ನಮ್ಮ ಕುರಿತು

ಇದು mangalwedhefamily.com ಎಂಬ ನಾವು ಮಂಗಳವೇಢೆ ಜನ ಎಂಬುದಾಗಿ ತೆರೆದುಕೊಳ್ಳುವ ಒಂದು ಜಾಲತಾಣ.

ಒಂದು ಸಂತಸ, ಸಂಭ್ರಮದೊಂದಿಗೆ ಈ ಜಾಲತಾಣವನ್ನು ಇಂದು – ಶುಕ್ರವಾರ, ದುರ್ಮುಖ ನಾಮ ಸಂವತ್ಸರದ ಭಾದ್ರಪದ ಶುಕ್ಲ ಅಷ್ಟಮಿಯ ದಿನ ಅಂದರೆ ೯ ಸೆಪ್ಟೆಂಬರ ೨೦೧೬ ರಂದು launch ಮಾಡುತ್ತಿದ್ದೇನೆ.

ಈ ಕೆಲಸ ಒಂದು ದಶಕಕ್ಕೂ ಮುಂಚೆಯೆ ಆಗಬೇಕಿತ್ತು, ೨೦೦೪ ನೆ ಇಸವಿಯಲ್ಲಿ. ಅದು ನನ್ನ ತಂದೆ- ದಿ.ರಂಗನಾಥ ಕೃಷ್ಣ ಮಂಗಳವೇಢೆಯವರ ಜನ್ಮ ಶತಮಾನದ ವ₹ರ್ಷ.

ನಮ್ಮ ಮನೆತನದ ಇತಿಹಾಸವನ್ನು ಕಾಲಗರ್ಭವನ್ನು ಕೆದಕಿ ಹೊರತರುವ ಮತ್ತು ವಂಶಾವಳಿಯ ಒಂದು ಚಿತ್ರವನ್ನು ಕೊಡುವ ಈ ಕನಸು ಸುಮಾರು ೨೫ ವರ್ಷಗಳ ಹಿಂದೆಯೆ ಮನದಲ್ಲಿ ಮೊಳಕೆಯೊಡೆದಿತ್ತು. ಅದು ಇಂದು ನನಸಾಗುತ್ತಿದೆ. ಆಶೆ ಏನಿದ್ದರೂ, ಪ್ರಯತ್ನ ಮಂದಗತಿಯಲ್ಲಿ ಸಾಗಿದ್ದಿತು, ಸಕಾರಣವಾಗಿಯೆ ಆದರೂ.

ಹೀಗಾಗಿ, ಶತಮಾನವರ್ಷದಾನಂತರದ ಒಂದನೆಯದು ಹೋಗಲಿ, ಇದು ಹನ್ನೆರಡನೆಯ ಈ ವರ್ಷ, ೨೦೧೬ನೆ ಇಸವಿಯ ಈ ದಿನ. ಇರಲಿ. ಯಾವುದಕ್ಕೂ ಕಾಲ ಕೂಡಿ ಬರಬೇಕು. ಅಲ್ಲವೆ!

ಇನ್ನು ಈ ಜಾಲತಾಣದ ಬಗ್ಗೆ

ಈ ಜಾಲತಾಣದಲ್ಲಿ ಸಿಗುವ ಮಾಹಿತಿ ಬೆಳಗಾವಿ ಜಿಲ್ಲೆಯ ಮುರಗೋಡ ಮೂಲದ ಮಂಗಳವೇಢೆ ಎಂಬ ಅಡ್ಡಹೆಸರಿನ ಜನರ ವಂಶಾವಳಿ ಮತ್ತು ಇತಿಹಾಸದ ಕುರಿತಾದುದು.

ಮಂಗಳವೇಢೆಯಿಂದ ಮುರಗೋಡಕ್ಕೆ ವಲಸೆ ಬಂದಿದ್ದ ನಮ್ಮ ಹಿರಿಯರು ಕಾಶ್ಯಪ ಗೋತ್ರದ ಮಾಧ್ವ ಬ್ರಾಹ್ಮಣ ಜನ. ವೈದಿಕ ವೃತ್ತಿಯಿಂದ ಜೀವನ ಮಾಡುತ್ತಿದ್ದವರು. ಜ್ಯೋತಿಷವನ್ನೂ ತಿಳಿದವರಾಗಿದ್ದರಿಂದ ಜನ ಆ ಕಾಲದಲ್ಲಿ ನಮ್ಮನ್ನು ಮಂಗಳವೇಢೆ ಜೋಶಿ ಎಂದು ಕರೆಯುತ್ತಿದ್ದರು. ಪಂಢರಪುರದ ಪಾಂಡುರಂಗ ನಮ್ಮ ಕುಲದೈವ.

