೆ ತಳಿರು ತೋರಣ, ಪೂಜೆಗೆ ತುಳಸಿ ಹೇಗೋ ಸಿಕ್ಕವಾದರೂ, ದೇವರಿಗೆ ಏರಿಸಲು ಹೂವು ಸಿಗದೇ ಹೇಗುಹೇಗೋ ಅನಿಸಿತು. “ಪುಷ್ಪಾಣಿ ಸಮರ್ಪಯಾಮಿ” ಎಂದು ಬಾಯಿಂದ ಹೇಳಿ, ಹೂವೇ ಸಿಕ್ಕಿಲ್ಲವಲ್ಲೊ ದೇವಾ ಅನ್ನುತ್ತ ಕೈ ಮುಗಿದಿದ್ದಾಯಿತು.

ಒಂದು ವಾರ ಕಳೆಯುವಷ್ಟರಲ್ಲಿ – ಆಗಲೆ ಮನೆಯಿಂದಲೆ ಕೆಲಸ ಶುರು ಆಗಿತ್ತು. ಪರೀಕ್ಷೆ ನಡೆಯುವ ಮನ್ನವೆ ಶಾಲೆಗಳು ಮುಚ್ಚಿದ್ದವು, ಅಷ್ಟೆ ಏಕೆ, ತಿರುಪತಿಯಂತಹ ಯಾತ್ರಾಸ್ಥಳವೂ ಭಕ್ತರಿಗೆ ಮುಚ್ಚಿಹೋಗಿದ್ದವು. ಜಾತ್ರೆಗಳು ನಿಂತು ಹೋಗಿದ್ದವು. ದಿನವೂ ಇಂತಹ ಸುದ್ದಿಗಳೆ!

ಬೆಂಗಳೂರಿನಲ್ಲಿ ಮೊಮ್ಮಗಳು ಕಾಲೇಜಿಗೆ ಹೋಗಹತ್ತಿದ್ದಳು. ಅದೆ ಮೊದಲ ವರ್ಷ. ಅವಳ ಶಿಕ್ಷಣದ ಗತಿ ಏನಾಯಿತೆಂದು ತಿಳಿಯಲು ಫೋನ್ ಮಾಡಿದೆ. ಆಗಲೆ ಅವಳ Online class ಶುರು ಆಗಿದ್ದರ ಸಮಾಚಾರ ಕೇಳಿದೆ. ಬೆನ್ನಲ್ಲೆ ೬ ನೆ ವರ್ಗದಲ್ಲಿದ್ದ ಮತ್ತೊಬ್ಬ ಮೊಮ್ಮಗಳ ಆನ್ ಲೈನ್ ವರ್ಗವೂ ಮರುದಿನದಿಂದ ಎಂದು ಕೇಳಿ ಥಕ್ಕಾದೆ.

ಕೌತುಕದಿಂದ ಇದನ್ನು ಮನೆಯಲ್ಲಿ ತಿಳಿಸ ಹೋದರೆ ಇಲ್ಲಿನ ಮೊಮ್ಮಗಳು, ಅವಳೂ ೬ನೆ ವರ್ಗದಾಕೆಯೆ, (ಎಲ್ಲರೂ ಇಂಗ್ಲಿಶ ಮಾಧ್ಯಮದವರು). ಅವಳೂ  ತನ್ನ ಆನ್ ಲೈನ್ ಕ್ಲಾಸು ನಾಡಿದ್ದರಿಂದ ಶುರು ಆಗಲಿದೆ ಎಂದಳು. ಪ್ರಾಥಮಿಕ  ತರಗತಿ ಯವರಿಗೂ ಆನ್ ಲೈನ್ ಪಾಠವೇ! ಮೇಲಾಗಿ ಶಾಲಾ ವಿಷಯಕ್ಕೂ ಅಲ್ಲ, ಅವಳ ಹವ್ಯಾಸವಾದ ಡ್ರಾಯಿಂಗಿಗಾಗಿ! ಜಗತ್ತು ಎಷ್ಟು ಬದಲಾಯಿತಲ್ಲ ಎಂದು ಚಕಿತನಾದೆ. ಅಚ್ಚರಿ ಅಷ್ಟಕ್ಕೆ ನಿಲ್ಲಲಿಲ್ಲ.

