ಶ್ರೀ ನೃಸಿಂಹ ಜಯಂತಿಯ ದಿನ ನನ್ನ ಜೀವನದಲ್ಲಿ ನಡೆದ ಒಂದು ನೈಜ ಘಟನೆ

ಇಂದು ಶ್ರೀ ನೃಸಿಂಹ ಜಯಂತಿ.  ಪ್ರತಿ ವರ್ಷ ಈ ದಿನ ನನ್ನ ಹಳೆಯ ನನ್ನ ನೆನಪೊಂದು ಅಪ್ರಯತ್ನಿತವಾಗಿ, ತಂತಾನೆ  ಬರುತ್ತದೆ. ಅದರ ಕಾರಣವಿಷ್ಟೆ!
ನಾನು ಆಗಿನ್ನೂ ಶಾಲೆಗೆ ಹೋಗುವ ಬಾಲಕನಾಗಿದ್ದಾಗ, ಗಂಗಾ ಪ್ರವಾಹದಲ್ಲಿ ಹರಿದು ಹೋಗುತ್ತಿದ್ದಾಗ, ಜೀವದಿಂದ ಉಳಿದದ್ದು ಶ್ರೀ ನರಸಿಂಹ ದೇವರ ಕೃಪೆಯಿಂದ.
ತಮ್ಮೊಂದಿಗೆ ಆ ಕಥೆಯನ್ನು ಇಂದು, ಆ ದೇವರನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತಾ, ಸಂತೋಷದಿಂದ ಹಂಚಿಕೊಳ್ಳುತ್ತಿದ್ದೇನೆ.
ಆ ಘಟನೆ ನಡೆದದ್ದು ೬೭ ವರ್ಷಗಳ ಹಿಂದೆ. ೧೯೫೩ ರ ಮೇ ತಿಂಗಳ ೨೭ ರಂದು. ಅಂದೂ ಬುಧವಾರ. ಶ್ರೀ ನೃಸಿಂಹ ಜಯಂತಿ. ಸ್ಠಳ : ಹರಿದ್ವಾರದ ಗಂಗಾ ತೀರ. ಹರ ಕಿ ಪೌಡಿ, ಘಂಟಾಘರಕ್ಕೆ ಹೊಂದಿ ಇರುವ ನದೀ ಘಾಟ. ಸಂಜೆಯ ಹೊತ್ತು.
ಅದೇ ಆಗ ೫ ನೆ ಇಯತ್ತೆ ಪಾಸಾಗಿದ್ದೆ. ೬ ನೆ ತರಗತಿ ಇನ್ನೂ ಶುರುವಾಗಿರಲಿಲ್ಲ, ಬೇಸಗೆಯ ಬಿಡುವಿನ ದಿನಗಳು. ಹನ್ನೊಂದು ವರ್ಷದವನಿದ್ದೆ. ಆಗ ನನ್ನ ತಂದೆ ಬದರೀ ಯಾತ್ರೆಯನ್ನು ಕೈಗೊಂಡಿದ್ದರು. ನನ್ನ ತಾಯಿ, ಸೋದರತ್ತೆ, ಮೂರು ವರ್ಷದ ತಂಗಿ, ಒಂದೋ, ಒಂದೂ ಕಾಲು ವರ್ಷದ ತಮ್ಮ ಇಷ್ಟು ಜನರನ್ನು ತಂದೆ ಕರೆದೊಯ್ದಿದ್ದರು.
ಆ ಪ್ರಸಂಗ :  ನಾನೂ ನನ್ನ ಸೋದರತ್ತೆ ಕೃಷ್ಣಾಬಾಯಿ (ಕೃಷ್ಟಕ್ಕ ಅತ್ತ್ಯಾ) ಸೇರಿಕೊಂಡು  ಕಲಶಗಳಲ್ಲಿ, ಗಿಂಡಿಗಳಲ್ಲಿ ಗಂಗೆಯನ್ನು ತುಂಬಿಕೊಳ್ಳುತ್ತಿದ್ದಾಗ. ತಂದೆ ರಂಗನಾಥ ಅವರು ಆ ಘಾಟದ ಹಲವು ಮೆಟ್ಟಿಲುಗಳ ಮೇಲಿನ ಆ ಕಲಶ ಗಿಂಡಿಗಳನ್ನು ಮಾರುತ್ತಿದ್ದ, ಗಂಗಾ ಜಲವನ್ನು ಅವುಗಳಲ್ಲಿ ತುಂಬಿಯಾದ ನಂತರ ಬೆಸುಗೆ ಹಾಕಿ ಕೊಡುವ ಅಂಗಡಿಯ ಹೊರಗಡೆ ಕುರ್ಚಿಯೊಂದರ ಮೇಲೆ. ನಾವಿಬ್ಬರೂ ಗಂಗೆಯನ್ನು ತುಂಬಿಕೊಂಡು ಆ ಕಲಶ, ಗಿಂಡಿಗಳನ್ನು ಆ ಅಂಗಡಿಗೆ, ನನ್ನ ತಂದೆ ಇದ್ದಲ್ಲಿಗೆ ಹೋಗಬೇಕು.