ಎರಡು ನೂರಾ ಐವತ್ತು ಅರವತ್ತು ವರ್ಷಗಳಿಗೂ ಮೊದಲು ಮುರಗೋಡಿಗೆ ಬಂದು ಅಲ್ಲಿಯೆ ಸುಮಾರು ಒಂದೂವರೆ ಶತಕಕ್ಕೂ ಹೆಚ್ಚು ವರ್ಷಗಳ ಕಾಲ ನೆಲೆನಿಂತ ನಮ್ಮ ಮನೆತನದ ಮೂಲ ಪುರುಷ – ಮಾಣಿಕ ಭಟ್ಟ ಎಂಬ ವ್ಯಕ್ತಿ.

ಅವರಿಗೆ ಮೂವರು ಗಂಡು ಮಕ್ಕಳು. ಹಿರಿಯವ ಬಾಳಂ ಭಟ್ಟ, ನಡುವಿನವ ಗೋವಿಂದ ಭಟ್ಟ, ಕಿರಿಯವ ಅನಂತಾಚಾರ್ಯ.

ಇವರಿಂದ ಮಾಣಿಕ ಭಟ್ಟರ ಸಂತಾನ ಮೂರು ಟಿಸಿಲುಗಳಲ್ಲಿ ಬೆಳೆಯುತ್ತ ಹೋಗಿ, ಇಲ್ಲಿನವರೆಗೆ ಹತ್ತು – ಹನ್ನೊಂದು ತಲೆಮಾರುಗಳನ್ನು ಕಂಡಿದೆ. ಅಂದು ಇದ್ದ ಆ ಒಂದು ಕುಟುಂಬಕ್ಕೆ ಶುರುವಿನಲ್ಲಿಯೆ ಕವಲೊಡೆದು ಆದ ಆ ಮೂರು ಟಿಸಿಲುಗಳಿಗೆ, ಮತ್ತೂ ಹಲವು ಕೊಂಬೆ- ರೆಂಬೆಗಳು ಚಿಗಿತು, ಹೂವು- ಹಣ್ಣುಗಳಾಗಿ – ಈಗ ಸುಮಸುಮಾರು ನೂರು ಕುಟುಂಬಗಳಾಗಿ ವಿಸ್ತರಿಸಿ, ಅಂದಿನ ಆ ಚಿಕ್ಕಗಿಡ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ.

ಆ ಮೂಲ ಪುರುಷನ ಮೂರು ಮಕ್ಕಳಲ್ಲಿ ನಡುವಿನವರಾದ ಗೋವಿಂದ ಭಟ್ಟರ ಹೆಸರಿಗೆ ಮಾಡಿಕೊಟ್ಟ ಭೂದಾನದ ಕಾಗದ ಪತ್ರಗಳು ನನ್ನ ಕೈಗೆ ಹತ್ತಿದ ಕಾಗದಗಳಲ್ಲಿ ಎಲ್ಲಕ್ಕೂ ಹಳೆಯ ದಾಖಲೆಗಳು. ಅವುಗಳು ಕ್ರಿ.ಶ. ೧೭೬೨, ಕ್ರಿ.ಶ.೧೭೭೧ ಮತ್ತು ಕ್ರಿ.ಶ. ೧೭೯೩ರಲ್ಲಿ ಮಾಡಿಕೊಟ್ಟಂತಹವು.

ಗೋವಿಂದ ಭಟ್ಟರಿಗೆ ವಾಸವಾಗಿರಲು ಮತ್ತು ಉಪಜೀವನಕ್ಕಾಗಿ ಎಂದು ಮೂವರಿಂದ ಮುರಗೋಡದಲ್ಲಿ ಭೂದಾನ ಮತ್ತು ಅಲ್ಲಿನ ದೇವರಿಗೆ (ಶಂಭುಲಿಂಗ ?) ಪೂಜೆ, ನಂದಾದೀಪ, ನಿತ್ಯ ನೈವೇದ್ಯ ಮತ್ತು ಮಂತ್ರಪುಷ್ಪ ಆರಾಧನೆ ನಡೆಸಲೆಂದು ಸಮೀಪದ ದುಂಡಿಕೊಪ್ಪ ಮತ್ತು ಕಾರಿಮನಿ ಗ್ರಾಮಗಳಲ್ಲಿ ಜಮೀನುಗಳ ದಾನಪತ್ರಗಳು ನಮ್ಮ ಹಿರಿಯರ ಕಾಲ, ವೃತ್ತಿ ಮತ್ತು ಮುರಗೋಡದ ನೆಲೆ, ಇವುಗಳನ್ನು ತಿಳಿಸುತ್ತದೆ.