ಆನಂತರ ನೋಡಿದ್ದು: ಟೇಬಲ್ಲಿನ ಮೇಲೆ ಡ್ರಾಯಿಂಗ ಕಾಗದ, ಪೆನ್ಸಿಲ್ಲು, ಬಣ್ಣ, ಬ್ರಶ್ ಮತ್ತು ಎದುರಿಗೆ ಲ್ಯಾಪ್ ಟಾಪ್ ಇಟ್ಟುಕೊಂಡ ತನ್ನ ಅಕ್ಕನ ಪಕ್ಕದಲ್ಲಿ ಹಟಮಾಡಿ ಕುಳಿತ ಇನ್ನೊಬ್ಬ ಮೊಮ್ಮಗಳು. ಅವಳೊ, ಅದೇ ನರ್ಸರಿ ಮಗಿಸಿದ್ದವಳು.  ಕುಳಿತದ್ದು ಏಕೆ? ತಾನೂ ಡ್ರಾಯಿಂಗ ಟೀಚರಿಗೆ ಹಾಯ್ ಹೇಳಿ, ತಾನು ಗೀಚಿ ಬಣ್ಣ ಮೆತ್ತಿದ ಚಿತ್ರಗಳನ್ನು ತೋರಿಸಿ Good ಅನ್ನಿಸಿಕೊಳ್ಳಲು.

ಈ ಆನ್ ಲೈನ್ ಬೋಧನಾ ಸೌಲಭ್ಯ ನರ್ಸರಿ ಶಾಲಾ ಮಟ್ಟವನ್ನೂ ಮುಟ್ಟಿದೆಯಲ್ಲ ಎಂದು ಇನ್ನೂ ಅಚ್ಚರಿಪಟ್ಟೆ.

ಮುಂದೆ ಒಂದು ವಾರದಲ್ಲಿಯೆ, ಹಳೆ ಕಾಲದ ನಾನೂ ಆಧುನಿಕವಾದ ಈ ಆನ್ ಲೈನ್ ಪ್ರಯೋಜನ ಪಡೆದು ಅದರ ಲಾಭಾರ್ಥಿಯಾಗಲಿದ್ದೆ. ಆದರೆ ಅದು ಕಿಂಚಿತ್ತೂ ಹೊಳೆದಿರಲಿಲ್ಲ.

ಲಾಕ್ ಡೌನ್ ನನ್ನ ಮುಂದೆ ಧುತ್ತೆಂದು ಪ್ರಶ್ನೆಯೊಂದನ್ನು ನಿಲ್ಲಿಸಿತ್ತು. ಮೂರು ನಾಕು ದಿನಗಳ ನಂತರ ನನ್ನ ತಂದೆ ತಾಯಿಯ ‘ತಿಥಿ‘ ಇದ್ದಿತು. ಆದರೆ ಮಾಡಿಸುವ ಪುರೋಹಿತರು ಅಲ್ಲೆಲ್ಲೂ ಇದ್ದಿಲ್ಲ. ದೂರದಲ್ಲಿ ಈ ವ್ಯವಸ್ಥೆ ಇದ್ದ ಮಠ ಇದ್ದರೂ ಕರೋನಾ ಕಾರಣದಿಂದ ಆ ಸೇವೆ ಸ್ಥಗಿತವಾಗಿತ್ತು.

