ಬದರಿ ಯಾತ್ರೆ – ೬೮ ವರ್ಷಗಳ ಹಿಂದಿನ ಕೆಲ ನೆನಪುಗಳು.

ಇಂದು ಗುರುವಾರ, ೨೦೨೧ರ ಮೇ ೨೦ನೆ ದಿನ. ನಮ್ಮ ಪಂಚಾಂಗದ ಪ್ರಕಾರ ಹೇಳಬೇಕೆಂದರೆ ಪ್ಲವ ನಾಮ ಸಂವತ್ಸರದ ವೈಶಾಖ ಶುಕ್ಲ ಅಷ್ಟಮಿ/ನವಮಿ.

ಈ ಸಲದ ಅಕ್ಷಯ ತೃತೀಯಾ ೧೪ ನೆ ತಾರೀಖು ಶುಕ್ರವಾರ ಇದ್ದಿತು, ಅದಾಗಿ ಕೇವಲ ಆರು ದಿನಗಳಾಗಿವೆ. ಈ ಎಲ್ಲ ಲೆಕ್ಕಾಚಾರದ ಹಿಂದೆ ಹಳೆಯದನ್ನೇನೋ ನೆನಪಿಸಿಕೊಂಡು ಹೇಳಹೊರಟಿರುವ ವಿಷಯ ವಿಶೇಷವೊಂದರ ಹಿನ್ನೆಲೆ, ಕಾರಣ ಇದೆ.

ಅದು ೬೮ ವರ್ಷಗಳ ಹಿಂದಿನ ಮಾತು. ನಾನು ಇಂಗ್ಲಿಷಿನಲ್ಲಿ ಹೇಳುತ್ತಾರಲ್ಲ, Down in memory lane.. ಹಾಗೆ ನೆನಪಿನ ಆ ಹಳೆಯ ಬೀದಿಯಲ್ಲಿ ಇಂದು ಮತ್ತೊಮ್ಮೆ ಹಾಯ್ದು ಹೋಗುತ್ತಿದ್ದೇನೆ.

ಈಗ ನೆನಪಿಗೆ ಬರುತ್ತಿರುವದು ಬದರಿ ಕ್ಷೇತ್ರದಲ್ಲಿ ಕಳೆದ ಮೂರು ದಿನಗಳು. ಅವು ೧೯೫೩ ರ ಮೇ ತಿಂಗಳ ೧೫, ೧೬, ೧೭ ನೆ ತಾರೀಖಿನ ದಿನಗಳೋ ಅಥವಾ ೧೬, ೧೭, ೧೮ ನೆ ತಾರೀಖಿನಂದೊ ನಿಖರವಾಗಿ ಈಗ ಹೇಳಲಾರೆನಾಗಿದ್ದರೂ ಒಂದು ೧೬ನೆ ದಿನಾಂಕ ಅಲ್ಲಿ ಇದ್ದೆ ಎಂಬುದಂತೂ ಖಚಿತ.

ಏಕೆಂದರೆ ಬದರಿನಾಥನ ಗುಡಿಯ ಹೊರಗಡೆಯ ಕಮಾನೊಂದರ ಮುಂದೆ ತೆಗೆಸಿಕೊಂಡ ಫೋಟೊವೊಂದು ಈಗಲೂ ಇದೆ ಮತ್ತು ಅದರ ಮೇಲೆ ನನ್ನ ತಂದೆ, ಕಟ್ಟು ಹಾಕಿಸಲು ಕೊಡುವ ಮುನ್ನ ೧೬-೫-೧೯೫೩ ಎಂದು ಪೆನ್ಸಿಲ್ಲಿನಲ್ಲಿ ನಮೂದಿಸಿದ್ದೂ ಇದೆ.

ಇರಲಿ, ಗೂಗಲ್ಲಿನಲ್ಲಿ ಹುಡುಕಿದಾಗ ಆ ಸಲ – ವಿಜಯ ನಾಮ ಸಂವತ್ಸರ, ಅಕ್ಷಯ ತೃತೀಯಾ ಶುಕ್ರವಾರ ೧೫ನೆ ಮೇ – ಬಂದಿದ್ದಿತು. ಈ ವರ್ಷವೂ ಶುಕ್ರವಾರವೇ, ಆದರೆ ದಿನಾಂಕ ಮಾತ್ರ ೧೪ ಮೇ!

ಅಕ್ಷಯ ತೃತೀಯಾ ಬದರಿ ಕ್ಷೇತ್ರದಲ್ಲಿ ಒಂದು ವಿಶೇಷ ದಿನ. ಸುಮಾರು ಆರು ತಿಂಗಳ ಕಾಲ ಹಿಮಾಚ್ಛಾದಿತವಾಗಿರುವ ಕಾರಣದಿಂದ ಮುಚ್ಚಿರುವ ಆ ದೇವಾಲಯ ಸಾಮಾನ್ಯವಾಗಿ ತೆರೆಯಲ್ಪಡುವದು ಈ ದಿನದಂದು. ವಿಶೇಷ ಕಾರಣವಿದ್ದಾಗ ಸ್ವಲ್ಪ ದಿನ ತಡವಾಗಲೂ ಬಹುದು.