ನಂತರದ ತಲೆಮಾರಿನವರ ಕೆಲವು ಕಾಗದ ಪತ್ರಗಳಲ್ಲಿ ವ್ಯಾಜ್ಯ ಒಂದರ ನಿಮಿತ್ತವಾಗಿ ಮುಂಬಯಿ ಹಾಯಕೋರ್ಟಿಗೆ ಕ್ರಿ.ಶ. ೧೯೦೫ ರಲ್ಲಿ ಸಲ್ಲಿಸಿದ ನಮ್ಮ ಮನೆತನದ ವಂಶಾವಳಿಯ ನಕಲು ಪ್ರತಿ ಹಾಗೂ ನಮ್ಮ ಮನೆಯಲ್ಲಿಯೆ ನೂರೈವತ್ತು ವರ್ಷಗಳಷ್ಟು ಹಿಂದಿನ ಮತ್ತು ನಂತರದ ಹಲವು ದಶಕಗಳ ನೂರಾರು ಕಾಗದಗಳು ನಮ್ಮ ಮನೆತನದ ಇತಿಹಾಸವನ್ನು ಅರಿಯಲು ಸಹಾಯಕವಾಗಿವೆ. ಈ ದಾಖಲೆಗಳಿಂದಲೂ ಗೊತ್ತಾಗದೆ ಉಳಿದಿದ್ದ, ನಮಗೆ ಸಂಬಂಧಿಸಿದ ಆನೇಕ ಘಟನೆಗಳ ವಿಷಯ ಮುರಗೋಡದಲ್ಲಿದ್ದ ವಾಮನರಾವ ಯರಝರವಿಯವರು ಬರೆದಿಟ್ಟಿದ್ದ ಡಾಯರಿಗಳಿಂದ ಗೊತ್ತಾಗಿವೆ. ಅವುಗಳಲ್ಲಿ ತಮ್ಮ ಊರಲ್ಲಿ ನಿತ್ಯದಲ್ಲಿ ನಡೆದ ಸಂಗತಿಗಳ ವಿಷಯಗಳನ್ನು ಅವರು ದಾಖಲಿಸಿದ್ದಾರೆ. ಅವು ಕ್ರಿ.ಶ. ೧೮೮೬ ರಿಂದ ಕ್ರಿ.ಶ. ೧೯೨೩ ರ ನಡುವಿನ ೩೭ ವರ್ಷಗಳ ಕಾಲದಲ್ಲಿ ಬರೆಯಲಾದವುಗಳು.

ಆದರೆ, ಈ ಹಳೆಯ ಮಾಹಿತಿಯೆಲ್ಲ ನಮ್ಮ ಮೊದಲ ಏಳು ತಲೆಮಾರುಗಳ ಕೆಲವು ವ್ಯಕ್ತಿಗಳಿಗೆ ಮಾತ್ರ ಸಂಬಂಧಿಸಿದವು. ನಂತರದ ಮೂರು ನಾಕು ತಲೆಮಾರಿನವರ- ಅಂದರೆ ಕಳೆದ ಸುಮಾರು ೭೫ ರಿಂದ ನೂರು ವ₹ರ್ಷಗಳಲ್ಲಿ ಆಗಿ ಹೋದವರ ಕಥೆ ? ಒಂದು ಕಾಲದಲ್ಲಿ ಮುರಗೋಡಿನಲ್ಲಿ ನಮ್ಮ ಮನೆತನದ ಹಲವು ಕುಟುಂಬಗಳು ಇದ್ದವು. ಆದರೆ ಈಗ ಅಲ್ಲಿ ಒಂದು ಕುಟುಂಬವೂ ಇಲ್ಲ. ನಮ್ಮ ಯಾರ ಆಸ್ತಿ ಪಾಸ್ತಿಗಳೂ ಇಲ್ಲ..