ಕೆಲ ಕಾರ್ಯಗಳನ್ನು ಅನಿವಾರ್ಯ ಸಂದರ್ಭದಲ್ಲಿ ಮುಂದೂಡಬಹುದಾದರೂ, ಶ್ರಾದ್ಧಕರ್ಮ ಅನುಕೂಲವಾದಾಗ ಮಾಡಲು ಶಾಸ್ತ್ರ ಒಪ್ಪುವದಿಲ್ಲ. ಆ ಶ್ರದ್ಧೆಯೆ ಇಲ್ಲದೆ ಶ್ರಾದ್ಧವಾದೀತಾದರೂ ಹೇಗೆ! ಆದರೆ ಈ ಲಾಕ್ ಡೌನ್ ಅದನ್ನು ‘ಬಿಡಲಾರೆ, ಆದರೆ ಮಾಡಲಾರೆ‘ ಎಂಬಂತಹ ವಿಚಿತ್ರ ಸಂದರ್ಭವನ್ನು ಸೃಷ್ಟಿಸಿತ್ತು.

ಎಂತಹ ಬಿಕ್ಕಟ್ಟಿನಲ್ಲಿಯೂ ಹುಡುಕಿದರೆ ದಾಟಲು ದಾರಿಯೊಂದು ಸಿಕ್ಕೇ ಸಿಗುತ್ತದೆ ಅಲ್ಲವೆ! ಹಾಗೆಯೆ ಆಯಿತು. ದಾರಿ ತೋಚದೆ, ಹಿರಿಯ ವ್ಯಕ್ತಿ, ನನ್ನ ಸೋದರಮಾವನನ್ನು ಸಂಪರ್ಕಿಸಿದೆ. ಅವರಿಗೆ ಕಿವಿ ಮಂದವಾಗಿವೆಯೆಂದು, ಅವರ ಮಗನ ಮುಂದೆ ನನ್ನ ಅಳಲು ತೋಡಿಕೊಂಡೆ. ಶ್ರಾದ್ಧದ ಪೌರೋಹಿತ್ಯವನ್ನು ವಿಡಿಯೋ ಸಂಪರ್ಕದಿಂದ ಸಾಧ್ಯಮಾಡಲಾದೀತೇ ಎಂದು ಕೇಳಿದೆ. ನನ್ನ ಸಮಾಧಾನಕ್ಕೆ ನಿರೀಕ್ಷಿಸದೆ ಇದ್ದ ಒಪ್ಪಿಗೆ ತಕ್ಷಣ ಸಿಕ್ಕಿತು.

ಆ ಎರಡೂ ದಿನ -ಎಪ್ರಿಲ್ ೧೯, ೨೦ ನಾನು ಪುಣೆಯ ಮನೆಯಲ್ಲಿ, ಸಂಕಲ್ಪ ಶ್ರಾದ್ಧದ ಪುರೋಹಿತ ನಾಕುನೂರಾ ಐವತ್ತಕ್ಕೂ ಹೆಚ್ಚು ಕಿ.ಮೀ. ದೂರದ ಹುಬ್ಬಳ್ಳಿ ಹತ್ತಿರದ ಮಿಶ್ರೀಕೋಟಿಯಲ್ಲಿ. ನನ್ನೆದುರು ಲ್ಯಾಪ್ ಟಾಪ್, ಅವರ ಎದುರು ಮೋಬೈಲ್ ಫೋನ. ದರ್ಭೆ, ದರ್ಭೆಯ ಪವಿತ್ರ, ದಾನಕ್ಕೆ ಜನಿವಾರ – ಗೋಪಿಚಂದನ ಇವು ಯಾವವೂ ಇಲ್ಲದಿದ್ದರೂ ಇಡಲು ದಕ್ಷಿಣೆ, ಮುಟ್ಟಿಸಲು ಇ-ಪೇಮೆಂಟ ವ್ಯವಸ್ಥೆ ಇದ್ದೇ ಇತ್ತಲ್ಲ! ಅಂತೂ ಆ ಕೆಲಸ ನಿಲ್ಲಲಿಲ್ಲ!

ಲಾಕ್ ಡೌನ್ ಅಡಚಣಿಯಲ್ಲೂ ಆನ್ ಲೈನ್ ಸೌಲಭ್ಯದಿಂದ ಮನಸ್ಸಿಗೆ ಸಿಕ್ಕ ಸಮಾಧಾನದ ಮೊದಲ ಸಲ ಸಂದರ್ಭವಿದು.