ಈ ಸಲ ನಿನ್ನೆ, ೧೮ನೆ ಮೇ, ಬುಧವಾರ ಆ ಬದರಿ ವಿಶಾಲನ ದೇಗುಲದ ‘ಕಪಾಟ’ ‘ಖುಲಾ’ ಆಗಿ, (ಅಂದರೆ) ಬಾಗಿಲು ತೆರೆದು ನಿತ್ಯ ಪೂಜೆ ಪ್ರಾರಂಭ ಆಯಿತು.
ಬಾಗಿಲು ತೆರೆದು ನಾರಾಯಣನ ದರುಶನಕ್ಕೆ ಯಾತ್ರಿಗಳು ಒಳಹೊಕ್ಕಾಗ ಆ ದಿವ್ಯ ಮೂರುತಿಯ ಮೊದಲ ನೋಟದ ಜೊತೆಗೆ ಮತ್ತೊಂದು ಅಚ್ಚರಿ ಆ ಗರ್ಭಗುಡಿಯಲ್ಲಿ ಕಣ್ಣಿಗೆ ಬೀಳುತ್ತದೆ, ಆರು ತಿಂಗಳ ಹಿಂದೆ ಗುಡಿಯನ್ನು ಮುಚ್ಚುವಾಗ ಹಚ್ಚಿದ ದೀಪ ಹಾಗೆಯೆ ಪ್ರಕಾಶಿಸುತ್ತಿರುತ್ತದೆ. ಆಗ ದೇವರ ಮೇಲೆ ಏರಿಸಿದ ತುಳಸಿ ಪತ್ರ, ಪುಷ್ಪಗಳು ಹಿಂದಿನ ದಿನವಷ್ಟೆ ಏರಿಸಿದ್ದೇನೋ ಎನ್ನುವಷ್ಟು ತಾಜಾ ಆಗಿರುತ್ತವೆ. ಆ ದೀಪ/ಜ್ಯೋತಿಯ ದರ್ಶನ ವಿಶೇಷ ಧನ್ಯತೆಯನ್ನೀಯುವ ಸಂದರ್ಭ.

ನನಗೇನೋ ಆ ‘ದರ್ಶನ’ದ ನೆನಪು ಅದೇಕೋ ಬರುತ್ತಿಲ್ಲ. ಅಂತೆಯೆ ಅಕ್ಷಯ ತೃತೀಯಾ ದಿನ ನಾವು ಆ ಕ್ಷೇತ್ರವನ್ನು ತಲುಪಿದ್ದೆವೊ ಅಥವಾ ಕಾರಣಾಂತರದಿಂದ ಒಂದು ದಿನ ತಡವಾಗಿದ್ದಿತೊ ಈಗ ನೆನಪಿಗೆ ಬರುತ್ತಿಲ್ಲ.

ನೆನಪಿಗೆ ಬರುತ್ತಿಲ್ಲ ಎನ್ನುವದರಲ್ಲಿ ಕಾರಣವೂ ಇದೆ. ಮೊದಲೆ ಹೇಳಿದೆನಲ್ಲ. ಅದು ೬೮ ವರ್ಷಗಳ ಹಿಂದಿನ ಕಥೆ. ಮೇಲಾಗಿ ನಾನಿನ್ನೂ ಆಗ ಕೇವಲ ಹನ್ನೊಂದು ವರ್ಷದ ಹುಡುಗ. ಅದೇ ಆಗ ಐದನೆ ತರಗತಿ ಪಾಸಾಗಿದ್ದೆ. ಆರನೆ ಕ್ಲಾಸು ಶುರುವಾಗಿರಲಿಲ್ಲ, ಏಕೆಂದರೆ ಆಗಿನ್ನೂ ಬೇಸಗೆಯ ಬಿಡುವು.

ಅಷ್ಟು ಸಣ್ಣ ವಯಸ್ಸಿನ ಹುಡುಗರನ್ನು, ಇಂತಹ ದುರ್ಗಮ – ಆ ಕಾಲದಲ್ಲಿ ೩೫ ಮೈಲು ಹಿಮಾಲಯದಲ್ಲಿ ನಡೆದು ಹೋಗಬೇಕಾಗಿದ್ದ ಯಾತ್ರೆ ಅದು – ಯಾತ್ರೆಗೆ ಯಾರೂ ಕರೆದೊಯ್ಯುವದಿಲ್ಲ. ಆದರೆ ನನ್ನ ಪುಣ್ಯ ವಿಶೇಷ, ಹಾಗೆಯೆ ನನ್ನ ತಂಗಿ ವಿಜಯಾಲಕ್ಷ್ಮಿ (ಮೂರು ವರ್ಷ), ತಮ್ಮರಾಜಾ (ಗುರುರಾಜ) (ಮತ್ತೂ ಸವ್ವಾ ವರ್ಷ ಸಣ್ಣವ) – ಅಶಕ್ತ ತಾಯಿ ರುಕ್ಮಿಣಿಬಾಯಿ ಮತ್ತು ಸೋದರತ್ತೆ ಕೃಷ್ಟಕ್ಕ ಇವರೆಲ್ಲರ ಪುಣ್ಯ ವಿಶೇಷದಿಂದ, ಎನೇನೋ ಒತ್ತಡದಲ್ಲಿ, ನನ್ನ ತಂದೆ ರಂಗಣ್ಣ (ರಂಗನಾಥ) ನಮ್ಮೆಲ್ಲರನ್ನು ಕರೆದೊಯ್ದಿದ್ದರು.