ತಾವು ಮುರಗೋಡಕ್ಕೆ ವಲಸೆ ಬಂದ ನಾಕೈದು ದಶಕಗಳಲ್ಲಿಯೆ ಹೊಟ್ಟೆಪಾಡಿಗೆ ಅಲ್ಲಿಂದ ಹೊರ ಬೀಳುವದು ಶುರುವಾಗಿತ್ತು. ಕೆಲವರು ಯಕ್ಕುಂಡಿಗೆ, ಮತ್ತೆ ಕೆಲವರು ಕಿತ್ತೂರು, ಬೀಡಿ ಮೊದಲಾದ ಕಡೆಗೆ ಹೋಗಿ ಆಸ್ತಿ ಪಾಸ್ತಿ ಮಾಡಿಕೊಂಡರು. ಮುಂದೆ ನೌಕರಿ ನಿಮಿತ್ತದಿಂದ ಊರನ್ನು ಬೀಡಬೇಕಾಗಿ ಬಂದಿತು. ದೂರ ದೂರ, ಬೇರೆ ಬೇರೆ ಊರುಗಳಲ್ಲಿ ಚೆದುರಿ ಹೋದರು.

ಪರಿಣಾಮ, ಒಂದೆ ರಕ್ತದವರಾದರೂ ಅಪರಿಚಿತರಾಗಹತ್ತಿದರು. ಕಾಲ ಕಳೆದ ಹಾಗೆ ಟಿಸಿಲು, ತಲೆಮಾರಿನ ಅಂತರ ಹೆಚ್ಚುತ್ತ ವೃದ್ಧಿ ಸೂತಕದ ಆಚರಣೆಯೂ ಇಲ್ಲವಾಗತೊಡಗಿತು.

ಆದರೆ ಉದ್ದೇಶಿತ ಈ ಕೆಲಸಕ್ಕೆ ಅವರ ಹೆಸರು ಮತ್ತು ಅಗತ್ಯವಾದ ಇತರ ವಿಷಯಗಳ ವಿವರಗಳನ್ನು ಕಲೆಹಾಕಲೇ ಬೇಕಿತ್ತಲ್ಲ. ಹೀಗಾಗಿ ಆ ಚದುರಿ ಹೋದ, ಅಪರಿಚಿತ ಬಂಧುಜನರನ್ನು ಪತ್ತೆ ಹಚ್ಚಬೇಕಾಯಿತು. ಈ ಕೆಲಸದಲ್ಲಿ ವರುಷಗಳೆ ಉರುಳಿದವು. ಇಷ್ಟಾಗಿಯೂ ಇನ್ನೂ ಕೆಲವರು ಉಳಿದೆ ಇದ್ದಾರೆ.

ಅವರಿದ್ದಲ್ಲೆಲ್ಲ ಹೋಗಿ ಭೆಟ್ಟಿಯಾದೆ., ಮತ್ತೊಮ್ಮೆ ಬಾ ಎಂದಾಗ ಬೆನ್ನು ಹತ್ತಿದ ಬೇತಾಳದಂತೆ ಮತ್ತೆ ಮತ್ತೆ ಅವರ ಮನೆಗಳಿಗೆ ಹೋದೆ. ಫೋನಿನಲ್ಲಿ ಮಾತಾಡಿದೆ. ಕಾಡಿ ಬೇಡಿ ನನಗೆ ಬೇಕಾದ ವಿಷಯ ಸಂಗ್ರಹಿಸಿದೆ.

ಅದರ ಫಲವೆ ಇದು.

ಶುರುವಿನಲ್ಲಿ ಈ ಇತಿಹಾಸ, ವಂಶಾವಳಿ ಚಾರ್ಟು, ಪರಿವಾರದವರ ವ್ಯಕ್ತಿ ಪರಿಚಯ ಇತ್ಯಾದಿಯನ್ನೆಲ್ಲ ಪುಸ್ತಕ ರೂಪದಲ್ಲಿ ಪ್ರಕಟಿಸುವ ವಿಚಾರ ವಿದ್ದಿತು. ಈಗಲೂ ಇದೆ. ಆದರೆ ಒಮ್ಮೆ ಅದು ಪ್ರಕಟವಾದ ಮೇಲೆ ಅದರಲ್ಲಿ ತಪ್ಪಿ ಉಳಿದು ಹೋಗಿದ್ದಿರಬಹುದಾದ ತಪ್ಪುಗಳು ಆ ಪುಸ್ತಕದ ಪರಿಷ್ಕೃತ ಆವೃತ್ತಿ ಬರುವವರೆಗೂ ಉಳಿದೇ ಹೋಗುತ್ತವೆಯಲ್ಲವೆ! ಈ ಉದ್ದೇಶಿತ ಪುಸ್ತಕವೇನೂ ಜನಪ್ರಿಯ ಸಾಹಿತ್ಯ ಅಲ್ಲವಲ್ಲ, ಅಷ್ಟು ಬೇಗ ಹೊಸ ಆವೃತ್ತಿಯನ್ನು ನಿರೀಕ್ಷಿಸಲು!