ಆ ಘಾಟದ ಮೇಲೆ, ನದಿಯ ಅಂಚಿಗೆ ಪಾದಕ್ಕೆ ಮಾತ್ರ ಹತ್ತುವಷ್ಟು ನೀರು, ಹಸಿ ಹಸಿ. ಸ್ವಚ್ಛ ಪ್ರವಾಹ, ದಂಡೆಯ ನೀರ ಕೆಳಗಿನ ಒಂದೆರಡು ಪಾವಟಣಿಗೆಗಳೂ ಕಾಣುವಂತಹ ತಿಳಿ ನೀರು. ನನಗೆ ಒಂದು ಮೆಟ್ಟಿಲು ಇಳಿದು ಕಲಶವನ್ನು ತುಂಬಿಕೊಳ್ಳಬೇಕೆಂದು ಅನಿಸಿತು. ಹಾಗೆಯೆ ಮಾಡ ಹೋದೆ. ನೀರು ತುಂಬಿ ನಾನು ಕೊಡಬೇಕು. ಕೃಷ್ಟಕ್ಕ ಅತ್ತೆ ಅವನ್ನು ಇಸಿದುಕೊಂಡು ದಂಡೆಯ ಮೇಲೆ ಇಡಬೇಕು.
ನೀರು ತಿಳಿಯಾಗಿದ್ದರೂ ಕೆಳಗೆ ಕಂಡೂ ಕಾಣದಂತೆ ಹಾವಸೆಯೂ ಇದ್ದಿತು. ಕಾಲು ಜರೆಯಿತು. ಗಾಬರಿಯಿಂದ ಅತ್ತ್ಯಾ ಎಂದು ಸಹಾಯಕ್ಕಾಗಿ ಕೂಗುವಷ್ಟರಲ್ಲಿ, ಕ್ಷಣಾರ್ಧದಲ್ಲಿ ನೀರಿನ ಸೆಳವು ನನ್ನನ್ನು ಒಳಗೆ ಒಳಗೆ ಎಳೆಯ ಹತ್ತಿತ್ತು. ಅತ್ತ್ಯಾ ಚಾಚಿದ್ದ ಕೈಯನ್ನೇನೋ ಹಿಡಿದೆ. ಆದರೆ ನಾನು ಹೊರ ಬರಲಿಲ್ಲ, ಅತ್ತ್ಯಾನನ್ನೇ ಒಳ ಸೆಳೆದಿದ್ದೆ. ಪ್ರವಾಹದ ಸೆಳೆತ ಜೋರಾಗಿದ್ದಿತು. ದಂಡೆಯಿಂದ ದೂರ ದೂರವಾಗುತ್ತ ಕುತ್ತಿಗೆಯವರೆಗೆ ಮುಳುಗಿದ್ದೆವು.
ಆ ನದೀ ದಂಡೆ, ಆ ಘಾಟ ಮುಂಬಯಿಯ ಚೌಪಾಟಿ ತರಹದ್ದು. ನೂರಾರು, ಸಾವಿರಾರು ಜನರು, ಹತ್ತಾರು ಕಾರಣಗಳಿಂದ ಯಾವಾಗಲೂ ಸೇರಿರುತ್ತಿದ್ದ ಜನ ಜಂಗುಳಿ.
ಅಷ್ಟರಲ್ಲಿಯೆ ನೋಡಿದ್ದವರಲ್ಲಿ ಯಾರೋ “ಅರೇ! ಬಚ್ಚಾ ಗಿರಗಯಾ, ಔರತ ಭೀ ಗಿರ ಗಯೀ ರೇ! ಎಂದು ಕೂಗಿದ್ದರು. ಕ್ಷಣಾರ್ಧದಲ್ಲಿ ಹತ್ತಾರು ಜನ ನದಿಗೆ ಹಾರಿದ್ದರು, ನಮ್ಮನ್ನು ‘ಬಚಾವ್’ ಮಾಡಲು. ನಮ್ಮನ್ನು ಸೆಳೆದು ಹೊರತಂದರು. ಗಂಗೆಯಿಂದ ಕುತ್ತಿಗೆಯ ವರೆಗೆ ತೊಯ್ದಿದ್ದ, ಗಾಬರಿಯಲ್ಲಿ ನಡಗುತ್ತ, ತುಂಬಿದ ಗಂಗಾ ಕಲಶ ಗಿಂಡಿಗಳನ್ನು ಹಿಡಿದು ತಂದೆ ಕುಳಿತ ಅಂಗಡಿಯ ಕಡೆ ಹೋದೆವು.