ಬದರಿಯಾತ್ರೆಗೆ ಆ ಕ್ಷೇತ್ರವನ್ನು ತಲುಪಲು ಆ ಕಾಲದಲ್ಲಿ ಬಸ್ಸುಗಳು ಹೋಗುವಂತಹ ರಸ್ತೆ ಇರಲಿಲ್ಲ. ಹೃಷೀಕೇಷದ ವರೆಗೆ ರೈಲು ಮಾರ್ಗ, ಅಲ್ಲಿಂದ ಮುಂದೆ ಪೀಪಲಕೋಟ ಎಂಬ ಊರಿನ ವರೆಗೆ ಬಸ್ಸು ಹೋಗುತ್ತಿದ್ದವು. ಅಲ್ಲಿಗೆ ಬಸ್ ಪಯಣ ಕೊನೆಗೊಳ್ಳುತ್ತಿತ್ತು.

ಅಲ್ಲಿಂದ ಬದರಿಯವರೆಗೆ ಮೂವತ್ತೈದು ಮೈಲು ದೂರವನ್ನು – ಅಂದರೆ, ಈಗಿನ ಲೆಕ್ಕದಲ್ಲಿ ಸುಮಾರು ಐವತ್ತೈದು ಕಿಲೊ ಮೀಟರ ದೂರವನ್ನು ನಡೆದು ಹೋಗಬೇಕು. ಅದೊ ಬರಿಯ ಕಡಿದಾದ ದಾರಿ ಅಷ್ಟೆ ಅಲ್ಲ, ಸಾವಕಾಶವಾಗಿ ಸಾಗಬೇಕಾದ, ತೊಡೆ ತುಂಬಿ ಬರುವ ಏರು ದಾರಿ. ಹಿಮಾಲಯ ಪರ್ವತಮಯ ಪ್ರದೇಶ. ಗಢವಾಲ ಪ್ರಾಂತ/ ಜಿಲ್ಲೆಯ ಭಾಗವದು.

ಸಾಮಾನುಗಳನ್ನು ಹೊತ್ತೊಯ್ಯಬೇಕು. ಸಾಮಾನು ಎಂದರೆ ಇಂದಿನ ರೂಢಿಯ ಕೇವಲ ಬಟ್ಟೆ ಬರೆಯ, ನಿತ್ಯ್ ಅಗತ್ಯದ ಸಾಮಾನಿನ ಸೂಟಕೇಸ ಅಲ್ಲ. ನಮ್ಮ ಅಡುಗೆಗೆ ಬೇಕಾದ ಚಿಮಣಿ ಎಣ್ಣೆಯ ಸ್ಟೋ ಒಲೆ, ಅಲ್ಪಸ್ವಲ್ಪ ಕಾಳುಕಡಿ, ಹಾಸಿ ಹೊದೆಯುವ ಬಟ್ಟೆ ಇತ್ಯಾದಿ ಸಹಿತದ ಗಂಟು ಗದಡಿ. ಅವನ್ನೆಲ್ಲ ಸಾಗಿಸಲು ಶೇರ್ಪಾ ಎಂದು ಕರೆಯಲಾಗುತ್ತಿದ್ದ ಗೂರ್ಖಾ ಜನಾಂಗದ ಆಳಿನ, ಕೂಲಿಯ ವ್ಯವಸ್ಥೆ ಮಾಡಿಕೊಳ್ಳಬೇಕು.

ಆ ದಾರಿಯನ್ನು ಕ್ರಮಿಸಲಾಗದ ಅಶಕ್ತರು, ಮಕ್ಕಳು ಇವರಿಗಾಗಿ ಡೋಲಿ ಮತ್ತು ಕಂಡಿ ಎನ್ನುವ ಬೆನ್ನಮೇಲೆ ಹೊತ್ತೊಯ್ಯುವ ವಿಶೇಷ ತರದ ಬುಟ್ಟಿಗಳ, ಒಯ್ಯುವ ಕೂಲಿ ವ್ಯವಸ್ಥೆ ಇದ್ದಿತು. ಅದೂ ಬೇಡ ಎಂದರೆ ಬಾಡಿಗೆ ಕುದುರೆಗಳೂ ಲಭ್ಯವಿದ್ದವು. ಸವಾರಿ ಹೋಗಲು ಧೈರ್ಯ, ಅಷ್ಟು ಕೂಲಿ ಖರ್ಚಿಗೆ ತಯಾರಿ ಇದ್ದರೆ ಅಶ್ವಾರೋಹಿಯಾಗಿಯೂ ಯಾತ್ರಾ ಪಯಣವನ್ನು ಮಾಡಬಹುದಿತ್ತು.