ಹೀಗಿರುವಾಗ, ದೋಷರಹಿತ, ಪರಿಷ್ಕೃತ ಅಂತಿಮ ಪ್ರತಿಯನ್ನು ಕೊಡುವದು ಹೇಗೆ ? ಯೋಚಿಸುತ್ತಿದ್ದೆ. ತಡವಿಲ್ಲದೆ, ಸಾಫ್ಟವೇರ ಉದ್ಯೋಗಿಯಾದ ನನ್ನ ಹಿರಿಯ ಮಗ ಚಿ. ರಂಗನಾಥನಿಂದ ಸಮಸ್ಯೆಗೆ ಪರಿಹಾರ ಸಿಕ್ಕಿತು. ಜಾಲ ತಾಣದಲ್ಲಿ ಮಾಹಿತಿಯನ್ನೆಲ್ಲ ಹಾಕುವದು. ಈ ತಲೆಮಾರಿನ ಹೆಚ್ಚಿನವರಿಗೆ ನೆಟ್ ಸಂಪರ್ಕಇದ್ದೇ ಇದೆ. ಅದರ ಪ್ರಯೋಜನ ಪಡೆದು, ಉಳಿದಿರಬಹುದಾದ ತಪ್ಪುಗಳ ಸೂಚನೆಗಳನ್ನು ಕಲೆಹಾಕಿ, ಅಲ್ಪಾವಧಿಯಲ್ಲಿಯೆ ಅಂತಿಮ ಪ್ರತಿಯನ್ನು ಸಿದ್ಧಗೊಳಿಸುವದು.

ಅದರ ಫಲವೆ ಇದು.

ತಪ್ಪುಗಳು ಇದ್ದರೆ, ಆಧಾರ ಸಹಿತವಾಗಿ ಕೂಡಲೆ ತಿಳಿಸಿ. ತಿದ್ದಿ ಸರಿಪಡಿಸುತ್ತೇವೆ.

ಈ websiteದ ನಿರ್ಮಾಣಕರ್ತೃ

ನಾನು, ಶ್ರೀಕಾಂತ ರಂಗನಾಥ ಮಂಗಳವೇಢೆ. ನಮ್ಮ ವಂಶಾವಳಿಯಲ್ಲಿನ ಮೂರನೆ ಟಿಸಿಲಿನ ಎಂಟನೆ ತಲೆಮಾರಿನ ವ್ಯಕ್ತಿ. ಸಧ್ಯ ನನಗೆ ಎಪ್ಪತ್ತನಾಕು ವರ್ಷಗಳು ತುಂಬಿ, ಎಪ್ಪತ್ತೈದನೆ ವಯಸ್ಸು ನಡೆಯುತ್ತಿದೆ. ಹುಟ್ಟಿದ್ದು, ಬೆಳೆದದ್ದು, ಕಲಿತದ್ದು, ನೌಕರಿ ಮಾಡಿದ್ದು ಎಲ್ಲ ಬೆಳಗಾವಿಯಲ್ಲಿಯೆ. ನಾನೊಬ್ಬ ನಿವೃತ್ತ ಶಿಕ್ಷಕ ಮತ್ತು ಇಂಗ್ಲಿಷ ಪತ್ರಿಕೆಯೊಂದರ ನಿವೃತ್ತ ವರದಿಗಾರ. ನಿವೃತ್ತಿಯಾದ ಮೇಲೂ ಹತ್ತು ವರ್ಷ ಬೆಳಗಾವಿಯಲ್ಲಿಯೆ ಇದ್ದೆ. ಬಾಡಿಗೆ ಮನೆಯಲ್ಲಿ. ಸ್ವಂತ ಮನೆ ಬೇರೊಂದು ಊರಲ್ಲಿ ಆಗುವದಿತ್ತು. ಧಾರವಾಡದ ನೆಲದ, ನೀರಿನ ಋಣ ಇದ್ದಿತು. ಅಲ್ಲಿಗೆ ಸ್ಥಳಾಂತರಗೊಂಡು ಐದು ವರ್ಷಗಳಾಯಿತು. ಈ ನಡುವೆ, ಆಗೀಗ ಹಿರಿಯ ಮಗನಿರುವ ಪುಣೆಗೆ ಹೋಗಿಬಂದು ಮಾಡುವದು ನಡೆದೆ ಇದೆ. ಇದರ ಹೊರತು ನನ್ನ ಕುರಿತಾದ ಇತರ ವಿವರಗಳನ್ನು ಬೇರೆ ಕಡೆ ಹಾಕಿದ್ದೇನೆ.