ಮರುದಿನ ಮತ್ತೊಂದು ಅನಿರೀಕ್ಷಿತ ಸುಖಾನುಭವ ಕಾದಿತ್ತು. ಪರಿಚಿತರೊಬ್ಬರು ಫೋನ್ ಮಾಡಿ ೨೩ನೆ ತಾರೀಖಿಗೆ ತಾವು ಮಾಡಲಿದ್ದ ರಾಘವೇಂದ್ರಸ್ವಾಮಿಗಳ ಅಷ್ಟೋತ್ತರ ಸ್ತೋತ್ರ ಪಠನ ಕಾರ್ಯಕ್ರಮದಲ್ಲಿ ಪಾಲುಗೊಳ್ಳಲು ಸಾಧ್ಯವೆ ಎಂದು ಕೇಳಿದರು. ಅಲ್ಲದೆ, ಅದಕ್ಕಾಗಿ ಹೊರಬೀಳುವ ಅಗತ್ಯವಿಲ್ಲ, ತಮ್ಮ ತಮ್ಮ ಮನೆಯಲ್ಲಿದ್ದೇ ಭಾಗವಹಿಸಬಹುದು,  ವಿಡಿಯೋ ಸಂಪರ್ಕದ ಮೂಲಕ ಎಂದೂ ಹೇಳಿದರು. ಸಂತೋಷದಿಂದ ಒಪ್ಪಿಕೊಂಡೆ.

ಒಂದೆಡೆ ಸೇರದೆ, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು, ಆಧುನಿಕ ಸೌಲಭ್ಯದ ಪ್ರಯೋಜನದಿಂದ ಪುಣೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ಹೀಗೆ ಅಂದು ಆರು ಕುಟುಂಬಗಳು ಲೋಕ ಕಲ್ಯಾಣಾರ್ಥವಾಗಿ ‘ಅಷ್ಟೋತ್ತರ‘ ವನ್ನು ಮಾಡಿದವು.

ಇದರ ಪ್ರೇರೇಪಣೆ ಎಷ್ಟಿತ್ತೆಂದರೆ, ಮೂರೇ ದಿನಗಳ ನಂತರ ಅಕ್ಷಯ ತೃತೀಯೆಯ ದಿನ ಇದು ಪುನರಾವರ್ತನಗೊಂಡು ದುಪ್ಪಟ್ಟು ಕುಟುಂಬಗಳು ಸೇರಿದವು. ವಿಶೇಷ, ಅದರಲ್ಲಿ ಪುಣೆಯವರಷ್ಟೆ ಅಲ್ಲದೆ ಮುಂಬಯಿ, ಉಗಾಂಡಾದ ಇಬ್ಬರು ಇದ್ದರು.

ಹೊರಗಿನ ಕರೋನಾ ಮಹಾಮಾರಿ ಒಳಬಾರದಿರಲಿದಿರಲೆಂದು ಬಾಗಿಲಿಕ್ಕಿ ಮನೆಯಲ್ಲಿ ವಾರಗಟ್ಟಲೆ ಕಟ್ಟಿಹಾಕಿದಂತೆ ಆಗಿತ್ತು. ಅತ್ಯಂತ ಕಠಿಣ, ನೋವಿನ ಅನುಭವ. ಆದರೆ ಹೊಂದಿ ಹೋಗದೇ ಗತಿ ಇರಲಿಲ್ಲ. ಆ ಅನಿವಾರ್ಯತೆ ಶುಭ ಕಾರ್ಯಗಳಿಗೆ ರೂಢಿಗಳು ಅಡ್ಡಬರದಂತೆ, ಇದ್ದ ಕಿರು ದಾರಿಯಲ್ಲಿ ಹೇಗೋ ದಾಟಿ ಹೋಗುವಂತೆ ಮಾಡಿತು.