ಪ್ರಾತರ್ವಿಧಿಗಳಾದ ಮೇಲೆ ದಿನವೂ ಬೆಳಿಗ್ಗೆ ಮೂರು ನಾಕು ಮೈಲು ನಡೆದು, ಯಾವ ಹಳ್ಳಿ- ‘ಚಟ್ಟಿ‘ ಹತ್ತುತ್ತಿತ್ತೊ ಅಲ್ಲಿ ಊಟ, ವಿಶ್ರಾಂತಿಗೆಂದು ನಿಂತು ಅಪರಾಹ್ನ ಮತ್ತೆ ಪಾದಯಾತ್ರೆಯನ್ನು ಮುಂದುವರೆಸ ಬೇಕು. ಸಂಜೆಯಾಗುವ ಮೊದಲು ಯಾವ ಹಳ್ಳಿ ಹತ್ತುತ್ತಿತ್ತೊ ಅಲ್ಲಿ ರಾತ್ರಿ ಊಟ ವಸತಿಗೆಂದು ತಂಗುವದು.

ಹೀಗೆ ಪ್ರತಿದಿನ ಆರೇಳು ಮೈಲು ನಡೆದು ಹೋದರೆ ಪೀಪಲಕೋಟೆಯಿಂದ ಬದರಿ ಕ್ಷೇತ್ರವನ್ನು ತಲುಪಲು ಐದು ದಿನಗಳ ಅವಧಿ ತಗಲುತ್ತಿತ್ತು. ಅಲ್ಲಿ ದೇವ ದರ್ಶನ, ಪೂಜೆ, ಕ್ಷೇತ್ರ ವಿಧಿ ಇತ್ಯಾದಿಗಾಗಿ ಎರಡು ಮೂರು ನಾಕು ದಿನ ವಸತಿ ಮಾಡಿ ಮರಳಿ ಹೊರಟರೆ ಪೀಪಲಕೋಟ ಮುಟ್ಟಲು ಮತ್ತೆ ಇಷ್ಟೆ ಅವಧಿ. ಬಹಳವೆಂದರೆ, ಇಳಿದಾರಿಯೆಂದು ಒಂದು ದಿನ ಕಡಿಮೆ ಅಷ್ಟೆ!

ಬದರಿಯನ್ನು ತಲುಪುವ ದಾರಿಯಲ್ಲಿ ಕೊನೆಯ ಸ್ಥಳ ಹನುಮಾನ ಚಟ್ಟಿ. ಅಲ್ಲಿಂದ ಮುಂದಿನ ಅಂತರ ಅತ್ಯಲ್ಪ. ಆದರೆ ಮೊದಲು ಕ್ರಮಿಸಿಬಂದ ನಾಕು ದಿನದ ದೂರದಲ್ಲಿ ಅಯಾಸ, ಕೊನೆಯ ಹಂತದ ಆ ಎರಡೊ ಮೂರೋ ಮೈಲು (ನೆನಪಿನಿಂದ ಸರಿಯಾಗಿ ಹೇಳಲಾರೆ) ದೂರ ನಡೆದಾಗ ಆದದ್ದರ ಮುಂದೆ ಏನೂ ಅಲ್ಲ, ಅಷ್ಟು ಹೆಚ್ಚು! ಅಷ್ಟು ಏರಿ! ಮುಂದಿಡಬೇಕಾದ ಪ್ರತಿಯೊಂದು ಹೆಜ್ಜೆ ಎರಡೆರಡು ಫೂಟು ಎತ್ತರದ ಮೆಟ್ಟಿಲೇರಿದಂತೆ ಎತ್ತರದ ದಾರಿ.

ಅಷ್ಟಾಗಿಯೂ ಅತ್ಯಂತ ರಮ್ಯ. ಅದ್ಭುತ ನೋಟ. ದಾರಿಯ ಪಕ್ಕದಲ್ಲಿಯೆ, ಅನತಿ ದೂರದಲ್ಲಿ ಒಂದು ಹಿಮ ಗುಹೆಯೂ ಇದ್ದಿತು. ನೋಡಿ ದಂಗಾದೆವು. ಒಳಹೊಕ್ಕೂ ಕೆಲ ಹೊತ್ತು ಅದರ ಆ ತಂಪು, ಸುತ್ತಲೂ ಹಿಮದ ಗವಿ, ಅದನ್ನೆಲ್ಲ ಮುಟ್ಟಿ ಮುಟ್ಟಿ ನೋಡಿದೆವು. ಸಂಭ್ರಮ ಪಟ್ಟೆವು. ಅದೊಂದು ಅನಿರ್ವಚನೀಯ ಅನುಭವ.