ಈ ಜಾಲತಾಣದಲ್ಲಿ ಏನೆಲ್ಲ ಇದೆ?

  • ವಂಶಾವಳಿ – ನಮ್ಮ ವಂಶಾವಳಿಯ ಮೂರೂ ಟಿಸಿಲುಗಳ ಒಟ್ಟಾರೆ ಚಾರ್ಟು ಕಾಣಿಸುತ್ತದೆ. ಚಾರ್ಟ್ ದಲ್ಲಿನ ಹೆಸರಿನ ಕೆಳಗೆ ಜನ್ಮ ದಿನಾಂಕ ಮತ್ತು ಮರಣದ ದಿನಾಂಕ – ವರ್ಷ, ತಿಂಗಳು, ದಿನಾಂಕ ಈ ಕ್ರಮದಲ್ಲಿ ದಾಖಲಾಗಿರುತ್ತದೆ (ಲಭ್ಯವಿದ್ದಂತಹವು ಮಾತ್ರ). ಹೆಸರಿನ ಮೇಲೆ ತೆರೆದ ಪುಸ್ತಕದ ಸಂಕೇತ ಚಿತ್ರವಿದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಅವರ ಸಂಕ್ಷಿಪ್ತ ಮಾಹಿತಿ, ಅದರ ಕೆಳಗಡೆ ವ್ಯಕ್ತಿ ಪರಿಚಯವೆಂಬ ತಲೆಬರಹದಲ್ಲಿ ಕಿರು ಪರಿಚಯ ಮತ್ತು ವಿವರವಾದ ಪರಿಚಯ ಲಭ್ಯವಾಗುತ್ತದೆ.
    ಕೆಳಗಡೆ ಕಾಣಿಸುವ- ಟಿಸಿಲು ೧, ಟಿಸಿಲು ೨, ಟಿಸಿಲು ೩ ಇವುಗಳಲ್ಲಿ ಆಯ್ಕೆ ಮಾಡಿಕೊಂಡು ಆ ಟಿಸಿಲಿನ ಪ್ರತ್ಯೇಕವಾದ ಚಾರ್ಟ್ ನ್ನು ನೋಡಬಹುದು. ಆಯ್ಕೆಮಾಡಿದ ಹೆಸರಿನ ವ್ಯಕ್ತಿ ಪರಿಚಯವನ್ನು ನೋಡಬಹುದು, ಮೇಲೆ ಹೇಳಿದ ವಿವರಗಳ ಸಹಿತ.
  • ಪರಿವಾರ – ಪರಿವಾರದ ಜನರ ಒಟ್ಟು ಸಂಖ್ಯೆ ಮತ್ತು ಕ್ರಮವಾಗಿ ಒಬ್ಬೊಬ್ಬರ ಸಂಕ್ಷಿಪ್ತ ಮಾಹಿತಿ – ಹೆಸರು, ಹುಟ್ಟಿದ ದಿನಾಂಕ, ತಂದೆಯ ಹೆಸರು, ತಾಯಿಯ ಹೆಸರು, ಮಕ್ಕಳ ಹೆಸರು, ಒಡಹುಟ್ಟಿದವರ ಹೆಸರು ಇಷ್ಟು ವಿವರಗಳು ಸಿಗುತ್ತವೆ. ಜೊತೆಗೆ ವಕ್ತಿ ಚಿತ್ರವೆಂಬ ತಲೆಬರೆಹದಲ್ಲಿ ಕಿರು ಪರಿಚಯ ಮತ್ತು ವಿವರವಾದ ಪರಿಚಯ ಸಿಗುತ್ತದೆ.
  • ವೆಬ್ ಸೈಟಿನಲ್ಲಿ :
    • ಪ್ರೇರಣೆ ಎಂಬ ತಲೆಬರಹ ಮನೆತನದ ಇತಿಹಾಸವನ್ನು ತಿಳಿದುಕೊಳ್ಳಲು ಪ್ರೇರಕವಾದ ಸಂಗತಿಗಳ ಕುತಾದುದು.