ನನ್ನ ತಮ್ಮನ ಮೊಮ್ಮಗಳ ನಾಮಕರಣ (ಎ.೩೦) ಅದರ ಒಂದು ಉದಾಹರಣೆ. ನಡೆದದ್ದು ಕೊಪ್ಪಳದಂತಹ ಒಳಭಾಗದ ಅಷ್ಟು ದೊಡ್ಡದಲ್ಲದ ಊರಿನಲ್ಲಿ. ಲಾಕ್ ಡೌನ್ ದಿಂದಾಗಿ ಕೂಸಿನ ತಂದೆಯೊಬ್ಬನನ್ನು ಬಿಟ್ಟು ಸೋದರತ್ತೆಯರಿಗಾಗಲಿ, ಅಜ್ಜ ಅಜ್ಜಿಯರಿಗಾಗಲಿ, ಬಾಣಂತಿಯ  ಸೋದರ ಮಾವಂದರಿಗಾಗಲಿ ಯಾರೊಬ್ಬರಿಗೂ ಬರಲು ಆಗಲಿಲ್ಲ. ಆದರೆ ಕಾರ್ಯಕ್ರಮ ನಿಲ್ಲಲಿಲ್ಲ. ವಿಡಿಯೋ ಕರೆಯ ಸೌಲಭ್ಯ! ಸೋದರತ್ತೆ ಅಮೇರಿಕೆಯಿಂದಲೇ ನಾಮಕರಣ ಮಾಡಿ ಕಿವಿಯಲ್ಲಿ ಕುಟುಟು ಕುರ್ರ ಎಂದು ಹೇಳಿದಳು.

ಮುಂದೆ ಹತ್ತು ದಿನಗಳ ನಂತರ ಇಂತಹ ಮದುವೆಯೊಂದೂ ನಡೆದ (ಮೇ ೧೦) ಸುದ್ದಿ ಬಂದಿತು.ಬೆಳಗಾವಿಯಿಂದ. ಗಂಡಿನ, ಹೆಣ್ಣಿನ ಎರಡು ಮನೆಯವರು ಮತ್ತು ಬಹುಶಃ ಅಕ್ಕಪಕ್ಕದವರು ಮಾತ್ರ ಸೇರಿ ಮನೆಯಲ್ಲಿಯೆ ಅಕ್ಷತಾರೋಪಣೆ ಮಾಡಿದ್ದರು.  ಬರಬೇಕಾಗಿದ್ದವರೆಲ್ಲ ತಮ್ಮ ತಮ್ಮ ಊರಿನಲ್ಲಿ ಇದ್ದುಕೊಂಡೆ ಆನ್ ಲೈನ್ ದಲ್ಲಿ ವಿಡಿಯೊ ನೇರ ಪ್ರಸಾರವನ್ನು ನೋಡುತ್ತ ಸಮಾರಂಭದಲ್ಲಿ ಸೇರಿಕೊಂಡಿದ್ದರು.

ಲಾಕ್ ಡೌನ್ ದಿನಗಳಲ್ಲಿ ಆನ್ ಲೈನ್ ಸೌಲಭ್ಯ ಹೇಗೆಲ್ಲ ನೆರವಾಯಿತು ಎಂದು ಹೇಳಿಕೊಂಡೆ. ಆದರೆ ಎಲ್ಲ ಕಡೆ ಅದು ಸಹಾಯಕ್ಕೆ ಬಾರದಲ್ಲ, ಅಂತಹ ಸಮಸ್ಯೆಗೆ ಬೇರೆ ವ್ಯವಸ್ಥೆ ಮಾಡಿಕೊಂಡು ಫಜೀತಿಗೊಳಾದ ಅನುಭವ ಈ ಮುಂದಿನದು.

ಈ ಲಾಕ್ ಡೌನ್ ದಲ್ಲಿ ತಲೆ ಹುಲುಸಾಗಿ ಬೆಳೆದಿತ್ತು. ನಿಮ್ಮ ಸಂಪಾದಕರು ಹೇಳಿದಂತೆ ನಮ್ಮ ತಲೆ ಬೇಂದ್ರೆ ಕಾರಂತರ ಹಾಗೆ ಆಗತೊಡಗಿತ್ತು.