ಅಷ್ಟೆ ಅಲ್ಲ, ನಡೆದ ದಾರಿಯ ನಡುವೆ ಹದಿನೈದು ಇಪ್ಪತ್ತು ಫೂಟಿನಷ್ಟು ಅಗಲದ ದಾರಿಯ ಮೇಲೆ ಬಿದ್ದ ಹಿಮದ ಮೇಲೆ ದಾಟಿ ಮುಂದೆ ಹೋಗುವ ಮತ್ತೊಂದು ವಿಶೇಷ ಅನುಭವ. ಆ ಹಿಮವೂ ಎಂತಹದು! ಉಸುಕುಸುಕಾಗಿ ಐದಾರು ಇಂಚು ಎತ್ತರ ಬಿದ್ದಿದ್ದ ಚಿಕ್ಕ ‘ಹಿಮ ನದಿ’ ! ಅದನ್ನೆಲ್ಲ ನನ್ನ ಬೆರಗುಗಣ್ಣುಗಳಿಂದ ನೋಡಿದೆ. ಅದೊಂದು ಅಪೂರ್ವ ಅನುಭವ. ಆ ಕ್ಷಣ ಆಯಾಸ ಅದು ಹೇಗೋ ಮರೆತುಹೋಗಿತ್ತು.

ಆದರೆ ಸಾಗುವ ದಾರಿ, ದುರ್ಗಮವಾದ, ಏದುಸಿರು ಬಿಡುತ್ತ, ತೇಕುತ್ತ, ನಿಂತು ನಿಂತು ಸುಧಾರಿಸುತ್ತ ಗಮ್ಯ ಗುರಿಯತ್ತ ಹೋಗಲೇ ಬೇಕಿತ್ತು. ಆಗ ದೂರದಲ್ಲಿ ಬದರಿ ಊರಿನ, ದೇವಾಲಯದ ಒಂದು ನೋಟ ಕಣ್ಣಿಗೆ ಬಿದ್ದಾಗ ಆದ ಆ ಅನುಭವ, ಸಹಯಾತ್ರಿಗಳು ಸಂತೋಷದಿಂದ ಘೋಷಿಸುತ್ತಿದ್ದ ಜೈ ಬದರಿ ವಿಶಾಲ ಎಂಬ ಜಯಕಾರ ಘೋಷಣೆ ಎಲ್ಲ, ಆ ಕ್ಷಣಕ್ಕೆ ಅಪಾರ ಆನಂದಾನುಭವ, ಧನ್ಯತಾನುಭವ.

ಇರಲಿ, ಆದರೆ ಮನದ ತುಡಿತ ಬೇರೆ, ದೇಹದ ಪ್ರತಿಕ್ರಿಯೆ ಬೇರೆ. ಬದರಿ ಮುಟ್ಟಿದ್ದೆವು. ಆ ಗುಡಿಯ ಆವರಣದಲ್ಲಿ ಪೂಜಾರಿಯೊಬ್ಬರ ಎರಡು ಕೋಣೆಯ ‘ಯಾತ್ರಿ ನಿವಾಸ‘ದಲ್ಲಿ ಇಳಿದುಕೊಳ್ಳುವದೂ ಆಯಿತು.

ಆದರೆ, ನನಗೆ ಒಂದೆರಡು ಸಲ ವಾಂತಿಯಾಯಿತೊ ಅಥವಾ ಅಂತಹದೆ ಮತ್ತೊಂದು ಸಮಸ್ಯೆ ಆಯಿತು. ಅದು ಸಮುದ್ರ ಸಪಾಟಿಯಿಂದ ಆ ಎತ್ತರಕ್ಕೆ ಹೋದಾಗ, ಹವೆಯ-ಪ್ರಾಣವಾಯುವಿನ ಒತ್ತಡ ಕಡಿಮೆಯಾದಾಗ ಹೆಚ್ಚಿನವರಿಗೆ ಆಗುವ ಸಾಮಾನ್ಯ ಅನುಭವ ಎಂದು ಅಲ್ಲಿನವರ ಹೇಳಿಕೆಯಿಂದಲೊ, ತಮ್ಮ ಸಾಮಾನ್ಯ ತಿಳಿವಳಿಕೆಯಿಂದಲೊ, ನನ್ನ ತಂದೆ ಅಲ್ಲಿ ಸಿಗುತ್ತಿದ್ದ ಅಪ್ಪಟ ತುಪ್ಪದಲ್ಲಿನ ಸಿಹಿ ಸಿಹಿ ‘ಶಿರಾ‘ ತಿನ್ನಲು ಕೊಟ್ಟರು. ಅದರ ಮಹಿಮೆಯಿಂದ ಮತ್ತೆ ಚಟುವಟಿಕೆಯಿಂದ ಪುಟಿದೆದ್ದಿದ್ದೆ.

ಹನುಮಾನ್ ಚಟ್ಟಿಯಲ್ಲಿ ಹಿಮದ ಗುಹೆ, ರಸ್ತೆಮೇಲೆ ದಪ್ಪವಾಗಿ ಬಿದ್ದಿದ್ದ ಹಿಮ ಒಂದು ತರಹದ ಅನುಭವ ಆಗಿದ್ದರೆ ಇಲ್ಲಿ ಬದರಿ ಕ್ಷೇತ್ರದಲ್ಲಿ ಆ ಹಿಮಾವೃತ ನರ ನಾರಾಯಣ ಶಿಖರಗಳು, ಆ ತಪ್ತ ಕುಂಡ, ಹಾಗೆಯೇ ಕೆಳಗಿಳಿದು ಹೋದರೆ ಹರಿಯುತ್ತಿದ್ದ ಆ ಅಲಕನಂದೆ ಅವೆಲ್ಲ ಮತ್ತೊಂದು ತರಹದ ವಿಶೇಷಾನುಭವ, ಅಚ್ಚರಿ ಹುಟ್ಟಿಸಿದವು.