    • ವಿಷಯ ಸಂಗ್ರಹ ಎಂಬ ತಲೆಬರಹ – ಈ ಜಾಲತಾಣದಲ್ಲಿ ಅಡಕವಾಗಿರುವ ವಂಶಾವಳಿಯ ಚಾರ್ಟು, ಮನೆತನದ ಇತಿಹಾಸ, ವ್ಯಕ್ತಿ ಪರಿಚಯ ಇತ್ಯಾದಿ ವಿಷಯಗಳಿಗೆ ಆಧಾರವಾದ ಮಾಹಿತಿಯನ್ನು ಯಾವ ಯಾವ ಮೂಲದಿಂದ ಹೇಗೆಲ್ಲ ಕಲೆ ಹಾಕಲಾಯಿತು ಎಂಬುದರ ವಿವರಣೆ.
    • ನಾವು ಯಾರು ಎಂಬ ತಲೆ ಬರಹ – ನಮ್ಮ ಮನೆತನ ತನ್ನ ಯಾವ ಯಾವ ವಿಶೇಷಗಳಿಂದ, ಇದೇ ಹೆಸರಿನ ಬೇರೆ ಮನೆತನಗಳಿಂದ ಪ್ರತ್ಯೇಕವಾಗಿದೆ ಎನ್ನುವ ವಿಶಿಷ್ಟ ಗುರುತುಗಳ ನಿರೂಪಣೆ.
    • ಗೋತ್ರ – ಪ್ರವರ / ಕುಲದೇವರು ಎಂಬ ತಲೆಬರಹ – ಹಿಂದಿನದೇ ವಿಷಯದ ಮುಂದುವರಿಕೆಯಾಗಿ ನಮ್ಮ ಮನೆತನದವರ ಗೋತ್ರ- ಪ್ರವರ ಮತ್ತು ಕುಲದೇವರು ಈ ವಿಷಯಗಳ ವಿವರಣೆ.
    • ರೂಢಿ / ಸಂಪ್ರದಾಯ ಎಂಬ ತಲೆಬರಹವೂ ನಾವು ಯಾರು ಎಂಬ ನಿರೂಪಣೆಯ ಮುಂದುವರೆದ ಭಾಗ. ನಮ್ಮ ಮನೆತನದ ವಿಶಿಷ್ಟ ರೂಢಿ ಸಂಪ್ರದಾಯಗಳ ನಿರೂಪಣೆ.
  • ಮನೆತನದ ಇತಿಹಾಸ – ಈ ತಲೆಬರಹದ ಅಡಿಯಲ್ಲಿ ಮೂರೂ ಟಿಸಿಲುಗಳನ್ನು ಒಳಗೊಂಡ ನಮ್ಮ ಮನೆತನದ ಒಟ್ಟು ಇತಿಹಾಸ, ಮೂರೂ ಟಿಸಿಲುಗಳ ಪ್ರತ್ಯೇಕ ಇತಿಹಾಸದ ನಿರೂಪಣ. ನನ್ನ ಕಥೆ – ಎಂಬುದು ವ್ಯಕ್ತಿ ಪರಿಚಯದಲ್ಲಿ ಬಂದಿರುವ ನನ್ನ ಬಗೆಗಿನ ವಿವರಗಳ ಹೊರತಾಗಿಯೂ – ಈ ಜಾಲತಾಣದ ನಿರ್ಮಾಣ ಕರ್ತೃ ಮತ್ತು ಇದೇ ವಿಷಯ ಕುರಿತಾದ, ಬಹುಶಃ ಬರಲಿರುವ ಪುಸ್ತಕದ ವಿಷಯ ಸಂಗ್ರಾಹಕ – ಲೇಖಕನಾಗಿರುವ – ನನ್ನ ವಿಷಯಕ ಆತ್ಮ ಕಥನ.
    ನೆಲಸಿದ್ದ ಸ್ಠಳಗಳು ಎಂಬ ತಲೆಬರಹದಲ್ಲಿ – ಮುಖ್ಯವಾಗಿ ನಮ್ಮ ಪೂರ್ವಿಕರು ಸುಮಾರು ಎರಡು ನೂರು ವರ್ಷಗಳ ಕಾಲ ನೆಲಸಿದ್ದ ಮುರಗೋಡಿನ ಬಗ್ಗೆ, ಅಲ್ಲಿ ವಲಸೆ ಬರುವ ಮೊದಲು ಮೂಲದಲ್ಲಿ, ಬಹುಶಃ ಮುನ್ನೂರು ವರ್ಷಗಳಷ್ಟು ಹಿಂದೆ ವಾಸವಾಗಿದ್ದ ಮಂಗಳವೇಢೆಯ ಬಗ್ಗೆ, ಮುರಗೋಡಿಗೆ ಬಂದ ಮೇಲೆ ಕಾಲಾಂತರದಲ್ಲಿ ಯಕ್ಕುಂಡಿ, ಕಿತ್ತೂರು, ಬೀಡಿ ನಂತರ ಇತ್ತೀಚೆಗೆ ಧಾರವಾಡ, ಬೆಳಗಾವಿ ಮೊದಲಾದ ಕಡೆಗೆ ಸ್ಥಳಾಂತರವಾಗಿ ಅಲ್ಲಿ ಆಸ್ತಿ ಪಾಸ್ತಿಗಳನ್ನು ಮಾಡಿಕೊಂಡ ಕಾರಣಗಳಿಂದ ಆ ಊರುಗಳ ಬಗ್ಗೆ – ಈಗ ಆ ಊರುಗಳನ್ನೂ ಬಿಟ್ಟು ಬೆಂಗಳೂರು, ಪುಣೆ, ಡೊಂಬಿವಲಿ, ಮುಂಬಯಿ, ದಿಲ್ಲಿ, ಹೈದರಾಬಾದ ಮೊದಲಾದ ಕಡೆಗೆ ಚದುರಿ ಹೋಗಿ, ನಮ್ಮ ಮನೆತನದ ಹೊಸ ಪೀಳಿಗೆಯವರಿಗಾಗಿ ಅವರ ಮೂಲ ಸ್ಥಳಗಳ ಪರಿಚಯದ ದೃಷ್ಟಿಯಿಂದ ಬರೆದ ಟಿಪ್ಪಣಿಗಳು ಸಿಗುತ್ತವೆ.
    ಪ್ರಸಿದ್ಧರು ಎಂಬ ತಲೆಬರಹದಲ್ಲಿ – ರಾಜ್ಯ ಅಥವಾ ರಾಷ್ಟ್ರೀಯ ಪಾತಳಿಯಲ್ಲಿ ನಮ್ಮವರಾರೂ ಪ್ರಸಿದ್ಧರಾಗಿಲ್ಲ. ಆದರೂ, ಕೆಲ ಗಣ್ಯರು ಮತ್ತು ಸ್ಥಾನಮಾನ ಹೊಂದಿದವರು ನಮ್ಮಲ್ಲೂ ಇದ್ದಾರೆ. ಆದರೂ, ನಮಗೇ ಅಪರಿಚಿತರಾಗಿರುವದು ಒಂದು ಬೇಸರದ ಸಂಗತಿ. ಅಂತಹವರ ಪರಿಚಯವನ್ನು ಇಲ್ಲಿ ಮಾಡಿಕೊಡಲಾಗಿದೆ. ಹಾಗೆಯೆ, ಪ್ರಸಿದ್ಧ ಮನೆತನಗಳ ಸಂಬಂಧ ಎಂಬ ತಲೆಬರಹದಲ್ಲಿ ಅಂತಹ ಕೆಲವು ಮನೆತನಗಳ ಪರಿಚಯ ಮಾಡಿಕೊಡಲಾಗಿದೆ.
  • ಕಾರ್ಯಕ್ರಮಗಳು ಎಂಬ ಶೀರ್ಷಿಕೆ – ದೂರ ದೂರವಾಗಿ ನಾವೆಲ್ಲ ಚದುರಿ ಹೋಗಿರುವದರಿಂದ, ಅನೇಕ ಸಲ ಪರಿವಾರಗಳಲ್ಲಿ ಆಗಿಹೋದ ಸಮಾರಂಭಗಳ ಸುದ್ದಿ ಎಷ್ಟೋ ಸಲ ಗೊತ್ತಾಗದೆ ಉಳಿಯುತ್ತವೆ. ನಮಗೆ ತಿಳಿದ, ಉಳಿದವರಿಗೂ ತಿಳಿಯಬೇಕಾದ, ಅಂತಹ ಮಹತ್ವದ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿ. upcoming events ಎಂಬ ಶೀರ್ಷಿಕೆ – ಮದುವೆ, ಮುಜಿವೆಯಂತಹ ಸಮಾರಂಭಗಳ ಪ್ರಕಟಣೆ, ಸ್ಸಕ್ಷ್ಟು ಮೊದಲೆ ಅವುಗಳ ಬಗ್ಗೆ ಮಾಹಿತಿ ಕೊಟ್ಟಾಗ.