ನಾವು ಸಣ್ಣವರಿದ್ದಾಗ ‘ಅಷ್ಟಕ್ಕೇ ಇಷ್ಟಾದರೆ, ಅಪ್ಪನ ಕಷ್ಟಕ್ಕೆ ಎಷ್ಟು?‘ ಎಂದು ಚೇಷ್ಟೆಗೆ ಪ್ರಾಸಬದ್ಧವಾದ ಪ್ರಶ್ನೆಯೊಂದನ್ನು ಕೇಳಲಾಗುತ್ತಿತ್ತು. ಈಗ ಅದೇ ಪ್ರಶ್ನೆ ಮಗನ ಕಷ್ಟಕ್ಕೆ ಎಷ್ಟು? ಎಂದು ಧುತ್ತೆಂದು ಬಂದು ನಿಂತು, ಒಂದೂವರೆ ಸಾವಿರ ರುಪಾಯಿ ಎಂದು ಉತ್ತರ ಹೇಳಿಸಿಕೊಂಡಿತು. ಉತ್ತರ ಸಿಕ್ಕ ಮಗ ಸ್ವಯಮಾಚಾರ್ಯನಾಗಿ ಕರ್ತರಿ ವಿದ್ಯೆ ಕಲಿಯಲು ತಯಾರಾದ. ಆ ಪ್ರಯತ್ನದ ಫಲಿತಾಂಶ – “ಕಿಸೆಗೆ ತೂತು, ತಲೆ ಬೋಳು” ಆಯಿತು.ಅವನನ್ನು ಸದಾ ಅಂಟಿ ಕೊಂಡಿರುತ್ತಿದ್ದ ನಾಲ್ಕು ವರ್ಷದ ಮಗಳೂ ಗುರುತು ಹತ್ತದೆ ಮಿಕಿ ಮಿಕಿ ನೋಡಹತ್ತಿದಳು.

ಅಂತಹದರಲ್ಲಿಯೂ ಒಂದು ಸಮಾಧಾನ, ತನ್ನ ಗೆಳೆಯನ ಮಂದೆ ಈ ಅಳಲು ತೋಡಿಕೊಂಡ ಸ್ವಲ್ಪ ಹೊತ್ತಿನಲ್ಲಿಯೆ ವಾಟ್ಸಾಪ್ ದಲ್ಲಿ ಅವನ ಫೋಟೊ ಬಂದಿತು. ಅವನೂ ಈ ಪ್ರಯತ್ನದಲ್ಲಿ ‘ಬೋಳಪ್ಪ‘ ಆಗಿದ್ದ.

ಲಾಕ್ ಡೌನ್ ಕಾಲ ಹೊತ್ತು ಹೋಗದೆ ಬೇಸರದ ಕಾರಣವಾದಂತೆ,  ಸೃಜನಶೀಲ ವಿಚಾರಗಳಿಗೂ ಜನ್ಮ ಕೊಟ್ಟಿತು. ಕಲಾವಿದರು ಅಭಿಮಾನಿ ರಸಿಕ ವರ್ಗವನ್ನು ತಲುಪಲು ಆನ್ ಲೈನ್ ವಿಡಿಯೋ ಸಂಪರ್ಕದ ನೇರ (Live) ಕಾರ್ಯಕ್ರಮವನ್ನು ಆಯೋಜಿಸಿದರು.