ತಪ್ತ ಕುಂಡದಲ್ಲಿನ ಸ್ನಾನದ ಸುಖ, ಮೋಜು, ನೀರಿನಿಂದ ಹೊಮ್ಮುತ್ತಿದ್ದ ಗಂಧಕದ ವಾಸನೆ, ಗೋಮುಖದಿಂದ ಬೀಳುತ್ತಿದ್ದ ಆ ಸುಡು ಸುಡು ನೀರು, ಕುಂಡದಲ್ಲಿ ಬಿದ್ದ ಜಲದ ಸ್ನಾನ ಯೋಗ್ಯ ಉಷ್ಣತೆ, ಹೊರಬಂದರೆ ಗಡ ಗಡ ನಡುಕ ಹುಟ್ಟಿಸುತ್ತಿದ್ದ ಥಂಡಿ, ತಪ್ತ ಕುಂಡದಲ್ಲಿ ಸ್ನಾನ ಮಾಡುತ್ತಲೆ ಇರಬೇಕು ಎನ್ನಿಸುತ್ತಿದ್ದ ಆ ಸುಖ ಒಂದೆಡೆಯಾದರೆ. ಅಲಕನಂದೆಯನ್ನು ನೋಡಲು ಆ ಕಲ್ಲು ಬಂಡೆಗಳ ನಡುವಿನ, ಜೋಲಿ ತಪ್ಪದಂತೆ ಎಚ್ಚರಿಕೆಯಿಂದ ಇಳಿಯಬೇಕಾದ ಕಚ್ಚಾ, ಕಾಲು ದಾರಿ, ನದೀಪಾತ್ರವನ್ನು ಮುಟ್ಟಿದ ಮೇಲೂ ನದಿ ಸ್ನಾನ ಹೋಗಲಿ, ಆ ನೀರಲ್ಲಿ ಕಾಲು ಇಳಿಬಿಟ್ಟು ಕೂಡಲೂ ಸಾಧ್ಯವಾಗದಷ್ಟು ಶೀತಲ ಜಲ ಎಲ್ಲ ಮತ್ತೆಲ್ಲೂ ಸಿಗದ, ಸಿಗಲಾರದ ಅನುಭವ.

ಆ ನದಿ ಜಲ ಎಷ್ಟು ಶೀತಲವಾಗಿರುತ್ತಿತ್ತು ಎನ್ನುವದಕ್ಕೆ ಯಾರೊ ಒಬ್ಬರು ಹೇಳಿದ ಮಾತು – “ಅದರಲ್ಲಿ ಸುಮ್ಮನೆ ಬಟ್ಟು ಎದ್ದಿದರೆ ಸಾಕು, ಆ ಥಂಡಿ ಚಂಡಿಕೆಯನ್ನು ಸಟ್ಟೆಂದು ಸೆಟಿಸಿ ನಿಲ್ಲುತ್ತದೆ” ಈಗಲೂ ನೆನಪಿಗೆ ಬರುತ್ತದೆ.

ಇದು ಆ ತಪ್ತ ಕುಂಡ, ಅಲಕನಂದಾ ನದಿಯ ಪರಿಯಾದರೆ, ಊಟಕ್ಕೆ ಅಡುಗೆ ಮಾಡಲು ಎಷ್ಟು ಹೊತ್ತು ಕುದಿಸಸಿದರೂ ಬೇಯದ ಅಕ್ಕಿ, ಬೇಳೆ. ಹಂಜಕ್ಕಿಯಾಗಿ ಉಳಿದ ಅನ್ನ, ಬೇಯದ ಸಾರಿನಲ್ಲಿನ ಬಿರುಸು ಬೇಳೆಕಾಳು. ಮೊದಲ ತುತ್ತಿನಲ್ಲೆ ಬಂದ ಅನುಭವ. ಆದರೆ, ಗುಡಿಯಿಂದ ತಂದ ದೇವರ ‘ಭೋಗ‘ – ಪ್ರಸಾದ – ಅನ್ನ ಸರಿಯಾಗೆ ಇದ್ದು ಆಶ್ಚರ್ಯ ಎನಿಸಿತ್ತು. ಬಹುತೇಕ ದೇವರ ಪ್ರಸಾದ ಒಂದು ತರಹದ ಪ್ರೆಶರ ಕುಕರ ಪರಿಣಾಮ ಬೀರುವ ಪಾತ್ರೆ-ಮುಚ್ಚಳ ವ್ಯವಸ್ಥೆ ಆ ದೇವರ ಅಡುಗೆ ಮನೆಯಲ್ಲಿ ಇದ್ದಿತೇನೋ!

ಅಲ್ಲಿ ಮೂರು ದಿನ ಇದ್ದೆವು. ಪ್ರಾಯಶಃ ಆ ಫೋಟೊ ತೆಗೆಸಿಕೊಂಡ ದಿನ – ೧೬-೫-೧೯೫೩ ರಂದು – ಸಂಜೆ ಬದರಿ ನಾರಾಯಣನ ಚಿತ್ರ ಪ್ರತಿಗಳನ್ನು, ನಮ್ಮ ಉಪಯೋಗಕ್ಕಾಗಿ ಮತ್ತು ಪ್ರಸಾದದೊಂದಿಗೆ ಜನರಿಗೆ ಕೊಡಲು ಖರೀದಿ ಮಾಡಿದ್ದೆವು. ಅವುಗಳ ಕಟ್ಟನ್ನು ಕಯ್ಯಲ್ಲಿ ಹಿಡಿದದ್ದು ಫೋಟೊದಲ್ಲಿದೆ.

ಆ ಕಾಲದಲ್ಲಿ ಜೊತೆಗೆ ಒಯ್ಯಲು ಕೆಮರಾ ಎಲ್ಲರ ಕಡೆ ಇರುತ್ತಿರಲಿಲ್ಲ. ಫೋಟೊ ತೆಗೆಸಿಕೊಳ್ಳುವ ವಿಚಾರವೂ ಬರುತ್ತಿರಲ್ಲಿಲ್ಲ. ಆದರೆ, ಆ ಕಾಲದಲ್ಲಿಯೂ, ಅಷ್ಟು ಎತ್ತರದ ಆ ಊರಿನಲ್ಲಿಯೂ ವ್ಯವಸಾಯವೆಂದು ಮಾಡುತ್ತಿದ್ದ ಫೋಟೊಗ್ರಫರ ಒಬ್ಬ ಅಲ್ಲಿದ್ದ. ಮತ್ತು ಮರುದಿನ ಪ್ರಿಂಟ ಕೊಡುವದಾಗಿ ಹೇಳಿ ಫೋಟೊ ತೆಗೆಸಿಕೊಳ್ಳಲು ಪ್ರೇರೇಪಿಸಿದ್ದ. ಹಾಗಾಗಿ ನಮ್ಮ ಯಾತ್ರೆಯ ಆ ನೆನಪು ಫೋಟೊ ರೂಪದಲ್ಲಿ ಇನ್ನೂ ಚಿತ್ರ ರೂಪದಲ್ಲಿ ಉಳಿದಿದೆ. ಹಾಗೆ ನನ್ನ ತಂದೆಯ ಮತ್ತೊಂದು ಫೋಟೊ ಬಿಟ್ಟು ನಮ್ಮ ಹತ್ತಿರ ಬೇರೊಂದು ಇಲ್ಲ.

ಇರಲಿ, ಅಲ್ಲಿನ ವಾತ್ಸವ್ಯದ ಮತ್ತೂ ಒಂದು ಮರೆಯಲಾಗದ ಘಟನೆ ಇದೆ. ಬಹುಶಃ ನಾವು ಬದರಿಗೆ ಹೋದ ದಿನವೇ ಇರಬೇಕು. ರಾತ್ರಿ ಸುಮಾರು ಎಂಟು – ಎಂಟೂವರೆ ಆಗಿರಬೇಕು. ಊಟ ಆಗಿತ್ತು. ನಿದ್ದೆಗೆ ಹಾಸಿಗೆ ಮೇಲೆ ಉರುಳಲು ಸ್ವಲ್ಪ ಕಾಲ ಅವಕಾಶ ಇದ್ದಿತು. ನನ್ನ ತಂದೆ ರಂಗಣ್ಣ ಅದೆಕೋ ಇಳಿದುಕೊಂಡಿದ್ದ ಖೋಲಿಯಿಂದ ಸ್ವಲ್ಪ ಹೊತ್ತು ಹೊರಗೆ ಹೋಗಿದ್ದರು. ನನ್ನದೊ ಹುಡುಗ ಬುದ್ಧಿ, ಹೊರಗಿನದನ್ನು ನೋಡುವ ಕುತೂಹಲ.

ಹಾಗಾಗಿ, ಸುಮ್ಮನೆ ಹೊರಬಿದ್ದೆ. ತಾಯಿಗಾಗಲಿ ಮತ್ತೆ ಯರಿಗೂ ತಿಳಿಸದೆ ಹೊರಬಿದ್ದೆ. ಗುಡಿಯ ಆವರಣದಲ್ಲಿಯೆ! ಸುತ್ತುಹಾಕುತ್ತಿದ್ದಾಗ ಅಲ್ಲಿ ಒಂದೆಡೆ ಯಾರೊ, ಸಾಧು ಪುರುಷ ವಾದನವೊಂದನ್ನು ಕಯ್ಯಲ್ಲಿ ಹಿಡಿದು ಭಜನೆ ಮಾಡುತ್ತಿದ್ದುದು, ಮೂವತ್ತು ನಲವತ್ತು ಜನ ಸೇರಿ ದನಿಕೂಡಿಸುತ್ತಿದ್ದುದು ಗಮನ ಸೆಳೆಯಿತು. ಆ ಗುಂಪನ್ನು ಸಮೀಪಿಸಿದೆ. ಅಲ್ಲಿಯೆ ಕುಳಿತೆ. ಅದು ಹೇಗೋ ಆ ಭಜನೆ, ಗೀತ ಸಂಗೀತದಲ್ಲಿ ಮೈ ಮರೆತುಬಿಟ್ಟೆ. ಅರ್ಧ ತಾಸು ಹೀಗೇ ಕಳೆದಿರಬೇಕು.