ಇಷ್ಟೇಕೆ ತಡವಾಯಿತೆಂದು  ಸಿಟ್ಟಿನಲ್ಲಿ ಅವರು ಕೇಳುತ್ತಿರುವಂತೆಯೆ ನಮ್ಮ ಅವಸ್ಥೆಯೂ ಕಣ್ಣಿಗೆ ಬಿದ್ದಿತು. ಮುಂದೆ  ಆದದ್ದನ್ನೆಲ್ಲ ಹೇಳುವದಾದ ಮೇಲೆ, ಸ್ವಲ್ಪ ಹೊತ್ತಿನಲ್ಲೆ ಅವರಿಗೆ ಹೊಳೆದದ್ದು – ಅಂದು ನೈವೇದ್ಯ ಮಾಡಿಸಲೆಂದು ಕಲ್ಲು ಸಕ್ಕರೆ ತರಬೇಕೆಂದು ಅವರು ಅಂದುಕೊಂಡಿದ್ದರೂ ಅದು ಏಕೋ, ಹೇಗೋ ಆಗಿರಲಿಲ್ಲ. ನಾವು ಇಳಿದುಕೊಂಡದ್ದು ನರಸಿಂಗ ಭವನವೆಂಬ ನದೀ ದಂಡೆಯ ಮೇಲಿನ ಛತ್ರದಲ್ಲಿ. ಅದರಲ್ಲಿ ಶ್ರೀ ನೃಸಿಂಹದೇವರ ಗುಡಿಯೂ ಇದ್ದಿತು.
“ಅಯ್ಯೋ! ನರಸಿಂಹ ಜಯಂತಿ, ಕಲ್ಲು ಸಕ್ಕರೆ ನೈವೇದ್ಯ ಅಂದುಕೊಂಡಿದ್ದರೂ ಆಗಿರಲಿಲ್ಲ. ಇವರನ್ನು ಉಳಿಸಿದವನೂ ಅವನೇ!” ಎಂದು ಹಲವು ಬಗೆಯಲ್ಲಿ ಹಲುಬುತ್ತ, ಛತ್ರಕ್ಕೆ ಮರಳುತ್ತ ಹಾದಿಯಲ್ಲಿ ಕಲ್ಲು ಸಕ್ಕರೆ ಕೊಂಡು ಸಂಜೆ ಶ್ರೀ ನರಸಿಂಹ ದೇವರಿಗೆ ನೈವೇದ್ಯ, ಮಂಗಳಾರತಿ ಮಾಡಿಸಿದ್ದು ಆಯಿತು.
ಇಂದು ಮಗನ ಹತ್ತಿರ ಪುಣೆಯಲ್ಲಿ ಇದ್ದೇನೆ, ಈ ಕೊರೋನಾ ಲಾಕ್ ಡೌನ್ ಕಾಲದಲ್ಲಿ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳ ಬೇಕಾಗಿರುವ  ಅಗತ್ಯದ ಈ ಕಾಲದಲ್ಲಿ, ಇರುವ ಸ್ವಲ್ಪ ಸಂಬಂಧಗಳನ್ನು ಮರೆತು ಬಿಡಬಾರದೆಂದು ವಾಟ್ಸಪ್, ಫೇಸ ಬುಕ್, ಝೂಮ ಮೊದಲಾದ ಮೊಬಾಯಲ್ ಸಂಬಂಧಗಳನ್ನು ಗಟ್ಟಿಯಾಗಿ ನೆಚ್ಚಿಕೊಳ್ಳುತ್ತಿದ್ದಾರೆ. ಆದರೂ ಆ ಜೋಕುಗಳು, ಮಾಹಿತಿ ಇತ್ಯಾದಿಗಳಿಂದಲೂ ಒಬ್ಬರೊಬ್ಬರ ನಿಜವಾದ ಪರಿಚಯವಾಗದೆ ಮೇಲುಮೇಲಿನ ಸಂಬಂಧ ಮಾತ್ರ ಬೆಳೆಯುತ್ತಿದೆ.
ಗುರುತು ಗಾಢವಾಗಲಿ ಎಂದು ಇಂತಹ ಈ ವಯ್ಯಕ್ತಿಕ ಪ್ರಸಂಗದ ನೆನಪನ್ನು ಹಂಚಿಕೊಳ್ಳುತ್ತಿದ್ದೇನೆ. ಸುದೀರ್ಘವಾಗಿರುವ ಇದು ನಿಮ್ಮಲ್ಲಿ ಬೇಜಾರನ್ನು ಹುಟ್ಟಿಸಲಿಕ್ಕಿಲ್ಲ ಎಂದು ನಂಬಿದ್ದೇನೆ.