ನನಗೆ ಗೊತ್ತಾದ, ಆನಂದಸಿದ ಇಂತಹ ಎರಡು ಕಾರ್ಯಕ್ರಮಗಳು: ಸಿತಾರ ವಾದಕರಾಗಿ ಖ್ಯಾತರಾಗಿರುವ – ಒಂದೊಮ್ಮೆ  ಬೆಳಗಾವಿಯಲ್ಲಿ ನನ್ನ ನೆರೆಮನೆಯವರಾಗಿದ್ದ, ಸಂಜಯ ದೇಶಪಾಂಡೆ ತಮ್ಮ ಮನೆಯಿಂದಲೇ ಫೇಸ್ ಬುಕ್ ಮೂಲಕ ಮಾಡಿದ ನೇರ ಪ್ರಸಾರ (ಎ.೧೯) ಒಂದು. ಹಾಲ್, ವೇದಿಕೆ ಇತ್ಯಾದಿಗಳ ಜಂಜಾಟ  ಇಲ್ಲದೆ ದೂರ ದೂರದ ಸಂಗೀತ ರಸಿಕರನ್ನು ತಣಿಸಿದರು. ವಿಶೇಷವೆಂದರೆ, ಈ ಲಾಕ್ ಡೌನ್ ದಿಂದ ಪಕ್ಕವಾದ್ಯದವರು ಸಿಕ್ಕಿರಲಿಲ್ಲ. ಆದರೆ ತಬಲಾ ಮಶಿನ್ ನೆರವು ಇತ್ತಲ್ಲ!

ಇನ್ನೊಂದು ಖ್ಯಾತ ಗಾಯಕಿ ಸಂಗೀತಾ ಕಟ್ಟಿಯವರದು. ಎ.೨೮ ರಂದು ‘ಬೆಂಗಳೂರು ಗಣೇಶೋತ್ಸವ‘ದ ಆಶ್ರಯದಲ್ಲಿ ಫೇಸಬುಕ್ಕಿನಲ್ಲಿ ನಡೆದ ನೇರ ಪ್ರಸಾರ. ತಮ್ಮ ಮನೆಯಲ್ಲಿ ಚಹಾ ಕುಡಿಯುತ್ತ, ಅಭಿಮಾನಿಗಳೊಡನೆ ಮಾತಾಡುತ್ತ, ಹಾಡುತ್ತ ಹೋದ ಕಾರ್ಯಕ್ರಮ ಅದು. ಆಯ್ದ ಯಾವುದೊ ಒಂದೆರಡು ರಾಗಗಳ ಗಾಯಕೀ ಬಗೆಯದಲ್ಲ.

ಅವರು ಆಯ್ದುಕೊಂಡಿದ್ದ ವಿಷಯ, ವಿವರಣೆ, ಗೀತ ಸಂಗೀತದ ಉದಾಹರಣೆ ಎಲ್ಲವೂ ಪರಂಪರೆ ಎಂಬ theme ಗೆ ಸಂಬಂಧಿಸಿದ ಮಾತು-ಗಾಯಕೀ. ಪರಂಪರೆಯಲ್ಲಿನ ಕನ್ನಡ ದಾಸರ ಪದಗಳು, ವಚನಗಳು ಮರಾಠಿ ಅಭಂಗಗಳು, ಭಾವ ಗೀತೆ, ಗಝಲ್, ಬೇಗಂ ಅಖ್ತರ ಅವರ ಗಾಯಕೀ ಹೀಗೆ ವಿಸ್ತಾರದ ವಿಷಯ ವಿವೇಚನೆ, ವಿವರಣೆ, ಗಾಯನ ಎಲ್ಲವೂ ಸೇರಿ ಸಂಗೀತದ ಭಕ್ಷ್ಯಭೋಜ್ಯಗಳ ರಸದೌತಣ. ಅವರ ಮನೆಯಲ್ಲೆ ಕುಳಿತು ಹರಟುತ್ತ, ಕೇಳುತ್ತ ಕರ್ಣಾನಂದ ಹೊಂದಿದ ಸುಖಾನುಭವ.

ಇವು ಈ ಕಲಾವಿದರು ಈ ಕಾಲದಲ್ಲಿ ನಡೆಸಿದ ಇಂತಹ  ಹಲವು ಕಾರ್ಯಕ್ರಮಗಳಲ್ಲಿ ಒಂದೊಂದು ಉದಾಹರಣೆಗಳು ಮಾತ್ರ.