ಅತ್ತ, ನಾನು ಉಳಿದುಕೊಂಡಿದ್ದ ನಿವಾಸದಲ್ಲಿ ಇಲ್ಲ ಎಂಬುದು ತಂದೆ ತಾಯಿ ಎಲ್ಲರ ಲಕ್ಷ್ಯಕ್ಕೆ ಬಂದಿತು. ಊರು ನೋಡಲೆಂದು ಹೊರ ಹೋದೆನೆಂದು ತಿಳಿದು, ಗಾಬರಿಯಾಗಿ, ಅವಸರ ಅವಸರವಾಗಿ ಹುಡುಕುವದಾಯಿತು. ಕಾಣದಿದ್ದಾಗ, ಎಲ್ಲಿ ಕೆಳಗೆ ಉರುಳಿ ಬಿದ್ದಿರಬಹುದೇನೋ ಎಂದು ಒಂದು ಭಯವೂ ಅವರನ್ನು ಆವರಿಸಿದ್ದಿರಲೂ ಸಾಕು. ಅದು ಹೇಗೋ ಕೊನೆಗೆ ಗುಡಿಯ ಆವರಣದಲ್ಲಿ ಭಜನೆ ಮಾಡುತ್ತಿದ್ದ ಭಕ್ತಮಂಡಲಿಯಲ್ಲೊಬ್ಬ ಬಾಲಕನಾಗಿ ಅಂತೂ ಅವರ ಕಣ್ಣಿಗೆ ಬಿದ್ದೆ.

ಮಗನನ್ನೆನೂ ಅವರು ಕಳೆದುಕೊಂಡಿರಲಿಲ್ಲ. ಸಂತೋಷ, ಸಮಾಧಾನ ಎರಡೂ ಆಗಿದ್ದವು. ಧಾವಿಸಿ ಬಂದು ರಟ್ಟೆ ಹಿಡಿದು ಎಳೆದು ಸುಖಿಸಿದರು. ಆದರೆ ಅವರ ಆ ಸುಖದ ಅನುಭವ ಮನೆಗೆ ಹೋದಾಗ ಎರಡು ಬಡಿತದ ರೂಪದಲ್ಲಿ ವ್ಯಕ್ತವಾದವು, ಹಾಗೆ ಹೇಳದೆ ಹೊರ ಹೋಗಿದ್ದಕ್ಕಾಗಿ!

ಇರಲಿ, ಹಾಗೆ ನನ್ನನ್ನು ಆಗ ಮೈ ಮರೆಸುವಂತೆ ಮೋಡಿ ಮಾಡಿದ್ದವರು ಎಂಬುದನ್ನು ನೀವಾರೂ ಊಹಿಸಲಾರಿರಿ. ಅವರೂ ಒಬ್ಬ ಕನ್ನಡಿಗರೆ, ‘ನಾದ ಯೋಗಿ’, ‘ವೀಣಾ ಬಾಬಾ’ ಎಂದು ಅಲ್ಲಿ ಹೆಸರಾಗಿದ್ದ ಪರ್ವತೀಕರ ಅವರು – ದತ್ತಾತ್ರಯ ರಾಮಚಂದ್ರ ಪರ್ವತೀಕರ. ತಮ್ಮ ರುದ್ರ ವೀಣೆಗಾಗಿ ಪ್ರಸಿದ್ಧರಾಗಿದ್ದವರು. ನನಗೆ ಅದಾವುದೂ ತಿಳಿಯದ ವಯಸ್ಸು. ಕೇವಲ ಆ ಸಂಗೀತ ಸೆಳೆದಿದಿದ್ದಿತು.

ಅವರು ಆ ದಿನಗಳಲ್ಲಿ ಬದರಿಯಲ್ಲೆ ವಾಸವಾಗಿದ್ದವರು. ಅದಕ್ಕೂ ಮೊದಲು ಹೃಷೀಕೇಶದಲ್ಲಿ ನಾದೋಪಾಸನೆ ಮಾಡಿದವರು. ಅವರ ಅಗಾಧ ವೀಣಾ ಪ್ರಾವೀಣ್ಯವನ್ನು ಗುರುತಿಸಿದ್ದ ಯುನೆಸ್ಕೊ ಅವರ ಸಂಗೀತವನ್ನೆಲ್ಲ ಮುದ್ರಿಸಿದ್ದಿತು.